ಘಂಟಾ ಪ್ರಿಯ
ಮಗಳಿಗೆ ಒಳ್ಳೆಯ ಸಂಬಂಧ ಕೂಡಿ ಬರಲಿ ಅಂತ ಹಾರೈಸಿದವರು, ನಮ್ಮನೇಲೂ ತೊಟ್ಟಿಲು ಕಟ್ಟುವ ಸೌಭಾಗ್ಯ ನೀಡು ಅಂತ ಬೇಡಿದವರು, ಉದ್ಯೋಗ ವಿದ್ಯೆಗಳ ಪ್ರಗತಿಗಾಗಿ ಕೈಮುಗಿದವರು, ಹೀಗೆ ನಾನಾ ವಿಧದಿಂದ ತಮ್ಮ ಹರಕೆ ಈಡೇರಿದಾಗ ಇಲ್ಲಿಗೆ ತಂದೊಪ್ಪಿಸುವುದು ಕಂಚಿನ ಒಂದು ಘಣಘಣ ಘಂಟೆ. ರಾಜ್ಯದ ಮೂಲೆಮೂಲೆಗಳಿಂದ ಪ್ರತಿದಿನ ಸರಾಸರಿ ನೂರಾರು ಘಂಟೆಗಳು ಬರುತ್ತವೆ. ದೊಡ್ಡದು ಸಣ್ಣದು ಮಧ್ಯಮ ಗಾತ್ರದ್ದು ಎಲ್ಲ. ಹೀಗೆ ಬಂದ ಘಂಟೆಗಳನ್ನು ದೇವರ ಮುಂದಿನ ಕಂಬಿಯಲ್ಲಿ ಸಾಲಾಗಿ ಜೋಡಿಸುವುದು ವಾಡಿಕೆ. ಈ ಗಣಪತಿಗೆ ದೇವಾಲಯ ಬೇಡ, ಬಯಲು ಗಣಪನೆಂದೇ ಖ್ಯಾತ. ಒಂದು ಕಾಲದಲ್ಲಿ ಎಲ್ಲ ಜಾತಿಯ ಭಕ್ತರೂ ಮನೆಯಿಂದ ತಂದ ಅಪ್ಪಕಜ್ಜಾಯ ಮುಂದಿರಿಸಿ ಪೂಜಿಸಲು ಇಲ್ಲಿ ಅವಕಾಶವಿತ್ತು. ಮಡಿವಂತನಲ್ಲ ಈ ಗಣಪ. ಬಹು ಹಿಂದೆ ಇಲ್ಲಿ ದೇವರನ್ನು ದನಗಾಹಿಗಳು ಸ್ಥಾಪಿಸಿದರೆಂಬ ನಂಬಿಕೆಯಿದೆ. ಈ ಕಾರಣಕ್ಕೆ ದನಗಳ ಕೊರಳಿನ ಘಂಟೆ ಗಣಪತಿಗೆ ಪ್ರಿಯವಾಗಿರಲೂಬಹುದು. ಹೀಗೆ ಹರಕೆಯಾಗಿ ಬಂದುದನ್ನು ಕೆಲವು ದಿನಗಳಿಗೊಮ್ಮೆ ಲಾರಿಯಲ್ಲಿ ಲೋಡು ಮಾಡಿ ದೇವಾಲಯದ ವತಿಯಿಂದ ಮಾರಾಟ ಮಾಡಿ ಬರುತ್ತಲೇ ಇರುವ ಹೊಸ ಹರಕೆಯ ಘಂಟೆಗಳಿಗೆ ಜಾಗ ಕಲ್ಪಿಸುತ್ತಾರೆ. ಇದು ಎಲ್ಲಿಯ ಕತೆ ಎಂದಿರಾ? ಬೆಳ್ತಂಗಡಿ ತಾಲೂಕಿನ ಸೌತೆಡ್ಕದ ಗಣಪತಿಯ ಘಂಟಾಪ್ರೇಮ ಅಲ್ಲಿಗೆ ಹೋದವರಿಗೆ ವಿಸ್ಮಯ ಮೂಡಿಸುತ್ತದೆ.
- ಪ.ರಾಮಕೃಷ್ಣ ಶಾಸ್ತ್ರಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.