ಸ್ವಂತಿಕೆಯೊಂದಿಗೆ ಗುರುತಿಸಿಕೊಳ್ಳಿ
ಕೆಲವರಿಗೆ ಹಾಗೊಂದು ಗೀಳಿರುತ್ತದೆ. ತಮ್ಮನ್ನು ತಾವು ಅತ್ಯಂತ ಗಣ್ಯ ವ್ಯಕ್ತಿಯೆಂದು ಬಿಂಬಿಸಿಕೊಳ್ಳುವುದೆಂದರೆ ಅವರಿಗೆ ಎಲ್ಲಿಲ್ಲದ ಆಸಕ್ತಿ. ಅವರಲ್ಲಿ ಹೇಳಿಕೊಳ್ಳುವಂಥ ಹೆಗ್ಗಳಿಕೆಗಳೇನೂ ಇರುವುದಿಲ್ಲ. ಮಹಾನ್ ಸಾಧನೆಯನ್ನೂ ಅವರು ಮಾಡಿರುವುದಿಲ್ಲ. ಅಂಥ ಸಾಮರ್ಥ್ಯವೂ ಅವರಲ್ಲಿರುವುದಿಲ್ಲ. ಆದರೂ ಅವರಿಗೆ ಸಮಾಜದಲ್ಲಿ ತಾವೊಬ್ಬ ಪ್ರತಿಷ್ಠಿತನೆನಿಸಿಕೊಳ್ಳಬೇಕೆಂಬ ಹಂಬಲ.
ಅದನ್ನು ಚಪಲವೆಂದು ಬೇಕಿದ್ದರೂ ಕರೆಯಬಹುದು. ಇದಕ್ಕಾಗಿ ಅವರು ಮಾಡದಿರುವ ಸರ್ಕಸ್ಸುಗಳೇ ಇಲ್ಲ. ಹೋದೆಡೆಯಲ್ಲೆಲ್ಲಾ ಯಾರಾದರೊಬ್ಬರ ಗಣ್ಯರ ಜತೆಗೇ ತಾವು ಓಡಾಡಲು ಹವಣಿಸುತ್ತಿರುತ್ತಾರೆ. ಯಾರೇ ಸಿಕ್ಕರೂ ಅವರ ಮುಂದೆ ಪ್ರತಿಷ್ಠಿತರೊಬ್ಬರ ಹೆಸರನ್ನು ಹೇಳಿ ತಮ್ಮ ಅವರ ಒಡನಾಟ ತೀರಾ ಹಿಂದಿನದು, ತಾವಿಬ್ಬರೂ ಅತ್ಯಂತ ಆತ್ಮೀಯರು ಎಂಬಂತೆ ತೋರಿಸಿಕೊಳ್ಳುತ್ತಾರೆ. ಹೊಸಬರು ಪರಿಚಯವಾದೊಡನೆ, ಅವರು ಖ್ಯಾತನಾಮರು, ಪ್ರತಿಷ್ಠಿತರು ಎಂಬುದು ಗೊತ್ತಾದರೆ ಅವರನ್ನು ತಮ್ಮ ಸುತ್ತಲಿನವರಿಗೆಲ್ಲಾ ಕರೆದು ಪರಿಚಯಿಸಲು ಮುಂದಾಗುತ್ತಾರೆ. ಇದ್ದಕ್ಕಿದ್ದಂತೆ ಯಾರಿಗೋ ಫೋನಾಯಿಸಿ ಒಂದು ನಿಮಿಷ ಇಂಥವರೊಬ್ಬರ ಜತೆ ಮಾತನಾಡಿ ಎಂದು ಹೇಳಿ ತಾವು ಅವರೊಂದಿಗೆ ಅಷ್ಟು ಹತ್ತಿರದವರು ಎಂದು ತೋರಿಸಿಕೊಳ್ಳುತ್ತಾರೆ. ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಪ್ರಮುಖರ ಜತೆ ತಮ್ಮನ್ನು ತಾವು ತೋರ್ಪಡಿಸಿಕೊಂಡು ತಾವು ಇಂಥ ಗಣ್ಯರ ಜತೆಗೆಲ್ಲ ಒಡನಾಟವಿರುವ ಪ್ರಭಾವಿ ವ್ಯಕ್ತಿ ಎಂಬುದನ್ನು ಪರೋಕ್ಷವಾಗಿ ತಿಳಿಸಲು ಪ್ರಯತ್ನಿಸುತ್ತಾರೆ.
ಹಾಗೆಂದು ಇವರು ನಿರುಪದ್ರವಿಗಳು. ಇವರಿಂದ ಅಪಾಯವೇನೂ ಇಲ್ಲ. ಆದರೆ ಹೀಗೆ ವರ್ತಿಸುವ ಮೂಲಕ ಅವರು ತಮ್ಮ ವೈಯಕ್ತಿಕ ಲಾಭವನ್ನು ಕಂಡುಕೊಳ್ಳುತ್ತಿರುತ್ತಾರೆ ಎಂಬುದನ್ನು ಮರೆಯಬೇಡಿ. ಇನ್ನೊಬ್ಬರ ಮೂಲಕ ನಮ್ಮನ್ನು ನಾವು ಗುರುತಿಸಿಕೊಳ್ಳುವ ಬದಲು ನಮ್ಮತನವನ್ನು ರೂಢಿಸಿಕೊಳ್ಳುವುದು ಅತ್ಯಂತ ಮುಖ್ಯ. ನಾವು ಸಮಾಜದಲ್ಲಿ ಪ್ರತಿಷ್ಠಿತರಲ್ಲದೇ ಇರಬಹುದು. ಅದರೆ, ಸ್ವಂತಿಕೆ ಎನ್ನುವುದು ಖಂಡಿತಾ ಎಲ್ಲಕ್ಕಿಂತ ಹಿರಿದು. ನಮ್ಮದೇ ಸಾಮರ್ಥ್ಯದಿಂದ ನಮ್ಮನ್ನು ಜನ ಗುರುತಿಸುವಂತಾದರೆ ಅದಕ್ಕಿಂತ ದೊಡ್ಡತನ ಇನ್ನೊಂದಿರಲಾರದು. ನಮ್ಮ ಮೂಲಕ ಬೇರೆಯವರು ಗುರುತಿಸಲ್ಪಡಬೇಕೇ ವಿನಾ ಇನ್ನೊಬ್ಬರ ಮೂಲಕ ನಮ್ಮನ್ನು ಪರಿಚಯಿಸಿಕೊಳ್ಳುವುದು ನಮ್ಮ ಅಸ್ತಿತ್ವವನ್ನೇ ಪ್ರಶ್ನಿಸಿಕೊಂಡಂತೆ ಎಂಬುದನ್ನು ನೆನಪಿಡಿ.
- ಸಹನೆ