ಮೌಲ್ಯ ಯಾವತ್ತೂ ಸ್ಥಿರವಲ್ಲ
ಕಂಪನಿ ಬಹಳಷ್ಟು ವರ್ಷ ಹಿಂದೆಯೇ ನಷ್ಟ ಹೊಂದಿರುವುದರಿಂದ ಪ್ರತಿಯೊಬ್ಬ ಪಾಲುದಾರನಿಗೂ ಕೆಲ ವರ್ಷಗಳ ಹಿಂದೆಯೇ ನಷ್ಟವಾದರೂ, ಅದು ಗ್ರಹಿಕೆಗೆ ಬಾರದಿದ್ದುದರಿಂದ, ಅದರ ಅರಿವಿಲ್ಲದಿದ್ದುದರಿಂದ ನೊಂದಿರಲಿಲ್ಲ. ಹಗರಣದ, ನಷ್ಟದ ವಾರ್ತೆ ತಿಳಿದೊಡನೆ ಆಕಾಶವೇ ತಲೆಯ ಮೇಲೆ ಬಿದ್ದಂತೆಯೂ, ಭೂಮಿ ಕುಸಿದಂತೆಯೂ ಭಾಸವಾಗತೊಡಗಿತು. ಎಲ್ಲಾ ಪಾಲುದಾರರೂ ಸತ್ಯದ ಅರಿವಾಗುವವರೆಗೆ ಕೃತಕವಾಗಿ ಶ್ರೀಮಂತರಾಗಿದ್ದರು. ಹಾಗೆಯೇ ಒಂದಿಲ್ಲೊಂದು ರೀತಿಯಲ್ಲಿ ನಾವೆಲ್ಲರೂ ಅಸ್ಥಿರವಾದ ಆರ್ಥಿಕ ವ್ಯವಸ್ಥೆಯ ಪರಿಧಿಯಲ್ಲಿಯೇ ಇದ್ದೇವೆ. ನಮ್ಮ ಸಂಗ್ರಹವೆಲ್ಲ ನಾವು ಉಪಯೋಗಿಸದೇ ಇರುವ ಭವಿಷ್ಯಕ್ಕಾದ್ದರಿಂದ ನಾವು ನಿಜವಾಗಿಯೂ ಕಳೆದುಕೊಂಡಿದ್ದೇವೆ ಎಂಬ ಸತ್ಯವನ್ನು ತಿಳಿಯುವವರೆಗೂ, ನಷ್ಟವನ್ನು ಅನುಭವಿಸಿದ ಅರಿವು ನಮಗಾಗುವುದಿಲ್ಲ. ಅಷ್ಟೇ ಅಲ್ಲ, ಭವಿಷ್ಯದಲ್ಲಿ ಅದನ್ನು ಅನುಭವಿಸುವ ಅಥವಾ ಸಂದಾಯಿಸುವ ವೇಳೆ ಅದರ ಮೌಲ್ಯ ಬದಲಾಗಿರುತ್ತದೆ.
ಒಂದು ಕಥೆ ಹೀಗಿದೆ. ಒಬ್ಬ ರೈತ ತನ್ನ ಹೊಲದಲ್ಲಿ ಕೆಲಸ ಮಾಡುವಾಗ ಅಮೂಲ್ಯವಾದ, ಹೊಳೆಯುವ ಹರಳೊಂದು ಸಿಗುತ್ತದೆ. ರೈತನಿಗೆ ಅದು ಅಮೂಲ್ಯವೆಂದು ಅನಿಸಿದರೂ, ಮಾರುಕಟ್ಟೆಯಲ್ಲಿ ಅದರ ಮೌಲ್ಯ ಏನೆಂದು ತಿಳಿದಿರುವುದಿಲ್ಲ. ಹೀಗಿರುವಾಗ ಆತ ತನಗಿರುವ ಹತ್ತು ಸಾವಿರ ರುಪಾಯಿಯ ಅವಶ್ಯಕತೆಯನ್ನು ಪೂರೈಸಿಕೊಳ್ಳಲು, ಆ ಹರಳನ್ನು ತನ್ನ ಊರಿನಲ್ಲಿರುವ ಒಬ್ಬನೇ ಒಬ್ಬ ವ್ಯಾಪಾರಿಯ ಬಳಿ ಹೋಗುತ್ತಾನೆ. ಆ ವ್ಯಾಪಾರಿಗೆ ತನ್ನ ಬಳಿ ಇರುವ ಹರಳನ್ನು ತೋರಿಸಿ, ತನಗೆ ಅವಶ್ಯಕತೆ ಇರುವ ಹತ್ತು ಸಾವಿರದ ಮೊತ್ತವನ್ನು ಕೇಳುತ್ತಾನೆ. ಕೇವಲ ಹರಳಾಗಿರದೇ, ವಜ್ರವಾಗಿದ್ದ ಆ ಹರಳನ್ನು ಕಂಡ ಚುರುಕು ಬುದ್ಧಿಯ ವ್ಯಾಪಾರಿ ಲಕ್ಷಗಟ್ಟಲೇ ಬೆಲೆಬಾಳುವ ವಜ್ರದ ಬೆಲೆ ರೈತನಿಗೆ ತಿಳಿಯದಿರುವುದನ್ನು ಗಮನಿಸುತ್ತಾನೆ. ಅಲ್ಲದೇ ರೈತನ ಅಜ್ಞಾನದ ದುರುಪಯೋಗ ಪಡೆದು, ಆ ಹರಳಿಗೆ ಐದು ಸಾವಿರ ರೂಪಾಯಿ ಕೊಡುವುದಾಗಿ ತಿಳಿಸುತ್ತಾನೆ. ತನಗೆ ಅವಶ್ಯಕವಾಗಿರುವ ಹತ್ತು ಸಾವಿರ ರೂಪಾಯಿ ದೊರಕದಿದ್ದುದರಿಂದ ರೈತ ಅದನ್ನು ಮಾರದೆಯೇ ಹಿಂತಿರುಗುತ್ತಾನೆ. ಆ ಊರಿನಲ್ಲಿ ವಜ್ರವನ್ನು ಗುರುತಿಸುವವರೂ ಅಥವಾ ಕೊಂಡುಕೊಳ್ಳುವ ವ್ಯಾಪಾರಿ ಇನ್ಯಾರೂ ಇಲ್ಲವೆಂದು ತಿಳಿದು ವ್ಯಾಪಾರಿ ಹೆಚ್ಚಿನ ಹಣ ನೀಡಲು ಒಪ್ಪುವುದಿಲ್ಲ. ಒಂದಿಲ್ಲ ಒಂದು ದಿನ ರೈತ ತನ್ನ ಬಳಿಯೇ ಹಿಂತಿರುಗಿ ಬರಬೇಕೆಂದು ತಿಳಿಯುತ್ತಾನೆ. ಕೆಲ ದಿನಗಳ ನಂತರ ಒಮ್ಮೆ ವ್ಯಾಪಾರಿಗೆ ರೈತ ಇದಿರಾದಾಗ ವ್ಯಾಪಾರಿ ರೈತನಲ್ಲಿ ಆ ಹರಳಿನ ಬಗ್ಗೆ ವಿಚಾರಿಸುತ್ತಾನೆ. ರೈತನು ಆ ಹರಳನ್ನು ಒಬ್ಬ ಗಣ್ಯ ಶ್ರೀಮಂತ ವ್ಯಕ್ತಿಗೆ ನೀಡಿ ಹದಿನೈದು ಸಾವಿರ ಪಡೆದುದಾಗಿ ತಿಳಿಸುತ್ತಾನೆ. ಆ ವ್ಯಕ್ತಿಗೆ ವ್ಯವಹಾರ ಖುಷಿಯಾದುದರಿಂದ ತಾನು ಕೇಳದೆಯೇ ಐದು ಸಾವಿರ ರೂಪಾಯಿ ಹೆಚ್ಚು ನೀಡಿದ್ದಾಗಿ ತಿಳಿಸುತ್ತಾನೆ. ಇದನ್ನು ಕೇಳಿದ ವ್ಯಾಪಾರಿ ವ್ಯಗ್ರನಾಗುತ್ತಾನೆ. ಅಸಹನೆಗೆ ಒಳಪಡುತ್ತಾನೆ. ಹೇಗಿದ್ದರೂ ವಜ್ರ ಕೈತಪ್ಪಿ ಹೋದುದರಿಂದ ರೈತನಿಗೆ ಅದರ ನಿಜವಾದ ಮೌಲ್ಯ ತಿಳಿಸಿ, ಅದನ್ನು ಕಡಿಮೆ ಬೆಲೆಗೆ ಮಾರಿದುದಕ್ಕಾಗಿ ರೈತನನ್ನು ಜರೆಯಲಾರಂಭಿಸುತ್ತಾನೆ. ಅದಕ್ಕೆ ಏನಿಲ್ಲವೆಂದರೂ ಲಕ್ಷ ಮೌಲ್ಯವಿದ್ದು, ನಿನಗೆ ತೊಂಭತ್ತು ಸಾವಿರ ನಷ್ಟವಾಯಿತೆಂದು ಹೇಳುತ್ತಾನೆ. ಆಗ ನಿಧಾನವಾಗಿ ರೈತ ವ್ಯಾಪಾರಿಗೆ ಹೇಳುತ್ತಾನೆ, 'ಸ್ವಾಮೀ, ನಾನು ಏನನ್ನೂ ಕಳೆದುಕೊಂಡಿಲ್ಲ. ಬದಲಾಗಿ ನಾನು ಐದು ಸಾವಿರವನ್ನು ಗಳಿಸಿದ್ದೇನೆ. ಆದರೆ ನೀವು ನಿಮ್ಮ ಜಿಪುಣತನದಿಂದಾಗಿ ಐದು ಸಾವಿರವನ್ನು ಉಳಿಸಲು ಯತ್ನಿಸಿ, ತೊಂಭತ್ತು ಸಾವಿರವನ್ನು ಕಳೆದುಕೊಂಡಿರಿ. ನಿಜವಾಗಿ ಹಣ ಕಳೆದುಕೊಂಡದ್ದು ನಾನಲ್ಲ, ನೀವು'.
ಲಾಭ-ನಷ್ಟಗಳು ನಮ್ಮ ತಿಳುವಳಿಕೆಗೆ ಒಳಪಟ್ಟಿರುತ್ತದೆ. ನಮಗೆ ವಸ್ತುವಿನ ಮೌಲ್ಯ ಏನೆಂಬುದು ತಿಳಿಯದಿದ್ದರೆ ನಾವು ಏನನ್ನೂ ಕಳೆದುಕೊಳ್ಳುವುದಿಲ್ಲ.
(ಮುಂದುವರಿಯುವುದು)
- ಕಿರಣ್ ಉಪಾಧ್ಯಾಯ
keyrun1970@gmail.com