ಅಕ್ಷರ ಚಾಣಕ್ಯ
ಕನ್ನಡ ವರ್ಣಮಾಲೆಯಲ್ಲಿ 50 ಅಕ್ಷರಗಳಿದ್ದರೂ ಇವರ ಪಾಲಿಗೆ 38! ಮಿಕ್ಕ 10 ಮಹಾಪ್ರಾಣಗಳು, ಅನುಸ್ವಾರ, ವಿಸರ್ಗಗಳನ್ನು ಇವರು ಬಳಸುವುದೇ ಇಲ್ಲ. ಅಷ್ಟೇ ಏಕೆ, ಸಂಖ್ಯಾಮಾಲೆಯ 'ರ್' ಅನ್ನೂ ಇವರು ಬದಿಗಿಟ್ಟಿದ್ದಾರೆ. ಖಾಲಿ 38 ಅಕ್ಷರಗಳಲ್ಲೇ 21 ಪುಟಗಳ 'ಜಗದಕಣ್ಣು', 4 ಪುಟಗಳ ಮನವಿ ಪತ್ರ ರಚಿಸಿದ ಅಕ್ಷರ ಚಾಣಕ್ಯ ಈ ರಾಮಯ್ಯ ಮೇಷ್ಟ್ರು.
ಆ ಜಾದುವನ್ನು ನೀವು ಓದಿಯೇ ಅರ್ಥೈಸಿಕೊಳ್ಳಬೇಕು. ಇಂದ- ಇನ್ದ, ಎಂಟು- ಎಣ್ಟು, ಕಂಡೆ- ಕಣ್ಡೆ, ಕಣ್ಡೆ, ಒಂದು- ಒನ್ದು, ಚಂಚಲ- ಚಙಚಲ, ನೆಂಟ- ನೆಣ್ಟ, ಭಂಟ- ಬಣ್ಟ, ಬಂಡಿ- ಬಣ್ಡಿ. ವಿಸರ್ಗದಿಂದ ರಚಿತವಾದ ಪದಗಳನ್ನೂ ಅವರು ವಿಶಿಷ್ಟವಾಗಿ ಪರಿಚಯಿಸುತ್ತಾರೆ. ಪುನಃ- ಪುನಹ, ನಮಃ- ನಮಹ, ಭಾಗಶ- ಬ್ಹಾಗಶಹ, ಪ್ರಾತಃಕಾಲ- ಪ್ರಾತಹ್ಕಾಲ, ತೇಜಃಪುಂಜ- ತೇಜಹ್ಪ್ಜ.
ಅಂದಹಾಗೆ, ಕೃಷ್ಣರಾಜಪುರದ ಈ ರಾಮಯ್ಯ ಮೇಷ್ಟ್ರಿಗೆ 93 ವರುಷ. ಇವರಿಗೆ ಅಷ್ಟು ಸ್ಪಷ್ಟ ಕಿವಿ ಕೇಳಿಸದು. ಕಣ್ಣೂ ಸರಿಯಾಗಿ ಕಾಣಿಸದು. ಆದರೆ, ಕನ್ನಡವನ್ನು ಕಟ್ಟುವ ಅವರ ಪ್ರಜ್ಞೆ ಮಾತ್ರ ಮುಪ್ಪಿನಲ್ಲಿ ನರಳುತ್ತಿಲ್ಲ. ಹಾಗೂ ಸಾಧ್ಯವಿಲ್ಲ ಎಂದರಷ್ಟೇ ಮಗನ ನೆರವು ಪಡೆಯುತ್ತಾರೆ. ಇವರು ಓದಿದ್ದು ಕೇವಲ 8ನೇ ತರಗತಿ. ಮೂಲತಃ ಇವರು ಬೆಂಗಳೂರಿನ ಮಾರಗೊಂಡನಹಳ್ಳಿಯವರು. ರೈತ ಕುಟುಂಬದಿಂದ ಬಂದವರು. ಪಿ. ರಾಮಯ್ಯ ಮೇಷ್ಟ್ರ ಜತೆ ಒಂದು ತಾಸು ಮಾತಾಡಿದರೂ ಸಾಕು, ಕನ್ನಡದ ಹಲವು ರೂಪಗಳು ದರ್ಶನ ಕೊಡುತ್ತವೆ. 1,100 ವರ್ಷಗಳ ಕನ್ನಡದ ಇತಿಹಾಸವನ್ನು ಸಂಶೋಧಿಸಿ ಅದರಲ್ಲಿರುವ ತಪ್ಪುಗಳ ಬಗ್ಗೆ ಕನ್ನಡ ಪಂಡಿತರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಈ ಮೇಷ್ಟ್ರು. ಇಂಥ ಗುರುಗಳಿಗೆ ಈ ವಯಸ್ಸಿನಲ್ಲೂ ಸಣ್ಣದೊಂದು ಆಸೆ ಇದೆ. ತಮ್ಮ ಕನ್ನಡ ಸಾಧನೆಗೆ ಗೌರವ ಡಾಕ್ಟರೇಟು ಸಿಗಬೇಕೆಂಬುದು. ರಾಮಯ್ಯನವರನ್ನು ಆದಷ್ಟು ಬೇಗ ಗುರುತಿಸುವ ಕೆಲಸವಾಗಲಿ...
ರಾಮಯ್ಯನವರ ಸಂಪರ್ಕ ಸಂಖ್ಯೆ, ಮೊ. 9343680500.
- ನಾಸೀರ್ ಭಾಷಾ ಎ.ಎಸ್.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.