ಅವರಂತೆ ನಾವೇಕೆ ಶ್ರೀಮಂತರಲ್ಲ?
ಜೀವನದಲ್ಲಿ ನೆಮ್ಮದಿಯಿಂದ ಬದುಕಲು ಆವಶ್ಯಕವಾಗಿರುವ ವಸ್ತುಗಳು ಕೆಲವೇ ಕೆಲವು. ಆದರೆ ನಮ್ಮ ಇಂದ್ರಿಯಗಳ ಸಹಾಯದಿಂದ ಭೌತಿಕವಾದ ವಸ್ತುಗಳನ್ನು ಕಂಡು ನಾವು ಆಕರ್ಷಿತರಾಗುತ್ತೇವೆ. ಅದರ ಅವಶ್ಯಕತೆ ಇದೆಯೋ, ಇಲ್ಲವೋ ಎಂಬುದನ್ನು ವಿಶ್ಲೇಷಿಸದೇ ಅದನ್ನು ಪಡೆಯುವುದಕ್ಕೆ ಆಸೆ ಪಡುತ್ತೇವೆ. ನಾವು ಕಂಡರಿಯದ, ಕೇಳರಿಯದ ವಸ್ತುಗಳು ನಮಗೆ ಬೇಕೆಂದು ಅನಿಸುವುದಿಲ್ಲ. ಉದಾಹರಣೆಗೆ, ಆಧುನಿಕವಾಗಿ ಮುಂದುವರಿದ ನಗರಗಳ ಬಗ್ಗೆ ಕೇಳರಿಯದ ಹಳ್ಳಿಯವನೊಬ್ಬ ಆಧುನಿಕತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಐಷಾರಾಮಿ ಕಾರು, ಆಧುನಿಕ ಯಂತ್ರೋಪಕರಣಗಳು, ಸುಗಂಧ ದ್ರವ್ಯ ಮೊದಲಾದವುಗಳ ಅರಿವು ಅವನಿಗೆ ಇರುವುದಿಲ್ಲವಾದ್ದರಿಂದ ಅವೆಲ್ಲ ಬೇಕೆಂದು ಅನಿಸುವುದಿಲ್ಲ. ನಮ್ಮ ಮನಸ್ಸು ಯಾವುದರ ಅರಿವಿಲ್ಲವೋ ಅದರ ಬಗ್ಗೆ ಯೋಚಿಸುವುದಿಲ್ಲ. ಕೆಲವೊಮ್ಮೆ ನಾವು ಕಂಡದ್ದು, ಕೇಳಿದ್ದರಲ್ಲಿಯೂ ಎಲ್ಲವೂ ಬೇಕೆಂದು ಅನಿಸುವುದಿಲ್ಲ. ಸಾಕ್ರೆಟಿಸ್ ಹೇಳುತ್ತಾನೆ, 'ನಾನು ಪೇಟೆಗೆ ಹೋದಾಗ, ನನಗೆ ಬೇಡವಾದ ಎಷ್ಟೊಂದು ವಸ್ತುಗಳಿವೆ ಎಂಬ ಅರಿವಾಗುತ್ತದೆ'. ಆ ಮಾತಿನ ನಿಜ ಅರ್ಥ ಎಷ್ಟು ಜನರಿಗೆ ತಿಳಿದಿದೆ? ನಾವು ತಿಳಿದೋ ತಿಳಿಯದೆಯೋ ನಮ್ಮನ್ನು ಇತರರೊಂದಿಗೆ ಹೋಲಿಸಿಕೊಂಡು, ಅವರಂತೆ ನಾವೇಕೆ ಶ್ರೀಮಂತರಲ್ಲ ಎಂದು ವ್ಯಥಿಸುತ್ತೇವೆ. ಅವರಿಗೆ ಹೋಲಿಸಿದರೆ ನಮ್ಮ ಜೀವನ ಎಷ್ಟು ನಿರಾಶಾದಾಯಕವಾಗಿದೆ ಎಂದು ಯೋಚಿಸುತ್ತೇವೆ. ನಮಗೆ ಅವಶ್ಯಕತೆ ಇದೆಯೋ, ಇಲ್ಲವೋ ಎಂದು ತರ್ಕಿಸದೆಯೇ ಹೆಚ್ಚು ಹಣ ಗಳಿಸುವುದಕ್ಕೆ ಪ್ರಯತ್ನಿಸುತ್ತೇವೆ. ನಮಗೆ ಅರಿವಿಲ್ಲದೆಯೇ ಅತಿಯಾದ ಆಸೆ ನಮ್ಮ ಆವಶ್ಯಕತೆಯಾಗಿಬಿಡುತ್ತದೆ. ಆ ಅತಿಯಾದ ಆಸೆಯಿಂದ ನಾವು ಅನವಶ್ಯಕವಾದ ವಸ್ತುಗಳ ಹಿಂದೆಯೂ ಓಡಲಾರಂಭಿಸುತ್ತೇವೆ.
ಒಬ್ಬ ವ್ಯಕ್ತಿ ಒಂದು ವ್ಯವಹಾರವನ್ನು ಮಾಡುತ್ತಿದ್ದಾನೆಂದು ಇಟ್ಟುಕೊಳ್ಳೋಣ. ಮಾರುಕಟ್ಟೆಯಲ್ಲಿ ಅವನ ವ್ಯವಹಾರಕ್ಕೆ ನಿರ್ದಿಷ್ಟವಾದ ಮೌಲ್ಯವೂ, ಒಳ್ಳೆಯ ಹೆಸರೂ ಇರಬಹುದು. ಆದರೆ ಕೆಲಸಗಾರರ ತೊಂದರೆ, ಪ್ರತಿಸ್ಪರ್ಧಿಗಳಿಂದ ಕಿರುಕುಳ ಇತ್ಯಾದಿಗಳಿಂದ ಅವನಿಗೆ ಆ ವ್ಯವಹಾರದಲ್ಲಿ ಲಾಭಾಂಶ ಸಿಗದೇ ವ್ಯವಹಾರ ನಷ್ಟದಲ್ಲಿ ನಡೆಯುತ್ತಿದ್ದು, ತಲೆನೋವಾಗಿ ಪರಿಣಮಿಸಿದೆ ಎಂದು ಇಟ್ಟುಕೊಳ್ಳೋಣ. ಅಕ್ಷರಶಃ ಆ ವ್ಯವಹಾರದಿಂದ ಅವನಿಗೆ ಒಂದು ಪೈಸೆಯ ಲಾಭ ಇರದಿದ್ದರೂ ಆಸೆಯ ಮನೋಭಾವ ಹೊಂದಿದ್ದರಿಂದ ಅವನು ಅದನ್ನು ಮುಂದುವರಿಸುತ್ತಿರುತ್ತಾನೆ. ಅವನ ನಿತ್ಯದ ಖರ್ಚು-ವೆಚ್ಚ ಭರಿಸಲು ಇನ್ನೊಂದು ಮೂಲದಿಂದ ಆದಾಯವಿದ್ದು, ಅವನು ನೆಮ್ಮದಿಯಿಂದ ಇರಬಹುದಾದರೂ, ಅನಾವಶ್ಯಕ ಶ್ರಮಪಡುವ ಅವಶ್ಯಕತೆ ಇಲ್ಲವಾದರೂ ಅವನು ತನ್ನ ಆ ವ್ಯವಹಾರವನ್ನು ನಿಲ್ಲಿಸುವುದಿಲ್ಲ. ಹಾಗೆಯೇ ಕೆಲವು ವಸ್ತುಗಳನ್ನು ಹೊಂದಿರುವುದರಿಂದಲೇ ತೊಂದರೆ ಹೆಚ್ಚು ಎಂಬ ಅರಿವು ಬಹಳಷ್ಟು ಜನರಲ್ಲಿ ಇರುವುದಿಲ್ಲ.
ಕೆಲವರು ಎಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾರೆಂದರೆ, ಅವರಿಗೆ ತಮ್ಮ ಇಷ್ಟವಾದ ಕೆಲವು ಸಂಗತಿಗಳೆಡೆಗೆ ಗಮನ ಹರಿಸಲೂ ಸಮಯವಿರುವುದಿಲ್ಲ. ಹೆಚ್ಚಿನ ಹಣ ಗಳಿಸಬೇಕೆಂಬ ಆಸೆಯಿಂದ ಅವರು ತಮ್ಮ ವ್ಯವಹಾರವನ್ನು, ಕೆಲಸದ ವ್ಯಾಪ್ತಿಯನ್ನು ಎಷ್ಟು ವಿಸ್ತರಿಸಿಕೊಂಡಿರುತ್ತಾ, ಅದನ್ನು ನಿಲ್ಲಿಸಲಾಗದ ಸ್ಥಿತಿಗೂ ತಲುಪಿರುತ್ತಾರೆ. ಮೊದಮೊದಲು ವ್ಯಾಪಾರಕ್ಕೆಂದು ಓಡಾಡಿಕೊಂಡಿದ್ದ ಅವರನ್ನು ಮುಂದೊಂದು ದಿನ ವ್ಯಾಪಾರವೇ ಓಡಾಡಿಸುತ್ತಿರುತ್ತದೆ. ಸುತ್ತಮುತ್ತಲಿನ ಪರಿಸರ, ಪರಿಸ್ಥಿತಿ, ಜನ ಅವರನ್ನು ಹೆಚ್ಚು ಓಡಾಡುವಂತೆ ಮಾಡಿರುತ್ತದೆ.
(ಮುಂದುವರಿಯುವುದು)
- ಕಿರಣ್ ಉಪಾಧ್ಯಾಯ
keyrun1970@gmail.com