ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಂಬಿಕೆಗಳನ್ನು ಪ್ರಶ್ನಿಸಬೇಡಿ

Lingaraj Badiger
Updated On : 16 Sept 2013, 6:54 am

ನಂಬಿಕೆ ಎನ್ನುವುದು ನಮ್ಮ ಹಕ್ಕು. ಅದನ್ನು ಯಾರೂ ಪ್ರಶ್ನಿಸಲಾಗುವುದಿಲ್ಲ ನಿಜ. ಅದು ವಿಶ್ವಾಸದ ಇನ್ನೊಂದು ರೂಪ. ವ್ಯಕ್ತಿ, ಘಟನೆ, ಸನ್ನಿವೇಶವನ್ನು ಕೆಲವೊಂದು ಬಾರಿ ವಿಶ್ಲೇಷಿಸಲಾಗುವುದಿಲ್ಲ. ಹಸಿಹಸಿಯಾಗಿ ಅದನ್ನು ಅದು ಇದ್ದ ಹಾಗೆಯೇ ಒಪ್ಪಿಕೊಳ್ಳಬೇಕಾಗುತ್ತದೆ. ಜೀವನದಲ್ಲಿ ಎಲ್ಲವೂ ವಿಮರ್ಶೆಗೆ ಸಿಲುಕುವಂಥದ್ದಲ್ಲ. ಅದಕ್ಕೆ ಇದಮಿತ್ಥಂ ಎಂಬಂಥ ಅರ್ಥ ಕಲ್ಪಿಸುವುದೂ ಕಷ್ಟವಾಗುತ್ತದೆ. ಅದು ಹೀಗೇಕೇ, ಹಾಗೇಕೆ ಎಂದು ಪ್ರಶ್ನಿಸಿದರೆ ಉತ್ತರ ಸಿಗುವುದೇ ಇಲ್ಲ. ಪ್ರತಿಯೊಂದಕ್ಕೂ ಬದುಕಿನಲ್ಲಿ ಇಂಥದ್ದೇ ಎಂಬಂಥ ಕಾರಣಗಳೂ ಇರುವುದಿಲ್ಲ.

ನಂಬಿಕೆಗಳೂ ಈ ಸಾಲಿಗೇ ಸೇರುವಂಥದ್ದು. ಅದರ ಬಗ್ಗೆ ಯೋಚಿಸಿದಷ್ಟೂ ಮನಸ್ಸು ಹೈರಾಣಾಗುತ್ತದೆಯೇ ವಿನಾ ಪರಿಹಾರ ಸಿಗುವುದೇ ಇಲ್ಲ. ಅದು ವಿವೇಚನೆಯ ಆಚೆಗಿನದ್ದು. ಮನಸ್ಸಿನ ಪರಿಧಿಯೊಳಗೆಲ್ಲೋ ಮೂಡಿ, ಮನೆ ಮಾಡಿ ಭದ್ರವಾಗಿ ಉಳಿದುಕೊಂಡು ಬಿಟ್ಟಿರುತ್ತದೆ. ಭಾವನೆಗಳ ಭರಕ್ಕೆ ಸಿಲುಕಿ ಹಾಗಾಗುವುದೂ ಉಂಟು. ಅದನ್ನು ತರ್ಕದ ಅಸ್ತ್ರ ಹೂಡಿ ಹೊಡೆದೋಡಿಸುತ್ತೇನೆಂಬುದು ಭ್ರಮೆ. ಒಬ್ಬ ವ್ಯಕ್ತಿಯ ನಂಬಿಕೆ ಇನ್ನೊಬ್ಬರಿಗೂ ಅನ್ವಯವಾಗಬೇಕೆಂದೇನೂ ಇಲ್ಲ. ಅದು ವ್ಯಕ್ತಿ, ಕಾಲ, ದೇಶ ಹೀಗೆ ಎಲ್ಲ ಸನ್ನಿವೇಶದಲ್ಲೂ ಭಿನ್ನವಾಗಿಯೇ ಇರುತ್ತದೆ. ಹಾಗಾಗಿಯೇ ಒಬ್ಬರ ನಂಬಿಕೆ ಇನ್ನೊಬ್ಬರಿಗೆ ಹಾಸ್ಯಾಸ್ಪದವೆನ್ನಿಸಬಹುದು. ಅದು ಹುರುಳಿಲ್ಲದ್ದು ಎನಿಸಲೂಬಹುದು. ಕೆಲವೊಮ್ಮೆ ತಪ್ಪಾಗಿಯೂ ಕಾಣಿಸಬಹುದು. ಹಾಗೆಂದು ಖಂಡಿತಾ ಇನ್ನೊಬ್ಬರ ನಂಬಿಕೆಗಳನ್ನು ನಿರಾಕರಿಸಬೇಡಿ, ಅದನ್ನು ಲಘುವಾಗಿ ಪರಿಗಣಿಸಬೇಡಿ. ಇತರರ ನಂಬಿಕೆಗಳನ್ನು ಗೌರವಿಸುವವ ಮಾತ್ರವೇ ತನ್ನ ನಂಬಿಕೆಗಳನ್ನು ಉಳಿಸಿಕೊಳ್ಳಬಲ್ಲವನಾಗಿರುತ್ತಾನೆ. ಅಂಥ ವೈಶಾಲ್ಯ ನಮ್ಮಲ್ಲಿಲ್ಲದಿದ್ದರೆ ನಾವು ಬೆಳೆಯಲು ಸಾಧ್ಯವೇ ಇಲ್ಲ. ಸಮಾಜದಲ್ಲಿ ಸೂಕ್ತ ಗೌರವವನ್ನು ನಾವು ಗಳಿಸಲು ಸಾಧ್ಯವಿಲ್ಲ. ಹಾಗೆಯೇ ಇನ್ನೊಬ್ಬರ ಭಾವನೆಗಳಿಗೆ ಘಾಸಿಯುಂಟುಮಾಡುವ ನಂಬಿಕೆಗಳು ನಮ್ಮದಾಗಿರಲೂಬಾರದು. ನಂಬಿಕೆಗಳು ಯಾವತ್ತಿಗೂ ಕಣ್ಣಾರೆ ಕಂಡದ್ದು, ಅನುಭವಕ್ಕೆ ದಕ್ಕಿದ್ದು ಆಗಿರುವುದಿಲ್ಲ. ಆದರೆ, ನಮ್ಮ ನಂಬಿಕೆಗಳನ್ನು ಕಾಣುವ, ಅನುಭವಕ್ಕೆ ತಂದುಕೊಳ್ಳುವ ಮೂಲಕ ಅದನ್ನು ಸಾಬೀತುಪಡಿಸಿ ತೋರುವ ಹೊಣೆಗಾರಿಕೆಯೂ ನಮ್ಮ ಮೇಲಿರುತ್ತದೆ. ಅದಿಲ್ಲದಿದ್ದರೆ ನಮ್ಮ ಮೌಢ್ಯ ಎನಿಸಿಕೊಳ್ಳುತ್ತದೆ. ಹಾಗಾಗದಂತೆ ಎಚ್ಚರವಹಿಸುವುದು ಮುಖ್ಯ.

- ಸಹನೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement