ಕುಡಿದಷ್ಟು ಸವಿ
ಹಲವು ವೈವಿಧ್ಯಮಯ ವಿಷಯಗಳ ಮೇಲೆ ಬೆಳಕು ಚೆಲ್ಲಿ ರಸವತ್ತಾದ ಲೇಖನಗಳನ್ನು ನೀಡುತ್ತಿರುವ 'ಬೈಟು ಕಾಫಿ'ಯನ್ನು ಓದಿದಾಗ ಆಗುವ ಅನುಭವವೇ ವರ್ಣನಾತೀತ. ಓದುಗರ ಸದಭಿರುಚಿಗೆ ತಕ್ಕಂತೆ ಬರಹಗಳನ್ನು ಪ್ರಕಟಿಸುವುದಲ್ಲದೇ ಅವರ ಅನಿಸಿಕೆ ಹಾಗೂ ಭಾವನೆಗಳ ವಿನಿಮಯಕ್ಕೆ ಅದ್ಭುತವಾದ ವೇದಿಕೆಯನ್ನು ಒದಗಿಸುತ್ತಿದೆ. ಬೈಟು ಕಾಫಿ ಕುಡಿದಷ್ಟು ಸವಿ ಹೆಚ್ಚು, ಚಪ್ಪರಿದಷ್ಟು ಮಜಾ!
- ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.
ಓದುಗರಿಗೂ ಗೌರವ!
'ಬೈಟು ಕಾಫಿ' ಆಕರ್ಷಣೀಯವಾಗಿದೆ. ಓಲಗ ಅದ್ಭುತ, ಓದುಗರ ಕನಸುಗಳಿಗೆ ಒಂದು ಚಿಕ್ಕ ಕಿರೀಟವಿದ್ದಂತೆ. ದಿನ ನೋಡುವ 'ಬೈಟು ಕಾಫಿ'ಯಲ್ಲಿ ನಮಗೊಂದು ಸಣ್ಣ ಆಸೆ, ನಾವೂ ಅಲ್ಲಿ ಕಾಣಿಸಿಕೊಳ್ಳಬೇಕು ಎಂದು! ಸುಹಾಸಿನಿ ಕೂಡ ಆನಂದ ನೀಡುತ್ತದೆ. ಜಗುಲಿಯೂ ಚೆನ್ನಾಗಿ ಮೂಡಿಬರುತ್ತಿದೆ. ಓದುಗರ ಅಭಿಪ್ರಾಯಗಳಿಗೆ ಚೊಕ್ಕ ವೇದಿಕೆ ಕಲ್ಪಿಸಿದೆ. ಮೀಡಿಯಾಗಳು ಟಿ.ಆರ್.ಪಿಗಾಗಿ ಇನ್ನಿಲ್ಲದ ಸಾಹಸ ಮಾಡುತ್ತವೆ. ಆದ್ರೆ ನಮ್ಮ ತಾತ ಮುತ್ತಾತರ ಕಾಲದಿಂದಲೂ ಬದಲಾಗದ ಟಿ.ಆರ್.ಪಿ ಎಂದರೆ ನ್ಯೂಸ್ ಪೇಪರ್ ಬೆಳಗಿನ ಕಾಫಿಯ ಜೊತೆಗೆ 'ಬೈಟು ಕಾಫಿ' ಇಲ್ಲದಿದ್ದರೆ ಕಾಫಿಯು ರುಚಿಸುವುದಿಲ್ಲ.
-ಪವಿತ್ರ, ಐ.ಡಿ.ಕೋಟೆ
ಕಾಫಿಯಿಂದ ಇಲ್ಲ ಬಿ.ಪಿ
ಇಲ್ಲವೇ ಇಲ್ಲ ಬೀಪಿ
ಓದುತ್ತಿದ್ದರೆ ಬೈಟು ಕಾಫಿ
ಹ್ಯಾಪಿಯೋ ಹ್ಯಾಪಿ...
ಓದದವನು ಪಾಪಿ...
-ಚೀಗೋರಾ, ಚೀಲೇನಹಳ್ಳಿ
ಬೈಟು ಕಾಫಿ ಬಿಟ್ಟಿರಲು ಆಗಲ್ಲ
ನಾನು ಟೀ, ಕಾಫಿ ಕುಡಿಯುವುದಿಲ್ಲ, ಆದರೆ 'ಬೈಟು ಕಾಫಿ' ತಪ್ಪಿಸುವುದಿಲ್ಲ. ಮನರಂಜನೆ, ಮಾಹಿತಿ, ರಾಶಿಫಲ, ಸಲ್ಲಾಪ, ರನ್ವೇ, ಲೆಕ್ಕರಾಜರಾಣಿ, ವಿವೇಕ ವಿಚಾರ ಮತ್ತಿತರ ಬರಹಗಳು ಹಾಗೂ ಮಾಹಿತಿಯುಕ್ತ ಲೇಖನಗಳಿಗಾಗಿ 'ಬೈಟು ಕಾಫಿ'ಗೆ ಕಾಯುತ್ತಿರುತ್ತೇನೆ. ನಿಮ್ಮ ಶ್ರಮಕ್ಕೆ ನನ್ನದೊಂದು ಸಲಾಮ್.
-ಮಾಗಡಿ ಶ್ರೀನಿವಾಸ್, ರಾಮನಗರ ಜಿಲ್ಲೆ
ಗುಟ್ಟೊಂದು ಹೇಳುವೆ
ಹೇ ಬೈಟು ಕಾಫಿ, ಹ್ಯಾಂಗ ವರ್ಣಿಸಲಿ ನಿನ್ನ ಒಂದು ವರ್ಷದ ಸಾಧನೆಯ ಹಾದಿ. ಡಾ.ಪಿ. ಸದಾನಂದ ಮೈಯ್ಯರವರ ತಿಂಡಿ ತಿನಿಸು ಬಾಳ ಚಂದೈತಿ ಎಂದು ವರ್ಣಿಸುವ ಮೂಲಕವೇ? ಇಲ್ಲ, ನವ ವಸಂತಕ್ಕೆ ಕಾಲಿಡುವ ಪ್ರೇಮಿಗಳ ಪ್ರೀತಿಯ ಮೂಲಕವೆ? ಬಣ್ಣಬಣ್ಣದ ಚಿತ್ತಾರದ ಮೂಲಕವೆ? ದಿನದಿಂದ ದಿನಕ್ಕೆ ಅರಳುವ ಸಂಗೀತ ಸಾಧಕರ ಮೂಲಕವೆ? ಹ್ಯಾಂಗ ವರ್ಣಿಸಲಿ ಬೈ ಟು ಕಾಫಿ. ಅದಕ ಗುಟ್ಟೊಂದ ಹೇಳತಿನಿ ನನ್ನ ಹತ್ರ ಬಾ.
-ಮಲ್ಲಮ್ಮ ಯಾಟಗಲ್, ಕರ್ನಾಟಕ ಕೇಂದ್ರೀಯ ವಿವಿ ಗುಲ್ಬರ್ಗ
ಸಿಪ್ಪೆ ಹುಡುಕುವ ಕಾಯಕ
'ಬೈಟು ಕಾಫಿ' ಅನ್ನುವ ಶೀರ್ಷಿಕೆಯೇ ಸಂಮೋಹನಗೊಳಿಸುವಂಥದ್ದು. ಒಂದು ಕಾಫಿಯ ಬದಲು ಬೈಟು ಕಾಫಿಗೇ ಅಂಟಿಕೊಂಡಿರುವ ಹೊತ್ತಲ್ಲೇ, ಬೈಟುವಿನೊಳಗೆ ಅದೆಷ್ಟು ಬೈಟುಗಳಿವೆ! ಜ್ಞಾನ, ವಿಜ್ಞಾನ, ಹಾಸ್ಯ, ಆರೋಗ್ಯ, ಕಥೆ, ಹನಿಗವಿತೆ, ರಾಶಿಫಲ, ಕೃಷಿ, ಪದರಂಗ, ಮಕ್ಕಳ ಸಾಹಿತ್ಯ, ಸಂದರ್ಶನ, ವ್ಯಕ್ತಿತ್ವ ವಿಕಸನದಂತ ಎಲ್ಲಾ ವಯೋವಾನದವರಿಗೂ ಬೇಕಾದ ಎಲ್ಲ ಮಾಹಿತಿ ಕೋಶವೇ ಈ ನಾಲ್ಕು ಪುಟಗಳಲ್ಲಿ ತೆರೆದುಕೊಳ್ಳುತ್ತೆ. ಈ ಹೊತ್ತಿನ ಓದುಗರಿಗೂ, ಬಿಸಿಬಿಸಿ ಕಡ್ಲೆಕಾಯಿ ತಿಂದಹಾಗೆ! ತಿಂದಮೇಲೆ ಮತ್ತೆ ಬೀಜಕ್ಕಾಗಿ ಸಿಪ್ಪೆ ಹುಡುಕುವುದಿಲ್ಲವೆ ಹಾಗೆ. ಮಾಂತ್ರಿಕತೆಯ ಪುಟಗಳು ಎಂದರೆ ತಪ್ಪಲ್ಲವೇನೋ, ಒಂದು ಅಸಮದಾನವೆಂದರೆ ಶೀರ್ಷಿಕೆ ಮೊದಲಿದ್ದದೇ ಆಕರ್ಷಕವಾಗಿ ಕಾಣುತಿತ್ತು. ಧನಂಜಯ ಮೆಂಗಸಂದ್ರ, ಹೊಸದುರ್ಗ
ಮತ್ತೇರಿಸುವ ಕಾಫಿ
ಕನ್ನಡ ಪ್ರಭವೆಂಬ ದಿಟ್ಟ ನೇರ ನಡೆ ನುಡಿಯ ಪತ್ರಿಕೆ ಕನ್ನಡದ ಕಣ್ಮಣಿಯಾಗುವುದರ ಜೊತೆಗೆ 'ಬೈಟು ಕಾಫಿ' ಎಂಬ ಮತ್ತೇರುವ ಕಾಫಿಯನ್ನು ನೀಡಿ ಓದುಗರು ಬಿಟ್ಟಿರಲಾರದಂತಹ ಸ್ಥಿತಿಗೆ ಕೊಂಡೊಯ್ದು ಆಗಲೇ ಒಂದು ವರ್ಷವು ಆಗಿಹೋಯಿತೆಂದರೆ ನಿಜಕ್ಕೂ ಆಶ್ಚರ್ಯವಾಗುತ್ತಿದೆ. ಆಡು ಮುಟ್ಟದ ಸೊಪ್ಪಿಲ್ಲ, ಈ 'ಬೈಟು ಕಾಫಿ' ಕುಡಿದು ಮತ್ತೇರದ ಓದುಗ ಅಭಿಮಾನಿಗಳೇ ಇಲ್ಲ. ನನಗಂತೂ ಶುಕ್ರವಾರ ಮತ್ತು ಭಾನುವಾರ ಬೈಟು ಕಾಫಿ ಇಲ್ಲದೆ ಒಂಥರಾ ಮುಖದಲ್ಲಿ ಪ್ರೇತಕಳೆ ಆವರಿಸಿ ಬಿಡುತ್ತದೆ. ಬೆಲೆ ಹೆಚ್ಚಾದರೂ ಪರವಾಗಿಲ್ಲ, ಪ್ರತಿದಿನವೂ 'ಬೈಟು ಕಾಫಿ' ಕೊಟ್ಟರೆ ಇನ್ನೂ ಚೆನ್ನ.
- ಬರ್ಕಲಿ ರಮೇಶ್, ಕಿರಗಂದೂರು ಮಂಡ್ಯ