ಮೇಸ್ಟ್ರ ಸಂದೇಶ
ಇದೊಂದು ಯಾವುದೇ ಫಲಾಪೇಕ್ಷೆಯಿಲ್ಲದ ಜ್ಞಾನಸತ್ರ. ಏಕವ್ಯಕ್ತಿ ಅಭಿಯಾನ ಎಂದರೂ ಸರಿ. ಮುದ್ದೇಬಿಹಾಳ ತಾಲೂಕಿನ...
ಇದೊಂದು ಯಾವುದೇ ಫಲಾಪೇಕ್ಷೆಯಿಲ್ಲದ ಜ್ಞಾನಸತ್ರ. ಏಕವ್ಯಕ್ತಿ ಅಭಿಯಾನ ಎಂದರೂ ಸರಿ. ಮುದ್ದೇಬಿಹಾಳ ತಾಲೂಕಿನ ಜಮ್ಮಲದಿನ್ನಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಶಂಕರ ಜಿ.ಬೆಳ್ಳುಬ್ಬಿ ಈ 'ಎಸ್ಎಂಎಸ್ ಕ್ಲಾಸ್ನ ರೂವಾರಿ. 'ಮೊಬೈಲ್ ಕ್ವಿಜ್ ಮಾಸ್ಟರ್' ಎಂದು ಹೆಸರಾಗಿರುವ ಬೆಳ್ಳುಬ್ಬಿಯವರ ಕೆಲಸದ ವೈಖರಿ ಹೀಗಿದೆ-
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೊಬೈಲುಗಳಿಗೆ ಪ್ರತಿನಿತ್ಯ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಭವನೀಯ ಪ್ರಶ್ನೆಗಳನ್ನು 'ಜಿಕೆಎಸ್ಎಂಎಸ್' ಹೆಸರಿನಲ್ಲಿ ಮೆಸೇಜ್ ಮಾಡುತ್ತಾರೆ. ಈ ಕೆಲಸ ತುಂಬಾ ಪೂರ್ವತಯಾರಿ, ಬುದ್ಧಿವಂತಿಕೆ ಮತ್ತು ತಾಳ್ಮೆಯನ್ನು ಬೇಡುತ್ತದೆ. ಇದುವರೆಗೆ ಅವರು ಹೀಗೆ ನಿತ್ಯ ಎಸ್ಎಂಎಸ್ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 25 ಸಾವಿರ.
ಶಂಕರ್, ಆಸಕ್ತರ ಮೊಬೈಲುಗಳಿಗೆ ಪ್ರತಿನಿತ್ಯ ಮುಂಜಾನೆ 6.30ಕ್ಕೆ 2 ಪ್ರಶ್ನೆ ಕಳಿಸುತ್ತಾರೆ. ಅವುಗಳಿಗೆ ಸರಿ ಉತ್ತರ ಕಳಿಸಿದ ಮೊದಲ 10 ಜನರ ಹೆಸರು ಮತ್ತು ಸರಿ ಉತ್ತರವನ್ನು 9 ಗಂಟೆಗೆ ಎಲ್ಲರಿಗೆ ಮತ್ತೆ ಕಳಿಸುತ್ತಾರೆ. ಸಂಜೆ 6 ಗಂಟೆಗೆ ಥಟ್ ಅಂತಾ ಹೇಳಿ ಎಂದು 1 ಪ್ರಶ್ನೆ ಕಳಿಸುತ್ತಾರೆ. ರಾತ್ರಿ 8ಕ್ಕೆ ಅವರೇ ಉತ್ತರವನ್ನೂ ಕಳಿಸುತ್ತಾರೆ. ಇದರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಪ್ರಶ್ನೆ ಇರುತ್ತದೆ.
ಸದ್ಯ ಏರ್ಟೆಲ್, ಡೊಕೊಮೊ ಮತ್ತು ರಿಲಯನ್ಸ್ ಮೊಬೈಲ್ ಬಳಕೆದಾರರು ಈ ಸೇವೆ ಪಡೆಯಬಹುದು. ಇದಕ್ಕೆ ಎಸ್ಆರ್ ವರ್ಲ್ಡ್ ಎಸ್ಎಂಎಸ್ಗೆ ಸದಸ್ಯತ್ವ ಪಡೆದುಕೊಳ್ಳಬೇಕು.
ಬೆಳ್ಳುಬ್ಬಿಯವರು ಕಳುಹಿಸಿದ ಪ್ರಶ್ನೆಗಳಲ್ಲಿ ಎಷ್ಟು ಬಂದಿವೆ ನೋಡಿ- 2010ರಲ್ಲಿ ನಡೆದ ಕೆಎಎಸ್ ಪೂರ್ವಪರೀಕ್ಷೆಯಲ್ಲಿ 100ಕ್ಕೆ 22 ಪ್ರಶ್ನೆ, ಎಫ್ಡಿಎ ಪರೀಕ್ಷೆಯಲ್ಲಿ 29 ಪ್ರಶ್ನೆ, ಎಸ್ಡಿಎ ಪರೀಕ್ಷೆಯಲ್ಲಿ 43 ಪ್ರಶ್ನೆ, ಡಿಆರ್ ಪೊಲೀಸ್ ಪರೀಕ್ಷೆಯಲ್ಲಿ 51 ಪ್ರಶ್ನೆ, ಪಿಡಿಓ ಪರೀಕ್ಷೆಯಲ್ಲಿ 33ಕ್ಕೆ 18 ಪ್ರಶ್ನೆ, ಪ್ರೌಢಶಾಲಾ ಶಿಕ್ಷಕರ ನೇಮಕ ಪರೀಕ್ಷೆಯಲ್ಲಿ 33ಕ್ಕೆ 18 ಪ್ರಶ್ನೆ, ಎಸ್ಡಿಎಎ ಪರೀಕ್ಷೆಯಲ್ಲಿ 100 ಕ್ಕೆ 39 ಪ್ರಶ್ನೆ, 2013ರಲ್ಲಿ ನಡೆದ ಎಕ್ಸೈಜ್ ಸಬ್ ಇನ್ಸಪೆಕ್ಟರ್ ಪರೀಕ್ಷೆಯಲ್ಲಿ 44 ಪ್ರಶ್ನೆ, ಎಕ್ಸೈಜ್ ಗಾರ್ಡ್ ಪರೀಕ್ಷೆಯಲ್ಲಿ 53 ಪ್ರಶ್ನೆ ಬಂದಿವೆ.
ಸಂಡೇ ಸ್ಪೆಷಲ್
ಶಂಕರ್ ಪ್ರತಿ ರವಿವಾರ ಸದಸ್ಯರಿಗೆ ಸಂಡೇ ಸ್ಪೆಷಲ್ ಕ್ವಿಜ್ ನಡೆಸುತ್ತಾರೆ. ಇದರಲ್ಲಿ ವಿಜೇತರಿಗೆ ಮೊದಲ ಬಹುಮಾನ 100 ರು., ದ್ವಿತೀಯ 50 ರು., ತೃತೀಯ 30 ರು. ಸೆಲ್ ಕರೆನ್ಸಿ ಹಾಕಿಸುತ್ತಾರೆ. ಇದರೊಂದಿಗೆ, ಶಿಕ್ಷಣ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಕ್ವಿಜ್ ಸ್ಪರ್ಧೆಗಳನ್ನೂ ಏರ್ಪಡಿಸುತ್ತಿದ್ದಾರೆ.
ಬಿಜಾಪುರ ಜಿಲ್ಲೆ ಬಸವನ ಬಾಗೇವಾಡಿ ತಾಲೂಕು ಹಳ್ಳದಗೆಣ್ಣೂರ ಗ್ರಾಮದ ಬಡ ಕುಟುಂಬದಲ್ಲಿ ಜನಿಸಿದ ಶಂಕರ್, ಈಗ ಜಮ್ಮಲದಿನ್ನಿಯಲ್ಲಿ ಶಿಕ್ಷಕ. ಇದರೊಟ್ಟಿಗೆ ಕೆಎಎಸ್ ಮತ್ತು ಐಎಎಸ್ ಪರೀಕ್ಷೆಗೂ ತಯಾರಿ ನಡೆಸುತ್ತಿದ್ದಾರೆ. ವಿದ್ಯೆ ಕಲಿಯಲು ತಾವು ಬಡತನದಲ್ಲಿ ಅನುಭವಿಸಿದ ಸಂಕಷ್ಟ ಬೇರೆಯವರು ಅನುಭವಿಸಬಾರದು ಎನ್ನುವ ಕಳಕಳಿ. ಕರೆಂಟ್ ಅಫೇರ್ಸ್, ಎಕ್ಸಾಂ ಟಿಪ್ಸ್, ಸಿಲೆಬಸ್, ಕಾಲ್ಫಾರ್ ನ್ಯೂಜ್, ಜಿಕೆ ಹಿಂಟ್ಸ್, ಎಕ್ಸಾಂ ಡೇಟ್, ಪ್ರಮುಖ ಘಟನಾವಳಿ ಮುಂತಾದ ಮಾಹಿತಿಗಳನ್ನು ಸದಸ್ಯತ್ವ ಪಡೆದವರಿಗೆ ಉಚಿತವಾಗಿ ಕಳಿಸುತ್ತಿದ್ದಾರೆ. ಹಲವಾರು ರಾಜ್ಯಮಟ್ಟದ ಕ್ವಿಜ್ಗಳಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಸಂಪರ್ಕ: 9972266025.
- ಡಿ.ಬಿ. ವಡವಡಗಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.