ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಾಡಿನ ಸುತ್ತ ಕ್ರಾಂತಿ

ಶಿರಸಿ, ಸಿದ್ದಾಪುರ ಸುತ್ತಮುತ್ತಲ ಹಳ್ಳಿಯಲ್ಲಿ 'ಪರ್ಯಾಯ ಇಂಧನ ಕ್ರಾಂತಿ' ಶುರುವಾಗಿದೆ.

Vishwanath S
Updated On : 4 Sept 2013, 12:32 pm

ಡಿಎಫ್ಒ ಯತೀಶ ಕುಮಾರ್ ತೋರಿದ ದಾರಿ

ಶಿರಸಿ, ಸಿದ್ದಾಪುರ ಸುತ್ತಮುತ್ತಲ ಹಳ್ಳಿಯಲ್ಲಿ 'ಪರ್ಯಾಯ ಇಂಧನ ಕ್ರಾಂತಿ' ಶುರುವಾಗಿದೆ. ಕಾಡು ಉಳಿಸುವ ನಿಟ್ಟಿನಲ್ಲಿ, ಅಡುಗೆ ಮಾಡಲು ಅಗತ್ಯ ಉರುವಲನ್ನು ಕಾಡಿನಿಂದ ತರದಿರಲು ಹಳ್ಳಿಗಳ ಜನ ನಿರ್ಧರಿಸಿದ್ದಾರೆ. ಪರ್ಯಾಯವಾಗಿ ಹಂತ ಹಂತವಾಗಿ ಗ್ಯಾಸ್, ಸೌರಪ್ಯಾನೆಲ್, ಗೋಬರ್ ಗ್ಯಾಸ್ ಬಳಸತೊಡಗಿದ್ದಾರೆ.
ಹಳ್ಳಿಗರಲ್ಲಿ ಈ ಬದಲಾವಣೆ ಇದ್ದಕ್ಕಿದ್ದ ಹಾಗೆ ಸಾಧ್ಯವಾದದ್ದಲ್ಲ. ಇದರ ಹಿಂದೆ ಒಬ್ಬ ದಕ್ಷ ಅರಣ್ಯಾಧಿಕಾರಿ ಹಾಗೂ ಇಲಾಖೆ ಇದ್ದಾರೆ. ಅಧಿಕಾರಿಯೊಬ್ಬರು ಮನಸ್ಸು ಮಾಡಿದರೆ ಏನು ಪರಿವರ್ತನೆ ಮಾಡಬಹುದು ಎಂಬುದಕ್ಕೆ ಶಿರಸಿ ವಿಭಾಗದ ಡಿಎಫ್‌ಒ ಯತೀಶ ಕುಮಾರ್ ಸಾಕ್ಷಿ. ಕಾಡಿನ ಉರುವಲು ಕಡಿಯುವುದಕ್ಕೆ ಕಡಿವಾಣ ಹಾಕಿದ್ದಷ್ಟೇ ಅಲ್ಲ. ಪರ್ಯಾಯ ಇಂಧನ ಬಳಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಿ, ಅದಕ್ಕೆ ಅಗತ್ಯ ಹಣಕಾಸಿನ ನೆರವನ್ನೂ ಒದಗಿಸಿ ಕ್ರಾಂತಿ ಮಾಡುತ್ತಿದ್ದಾರೆ ಅವರು.

ಅರಣ್ಯ ಸಮಿತಿಗೆ ಜೀವ
ಗ್ರಾಮ ಅರಣ್ಯ ಸಮಿತಿಯ (ವಿಎಫ್‌ಸಿ) ಮೂಲಕ ಯತೀಶ್ ಈ ಕೆಲಸ ಮಾಡುತ್ತಿದ್ದಾರೆ. ಶಿರಸಿ-ಸಿದ್ದಾಪುರ ವಿಭಾಗದಲ್ಲಿದ್ದ 149 ಗ್ರಾಮ ಅರಣ್ಯ ಸಮಿತಿಗಳಿಗೆ ಜೀವ ತುಂಬಿದರು. ಸಮಿತಿಗಳ ಮುಖಾಂತರ ನೆಡುತೋಪು ರಕ್ಷಿಸಿ, ನೆಡುತೋಪು ಕಟಾವಿನಲ್ಲಿ ಬಂದ ಲಾಭದಲ್ಲಿ ಶೇ. 50ನ್ನು ನಿಯಮದಂತೆ ಸಮಿತಿಗೆ ವಿತರಿಸಿದರು. ಜತೆಗೆ ಬಿದಿರು, ಜೇನು ಸಂಗ್ರಹ, ಪ್ರವಾಸಿ ತಾಣಗಳಿಂದ ಬಂದ ಆದಾಯದಲ್ಲಿ ಶೇ. 90 ಪಾಲು ಸಮಿತಿಗೆ ಕೊಡಿಸಿದರು.

ರು. 11 ಕೋಟಿ ಹಂಚಿಕೆ
2009ರಿಂದ 2013ರ ವರೆಗೆ ಸಮಿತಿಗೆ ಬಂದ ಆದಾಯ ರು. 11 ಕೋಟಿ. ಹೀಗೆ ಬಂದ ಆದಾಯದಲ್ಲಿ 90 ಗ್ರಾಮಗಳ ಅಭಿವೃದ್ಧಿಗೆ ರು. 5.30 ಕೋಟಿ ಹಾಗೂ ಗ್ರಾಮ ಅರಣ್ಯ ಅಭಿವೃದ್ಧಿಗೆ ರು. 5.30 ಕೋಟಿ ಹಂಚಿಕೆ ಮಾಡಿಸಿದ್ದಾರೆ. ಗ್ರಾಮಾಭಿವೃದ್ಧಿಗೆ ಮೀಸಲಿಟ್ಟಿದ್ದ ರು. 5.30 ಕೋಟಿಯಲ್ಲಿ, 906 ಎಲ್‌ಪಿಜಿ ಗ್ಯಾಸ್, 846 ಅಸ್ತ್ರ ಒಲೆ, 154 ಗೋಬರ್ ಗ್ಯಾಸ್ ಸಂಪರ್ಕ, ಒಂದು ಗ್ರಾಮಕ್ಕೆ ಕುಡಿಯುವ ನೀರು, 928 ಶೌಚಾಲಯ ನಿರ್ಮಾಣ, 3880 ಸಿಎಫ್‌ಎಲ್ ಬಲ್ಬ್, 120 ಸೋಲಾರ್ ಲಾಟಿನ್, 88 ಸೋಲಾರ್ ಹೀಟರ್, 603 ಸೋಲಾರ್ ಲೈಟ್, 700 ಅಡುಗೆ ಪಾತ್ರೆ ವಿತರಿಸಿದ್ದಾರೆ. ನಾಲ್ಕು ಸಮುದಾಯ ಭವನ ಕಟ್ಟಿಸಿದ್ದಾರೆ. ಗ್ರಾಮ ಅರಣ್ಯ ಅಭಿವೃದ್ಧಿಗೆ ನಿಧಿಯ ರು. 5.30 ಕೋಟಿಯನ್ನು ಸಂಪನ್ಮೂಲ ರಚನೆ, ಅಂತರ್ಜಲ ಮಟ್ಟ ಅಭಿವೃದ್ಧಿ, 95 ಹೆಕ್ಟೇರ್ ನೆಡುತೋಪು, 30 ಹೆಕ್ಟೇರ್ ಗೇರು ನೆಡುತೋಪು, ಕೆರೆ ನಿರ್ಮಾಣಕ್ಕೆ ಬಳಸಲಾಗಿದೆ.

ಮಾದರಿ ಕಾರ್ಯ

ಮೊದಲಿಗೆ ಸಹಜವಾಗಿಯೇ ಯತೀಶ್ ಅವರಿಗೆ ಹಳ್ಳಿಗಳ ಜನರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ ಜನರನ್ನು ನಿಧಾನವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಜಾಗೃತಿ ಮೂಡಿಸಿದರು. ವಿಎಫ್‌ಸಿ ಮೂಲಕ ಆದಾಯ ಕೈಸೇರಿ ಗ್ರಾಮದ ಜತೆಗೆ ತಮ್ಮ ಬದುಕೂ ಬೆಳಗಿದಾಗ ಜನರಿಗೆ ವಿಶ್ವಾಸ ಹುಟ್ಟಿತು. ಒಲೆ ಹೊತ್ತಿಸಲು ಪರದಾಟ ದೂರವಾಯಿತು. ಈ ಪರಿವರ್ತನೆಗೆ ಕಾರಣರಾದ ಯತೀಶ್ ಈ ಭಾಗದ ಜನರಿಗೆ ಮೆಚ್ಚಿನ ಅಧಿಕಾರಿ.

- ಪ್ರಕಾಶ ಎಸ್. ಶೇಟ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement