ನಾನು ಶಿವನಲ್ಲ
ಕೃಷ್ಣನಿಗೂ, ರಾಧೆಗೂ ನಡುವೆ ನಡೆದ ರಾಸ, ನಮ್ಮ ದೇಶದಲ್ಲಿ ಸಾವಿರಾರು ಕತೆ ಕವಿತೆ ಕಾವ್ಯಗಳಿಗೆ ಒದಗಿಬಂದ ಚಿರನೂತನ ಪ್ರಸಂಗ. ರಾಧೆ ವಯಸ್ಸಿನಲ್ಲಿ ಶ್ಯಾಮನಿಗಿಂತ ದೊಡ್ಡವಳಾದರೂ, ಇವರಿಬ್ಬರ ಪ್ರೇಮ ಪವಿತ್ರವೆಂದೇ ಪರಿಗಣಿಸಲ್ಪಟ್ಟಿದೆ.
ಗೋಕುಲದಲ್ಲಿ ಒಂದಿರುಳು. ಕೃಷ್ಣ ಇತರ ಗೋಪಿಕೆಯರೊಡನೆ ಸಲ್ಲಾಪಕೇಳಿಯಲ್ಲಿದ್ದಾನೆ. ಇದನ್ನು ನೋಡಿ ರಾಧೆಗೆ ಹೊಟ್ಟೆ ಉರಿದುಹೋಗಿದೆ. ಮುನಿಸಿಕೊಂಡು ಮಾಧವನಿಂದ ಬೇರೆಯಾಗುತ್ತಾಳೆ. ಇತ್ತ ಕೃಷ್ಣನೂ ರಾಧೆಯ ಸಂಸರ್ಗ ತಪ್ಪಿದುದರಿಂದ ವಿರಹದುರಿಯಿಂದ ಹುಚ್ಚಾಗಿದ್ದಾನೆ. ಅನಂಗಬಾಣಗಳಿಂದ ಜರ್ಝರಿತವಾಗಿರುವ ಕೃಷ್ಣ, ಮನ್ಮಥನಿಗೆ ಹೀಗೆ ನಿವೇದಿಸಿಕೊಳ್ಳುತ್ತಿದ್ದಾನೆ.
ಹೃದಿ ಬಿಸಲತಾಹಾರೋ ನಾಯಂ ಭುಜಂಗಮನಾಯಕಃ
ಕುವಲಯದಲಶ್ರೇಣೀ ಕಂಠೇ ನ ಸಾಗರಲದ್ಯುತಿಃ
ಮಲಯಜರಜೋ ನೇದಂ ಭಸ್ಮಪ್ರಿಯಾರಹಿತೇ ಮಯಿ
ಪ್ರಹರಸಿ ಹರಭ್ರಾಂತ್ಯಾನಂಗ ಕ್ರುಧಾ ಕಿಮು ಧಾವಸಿ
'ಹೇ ಮಾರ, ನನ್ನನ್ನು ಶಿವನೆಂದು ತಪ್ಪು ತಿಳಿದು ಸುಮಬಾಣಗಳಿಂದ ಘಾತಿಸುತ್ತಿರುವೆಯಾ? ನನ್ನೆದೆ ಮೇಲಿರುವುದು ಸರ್ಪವಲ್ಲ, ತಾವರೆ ದಳಗಳ ಹಾರ. ಕೊರಳಲ್ಲಿ ನೀಲಿನೀಲಿಯಾಗಿರುವುದು ವಿಷವಲ್ಲ, ನೈದಿಲೆ ಹೂಗಳು. ಮೈಗೆ ಲೇಪಿಸಿಕೊಂಡದ್ದು ಶ್ರೀಗಂಧವೇ ಹೊರತು ಭಸ್ಮವಲ್ಲ'
ಮನ್ಮಥ, ಈಶ್ವರನೆಂದು ಭ್ರಮಿಸಿ ತನಗೆ ಹೊಡೆಯುತ್ತಿದ್ದಾನೆ ಎಂದು ಕೃಷ್ಣ ನೀಡುವ ರೂಪಕಾತ್ಮಕ ವರ್ಣನೆ ಎಷ್ಟು ಮನೋಹರವಾಗಿದೆಯಲ್ಲವೆ? ಅಂದಹಾಗೆ, ಇದನ್ನು ಬರೆದವನು ಜಯದೇವ ಕವಿ, 'ಗೀತಗೋವಿಂದ' ಕಾವ್ಯದಲ್ಲಿ.
- ಹರಿಹರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.