ಉಂಡಿ ಲ್ಯಾಬ್
ಈ ಗುರುವಿಗೆ ಮಕ್ಕಳೇ ದೇವರು. ಆ ದೇವರುಗಳ ಉಜ್ವಲ ಭವಿಷ್ಯಕ್ಕಾಗಿ ಇವರು ತಮ್ಮದೇ ಚಿಂತನೆಗಳ ಬುನಾದಿಯಲ್ಲಿ ಪ್ರಯೋಗಾಲಯ ನಿರ್ಮಿಸಿದ್ದಾರೆ!
ಅಲ್ಲಿ ಸತ್ತ ಪಕ್ಷಿಗಳ ಪುಕ್ಕವಿದೆ. ಅಂಗಾಂಗವಿದೆ. ಇಲಿ, ಹಾವು, ಚೇಳು, ಹೆಗ್ಗಣಗಳ ದೇಹದ ಬಿಡಿಭಾಗಗಳ ದರ್ಶನವಿದೆ. ನಕ್ಷತ್ರ ಮೀನಿನ ಎಲುಬಿದೆ. ಹಲವು ಪ್ರಾಣಿಗಳ, ಹೃದಯ, ತಲೆಬುರುಡೆಗೆ ಆ ಗ್ಯಾಲರಿಯಲ್ಲಿ ಮಹಾನ್ ಮರ್ಯಾದೆ ಸಿಕ್ಕಿದೆ. ಇವನ್ನೆಲ್ಲ ಈ ಮೇಷ್ಟ್ರು ಖುದ್ದು ಸಂಗ್ರಹಿಸಿದ್ದಾರೆ.
ಆ ಮೇಷ್ಟ್ರ ಹೆಸರು ಅಶೋಕ ಉಂಡಿ. ಗದಗ ಜಿಲ್ಲೆಯ ರೋಣ ತಾಲೂಕಿನ ಸೂಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕರಾದ ಉಂಡಿ, ಬೇರೆಲ್ಲ ಗುರುಗಳಿಗಿಂತ ಭಿನ್ನರು. ತಿಂಗಳ ಆರಂಭದಲ್ಲಿ ವೇತನ ಬಂದರೆ ಸಂಸಾರಕ್ಕೆ ಏನು ಬೇಕೆಂದು ಯೋಚಿಸುವವರಲ್ಲ ಉಂಡಿ. ಮಕ್ಕಳಿಗೇನು ಕೊಟ್ಟರೆ ಅವರ ಜ್ಞಾನ ವೃದ್ಧಿಸುತ್ತದೆ ಎಂದು ತಲೆಕೆಡಿಸಿಕೊಳ್ಳುವವರು.
ಇಂದು ಮಕ್ಕಳೆದುರು ಪಠ್ಯವನ್ನಷ್ಟೇ ಓದಿ, ಮನೆಗೆ ಹೋಗುವ ಶಿಕ್ಷಕರು ಹೆಚ್ಚು. ಆದರೆ, ಉಂಡಿ ಅದನ್ನೂ ಮಾಡಿ, ಪ್ರಯೋಗಾಲಯದ ಮೂಲಕವೂ ಮಕ್ಕಳ ಮೆದುಳಿಗೆ ಆಹಾರ ಒದಗಿಸುತ್ತಾರೆ. ಗಣಿತದ ಸೂತ್ರಗಳನ್ನು ಆಟಿಕೆಗಳ ಮೂಲಕ ತಿಳಿಸುತ್ತಾರೆ. ಬೇಸಿಗೆ ಶಿಬಿರ, ನಾಣ್ಯಸಂಗ್ರಹ, ಕೈದೋಟ ಆರೈಕೆ, ಔಷಧ ಕಾಳಜಿ... ಇವೆಲ್ಲವುಗಳ ಮೂಲಕ ವಿದ್ಯಾರ್ಥಿಗಳಿಗೆ ಸಾಮಾನ್ಯ ಜ್ಞಾನ ಬಡಿಸುವವರು ಉಂಡಿ. ಇಂಥ ಮೇಷ್ಟ್ರು ಇನ್ನಷ್ಟು ಹುಟ್ಟಿಕೊಳ್ಳಲಿ ಎಂಬುದು ಸಮಾಜದ ಹಾರೈಕೆ.
- ಅಜೀಜ ಅಹ್ಮದ ಬಳಗಾನೂರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.