ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಾಲಿಗೆ ಮಾತು ಕೇಳಿ ಮೋಸ ಹೋಗಬೇಡಿ

Lingaraj Badiger
Updated On : 16 Sept 2013, 6:54 am

ಎಲ್ಲೋ ಪ್ರವಾಸಕ್ಕೆ ಹೋಗಿರುತ್ತೀರಿ ಅಥವಾ ಯಾವುದೋ ಪಾರ್ಟಿ ಅಟೆಂಡ್ ಮಾಡಿರುತ್ತೀರಿ. ಅಲ್ಲಿನ ತಿನಿಸುಗಳು, ಅವುಗಳ ಸ್ವಾದ ಬಾಯಿ ಚಪ್ಪರಿಸುವಂತೆ ಮಾಡುತ್ತವೆ. ಹೊಟ್ಟೆ ಭರ್ತಿಯಾದರೂ ಯರ್ರಾಬಿರ್ರಿ ತಿಂದುಬಿಡುತ್ತೀರಿ. ಐದಾರು ಗಂಟೆ ಹೊಟ್ಟೆ ತುಸು ಭಾರ ಅನ್ನಿಸುತ್ತದೆ. ಆಮೇಲೆ ಶುರುವಾಗುತ್ತದೆ ನೋಡಿ, ಭೇದಿ...ಭೇದಿ...ಭೇದಿ... ಟಾಯ್ಲೆಟ್ ಪಕ್ಕವೇ ಹಾಸಿಗೆ ಹಾಸಿಕೊಂಡು ಮಲಗಿಬಿಡೋಣ ಅನ್ನಿಸುತ್ತದೆ. ಪ್ರವಾಸ ಅಥವಾ ಪಾರ್ಟಿ ಉದಾಹರಣೆಯನ್ನೇ ಏಕೆ ನೀಡಿದೆ ಎಂದರೆ, ಬಹುತೇಕರಿಗೆ ಪ್ರವಾಸದಿಂದ ಮರಳಿದ ಬಳಿಕ, ಪಾರ್ಟಿಗಳ ನಂತರವೇ ಭೇದಿ ಕಾಣಿಸಿಕೊಳ್ಳುತ್ತದೆ. ನಾವು ಅಜೀರ್ಣದಿಂದ ಹೀಗಾಗಿದೆ ಎಂದುಕೊಳ್ಳುತ್ತೇವೆ. ಎಷ್ಟೇ ಔಷಧೋಪಚಾರ ಮಾಡಿಕೊಂಡರೂ ಕನಿಷ್ಠ ಎರಡು ದಿನಗಳ ಕಾಲವಾದರೂ ಬೇಧಿ ಇದ್ದೇ ಇರುತ್ತದೆ, ಪ್ರಮಾಣ ಸ್ವಲ್ಪ ಕಡಿಮೆ ಆಗಬಹುದಷ್ಟೇ.

ವೈದ್ಯಕೀಯ ಹಿನ್ನೆಲೆಯಿಂದ ನೋಡುವುದಾದರೆ ಮಲ ನೀರಿನಂತೆ ಹೋಗುವುದು ಅಥವಾ ತೆಳ್ಳಗೆ ಹೋಗುವುದನ್ನು ಭೇದಿ ಎನ್ನಲಾಗುತ್ತದೆ. ಇದನ್ನೇ ಲೂಸ್ ಮೋಶನ್, ಡಯೇರಿಯಾ, ಅತಿಸಾರ, ಕರುಳು ಜ್ವರ, ಹೊಟ್ಟೆ ಜ್ವರಪ (ಸ್ಟೊಮಕ್ ಫ್ಲೂ) ಇತ್ಯಾದಿ ಹೆಸರುಗಳಿಂದಲೂ ಕರೆಯುತ್ತಾರೆ. ಪ್ರತಿಯೊಬ್ಬರೂ ವರ್ಷಕ್ಕೆ ಒಂದು ಅಥವಾ ಎರಡು ಸಲವಾದರೂ ಈ ತೊಂದರೆಗೆ ತುತ್ತಾಗುತ್ತಾರೆ. ಇದು ತೀರಾ ಅಪಾಯಕಾರಿ ಏನಲ್ಲ. ಎರಡು-ಮೂರು ದಿನಗಳವರೆಗೆ ಇರುತ್ತದೆ. ಬಳಿಕ ಸೋಂಕು ತಂದ ಬ್ಯಾಕ್ಟೀರಿಯಾ ಅಥವಾ ಫಂಗಸ್ ಶಕ್ತಿಹೀನವಾಗುತ್ತಿರುವಂತೆ ಭೇದಿ ನಿಲ್ಲುತ್ತದೆ. ಹಾಗಂತ ಔಷಧೋಪಚಾರಗಳನ್ನು ಮಾಡದೇ ಇರಬೇಡಿ. ಅದು ಈಗಾಗಲೇ ಹೇಳಿದಂತೆ ಭೇದಿಯನ್ನು ಸ್ವಲ್ಪಮಟ್ಟಿಗೆ ಕಡಿಮೆಮಾಡಿ, ನೀವು ಸಂಪೂರ್ಣ ನಿಶ್ಯಕ್ತರಾಗುವುದನ್ನು ತಡೆಯುತ್ತದೆ. ಓವರ್ ದ ಕೌಂಟರ್ (ಓಟಿಸಿ) ಮದ್ದುಗಳನ್ನು ಇದಕ್ಕೆ ನೀಡಲಾಗುತ್ತದೆ. ಇದೊಂದು ಸೋಂಕು ರೋಗ. ಸಾಮಾನ್ಯವಾಗಿ ಅಪಾಯಕಾರಿ ಅಲ್ಲ.

ಒಮ್ಮೊಮ್ಮೆ ಕರುಳು ದೇಹದ ಇತರ ಭಾಗಗಳಿಂದ ನೀರನ್ನು ಎಳೆದುಕೊಳ್ಳುತ್ತದೆ. ಅದರಲ್ಲಿ ಸಕ್ಕರೆಯ ಅಂಶ ಕೂಡ ಇರುತ್ತದೆ. ಇದರ ಪರಿಣಾಮವಾಗಿಯೂ ಅತಿಸಾರ ಕಾಣಿಸಿಕೊಳ್ಳುತ್ತದೆ. ಇದಕ್ಕೆ ವಿರುದ್ಧವಾಗಿ ಒಂದೊಂದು ಸಲ ದೇಹವೇ ಕರುಳಿನ ಭಾಗಕ್ಕೆ ನೀರನ್ನು ದಬ್ಬುತ್ತದೆ. ಬಹುತೇಕರಲ್ಲಿ ಕಾಣಿಸಿಕೊಳ್ಳುವ ಅತಿಸಾರಕ್ಕೆ ಇದುವೇ ಕಾರಣ. ಒಮ್ಮೊಮ್ಮೆ ಭೇದಿಯಾದಾಗ ರಕ್ತ ಮತ್ತು ಕೀವು ಕೂಡ ಕಾಣಿಸಿಕೊಳ್ಳುವುದುಂಟು. ಬ್ಯಾಕ್ಟೀರಿಯಾಗಳಿಂದ ಹರಡುವ ಸೋಂಕು (ಬಹಳಷ್ಟು ಫುಡ್ ಪಾಯಿಸನಿಂಗ್‌ಕೂ ಬ್ಯಾಕ್ಟೀರಿಯಾಗಳೇ ಕಾರಣ), ದೇಹದ ಇತರೇ ಅಂಗಗಳಲ್ಲಿ ಸೋಂಕು ಉಂಟಾಗಿದ್ದರೆ, ಜೀರ್ಣಾಂಗಗಳಿಗೆ ತೊಂದರೆ ಉಂಟುಮಾಡುವಂತಹ ಆಹಾರ ಸೇವನೆ, ಫುಡ್ ಅಲರ್ಜಿ, ಅಪರೂಪಕ್ಕೆ ಒಮ್ಮೊಮ್ಮೆ ಅತಿಯಾದ ಓಟ, ವೈದ್ಯಕೀಯ ಚಿಕಿತ್ಸೆಗಳು ಕೂಡ ಅತಿಸಾರವನ್ನು ಉಂಟುಮಾಡಬಲ್ಲವು.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement