ಯಾರೂ ಶತ್ರುಗಳಲ್ಲ
ನಾವೇಕೆ ಹೀಗೆ ಎನ್ನುವುದೇ ಅರ್ಥವಾಗುವುದಿಲ್ಲ. ಒಮ್ಮೆಯೂ ಸುಂದರ ಬದುಕು, ಸುಕೋಮಲ ಜೀವನ, ಸಂತಸ, ಸಮೃದ್ಧಿಯ ಕನಸಿನ ಬಗೆಗೆ ಚರ್ಚಿಸುವುದೇ ಇಲ್ಲ. ಹಾಗೆ ನೋಡಿದರೆ ಹುಟ್ಟು ಹುಟ್ಟುತ್ತಲೇ ಭೀತಿಯನ್ನು ತುಂಬುತ್ತೇವೆ. ಮಕ್ಕಳಲ್ಲಿ ವೃಥಾ ಪಾಪ ಭೀತಿಯನ್ನು ತುಂಬುತ್ತಾ ಬರುತ್ತೇವೆ. ಮಗು ಹುಟ್ಟಿ, ಬೆಳೆಯುತ್ತಿದ್ದಂತೆಲ್ಲ ಅದರ ಆಯುಸ್ಸು ಅಷ್ಟರಮಟ್ಟಿಗೆ ಕಡಿಮೆಯಾಯಿತೆಂದೇ ಯೋಚಿಸುತ್ತೇವೆ. ಶತ್ರುತ್ವದ ಭಾವನೆಗಳನ್ನು ಬಿತ್ತುತ್ತಲೇ ಮಕ್ಕಳನ್ನು ಬೆಳೆಸುತ್ತೇವೆ. ಬೆಂಕಿ ಸುಡುತ್ತದೆ, ಅದರ ಹತ್ತಿರ ಹೋಗಲೇಬೇಡ ಎನ್ನುತ್ತೇವೆ. ನೀರು ಮುಳುಗಿಸುತ್ತದೆ. ಅದರ ಸಹವಾಸವೇ ಬೇಡ ಎನ್ನುತ್ತೇವೆ. ಮಳೆಯಲ್ಲಿ ನೆನೆದರೆ ಹುಷಾರು ತಪ್ಪೀತು ಎನ್ನುತ್ತ ಅದರಿಂದ ದೂರ ಇಟ್ಟು ಬಿಡುತ್ತೇವೆ. ಅವರು ಕೆಟ್ಟವರು, ಇವರು ಸರಿಯಿಲ್ಲ. ಅವರ ಬಳಿ ಹೋಗಬೇಡ, ಇವರೊಂದಿಗೆ ಮಾತನಾಡಬೇಡ ಎಂದು ನಮ್ಮ ಅಭಿಪ್ರಾಯಗಳನ್ನು ಅವರ ಮೇಲೆ ಹೇರುತ್ತೇವೆ. ಅಷ್ಟಕ್ಕೂ ಒಮ್ಮೆಯೂ ಮಕ್ಕಳಿಗೆ ಸ್ವತಂತ್ರವಾಗಿ ಆಲೋಚಿಸಲು, ಅವರದೇ ಆದ ಅನುಭವಗಳನ್ನು ಗಳಿಸಿಕೊಳ್ಳಲು, ಸ್ವಂತ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಆಸ್ಪದವನ್ನೇ ಕೊಡುವುದಿಲ್ಲ. ಬಹುಶಃ ನಾವು ಹಾಗೆ ಬೆಳೆದಿದ್ದರೆ, ನಮ್ಮ ಮಕ್ಕಳನ್ನೂ ಹಾಗೆಯೇ ಬಿಡುತ್ತಿದ್ದೆವೇನೋ? ಆದರೇನು ಮಾಡೋಣ... ನಮಗೆ ನಮ್ಮ ಹೆತ್ತವರು ಹೇಳಿದ್ದನ್ನೆಲ್ಲ ನಾವೂ ಪುನರಾವರ್ತಿಸುತ್ತಿದ್ದೇವೆ. ಅಸಲಿಗೆ ನಾವು ಈ ಬಗ್ಗೆ ಸ್ವತಂತ್ರವಾಗಿ ಆಲೋಚಿಸುವುದನ್ನೇ ರೂಢಿಸಿಕೊಂಡಿಲ್ಲ.
ಬೆಂಕಿ ಸುಡುತ್ತದೆ ನಿಜ. ಆದರೆ ಅದರಲ್ಲಿನ ಅಪಾರ ಶಕ್ತಿಯನ್ನು ನಾವು ಅರ್ಥೈಸಿಕೊಂಡೇ ಇಲ್ಲ. ನೀರು ಮುಳುಗಿಸುತ್ತದೆ. ಅಂಥ ನೀರಿನಲ್ಲಿ ಇಡೀ ವಿಶ್ವವನ್ನೇ ಬೆಳಗಿಸಬಲ್ಲ ವಿದ್ಯುತ್ ಅಡಗಿದೆ ಎಂಬುದನ್ನು ಮೊದಲಿಗೆ ನಾವು ಹೇಳುವುದೇ ಇಲ್ಲ. ಮಳೆ ನಮ್ಮ ಒಂದಿಡೀ ಇಳೆಯ ಬೆಳವಣಿಗೆಗೆ ಮೂಲಾಧಾರ ಎಂಬ ಸತ್ಯವನ್ನು ನಾವು ಮುಚ್ಚಿಡುತ್ತೇವೆ. ಹಾಗೆಯೇ ಯಾರೂ ಈ ಜಗತ್ತಿನಲ್ಲಿ ನಮಗೆ ಶತ್ರವೆಂಬವರು ಇರುವುದಿಲ್ಲ. ಅವರನ್ನು ನಾವೇ ಸೃಷ್ಟಿಸಿಕೊಳ್ಳುವುದು ಎಂಬ ವ್ಯಕ್ತಿಗತ ವೈಫಲ್ಯವನ್ನು ನಾವು ಮಕ್ಕಳಿಗೆ ಅರ್ಥ ಮಾಡಿಸಿಗೊಡುವುದೇ ಇಲ್ಲ. ಸಿಕ್ಕ ಸಿಕ್ಕದ್ದನ್ನೆಲ್ಲ ಸುಟ್ಟು ಕರಕಲಾಗಿಸುವ ಬೆಂಕಿ, ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ನೀರು, ಅಬ್ಬರದಲ್ಲಿ ಸುರಿಯುವ ಮಳೆ, ಬರ್ರನೆ ಬೀಸುವ ಗಾಳಿ ಇವುಗಳಲ್ಲಿ ಒಂದು ಇಲ್ಲದೆಯೂ ನಾವು ಬದುಕು ಮುನ್ನಡೆಸಲು ಸಾಧ್ಯವಿಲ್ಲ. ಅವು ಇರುವುದೇ ನಮಗಾಗಿ ಎಂಬ ಅರಿವನ್ನು ಮೂಡಿಸಿಕೊಳ್ಳೋಣ. ಆಗ ಶತ್ರುಗಳನ್ನೂ ಮಿತ್ರರನ್ನಾಗಿಸಿಕೊಳ್ಳಬಹುದು.
- ಸಹನೆ