ಜೋಡಿಸುವ ಬಿಲ್ಗಾರ
ಒಬ್ಬ ಸಾರ್ವಭೌಮ ರಾಜನಿದ್ದ. ಆತನಿಗೆ ಒಬ್ಬಳೇ ಮಗಳು. ತುಂಬಿದ ಹರೆಯ. ಒಮ್ಮೆ ದೂರದ ಊರಿಗೆ ವಿಹರಿಸಲು ಹೋದ ಆಕೆ, ಅಲ್ಲಿನ ಮಾಂಡಲಿಕ ರಾಜನ ಮಗನನ್ನು ನೋಡಿ ಅವನ ಜತೆ ಪ್ರೇಮಕ್ಕೇ ಬಿದ್ದುಬಿಟ್ಟಳು. ವಿಷಯ ಹೇಗೋ ರಾಜನಿಗೂ ಗೊತ್ತಾಯಿತು. ಆತನಿಗೆ ಚಿಂತೆಯಾಯಿತು. ತನ್ನ ಕೈಕೆಳಗಿನ ಸಾಮಾನ್ಯ ಪುಡಿರಾಜನೊಬ್ಬನ ಪುತ್ರನಿಗೆ ತನ್ನ ಮಗಳನ್ನು ಕೊಡುವುದೆಂದರೇನು? ಆಕೆಯನ್ನು ಅಂತಿಂಥವರಿಗೆ ಧಾರೆಯೆರೆಯಬಾರದು, ಮಹಾವೀರರಿಗೇ ಕೊಡಬೇಕು ಎಂದುಕೊಂಡಿದ್ದ ಸಾಮ್ರಾಟನಿಗೆ ಅವಮಾನವಾದಂತಾಯಿತು. ಆದರೂ, ಒಮ್ಮೆ ಆ ರಾಜಕುಮಾರನನ್ನು ನೋಡೋಣ ಎಂದು ತೀರ್ಮಾನಿಸಿದ. ರಾಜಸಭೆಗೆ ಆತನ್ನು ಕರೆಸಿದ.
ರಾಜಕುಮಾರ ಸಭೆಗೆ ಬರುತ್ತಲೂ ಆತನನ್ನು ರಾಜ ಪ್ರಶ್ನಿಸಿದ: 'ನಿನಗೆ ಬಿಲ್ಲು ವಿದ್ಯೆ ಗೊತ್ತಿದೆಯಾ?' ಗೊತ್ತಿದೆ ಎಂದು ಉತ್ತರಿಸಿದರೆ ಕಷ್ಟದ ಪಣವಿಟ್ಟು ಆತನ್ನು ನಿವಾರಿಸಿಕೊಳ್ಳುವ ಉಪಾಯ ಆತನದು. ಪ್ರೇಮಪೀಡಿತ ರಾಜಕುಮಾರ ಹೀಗೆ ಉತ್ತರಿಸಿದ.
ಏಕಂವಸ್ತು ದ್ವಿಧಾಕರ್ತುಂ ಬಹವಃ ಸಂತಿ ಧನ್ವಿನಃ
ಧನ್ವೀ ಸ ಮಾರ ಏವೈಕಃ ದ್ವಯೋರೈಕ್ಯಂ ಕರೋತಿ ಯಃ
'ಗುರಿ ಹೂಡಿ ಒಂದು ವಸ್ತುವನ್ನು ಎರಡಾಗಿ ಸೀಳುವ ಬಿಲ್ಗಾರರು ಈ ಲೋಕದಲ್ಲಿ ಬಹು ಮಂದಿ ಇದ್ದಾರೆ. ಆದರೆ ಎರಡಾಗಿ ಇದ್ದುದನ್ನು ಒಂದಾಗಿ ಸೇರಿಸುವಂತೆ ಬಾಣದೆಸುಗೆ ಮಾಡುವವ ಮನ್ಮಥ ಒಬ್ಬನೇ!'
ಮನ್ಮಥನೇ ತಾನೆ ಗಂಡುಹೆಣ್ಣುಗಳನ್ನು ಸೇರಿಸುವುದು? ಈ ಮಾತಿನಲ್ಲಿ, ನಮ್ಮಿಬ್ಬರನ್ನೂ ಬೇರೆ ಮಾಡಲಾಗದು ಎಂಬ ಎಚ್ಚರಿಕೆಯೂ ಇರುವಂತಿದೆ. ಇದನ್ನು ಕೇಳಿ, ರಾಜ ಗಪ್ಚುಪ್ ಆದ. ತನ್ನ ಮಗಳ ಪ್ರಿಯಕರ, ಪಂಡಿತನೂ ಕವಿಯೂ ರಸಿಕನೂ ಹೌದೆಂದು ಆತನಿಗೆ ಗೊತ್ತಾಗಿರಬೇಕು.
- ಹರಿಹರ