ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮಳೆ ಮೇಳ

Vishwanath S
Updated On : 3 Sept 2013, 7:33 am

ಮಳೆಗಾಲ ಬಂತೆಂದರೆ ಪ್ರತಿವರ್ಷವೂ ಉಡುಪಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಜೆ ಹೊತ್ತು ಗೆಜ್ಜೆ ಸದ್ದು ಕಿವಿ ನುಸುಳುತ್ತದೆ. ಗೆಜ್ಜೆ ಸದ್ದೆಂದರೆ ತಬ್ಬಿಬ್ಬಾಗಬೇಡಿ, ಇದ್ಯಾವುದೋ ಭೂತದ ಚೇಷ್ಟೆಯಲ್ಲ. ಇದು ಚಿಕ್ಕ ಮೇಳಗಳ ಯಕ್ಷಗಾನ ಪ್ರದರ್ಶನ.
ಯಕ್ಷಗಾನ ಬಯಲಾಟ ಎಂದರೇ ನೆನಪಾಗುವುದು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳು. ಕರಾವಳಿಯ ಈ 3 ಜಿಲ್ಲೆಗಳು ಮಳೆಗೂ ಪ್ರಸಿದ್ಧಿಯೇ. ಆದರೆ ಮಳೆಗೂ ಯಕ್ಷಗಾನ ಬಯಲಾಟಕ್ಕೂ ಆಗಿ ಬರದು. ಯಕ್ಷಗಾನ ಬಯಲಾಟ ಪ್ರದರ್ಶನಗಳು ತೆರೆದ ಬಯಲು, ಮೈದಾನ, ಗದ್ದೆಗಳಲ್ಲಿ ಪ್ರದರ್ಶನಗೊಳ್ಳುವುದರಿಂದ ಮಳೆಗಾಲದಲ್ಲಿ ಬಯಲಾಟ ಪ್ರದರ್ಶಿಸುವ ಮೇಳಗಳು ಸ್ಥಗಿತಗೊಳ್ಳುತ್ತವೆ. ಬಯಲಾಟದ ಸಾವಿರಾರು ಕಲಾವಿದರು ನಿರುದ್ಯೋಗಿಗಳಾಗುತ್ತಾರೆ. ಬಯಲಾಟದಿಂದಲೇ ಹೊಟ್ಟೆ ಹೊರೆಯುವ ಸಾಕಷ್ಟು ಕಲಾವಿದರಿದ್ದಾರೆ. ಅಂಥವರು ಮಳೆಗಾಲದಲ್ಲೂ ಸಂಪಾದನೆಗೆ ಕಂಡುಕೊಂಡ ಒಂದು ದಾರಿ ಎಂದರೇ ಈ ಚಿಕ್ಕ ಮೇಳಗಳು.
ಇದು ಮನೆಮನೆಯ ಯಕ್ಷಗಾನ. ಐದಾರು ಕಲಾವಿದರು ಸೇರಿ ಚಿಕ್ಕ ಮೇಳ ಕಟ್ಟುತ್ತಾರೆ. ಅವರಲ್ಲಿ ಇಬ್ಬರು ಅಥವಾ ಮೂವರು ಪಾತ್ರಧಾರಿಗಳು. ಉಳಿದವರಲ್ಲಿ ಮದ್ದಳೆಗಾರ, ಭಾಗವತ, ಶ್ರುತಿ ನುಡಿಸುವವ, ಮತ್ತೊಬ್ಬ ಸಹಾಯಕ. ಈ ಕಲಾವಿದರು ಸಂಜೆ 6ರಿಂದ 10ರ ವರೆಗೆ ಊರೂರು ಸುತ್ತಿ ಆಸಕ್ತ ಯಕ್ಷಾಗಾನಾಭಿಮಾನಿಗಳ ಮನೆಯಲ್ಲಿ ರಾಮಾಯಣ, ಮಹಾಭಾರತ ಇತ್ಯಾದಿ ಪೌರಾಣಿಕ ಪ್ರಸಂಗಗಳ ಒಂದು ಭಾಗವನ್ನು 5- 15 ನಿಮಿಷಗಳಲ್ಲಿ ಹಾಡಿ, ಕುಣಿದು, ಆಡಿ ತೋರಿಸುತ್ತಾರೆ. ಮನೆಯವರು ನೀಡಿದ ಅಕ್ಕಿ, ಹಣ ಪಡೆದುಕೊಂಡು ಮುಂದಿನ ಮನೆಗೆ ಸಾಗುತ್ತಾರೆ.
ಚಿಕ್ಕ ಮೇಳಗಳು ಮನೆಗೆ ಬಂದು ಪ್ರದರ್ಶನ ನೀಡಿದರೆ ಶಾಂತಿ ನೆಮ್ಮದಿ ನೆಲೆಸುತ್ತದೆ. ಕಷ್ಟಗಳು ಪರಿಹಾರವಾಗುತ್ತವೆ ಎಂಬುದು ನಂಬಿಕೆ. ಹಾಗಂತ ಊರಿನ ಎಲ್ಲರೂ ಈ ಮೇಳಗಳನ್ನು ಸ್ವಾಗತಿಸಿ, ಅವಕಾಶ ನೀಡುತ್ತಾರೆ ಅಂತೇನಿಲ್ಲ. ಆಸಕ್ತರಷ್ಟೇ ಪ್ರೋತ್ಸಾಹಿಸುತ್ತಾರೆ.

ಮಹಾಗಣಪತಿ ಚಿಕ್ಕ ಮೇಳ
ಉಡುಪಿಯ ಸಂತೆಕಟ್ಟೆಯಲ್ಲಿ ಶ್ರೀಮಹಾಗಣಪತಿ ಚಿಕ್ಕ ಮೇಳ ಇದೆ. 4 ವರ್ಷಗಳಿಂದ ಉದಯಕುಮಾರ್ ನೇತೃತ್ವದ ಈ ಮೇಳದಲ್ಲಿ ಐವರು ಕಲಾವಿದರಿದ್ದಾರೆ. ಸ್ತ್ರೀ ವೇಷಧಾರಿಗಳಾಗಿ ಸುರೇಶ್ ಆವರ್ಸೆ ಹಾಗೂ ಸಂತೋಷ್ ಕುಮಾರ್, ಪುರುಷ ವೇಷಧಾರಿಯಾಗಿ ಮಾಧವ ಶೃಂಗೇರಿ, ಭಾಗತವತರಾಗಿ ಪರಮೇಶ್ವರ ನಾಯ್ ಕಾಂತಗೋಡು ಹಾಗೂ ವೆಂಕಟೇಶ ಕುಮಾರ್, ಮದ್ದಳೆಯಲ್ಲಿ ಅನಂತೇಶ್ವರ ಭಟ್ ಇದ್ದಾರೆ. ಕರಾವಳಿಯಲ್ಲಿ ಇಂಥ ಹಲವು ಮೇಳಗಳುಂಟು. 

ಚಿಕ್ಕಮೇಳ ನಮ್ಮ ಸಾಂಸ್ಕೃತಿಕ ರಾಯಭಾರಿಗಳು. ಪ್ರದರ್ಶನದಿಂದ ಕಲಾವಿದರಿಗೂ, ಪ್ರದರ್ಶನ ಮಾಡಿಸಿದವರಿಗೂ ಒಳ್ಳೆಯದಾಗಿದೆ. ಗ್ರಾಮೀಣ ಭಾಗದ ಹೆಚ್ಚಿನ ಮನೆಗಳಲ್ಲಿ ನಮ್ಮನ್ನು ಬರಮಾಡಿಕೊಳ್ಳುತ್ತಾರೆ. ಆದರೆ ನಗರದಲ್ಲಿ ಚಿಕ್ಕ ಮೇಳಗಳು ಬಂದಾಗ ಬಾಗಿಲು ಮುಚ್ಚುವವರೇ ಜಾಸ್ತಿ.
-  ಉದಯಕುಮಾರ್ ಸಂತೆಕಟ್ಟೆ
ಚಿಕ್ಕ ಮೇಳದ ಸಂಚಾಲಕರು (9741471516) 

- ಚೈತ್ರ ಹೆರ್ಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments