ಎಂಬಿಎ ಗ್ರಾಮರ್
ಇದು 21 ಗ್ರಾಮಗಳ ಕಥೆ. ಅಲ್ಲಿನ ಜನ ಎಂದೂ ಹೊಸ ಆವಿಷ್ಕಾರಕ್ಕೆ ಕಿವಿಗೊಟ್ಟವರಲ್ಲ, ಇಂತದ್ದನ್ನು ಸರ್ಕಾರ ತಮಗೆ ನೀಡಲೇಬೇಕೆಂದು ಪಟ್ಟು ಹಿಡಿದವರೂ ಅಲ್ಲ. ಮಕ್ಕಳಿಗೂ ಸಹ ಅಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ಶಿಕ್ಷಣ ಕೊಡಿಸಲಾಗುತ್ತಿತ್ತು. ಮೂಲ ಸೌಕರ್ಯಗಳ ಕೊರತೆ ಬಹುತೇಕ ಗ್ರಾಮಗಳಲ್ಲಿ ಎದ್ದು ಕಾಣುತ್ತಿತ್ತು. ಆದರೆ ಯಾವಾಗ 2009 ಬಂತೋ ಚಿತ್ರಣ ಬದಲಾಯಿತು.
ಒಂದೊಂದಾಗಿ ಸೌಕರ್ಯಗಳಾಯಿತು. ಗ್ರಾಮಸ್ಥರು ಶುಚಿತ್ವಕ್ಕೆ ಮಹತ್ವ ಕೊಡತೊಡಗಿದರು. ಮಕ್ಕಳು ಇಂಗ್ಲಿಷ್ ಕಲಿಕೆಗೆ ಆಸಕ್ತಿ ತೋರತೊಡಗಿದರು. ಇಂಟರ್ನೆಟ್ ಬಗ್ಗೆ ಮಾಹಿತಿ ಪಡೆದುಕೊಂಡರು. ಇ-ಮೇಲ್ ಐಡಿಗಳನ್ನು ಹೊಂದಿದರು. ನಿಜಕ್ಕೂ ಇದು ಒಳ್ಳೆ ಬೆಳವಣಿಗೆ ಅಲ್ಲವಾ?
ಇದು ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯ 21 ಗ್ರಾಮಗಳ ಚಿತ್ರಣ. ಅಂದಹಾಗೆ ಯಾವುದೋ ರಾಜಕಾರಣಿ ಬಂದು ಇದನ್ನೆಲ್ಲ ಮಾಡಿಸಿದ್ದೇನೂ ಅಲ್ಲ. ಇದರ ಹಿಂದೆ ಚೆನ್ನೈನಲ್ಲಿರುವ ಗ್ರೇಟ್ಲೇಕ್ಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಶ್ರಮ ಇದೆ. ಅಲ್ಲಿನ ಎಂಬಿಎ ವಿದ್ಯಾರ್ಥಿಗಳ ಅವಿರತ ಪ್ರಯತ್ನವಿದೆ. ಈ ಮಹತ್ತರ ಯೋಜನೆಗೆ ಕರ್ಮಯೋಗ ಎಂಬ ಹೆಸರು ಇಡಲಾಗಿದೆ. ಈ ಗ್ರಾಮಗಳನ್ನು ಗ್ರೇಟ್ಲೇಕ್ಸ್ ಇನ್ಸ್ಟಿಟ್ಯೂಟ್ ದತ್ತು ತೆಗೆದುಕೊಂಡಿದೆ.
ಏನಿದು ಕರ್ಮಯೋಗ?
ಗ್ರೇಟ್ಲೇಕ್ಸ್ ಇನ್ಸ್ಟಿಟ್ಯೂಟ್ನವರು ಎಂಬಿಎ ವಿದ್ಯಾರ್ಥಿಗಳ ನಾಯಕತ್ವ ಗುಣ, ನಿರ್ವಹಣಾ ಕೌಶಲ್ಯ, ಸಾಮಾಜಿಕ ಜವಾಬ್ದಾರಿಗಳ ವೃದ್ಧಿಗಾಗಿ 'ಕರ್ಮಯೋಗ' ಎಂಬ ನೂತನ ಯೋಜನೆ ಹಮ್ಮಿಕೊಂಡರು. ಇದಕ್ಕಾಗಿ ಇನ್ಸ್ಟಿಟ್ಯೂಟ್ ಸುತ್ತಮುತ್ತಲಿನ 21 ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಯಿತು. ವಿದ್ಯಾರ್ಥಿಗಳು ಪ್ರತಿ ವಾರ ಆ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಬೆರೆತು ಅಲ್ಲಿನ ಸಮಸ್ಯೆ, ಆಸಕ್ತಿ ಇತ್ಯಾದಿಗಳ ಬಗ್ಗೆ ಗಮನ ಹರಿಸಬೇಕು. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಸಲಹೆ ನೀಡಬೇಕು. ಅಲ್ಲಿನವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಜತೆಗೆ ಕೃಷಿ, ಆರೋಗ್ಯ, ಶಿಕ್ಷಣ ಹಾಗೂ ಸಣ್ಣ ಉದ್ಯಮಗಳ ಬಗ್ಗೆ ಹೆಚ್ಚಿನ ಒತ್ತು ಕೊಡಲಾಗುತ್ತದೆ. ಹೀಗೆ ಮಾಡುವುದರಿಂದ ಅಲ್ಲಿನ ಜನತೆಗೂ ಸಹಾಯ; ವಿದ್ಯಾರ್ಥಿಗಳಿಗೂ ನೈಜ ಪರಿಸ್ಥಿತಿಯಲ್ಲಿ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದರ ಕಲಿಕೆ.
ಇದುವರೆಗೆ ಮಾಡಿದ್ದು
ಬಹುತೇಕ ಎಲ್ಲೆಡೆ ತಂಬಾಕಿಗೆ ದಾಸರಾದವರು ಇದ್ದೇ ಇರುತ್ತಾರೆ. ತಂಬಾಕು ಸೇವನೆಯಿಂದ ಬರುವ ರೋಗಗಳು, ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳನ್ನು ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಈ ಗ್ರಾಮಗಳಲ್ಲಿ ತಂಬಾಕು ವಿರೋಧಿ ದಿನವನ್ನು ಮೇ 31ರಂದು ಆಚರಿಸಲಾಗುತ್ತಿದೆ. ಪೋಸ್ಟರ್ಗಳ ಮೂಲಕ, ವಿಡಿಯೋಗಳ ಮೂಲಕ ತಂಬಾಕು ಬಳಕೆ ಎಷ್ಟು ಮಾರಕ ಎಂಬುದನ್ನು ಹೇಳಲಾಗುತ್ತದೆ.
ಗ್ರಾಮಗಳಲ್ಲಿ ಮಕ್ಕಳಿಗೆ ಇಂಗ್ಲಿಷ್ ಕಲಿಕೆ ಬಗ್ಗೆ ಜಾಗೃತಿ ಮೂಡಿಸುವುದು. ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಉಚಿತವಾಗಿ ಮಾಡುವುದು, ಸಂವಹನ ಕೌಶಲ್ಯ ಬೆಳೆಸುವುದು, ಕಂಪ್ಯೂಟರ್ಗಳ ಬಗ್ಗೆ ಮಾಹಿತಿ ನೀಡುವುದು, ಮಕ್ಕಳಿಗೆ ಇ-ಮೇಲ್ ವ್ಯವಹಾರ ತಿಳಿಸಿಕೊಡುವುದು, ಅಂತರ್ಜಾಲದಲ್ಲಿ ವಿಷಯಗಳ ಶೋಧನೆ ಬಗ್ಗೆ ತಿಳಿಹೇಳುವುದು ಇವೆಲ್ಲವನ್ನೂ ಎಂಬಿಎ ವಿದ್ಯಾರ್ಥಿಗಳು ಇಲ್ಲಿ ಮಾಡುತ್ತಾರೆ.ಜತೆಗೆ ಅಲ್ಲಿನ ಮಕ್ಕಳಿಗೆ ವಿವಿಧ ಸ್ಪರ್ಧೆ ಏರ್ಪಡಿಸುವುದು, ಗ್ರಾಮಗಳಲ್ಲಿ ಆರೋಗ್ಯ ಕ್ಯಾಂಪ್ ಹಮ್ಮಿಕೊಳ್ಳುವುದು, ಆರ್ಥಿಕ ಸುಧಾರಣೆ ಕ್ರಮಗಳ ಬಗ್ಗೆ ಉಪನ್ಯಾಸ, ಕೃಷಿ ತರಬೇತಿ, ಚಟುವಟಿಕೆ ಸಹಿತ ಕಲಿಕಾ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಗ್ರಾಮಸ್ಥರನ್ನು ಕಾಲೇಜಿಗೆ ಕರೆಸಿ ಅವರ ಜತೆ ಸಂವಹನ ಆಯೋಜಿಸಲಾಗುತ್ತದೆ. ಆಯಾ ವಿಷಯಕ್ಕೆ ಸಂಬಂಧಿಸಿ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಅವರಿಂದ ಸಲಹೆ, ಸೂಚನೆ ಕೊಡಿಸಲಾಗುತ್ತದೆ. ರಾಜ್ಯ ಸೇರಿ ದೇಶದೆಲ್ಲೆಡೆ ಎಂಬಿಎ ಇನ್ಸ್ಟಿಟ್ಯೂಟ್ಗಳು ಸಾಕಷ್ಟಿವೆ. ಅವೆಲ್ಲವುಗಳಿಗೆ ಗ್ರೇಟ್ಲೇಕ್ಸ್ ವಿಭಿನ್ನವಾಗಿ, ಮಾದರಿಯಾಗಿದೆ. ಇಂತಹ ಪ್ರಯತ್ನಗಳು ನಮ್ಮಲ್ಲೂ ಆಗಬೇಕು.
ಕೆಲವು ಗ್ರಾಮಗಳು
ವೀರಾಪುರಮ್, ವಾಸಮಾಸಮುದ್ರಮ್, ನಡುವಕ್ಕಾರೈ, ಪಟ್ಟಿಕ್ಕಾಡು, ಅಮನಾಂಬಕ್ಕಮ್, ಕುಜಿಪಂಥಾಡಲಮ್, ಈಚೂರು, ನಲ್ಲೂರು, ಮನಾಮೈ, ಕುನ್ನತ್ತೂರು ಇತ್ಯಾದಿ.
ಇಮೇಲ್: http://www.greatlakes.edu.in
ಎಂಬಿಎ ವಿದ್ಯಾರ್ಥಿಗಳ ಕಲಿಕೆ, ಅವರಲ್ಲಿ ನಾಯಕತ್ವ ಗುಣ ಬೆಳೆಸುವ ಜತೆಯಲ್ಲಿ ಸಾಮಾಜಿಕ ಜವಾಬ್ದಾರಿ, ಸಮಾಜದ ಆರ್ಥಿಕ ಪರಿಸ್ಥಿತಿಗಳ ಬಗ್ಗೆ ನೈಜ ಅರಿವನ್ನು ಹೊಂದಬೇಕೆಂಬ ನಿಟ್ಟಿನಲ್ಲಿ ಈ ಕರ್ಮಯೋಗ ಯೋಜನೆಯನ್ನು ಆರಂಭಿಸಲಾಯಿತು. ಗ್ರಾಮಗಳ ಜನತೆಗೆ ಬದುಕುವ ಕಲೆ ಇದೆ. ಆದರೆ ಅದನ್ನು ಹೇಗೆ ಉಪಯೋಗಿಸಿಕೊಂಡು ಬೆಳೆಯಬೇಕು ಎಂಬ ಅಗತ್ಯ ಮಾರ್ಗದರ್ಶನವಿಲ್ಲ. ನಾವು ಇಲ್ಲಿ ಆ ಕೆಲಸವನ್ನು ಮಾಡುತ್ತೇವೆ.
- ಡಾ. ಬಾಲ ವಿ. ಬಾಲಚಂದ್ರನ್
ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಹಾಗೂ ಡೀನ್
ಏನಿದು ಗ್ರೇಟ್ಲೇಕ್?
ಗ್ರೇಟ್ಲೇಕ್ಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಎಂಬಿಎ ಕೋರ್ಸ್ ಕಲಿಸಲಾಗುತ್ತದೆ. ಕಾಲೇಜು ಕ್ಯಾಂಪಸ್ ಚೆನ್ನೈನ ಕಾಂಚೀಪುರಂ ಜಿಲ್ಲೆಯ ಮನಾಮೈ ಗ್ರಾಮದಲ್ಲಿದೆ. 2004ರಲ್ಲಿ ಪ್ರೊ. ಬಾಲಾ ವಿ. ಬಾಲಚಂದ್ರನ್ ನೇತೃತ್ವದಲ್ಲಿ ಇನ್ಸ್ಟಿಟ್ಯೂಟ್ ಸ್ಥಾಪನೆಯಾಯಿತು.
- ಆದರ್ಶ ಎಸ್. ಅಂಚೆ
adianche@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.