ಆಹಾ ಹುಲಕೋಟಿ ಮದುವೆಯಂತೆ!
ಒಂದು ಮದುವೆ ಮಾಡುವುದೆಂದರೆ ವಧು-ವರ ಹೆತ್ತವರಿಗೆ ಕತ್ತಿಗೆ ಬರುತ್ತದೆ. ಆದರೆ ಹುಲಕೋಟಿ ಗ್ರಾಮದಲ್ಲಿ ಅಷ್ಟಕ್ಕೆಲ್ಲಾ ಯಾರೂ ಹೆದರುವುದಿಲ್ಲ.
ಒಂದು ಮದುವೆ ಮಾಡುವುದೆಂದರೆ ವಧು- ವರ ಹೆತ್ತವರಿಗೆ ಕತ್ತಿಗೆ ಬರುತ್ತದೆ. ಆದರೆ ಹುಲಕೋಟಿ ಗ್ರಾಮದಲ್ಲಿ ಅಷ್ಟಕ್ಕೆಲ್ಲಾ ಯಾರೂ ಹೆದರುವುದಿಲ್ಲ. 'ನಮ್ಮೂರ ಆದರ್ಶ ಮದುವೆ' ಇದ್ದೇ ಇದೆಯಲ್ಲ? ಊರ ಜನರೆಲ್ಲ ಕೂಡಿ ಮನೆಯ ಮಗಳ ಮದುವೆಯಿದು ಎನ್ನುವಂತೆ ಹಗಲಿರುಳು ಶ್ರಮವಹಿಸಿ, ಶಿಸ್ತು, ಪ್ರೀತಿ, ಆದರ್ಶಗಳನ್ನು ಅನುಸರಿಸಿ ಮಾಡುವ ಮದುವೆಯೇ ನಮ್ಮೂರ ಆದರ್ಶ ಮದುವೆ. ವಧು ಇಲ್ಲವೇ ವರ ಹುಲಕೋಟಿ ಗ್ರಾಮದವರಾಗಿರಬೇಕೆಂಬ ಪರಿಕಲ್ಪನೆಯೊಂದಿಗೆ ಆರಂಭವಾದ ಸಾಮೂಹಿಕ ಮದುವೆಯಿದು. ಗ್ರಾಮಸ್ಥರೇ ಸೇರಿ ಹಣ ಸಂಗ್ರಹಿಸಿ ಜಾತಿ, ಮತ ಯಾವುದನ್ನೂ ಗಮನಿಸದೆ ಎಲ್ಲರೂ ಒಟ್ಟಿಗೆ ಸೇರಿ ನೆರವೇರಿಸುತ್ತಾರೆ. 2005-06ನೇ ಸಾಲಿನಲ್ಲಿ 28 ಜೋಡಿ, 2006-07ರಲ್ಲಿ 11 ಜೋಡಿ, 2007-08ರಲ್ಲಿ 27 ಜೋಡಿ, 2008-09ರಲ್ಲಿ 31 ಜೋಡಿ, 2009-10ರಲ್ಲಿ 32 ಜೋಡಿ, 2010-11ರಲ್ಲಿ 32 ಜೋಡಿ, 2012-13ರಲ್ಲಿ 27 ಜೋಡಿ ಸೇರಿದಂತೆ ಇದುವರೆಗೆ ಒಟ್ಟು 214 ಜೋಡಿ ಇಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮೂರು ತಿಂಗಳು ಮೊದಲೇ ಸಿದ್ಧತೆ
ಮದುವೆಗೆ ಇನ್ನೂ 2-3 ತಿಂಗಳಿರುವಾಗಲೇ ಸಿದ್ಧತೆ ಆರಂಭಗೊಳ್ಳುತ್ತದೆ. ಮೊದಲು ಗ್ರಾಮಸಭೆ ಕರೆದು ಹಿಂದಿನ ವರ್ಷದ ಮದುವೆಯ ಲೆಕ್ಕಪತ್ರಗಳನ್ನು ಗ್ರಾಮಸ್ಥರಿಗೆ ಒಪ್ಪಿಸಿ ಸಮಿತಿ ಚರ್ಚಿಸುತ್ತದೆ. ಸಮಿತಿಗೆ ಒಬ್ಬರು ಅಧ್ಯಕ್ಷರಿದ್ದು, ಸ್ವಾಗತ, ಸ್ವಚ್ಛತೆ, ಪತ್ರ ವ್ಯವಹಾರ, ಮಂಗಲಕಾರ್ಯ, ಪೆಂಡಾಲ್, ಊಟೋಪಚಾರ, ಮದುವೆ ಮಂಟಪ, ಹಣಕಾಸು ಹೀಗೆ ಹತ್ತಾರು ಸಮಿತಿ ಮಾಡಿಕೊಂಡು ಕಾರ್ಯತತ್ಪರಾಗುತ್ತಾರೆ. ಮದುವೆಯ ದಿನ ಹತ್ತಿರವಾಗುತ್ತಿದ್ದಂತೆ 2 ದಿನಕ್ಕೊಮ್ಮೆ ಸೇರಿ ಚರ್ಚಿಸಿ ಕೆಲಸ ಕಾರ್ಯ ಅವಲೋಕನ ಮಾಡಿಕೊಳ್ಳುತ್ತಾರೆ. ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಲಾಗುತ್ತದೆ. ಬಹುಪಾಲು ಕೆಲಸಗಳನ್ನು ಗ್ರಾಮದ ಯುವಕ, ಯುವತಿ ಮಂಡಲದ ಸದಸ್ಯರು, ಸ್ತ್ರೀಶಕ್ತಿ ಸಂಘ, ಮಹಿಳಾ ಸಂಘ ಹಾಗೂ ಸ್ವಸಹಾಯ ಸಂಘಗಳ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲಾ ಕಾಲೇಜು ಮತ್ತು ಅಕ್ಷರದಾಸೋಹ ಸಿಬ್ಬಂದಿ, ಗ್ರಾಮಸ್ಥರು ಹಂಚಿಕೊಂಡು ಮಾಡುತ್ತಾರೆ.
ಉಚಿತ ವಿತರಣೆ
ನಮ್ಮೂರ ಆದರ್ಶ ಮದುವೆಯ ವಿಶೇಷತೆ ಎಂದರೆ ದಂಪತಿಗೆ ಮುತ್ತಿನ ಬಾಸಿಂಗ, ಗೋಡೆ ಗಡಿಯಾರ, ವರಗಳಿಗೆ ಧೋತರ, ಅಂಗಿ, ಶಲ್ಯ, ಪೇಟಾ, ವಧುಗಳಿಗೆ ಸೀರೆ, ಮಂಗಲಸೂತ್ರ, ಕಾಲುಂಗುರಗಳನ್ನು ಕೊಡಲಾಗುತ್ತದೆ. ಊಟದ ವ್ಯವಸ್ಥೆಯಲ್ಲಿ ಶಿಸ್ತು, ಸ್ವಚ್ಛತೆ, ಶಾಂತತೆ. ಪುರುಷ, ಮಹಿಳೆಯರಿಗೆ ಪ್ರತ್ಯೇಕ ಕೌಂಟರ್ಗಳು. ಹಿಂದಿನ ವರ್ಷ ಮದುವೆಗೆ ಬಂದ ಬೇರೆ ಊರಿನ ಜನರಿಗೆ ಇದು ಸಾಮೂಹಿಕ ಮದುವೆ ಅನ್ನಿಸಿಯೇ ಇಲ್ಲ.
ಕಾನೂನುಬದ್ಧ
ಹಿಂದೂ ವಿವಾಹ ಕಾಯ್ದೆ (1955) ಅಡಿಯಲ್ಲಿ ಸರ್ಕಾರದ ಉಪನೋಂದಣಾಧಿಕಾರಿಗಳ ಕಚೇರಿಯಿಂದ ವಿವಾಹ ನೋಂದಣಿ ಮಾಡಿಸಿ, ಅಂದೇ ಸಂಜೆ ಪ್ರಮಾಣ ಪತ್ರಗಳನ್ನು ವಿತರಿಸಲಾಗುತ್ತದೆ. ಜತೆಗೆ ರಸಮಂಜರಿ ಕೂಡಾ ಇರುತ್ತದೆ. ವರ್ಗ, ವರ್ಣ, ಸಮಾನತೆಯೇ ಇಲ್ಲಿನ ವಿಶೇಷತೆ. ನಮ್ಮ ಗ್ರಾಮದಲ್ಲೂ ಇಂತಹ ಆದರ್ಶ ಮದುವೆ ಮಾಡಬೇಕೆನ್ನುವವರಿಗೆ ಇದು ಮಾದರಿಯಾಗುವಂತಿರಬೇಕು ಎನ್ನುವುದು ಸಮಿತಿಯ ಪದಾಧಿಕಾರಿಗಳ ಅಭಿಪ್ರಾಯ.
- ಶಿವಕುಮಾರ ಕುಷ್ಟಗಿ