ತುಳಸಿ ಮದ್ದು
ಐಎಎಸ್ ಅಧಿಕಾರಿಗಳಿಗೆ ವರ್ಗವಾಗುವುದು ಹೊಸದಲ್ಲ. ಆದರೆ ತಮ್ಮ ಕರ್ತವ್ಯದಲ್ಲಿ...
ಐಎಎಸ್ ಅಧಿಕಾರಿಗಳಿಗೆ ವರ್ಗವಾಗುವುದು ಹೊಸದಲ್ಲ. ಆದರೆ ತಮ್ಮ ಕರ್ತವ್ಯದಲ್ಲಿ ನಿಷ್ಠುರತೆ ತೋರಿಸಿ ರಾಜಕಾರಣಿಗಳ ಅವಕೃಪೆಗೆ ಪಾತ್ರರಾಗಿ ವರ್ಗವಾಗುವವರ ಸಂಖ್ಯೆಯೂ ಕಡಿಮೆ ಏನಲ್ಲ. ಉತ್ತರ ಪ್ರದೇಶದಲ್ಲಿ ಮರಳು ಮಾಫಿಯಾ ವಿರುದ್ಧ ಬಿಗಿ ನಿಲುವು ತಳೆದ ಸಬ್ ಡಿವಿಜನಲ್ ಮ್ಯಾಜಿಸ್ಟ್ರೇಟ್ ದುರ್ಗಾಶಕ್ತಿ ನಾಗಪಾಲ್ ಅವರನ್ನು ಅಲ್ಲಿನ ಸರ್ಕಾರ ಹುದ್ದೆಯಿಂದ ಅಮಾನತುಗೊಳಿಸಿದ್ದು ದೇಶಾದ್ಯಂತ ಸುದ್ದಿ ಮಾಡಿತ್ತು. ಆದರೆ ಕರ್ನಾಟಕದಲ್ಲೂ ಹೀಗೊಬ್ಬ ದಕ್ಷ ಮಹಿಳಾ ಜಿಲ್ಲಾಧಿಕಾರಿ ವರ್ಗಾವಣೆಗೊಳಗಾಗಿದ್ದು ಹೆಚ್ಚಿನ ಸದ್ದು ಮಾಡಲೇ ಇಲ್ಲ.
ಉತ್ತರದ ಬಿಸಿಲೂರು ಕೊಪ್ಪಳದಲ್ಲಿ ಜಿಲ್ಲಾಧಿಕಾರಿಯಾಗಿದ್ದ ತುಳಸಿ ಮದ್ದಿನೇನಿ ಕಡಲೂರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಎರಡು ತಿಂಗಳ ಹಿಂದೆ ವರ್ಗವಾಗಿ ಬಂದಿದ್ದಾರೆ. ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಸಚಿವರ ಸಹೋದರರು ನಕಲಿ ಭೂದಾಖಲೆ ಸೃಷ್ಟಿಸಿ ನಿರ್ಮಿಸಿದ ಅಕ್ರಮ ಕಟ್ಟಡದ ಪರವಾಗಿ ನಿರ್ಧಾರ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗೆ ಒತ್ತಡ ಹೇರಿದ್ದರು ಎಂದು ಎಲ್ಲ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಒತ್ತಡಕ್ಕೆ ಮಣಿಯದ ತುಳಸಿ ಮದ್ದಿನೇನಿಗೆ ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿ ಹುದ್ದೆಯಿಂದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ವರ್ಗವಾಗಿದೆ. ಇದು ಕರ್ನಾಟಕದ ದುರ್ಗಾಶಕ್ತಿಯ ಕತೆ.
ಮೂಲತಃ ಆಂಧ್ರಪ್ರದೇಶದವರಾದ ತುಳಸಿ ಜನಿಸಿದ್ದು ವಿಜಯವಾಡದಲ್ಲಿ 1981ರಲ್ಲಿ. ಮಹಿಳಾ ಸ್ಕೂಲ್ನಲ್ಲೇ ಪಿಯುಸಿವರೆಗೆ ಕಲಿತವರು. ಪಿಯುಸಿ ಬಳಿಕ ಅಧಿಕೃತವಾಗಿ ಕಾಲೇಜು ಮೆಟ್ಟಿಲೇರದೆ ನೇರವಾಗಿ ಲೋಕಸೇವಾ ಆಯೋಗದ ಪರೀಕ್ಷೆ ಬರೆದಿದ್ದು ಇವರ ಹೆಗ್ಗಳಿಕೆ. ಐಎಎಸ್ನಲ್ಲಿ 44ನೇ ರ್ಯಾಂಕ್ ಪಡೆದದ್ದು, ಇನ್ನೊಂದು ವಿಶೇಷ.
ಐಎಎಸ್ ತರಬೇತಿಯಲ್ಲಿರುವಾಗ ಐಎಫ್ಎಸ್ ಮಾಡುತ್ತಿದ್ದ ತಮಿಳುನಾಡಿನ ರವಿಶಂಕರ್ ಅವರ ಪರಿಚಯವಾಗಿ, ಪಾಲಕರ ಒಪ್ಪಿಗೆ ಪಡೆದು ಅವರನ್ನೇ ಮದುವೆ ಆದರು. ಈಗ ರವಿಶಂಕರ್ ಕೂಡ ಕರ್ನಾಟಕದಲ್ಲೇ ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ ಡಿಸಿಎಫ್. ಕರ್ನಾಟಕದ ಮಧುಗಿರಿಯಲ್ಲಿ 2008ರಲ್ಲಿ ಸಹಾಯಕ ಆಯುಕ್ತರಾಗಿ ಮೊದಲು ನಾಗರಿಕ ಸೇವೆಗೆ ಸೇರ್ಪಡೆ. ಬಳಿಕ ತುಮಕೂರು ಮುನ್ಸಿಪಲ್ ಕಮಿಷನರ್, ತುಮಕೂರು ಜಿ.ಪಂ. ಸಿಇಒ, ಬಳಿಕ ಕೊಪ್ಪಳ ಜಿಲ್ಲಾಧಿಕಾರಿಯಾಗಿ ಬಡ್ತಿ. ಕರ್ನಾಟಕಕ್ಕೆ ಬಂದು 5 ವರ್ಷಗಳಾಗಿವೆ. ಕನ್ನಡದಲ್ಲಿ ಸರಳವಾಗಿ ಮಾತನಾಡಬಲ್ಲರು. ವರ್ಗಾವಣೆ ಬಳಿಕ ಕರ್ನಾಟಕದ ದುರ್ಗಾಶಕ್ತಿ ಎಂದೇ ಜನಜನಿತವಾಗಿರುವ ತುಳಸಿ ಮದ್ದಿನೇನಿ 'ಬೈಟು ಕಾಫಿ'ಯೊಂದಿಗೆ ಜಸ್ಟ್ ಮಾತ್ ಮಾತಲ್ಲಿ.
ಕಾಲೇಜು ಮೆಟ್ಟಿಲೇರದೇ ಐಎಎಸ್ನಂಥ ದೊಡ್ಡ ಪದವಿ ಗಳಿಸಲು ಹೇಗೆ ಸಾಧ್ಯವಾಯ್ತು?
ನಾನು ಪಿಯು ಬಳಿಕ ಚಾರ್ಟೆಡ್ ಅಕೌಂಟ್ ಕಲಿಯಲು ಆರಂಭಿಸಿದೆ. ಸಿಎ ಪರೀಕ್ಷೆಯಲ್ಲಿ 2003ರಲ್ಲಿ 48ನೇ ರ್ಯಾಂಕ್ ಬಂತು. ಐಸಿಡಬ್ಲ್ಯೂದಲ್ಲೂ 3ನೇ ರ್ಯಾಂಕ್ ಪಡೆದೆ. ನನಗೆ ಮೊದಲಿನಿಂದಲೂ ಐಎಎಸ್ ಮಾಡುವ ಗುರಿ ಇದ್ದದ್ದರಿಂದ ಈ ಸಂದರ್ಭ ಕರೆಸ್ಪಾಂಡೆಂಟ್ ಕೋರ್ಸ್ನಲ್ಲಿ ಡಿಗ್ರಿ ಪಡೆದೆ. ಬಳಿಕ 2005ರ ಬ್ಯಾಚ್ನಲ್ಲಿ ಐಎಎಸ್ ಪಡೆದೆ.
ಐಎಎಸ್ ಮೊದಲು ನಾಗರಿಕ ಸೇವೆ ಬಗ್ಗೆ ಯಾವ ಕಲ್ಪನೆ ಇತ್ತು? ಬಳಿಕವೂ ಅದು ಉಳಿದಿದೆಯಾ?
ಏನು ಕಲ್ಪನೆ ಇಟ್ಟು ಬಂದಿದ್ದೆನೋ ಈಗಲೂ ಇದೆ. ವೈಯಕ್ತಿಕವಾಗಿಯಾದರೆ ಕನಿಷ್ಠ ಎಂದರೆ 10-15 ಜನರಿಗೆ ಸಹಾಯ ಮಾಡಬಹುದು. ಆದರೆ ಇಲ್ಲಿ ನೂರಾರು ಜನರಿಗೆ ಸಹಾಯ ಮಾಡಲು ಸಾಧ್ಯವಿದೆ. ತೀರಾ ಬಡವರೂ ಸಹಾಯ ಕೇಳಿ ಬರ್ತಾರೆ. 'ಸಾಧ್ಯವಾದಷ್ಟು ಜನಕ್ಕೆ ಒಳ್ಳೆದು ಮಾಡಮ್ಮಾ' ಎಂದು ತಂದೆ ಐಎಎಸ್ ಪಾಸಾದಾಗ ಹೇಳಿದ್ದರು. ಉತ್ತಮ ಮೌಲ್ಯಗಳನ್ನು ಪಾಲಕರು ಕಲಿಸಿದ್ದು, ಅದನ್ನು ಅಳವಡಿಸಿಕೊಂಡು, ಈಗ ಪಾಲಿಸುತ್ತಿದ್ದೇನೆ.
ಹೇಗಿತ್ತು ಬಾಲ್ಯ?
ತಾಯಿ ಕನಕದುರ್ಗಾ, ತಂದೆ ಬ್ರಹ್ಮಯ್ಯ 2-3ನೇ ತರಗತಿ ವರೆಗೆ ಮಾತ್ರ ಓದಿದವರು. ಆದರೆ ಉತ್ತಮ ಜ್ಞಾನ ಹೊಂದಿದ್ದರು. ಮೂವರು ಹೆಣ್ಣು ಮಕ್ಕಳನ್ನು ತುಂಬಾ ಶಿಸ್ತಿನಿಂದ ಸಾಕಿದ್ದರು. ಚಿಕ್ಕವರಿರುವಾಗ ಮಕ್ಕಳು ಚಹಾ, ಕಾಫಿಯನ್ನೂ ಕುಡಿಯುತ್ತಿರಲಿಲ್ಲ. ಶಿಸ್ತಿನ ಜತೆ ಪ್ರೀತಿ ಮತ್ತು ಸ್ವಾತಂತ್ರ್ಯವನ್ನೂ ನೀಡಿದ್ದರು. ಹಾಗಾಗಿ ನನಗೆ ಇಂದಿಗೂ ನನ್ನ ಪಾಲಕರು ಮತ್ತು ಪತಿಯೇ ಬೆಸ್ಟ್ ಫ್ರೆಂಡ್ ಮತ್ತು ಗೈಡ್.
ನಿಮಗೆ ಆದರ್ಶ?
ಆದರ್ಶ ಎಂದು ಯಾರೂ ಇಲ್ಲ. ನಾನು ಐಎಎಸ್ ತರಬೇತಿಗೆ ಸೇರಿದ ಮೇಲೆ ಆಂಧ್ರದ ಕೃಷ್ಣಾ ಜಿಲ್ಲೆ ಎಸಿಯಾಗಿದ್ದ ಸಂಪತ್ಕುಮಾರ್ (ಈಗ ಮೇಘಾಲಯದಲ್ಲಿ ಜಿಲ್ಲಾಧಿಕಾರಿ) ನನಗೆ ತುಂಬಾ ಸಹಾಯ ಮಾಡಿದ್ರು. ಸಮಾಜದ ಬಗ್ಗೆ ಕಾಳಜಿ ತೋರಿಸಲು, ಜನರಿಗೆ ಹೇಗೆ ಸಹಾಯ ಮಾಡಬೇಕು ಎಂಬ ಕುರಿತು ಅವರು ತಿಳಿಹೇಳಿದ್ದರು. ಅವರು ಹೇಳಿದಂತೆ ಕಾರ್ಯ ನಿರ್ವಹಿಸುತ್ತಿದ್ದೇನೆ.
ಹವ್ಯಾಸಗಳು?
ಪುಸ್ತಕ ಓದುವುದು, ಅಡುಗೆ ಮಾಡುವುದು. ಮೊನ್ನೆ ದೆಹಲಿಗೆ ಹೋಗಿದ್ದಾಗ ಉಕ್ಕಿನ ಮಹಿಳೆ ಎಂದೇ ಖ್ಯಾತಿ ಪಡೆದ ಬ್ರಿಟನ್ನ ಮಾರ್ಗರೆಟ್ ಥ್ಯಾಚರ್ ಅವರ ಜೀವನಚರಿತ್ರೆ ಪುಸ್ತಕ ಸಿಕ್ತು. ಈಗ ಅದನ್ನು ಓದುತ್ತಾ ಇದ್ದೇನೆ. ಅಡುಗೆಯಲ್ಲಿ ವೆಜ್, ನಾನ್ವೆಜ್ ಎಲ್ಲ ಥರ ಗೊತ್ತು. ರಜೆಯಿದ್ದರೆ ಒಂದೊಳ್ಳೆ ಪುಸ್ತಕ, ಬಿರ್ಯಾನಿ ಸಿಕ್ಕಿದರೆ ಆವತ್ತಿನ ದಿನ ಫುಲ್ ಖುಷ್.
ಕಚೇರಿ ಕೆಲಸ ಮುಗಿದ ಮೇಲೆ ಹೇಗಿರುತ್ತೆ ನಿಮ್ಮ ಕುಟುಂಬ ಜೀವನ?
ಇಬ್ಬರು ಮಕ್ಕಳು, ನಾಲ್ಕುವರೆ ವರ್ಷದ ಮಗ, ಎರಡುವರೆ ವರ್ಷದ ಮಗಳು. ಕಚೇರಿ ಮುಗಿದ ಬಳಿಕ ಮಕ್ಕಳೊಂದಿಗೆ ಆಟ ಆಡುತ್ತಾ ಕಾಲ ಕಳೆಯುತ್ತೇನೆ. ರಜೆ ಇದ್ದರೆ ಪತಿ ಮಂಗಳೂರಿಗೆ ಬರುತ್ತಾರೆ. ನಾನೇ ಅಡುಗೆ ಮಾಡುತ್ತೇನೆ. ತೆಲುಗು ನಟ ಮಹೇಶಬಾಬು ಚಿತ್ರವನ್ನು ತಪ್ಪದೇ ನೋಡುತ್ತೇನೆ. ಕನ್ನಡದಲ್ಲಿ ಡಾ. ರಾಜಕುಮಾರ್ ಹುಬ್ಬಳ್ಳಿಯಲ್ಲಿ ಚಿತ್ರೀಕರಿಸಿದ 'ಹುಟ್ಟಿದರೆ ಕನ್ನಡ ನಾಡಲ್ಲಿ...' ಹಾಡು ತುಂಬಾ ಇಷ್ಟ. ಹಾಗೇ ಕನ್ನಡ ಚಿತ್ರಗಳನ್ನೂ ನೋಡಿದ್ದೇನೆ. ಪುನೀತ್ ಅವರ ಪೃಥ್ವಿ ಚಿತ್ರ ಹಾಗೂ ಮುಂಗಾರು ಮಳೆ ಇಷ್ಟವಾಯ್ತು.
ಜಿಲ್ಲಾಧಿಕಾರಿ ಹುದ್ದೆ ಇಷ್ಟವೋ ಸಿಇಒ ಹುದ್ದೆಯೋ?
ಎಲ್ಲ ಒಂದೇ, ಸಿಇಒ ಹುದ್ದೆಯಲ್ಲಿ ಇನ್ನಷ್ಟು ಸಮಯ ಸಿಗುತ್ತೆ. ಅದನ್ನು ಕುಟುಂಬದೊಂದಿಗೆ ಕಳೆಯುತ್ತೇನೆ. ಮಕ್ಕಳೊಂದಿಗೆ ಮಾಲ್, ಪಾರ್ಲರ್ಗಳಿಗೆ ಹೋಗುತ್ತೇನೆ.
- ರಾಘವೇಂದ್ರ ಅಗ್ನಿಹೋತ್ರಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.