ಇಂದು ನಷ್ಟವಾದರೆ ನಾಳೆ ಲಾಭ!
ನಾವೇ ವಿಧಿಸಿಕೊಂಡ ಷರತ್ತಿನ ಪರಿಧಿಯನ್ನು ಮೀರಿ ಬಂದರೆ, ಸಂಖ್ಯಾಬಲದ, ಕಾಗದ ಪತ್ರದಲ್ಲಿರುವ ಲಾಭ-ನಷ್ಟಗಳಿಂದ ಯಾವುದೇ ಪರಿಣಾಮ ಉಂಟಾಗುವುದಿಲ್ಲ. ನಾವು ಎಲ್ಲಿಯವರೆಗೆ ಅನುಭವಿಸುತ್ತಿರುವ ವಸ್ತುವನ್ನು ಕಳೆದುಕೊಳ್ಳುವುದಿಲ್ಲವೋ, ಅಲ್ಲಿಯವರೆಗೆ ಲಾಭ, ನಷ್ಟಗಳಿಂದ ವಿಚಲಿತರಾಗುವುದಿಲ್ಲ. ನಾವು ನಮ್ಮ ಕೈಯ್ಯಲ್ಲಿರುವ ಹಣವನ್ನು ಕಳೆದುಕೊಂಡಾಗ ಬೇಸರವಾಗುತ್ತದೆ. ಸಹಜ. ಆದರೆ ನಿಜವಾಗಿಯೂ ನಮಗೆ ಬೇಕಾದ ವಸ್ತುವನ್ನು ಕಳೆದುಕೊಳ್ಳುವವರೆಗೆ ನಮಗೆ ಬೇಸರವಾಗುವುದಿಲ್ಲ, ಆಗಲೂ ಬಾರದು. ನಾವು ಏನನ್ನಾದರೂ ಕಳೆದುಕೊಂಡರೆ, ಅದು ನಮ್ಮ ಆಸ್ತಿಯ ಮೌಲ್ಯವನ್ನು ಕುಗ್ಗಿಸುತ್ತದೆ. ಒಂದು ರೀತಿಯಲ್ಲಿ ಮಾರುಕಟ್ಟೆಯಲ್ಲಿ ಷೇರಿನ ದರ ಬದಲಾದಂತೆಯೇ ಮೌಲ್ಯ ವೃದ್ಧಿಸುವುದಾಗಲಿ, ಕ್ಷೀಣಿಸುವುದಾಗಲಿ ನಿರಂತರವಾಗಿ ಸಾಗುವ ಕ್ರಿಯೆ.
ಒಬ್ಬ ವ್ಯಕ್ತಿ ಷೇರು ಮಾರುಕಟ್ಟೆಯಲ್ಲಿ ಸಣ್ಣ ಸಮಯಕ್ಕಾಗಿ ಹಣ ಹೂಡಿದ್ದಾನೆಂದು ಇಟ್ಟುಕೊಳ್ಳೋಣ. ಅವನು ಪ್ರತಿನಿತ್ಯವೂ ಮಾರುಕಟ್ಟೆಯ ಏರಿಳಿತವನ್ನು ಗಮನಿಸುತ್ತಿರುತ್ತಾನೆ. ದಿನ ನಿತ್ಯದ ಏರಿಳಿತಗಳು ಅವನಲ್ಲಿ ಆಹ್ಲಾದ, ಉದ್ವೇಗವನ್ನು ಸೃಷ್ಟಿಸುತ್ತಿರುತ್ತದೆ. ಅದೇ ಒಬ್ಬ ವ್ಯಕ್ತಿ ಹೆಚ್ಚಿನ ಸಮಯಕ್ಕಾಗಿ ಮಾರುಕಟ್ಟೆಯಲ್ಲಿ ಹಣ ತೊಡಗಿಸಿಕೊಂಡರೆ, ದಿನನಿತ್ಯದ ಏರಿಳಿತಗಳಿಗೆ ಹೆಚ್ಚಿನ ಗಮನ ಕೊಡುವುದಿಲ್ಲ. ಏಕೆಂದರೆ ಏರಿಳಿತಗಳು ಕೇವಲ ಕೆಲವು ಸಮಯ ಮಾತ್ರ, ಕೆಲ ಕಾಲದ ನಂತರ ಅದರ ಬೆಲೆ ಏರುತ್ತದೆ ಎಂದು ತಿಳಿದಿರುತ್ತಾನೆ. ಈಗ, ಇವರಿಬ್ಬರಿಗೂ ಈ ಕ್ಷಣದಲ್ಲಿ ಹಣದ ಅವಶ್ಯಕತೆ ಇಲ್ಲವೆಂದಿಟ್ಟುಕೊಳ್ಳೋಣ. ಆದರೆ ಒಬ್ಬನಲ್ಲಿ ಮಾನಸಿಕವಾಗಿ ಪ್ರತಿನಿತ್ಯ ಏರಿಳಿತವನ್ನು ಕಂಡರೆ, ಇನ್ನೊಬ್ಬನಲ್ಲಿ ಅವಧಿ ಮುಗಿಸಿ, ಅದನ್ನು ನಿಜವಾಗಿ ಬಳಸುವ ಸಮಯದಲ್ಲಿ ಮಾತ್ರ ಕಾಣಬಹುದು. ಏರಿಳಿತ ಎಷ್ಟೇ ಇದ್ದರೂ, ಇಳಿತ ಕೇವಲ ತಾತ್ಕಾಲಿಕ, ಸಮಯಾನಂತರ ಅದರ ಮೌಲ್ಯ ವೃದ್ಧಿಸುತ್ತದೆ ಎಂಬ ಬಲವಾದ ನಂಬಿಕೆ ಇದ್ದರೆ, ತಾತ್ಕಾಲಿಕ ನಷ್ಟ ಅಥವಾ ಇಳಿತ ಮನಸ್ಸಿನ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ.
ಇಂತಹ ಹಲವಾರು ಲಾಭ-ನಷ್ಟಗಳು ಜೀವನದಲ್ಲಿ ಘಟಿಸುತ್ತಿರುತ್ತವೆ. ಆದರೆ ಜೀವನ ವ್ಯಾಪ್ತಿಗಿಂತ ಸಮಯದ ವ್ಯಾಪ್ತಿ ಚಿಕ್ಕದಾಗಿರುವುದರಿಂದ ನಾವು ಸಂಪೂರ್ಣ ಜೀವನದ ಚಿತ್ರಣವನ್ನು ಪರಿಗಣಿಸದೆ, ಸುಲಭವಾಗಿ ಗಲಿಬಿಲಿಗೊಳ್ಳುತ್ತೇವೆ. ವಿಶಾಲವಾದ ಜೀವನದೆಡೆಗೆ ನೋಡಿದಾಗ, ಲಾಭ-ನಷ್ಟಗಳು ಸಮಯದ ಮಿತಿಗೆ ಒಳಪಟ್ಟಿರುತ್ತವೆ. ಆದ್ದರಿಂದ ಅದನ್ನು ನಿರ್ಣಯಿಸುವುದು ಕಷ್ಟದ ಕೆಲಸ.
ಉದಾಹರಣೆಗೆ, ನಾವು ಒಂದು ಲಕ್ಷ ಬಂಡವಾಳದಿಂದ ಒಂದು ಉದ್ದಿಮೆ ಆರಂಭಿಸಿದೆವೆಂದು ಇಟ್ಟುಕೊಳ್ಳೋಣ. ಎರಡು ವರ್ಷದಲ್ಲಿ ಅದರ ಲಾಭಾಂಶ ಐದು ಲಕ್ಷವಾಯಿತೆಂದುಕೊಳ್ಳೋಣ. ಮೂರನೆಯ ವರ್ಷ ಎರಡು ಲಕ್ಷ ನಷ್ಟವಾಯಿತು ಎಂದು ಇಟ್ಟುಕೊಂಡರೆ, ನಿಜವಾಗಿ ಆದ ಲಾಭ-ನಷ್ಟ ಎಷ್ಟು? ನಿಜವಾಗಿ ಮೂರು ವರ್ಷದ ಲೆಕ್ಕ ತೆಗೆದರೆ ನಾವು ಲಾಭದಲ್ಲಿದ್ದೇವೆಂದೇ ಆಗುತ್ತದೆ. ಆದರೆ ಎರಡನೆಯ ಮತ್ತು ಮೂರನೆಯ ವರ್ಷಕ್ಕೆ ಹೋಲಿಸಿದರೆ ನಷ್ಟದಲ್ಲಿದ್ದೇವೆ ಎಂದಾಗುತ್ತದೆ.
ನಮ್ಮ ಒಡೆತನದಲ್ಲಿ ಏನೆಲ್ಲ ಇದೆಯೋ ಅದೆಲ್ಲವನ್ನೂ ನಾವು ನಮ್ಮದೆಂದೇ ಭಾವಿಸುತ್ತೇವೆ. ನಮ್ಮ ಎಲ್ಲ ಲಾಭ-ನಷ್ಟಗಳೂ ನಮ್ಮದೆಂದು ತಿಳಿಯುತ್ತೇವೆ. ಆದರೆ ಸಾವಿನ ಅಂಚಿನಲ್ಲಿರುವಾಗ ನಾವು ಯಾವುದೇ ಲಾಭದಲ್ಲಾಗಲೀ, ನಷ್ಟದಲ್ಲಾಗಲೀ ಇರುವುದಿಲ್ಲ. ಏಕೆಂದರೆ ನಾವು ಹುಟ್ಟುವಾಗ ಏನನ್ನೂ ತಂದಿಲ್ಲ. ಸಾಯುವಾಗ ಏನನ್ನೂ ಕೊಂಡು ಹೋಗುವುದಿಲ್ಲ. ಆದ್ದರಿಂದ ನಾವು ಜೀವನದಲ್ಲಿ ಹೆಚ್ಚಿನ ಅವಧಿಗೆ ಬಂಡವಾಳ ಹೂಡುವವನ ಗುಣಧರ್ಮ ಹೊಂದಿದ್ದರೆ, ಜೀವನ ಪಥದಲ್ಲಿ ಬಂದು ಹೋಗುವ ಲಾಭ-ನಷ್ಟಗಳು ನಮ್ಮನ್ನು ವಿಚಲಿತರನ್ನಾಗಿಸುವುದಿಲ್ಲ. ಧೃತಿಗೆಡಿಸುವುದಿಲ್ಲ. ಏಕೆಂದರೆ ಇಲ್ಲಿ ಯಾವುದೂ ಶಾಶ್ವತವಲ್ಲ. ನಾವು ಇಂದು ನಷ್ಟದಲ್ಲಿದ್ದರೆ ನಾಳೆ ಲಾಭದಲ್ಲಿರುತ್ತೇವೆ.
(ಮುಂದುವರಿಯುವುದು)
-ಕಿರಣ್ ಉಪಾಧ್ಯಾಯ
keyrun1970@gmail.com