ಬಾಬಾ ಪವಾಡ
ಮುದುಗಲ್ ತಾಲೂಕಿನ ಆದಾಪುರ ಸರ್ಕಾರಿ ಶಾಲೆ ಒಂದು ಮಾಯಾಲೋಕ. ಸುತ್ತಲಿನ ಗೋಡೆಗಳಿಗೆ ಅಂಟಿಕೊಂಡ ರಾಷ್ಟ್ರನಾಯಕರು ನಿಮಗೆ ಚರಿತ್ರೆಯ ಪೀಠಿಕೆ ಹಾಕಿದರೆ, ಫಲಕಗಳ ಮೇಲೆ ಅರಳಿಕೊಂಡ ವಚನಗಳು ಬಸವಣ್ಣನ ಕಾಲಕ್ಕೆ ಕರೆದೊಯ್ಯುತ್ತವೆ. ಮತ್ತೆ ಹಾಗೆಯೇ ಮುಂದೆ ಹೋದರೆ ಎದುರಾಗುವ ವೈಜ್ಞಾನಿಕ ಉಪಕರಣಗಳು ನಿಮ್ಮನ್ನು ಆದಾಪುರದಿಂದ ನಾಸಾದತ್ತ ನಡೆಸುತ್ತವೆ.
ಇದರ ಹಿಂದೆ ಕೆಲಸ ಶ್ರಮಸುರಿದಂಥ ಗುರುಗಳು ಹಾಜಿಮಲಂಗ ಬಾಬಾ. ಶಾಲೆಯ ಸೌಂದರ್ಯವಷ್ಟೇ ಅಲ್ಲ, ಗುಣಮಟ್ಟ ವೃದ್ಧಿಗೂ ಆದ್ಯತೆ ಕೊಟ್ಟವರು. ಹೂನೂರು, ಕನ್ನಾಪೂರಹಟ್ಟಿ ಶಾಲೆಗಳನ್ನು ಮಾದರಿ ಮಾಡಿದ ಬಳಿಕ ಈಗ ಆದಾಪುರ ಶಾಲೆಯನ್ನು ರಾಷ್ಟ್ರಮಟ್ಟಕ್ಕೆ ಪರಿಚಯಿಸಿದರು.
ಚಪ್ಪಾಳೆಗೆ ಬೆಳಕು!
ಈ ಶಿಕ್ಷಕನ ಚಮತ್ಕಾರಕ್ಕೆ ಜಾಗತಿಕ ತಜ್ಞರ ತಂಡವೇ ಚಕಿತಗೊಂಡಿದೆ. ತಂಡದ ಮುಖ್ಯಸ್ಥ ರುಲುಕೋಸ ಅವರು ಈ ಶಾಲೆಯನ್ನು ಪ್ರವೇಶಿಸುತ್ತಿದ್ದಂತೆಯೇ ಮಕ್ಕಳು ಚಪ್ಪಾಳೆ ಹೊಡೆದರು. ಆ ಚಪ್ಪಾಳೆಗೆ ಸುತ್ತ ನೆಟ್ಟಿದ್ದ ವಿದ್ಯುದ್ದೀಪಗಳು ಥಟ್ಟನೆ ಬೆಳಕು ಚೆಲ್ಲಿದವು. ಎಲ್ಲೋ ಗೂಡಿನಲ್ಲಿಟ್ಟ ಟೇಪ್ರೆಕಾರ್ಡರ್ಗಳು ಹಾಡತೊಡಗಿದವು. ಬಾಬಾ ಮೇಷ್ಟ್ರು ವಿಜ್ಞಾನಕ್ಕೆ ಎಷ್ಟು ಆದ್ಯತೆ ಕೊಟ್ಟಿದ್ದಾರೆಂಬುದಕ್ಕೆ ಇದೊಂದು ಉದಾಹರಣೆ ಸಾಕು.
ಭಕ್ತಿಯ ರಸಧಾರೆ
ಶಾಲೆಯ ಆವರಣದ ಗೊಡೆಯ ಮೆಲೆ ಶರಣ, ಸಂತರ, ಭಾವಚಿತ್ರಗಳನ್ನು ಬರೆಯಿಸಿ ಮಕ್ಕಳಲ್ಲಿ ಭಕ್ತಿಯ ಭಾವನೆಯನ್ನು ಸ್ಫುರಿಸಿದ್ದಾರೆ. ಅಲ್ಲದೆ, ಮಕ್ಕಳಲ್ಲಿ ವೈಜ್ಞಾನಿಕ ಕುತೂಹಲ ಹೆಚ್ಚಿಸಲು ಸೌರವ್ಯೂಹಕ್ಕೆ ಸಂಬಂಧಿಸಿದ ನಾನಾ ಮಾಹಿತಿಗಳನ್ನು ಹೆಣೆದಿಟ್ಟಿದ್ದಾರೆ. ಅದಕ್ಕೆ ಪೂರಕ ಸಾಮಗ್ರಿಗಳು ಒಳಗಿನ ಕೋಣೆಯಲ್ಲಿ ಬೆರಗು ಹುಟ್ಟಿಸುತ್ತವೆ.
ದೇಣಿಗೆ ಬಂದವು...
ಶಾಲೆಗಳಿಗೆ ಸರ್ಕಾರದ ನೆರಳಷ್ಟೇ ಅಲ್ಲ. ಗ್ರಾಮಸ್ಥರ ನೆರಳೂ ಮುಖ್ಯ. ಈ ಗ್ರಾಮದ ಗ್ರಾನೈಟ್ ಉದ್ಯಮಿಗಳು, ಶಿಕ್ಷಣ ಪ್ರೇಮಿಗಳು, ಪೋಷಕರು ಪ್ರೀತಿಯಿಂದ ದೇಣಿಗೆ ನೀಡಿ ಶಾಲೆಗೆ ಪ್ರೊಜೆಕ್ಟರ್ ಮತ್ತಿತರ ಸೌಲಭ್ಯಗಳನ್ನು ಒದಗಿಸಿದ್ದಾರೆ. ಅಂದಹಾಗೆ, ಬಾಬಾ ರಂಗಕಲಾವಿದರೂ ಹೌದು. ಹಲವು ಬೀದಿ ನಾಟಕಗಳಿಗೆ ಬಣ್ಣ ಹಚ್ಚಿದವರು. ಇವರ ಸಾಧನೆಯ ಮೇಲೆ ಗುಲ್ಬರ್ಗಾ ಮುರುಘರಾಜೇಂದ್ರ ಸ್ವಾಮೀಜಿ ಶಿಕ್ಷಣ ಸ್ನಾತಕೋತ್ತರ ಕೇಂದ್ರದ ಶಿವಕುಮಾರ ಕಟ್ಟಿಮನಿ ಪಿಎಚ್ಡಿಯನ್ನೂ ಮಾಡಿದ್ದಾರೆ.
ರಾಜ್ಯ ಸರ್ಕಾರಿಂದ ಈಗಾಗಲೇ ಪುರಸ್ಕಾರಗಳನ್ನು ಪಡೆದಿರುವ ಬಾಬಾ ಅವರಿಗೆ ಈಗ ರಾಷ್ಟ್ರಪ್ರಶಸ್ತಿ ಸಿಗುತ್ತಿರುವುದು ಮತ್ತೊಂದು ಸಿಹಿ ಸಂಗತಿ. ಈ ಮೂಲಕ ಆದಾಪುರ ದೆಹಲಿಗೂ ಗೊತ್ತಾಗಿದೆ.
- ಪಂಪಯ್ಯ ಮಠ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.