ಹುಲ್ಲಿನ ಹೂಗಳು
ಬೆಳಗಿನ ಚುಮು ಚುಮು ಚಳಿಯಲ್ಲಿ ನಡೆಯುತ್ತಿದ್ದೆ. ಗದ್ದೆ ಪಕ್ಕದ ಬದುವಿನ ಮೇಲೆ ರಾಶಿ ರಾಶಿ ಹೂವುಗಳು ಕಂಡವು....
ಬೆಳಗಿನ ಚುಮು ಚುಮು ಚಳಿಯಲ್ಲಿ ನಡೆಯುತ್ತಿದ್ದೆ. ಗದ್ದೆ ಪಕ್ಕದ ಬದುವಿನ ಮೇಲೆ ರಾಶಿ ರಾಶಿ ಹೂವುಗಳು ಕಂಡವು. ಅವುಗಳ ವೈಯಾರವೋ, ಚಿತ್ತಾಪಹಾರಿ ಮಾಯಾಂಗನೆಯರ ಹಾಗೆ ಇದ್ದವು. ತಂಗಾಳಿಗೆ ತೊನೆಯುತ್ತ, ಎಳೆಬಿಸಿಲಿಗೆ ಮೈಯೊಡ್ಡಿ ಬಳುಕುತ್ತಿದ್ದವು. ಪುಟಾಣಿ ಹುಳು ಹುಪ್ಪಟೆಗಳಿಗೆ, ಜೇನ್ನೊಣಗಳಿಗೆ ತುಟಿ ಬಿಚ್ಚಿ ಜೇನುಣ್ಣಿಸುತ್ತಿದ್ದವು. ಕೆಂಪು, ಬಿಳಿ, ಕಂದು, ಹಳದಿ... ಬಣ್ಣ ಬಣ್ಣದ ಹೂವುಗಳು. ಅತ್ಯಂತ ಚಿಕ್ಕ ಹೂವುಗಳು, ಮುಂಜಾನೆಯ ಇಬ್ಬನಿಯ ನಡುವೆ ತಮ್ಮ ಇರುವಿಕೆಯನ್ನು ತೂಗಿ ತೊನೆದು ತೋರಿಸುತ್ತಿದ್ದವು. ಅವು ಅಂತಿಂಥ ಹೂವುಗಳಲ್ಲ. ನಾವು ತೃಣವೆಂದು ತಾತ್ಸಾರ ಪಡುವ ಹುಲ್ಲಿನಲ್ಲಿ ಅರಳಿದ ಹೂವುಗಳವು. ಮುಂಜಾನೆಯ ಸ್ವಲ್ಪವೇ ಹೊತ್ತು ಕಾಣಸಿಗುವಂಥವು. ಹೊತ್ತೇರಿದಂತೆ ಬಿಸಿಲಿಗೆ ಬಾಡಿ ಕಾಣೆಯಾಗುವಂಥವು. ಅಪರೂಪಕ್ಕೆ ಕ್ಯಾಮೆರಾ ಕಣ್ಣಿಗೆ ಸಿಕ್ಕುಬಿದ್ದವು.
- ಗಣಪತಿ ಬಾಳೆಗದ್ದೆ