ಕಾರ್ಣಿಕ ನುಡಿವ ವಕ್ರಾಣಿ
ರಾಜ್ಯದ ವಿವಿಧೆಡೆ ನಾಡಿನ ವರ್ಷದ ಮಳೆ, ಬೆಳೆಯ ಬಗ್ಗೆ ಕಾರ್ಣಿಕ ನುಡಿಯುವ ಜಾತ್ರೆ, ಉತ್ಸವಗಳು ನಡೆಯುತ್ತವೆ. ಆದರೆ, ಬಳ್ಳಾರಿ ತಾಲೂಕು ಕೆ. ವೀರಾಪುರ ಗ್ರಾಮದ ವಕ್ರಾಣಿ (ಕುಡಿಯುವ ನೀರಿನ ಕೊಳ) ಗ್ರಾಮದ ಆ ವರ್ಷದ ಬೆಳೆ ಸಮೃದ್ಧಿ ಅಥವಾ ಬರದ ಬಗ್ಗೆ ಕಾರ್ಣಿಕ ನುಡಿಯುತ್ತದೆ!
ಒಂದು ವಕ್ರಾಣಿ ಭವಿಷ್ಯ ನುಡಿಯಲು ಸಾಧ್ಯವೇ? ಎಂಬ ಪ್ರಶ್ನೆ ಮೂಡಬಹುದು. ಆದರೆ, ಈ ವಕ್ರಾಣಿಯಲ್ಲಿ ನೀರು ಸಂಗ್ರಹವಾಗುವ ಆಧಾರದ ಮೇಲೆ ಆ ವರ್ಷದ ಮಳೆ, ಬೆಳೆಯ ಪರಿಸ್ಥಿತಿ ಗೊತ್ತಾಗುತ್ತದೆ. ಇದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಎನ್ನುವುದು ಗ್ರಾಮದ ಹಿರಿಯರ ಮಾತು.
ಕೆ. ವೀರಾಪುರ ಗ್ರಾಮದ ಪ್ರವೇಶದಲ್ಲೇ ಕುಡಿಯುವ ನೀರು ಸಂಗ್ರಹಿಸುವ ಈ ಕೊಳವಿದೆ. ಪ್ರತಿವರ್ಷ ಮಳೆಗಾಲದಲ್ಲಿ ಆ ವಕ್ರಾಣಿಯಲ್ಲಿ ನೀರು ತುಂಬುವ ಆಧಾರದ ಮೇಲೆ ಆ ವರ್ಷ ಗ್ರಾಮದ ಬೆಳೆ ನಿರ್ಧರಿತ. ಜನ ಎಷ್ಟು ಮಳೆ ಬಂದಿದೆ ಎನ್ನುವುದಕ್ಕಿಂತ ವಕ್ರಾಣಿ ತುಂಬಿತೆ ಎಂದು ನೋಡುತ್ತಾರೆ. ವಕ್ರಾಣಿ ಸಂಪೂರ್ಣ ತುಂಬಿದರೆ ಈ ವರ್ಷ ಗ್ರಾಮಕ್ಕೆ ಸಮೃದ್ಧಿ ಎಂಬ ನಿಟ್ಟುಸಿರು.
ಕೆ. ವೀರಾಪುರ ಗ್ರಾಮಕ್ಕೆ ವಕ್ರಾಣಿ ಕಾರ್ಣಿಕ ನುಡಿಯುವ ಗೊರವಯ್ಯನಿದ್ದಂತೆ. ವಕ್ರಾಣಿಯಲ್ಲಿ ನೀರು ಬಾರದಿದ್ದರೆ ಬರ, ಪೂರ್ತಿ ತುಂಬಿದರೆ ಉತ್ತಮ ಬೆಳೆ ಎಂಬ ನಂಬಿಕೆ ಇಲ್ಲಿನವರದ್ದು. ಈ ವರ್ಷ ವಕ್ರಾಣಿ ತುಂಬಿರುವುದರಿಂದ ಉತ್ತಮ ಬೆಳೆ ಬರುತ್ತದೆ ಎನ್ನುತ್ತಾರೆ ಗ್ರಾಮಸ್ಥರು.
ಗಂಡನ ಮನೆಗೆ ಹೋದ ಊರ ಮಗಳು ತನ್ನ ತವರಿಗೆ ಫೋನ್ ಮಾಡಿದಾಗ ಮಳೆ ಬಂತೆ ಎಂದು ಕೇಳುವುದಿಲ್ಲ, ವಕ್ರಾಣಿ ತುಂಬಿತೆ ಎಂದು ಕೇಳುತ್ತಾಳೆ. ಗ್ರಾಮದ 600 ಮನೆಗಳ ನೀರಿನ ದಾಹ ತೀರಿಸುತ್ತದೆ ಈ ರಾಣಿ. ವಕ್ರಾಣಿ ತುಂಬಿದರೆ ಗ್ರಾಪಂ, ತಾಪಂ, ಜಿಪಂ ಇಲ್ಲಿ ನೀರಿನ ಪೂರೈಕೆಗೆ ಒದ್ದಾಡುವ ಅವಶ್ಯಕತೆ ಇಲ್ಲ. ವರ್ಷಪೂರ್ತಿ ಕುಡಿಯಲು ಇದೇ ನೀರೇ.
ನಮ್ಮ ಪೂರ್ವಜರ ಕಾಲದಿಂದಲೂ ಈ ವಕ್ರಾಣಿಯಲ್ಲಿರುವ ನೀರಿನ ಆಧಾರದ ಮೇಲೆ ಗ್ರಾಮದಲ್ಲಿ ಬೆಳೆ ಹೇಗೆ ಬರುತ್ತದೆ ಎಂಬುದನ್ನು ತಿಳಿಯುತ್ತೇವೆ. ಮಳೆ ಬಂದರೆ ವಕ್ರಾಣಿ ತುಂಬಿದೆಯೇ ಎಂಬುದನ್ನು ಮೊದಲು ನೋಡುತ್ತೇವೆ. ಈ ವರ್ಷ ವಕ್ರಾಣಿ ತುಂಬಿದ್ದು, ಉತ್ತಮ ಬೆಳೆ ಬಂದೇ ಬರುತ್ತದೆ. ಕಳೆದ ವರ್ಷ ಅರ್ಧ ವಕ್ರಾಣಿ ತುಂಬಿ, ಹೇಳಿಕೊಳ್ಳುವ ಬೆಳೆ ಬಂದಿಲ್ಲ.
- ಮಲ್ಲನಗೌಡ, ಗ್ರಾಮಸ್ಥ
-ಶಶಿಧರ ಮೇಟಿ