ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಅಹಂಕಾರದ ಮಾಯೆಯ ಬಂಧಿಗಳು!

Lingaraj Badiger
Updated On : 18 Sept 2013, 6:50 am

ನಾವು ನಮ್ಮ ಅಹಂಕಾರಕ್ಕಾಗಿಯೋ, ಸ್ವಾಭಿಮಾನಕ್ಕಾಗಿಯೋ ಅಥವಾ ಸಮಾಜದಲ್ಲಿ ನಮ್ಮನ್ನು ಗುರುತಿಸಿಕೊಳ್ಳುವುದಕ್ಕಾಗಿಯೋ ಆಸ್ತಿ ಸಂಪಾದನೆಯ ಬೆನ್ನು ಹತ್ತಿದರೆ, ಬಾವಿಯೇ-ಜಗತ್ತು, ನಾನೇ-ರಾಜ ಎಂದು ಎಣಿಸಿಕೊಂಡ ಕಪ್ಪೆಯಂತೆ ಮೂರ್ಖರಾಗುತ್ತೇವೆ. ಹಣ ಸಂಚಯಕ್ಕೆ ಉಪಯೋಗಿಸುವ ನಮ್ಮ ಶ್ರಮ, ಪರಾಕ್ರಮಗಳೆಲ್ಲ ಕೆಲವೇ ಕ್ಷೇತ್ರ, ಊರು ಅಥವಾ ಸಂಸ್ಥೆ ಯಾ ಅದರ ಒಂದು ಭಾಗಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಅದರ ಹೊರತಾಗಿ ಹೊರಗಡೆ ಇರುವ ಜಗತ್ತನ್ನು ನಾವು ಕಾಣದಾಗುತ್ತೇವೆ. ನಮ್ಮ ಸುತ್ತ ನಾವೇ ಒಂದು ಕೊಳವನ್ನೋ ಅಥವಾ ಪಂಜರವನ್ನೋ ನಿರ್ಮಿಸಿಕೊಂಡು, ನಮಗೆ ಅರಿವಿಲ್ಲದೆಯೇ ಅದರೊಳಗೆ ಬಂಧಿಯಾಗುತ್ತೇವೆ. ನಮ್ಮ ಜೀವನವೆಂಬುದು ಒಂದು ಚಕ್ರವಿದ್ದಂತೆ. ನಮ್ಮ ಮುಂದೆ ಯಾವತ್ತೂ ಯಾರಾದರೊಬ್ಬರು ಇರುತ್ತಾರೆ. ನಾವು ಮುಂದೆ ನೋಡಿದರೆ ನಾವು ಕೊನೆಯವರಾಗಿಯೂ, ಹಿಂದೆ ನೋಡಿದರೆ ಮೊದಲಿಗರಾಗಿಯೂ ಕಾಣುತ್ತೇವೆ. ನಾವು ಯಾವ ಸ್ಥಾನದಲ್ಲಿದ್ದೇವೆಂಬುದು ನಮ್ಮ ದೃಷ್ಟಿಕೋನವನ್ನು ಅವಲಂಬಿಸಿರುತ್ತದೆ. ಪ್ರತಿಯೊಬ್ಬರೂ ತಾವು ವರ್ತುಲಾಕಾರದಲ್ಲಿ ಓಡುತ್ತಿದ್ದೇವೆ ಎಂಬ ಪರಿವೆಯೇ ಇಲ್ಲದೆ, ತಾವೇ ಮೊದಲಿಗರಾಗಬೇಕು ಎಂದು ಓಡುತ್ತಿರುತ್ತೇವೆ. ನಮ್ಮ ಅಕ್ಕಪಕ್ಕದವರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುತ್ತಿರುತ್ತೇವೆ. ನಾನು ಇಂಥವನು, ನಾನು ಅಂಥವನು ಎಂಬ ಪದಗಳು ಕೇವಲ ಹೋಲಿಕೆ ಅಷ್ಟೇ. ಅಲ್ಲವಾದರೆ ಈ ವಿಶಾಲವಾದ ಜಗತ್ತಿನಲ್ಲಿ, ನಾವು ಯಾವ ಸ್ಥಾನದಲ್ಲಿದ್ದೇವೆಂಬುದು ಊಹಿಸಲೂ ಸಾಧ್ಯವಿಲ್ಲ.
ಈ ವರ್ತುಲಾಕಾರದ ಹೊರಗಿನ ವಿಶಾಲವಾದ ಜಗತ್ತನ್ನು ಎಷ್ಟು ಜನ ತಿಳಿದಿದ್ದಾರೆ ಈ ವಿಶಾಲವಾದ ಜಗತ್ತಿನ ವ್ಯಾಪ್ತಿ ಮತ್ತು ಸಮಯದಲ್ಲಿ ನಮ್ಮ ಗುರುತು ಒಂದು ಬಿಂದುವಿಗಿಂತಲೂ ಕಡಿಮೆ ಎಂದರೆ ತಪ್ಪಿಲ್ಲ. ಸಮಯದ ಚಕ್ರದಲ್ಲಿ ನಮ್ಮ ಜೀವನವೆಂಬುದು ಚಂಡಮಾರುತದ ನಡುವೆ ಬಂದು ಹೋಗುವ ಒಂದು ಮಿಂಚಿನಂತೆ. ನಾನು, ನನ್ನದು ಎಂಬುದೆಲ್ಲ ಒಂದು ಸಾಮಾಜಿಕ ಮುಖವಾಡ. ನಾನು, ನನ್ನದು ಎಂಬುದನ್ನು ಮೀರಿ ನಿಂತು ನೋಡಿದವರು ಇದನ್ನು ಸುಲಭವಾಗಿ ಅರ್ಥೈಸಿಕೊಳ್ಳಬಲ್ಲರು. ಆದ್ದರಿಂದ, ವಿಶಾಲವಾಗಿ ಯೋಚಿಸಿದರೆ, ನಾನು, ನನ್ನದು ಎಂದು ಅಹಂಕಾರಪಡುವುದರಲ್ಲಿ ಯಾವುದೇ ಹುರುಳಿಲ್ಲ.
ಬಹಳಷ್ಟು ಜನರು ಶ್ರಮಪಡುವುದು, ಹಣ ಗಳಿಸುವುದು ತಮ್ಮನ್ನು ಗುರುತಿಸಿಕೊಳ್ಳುವುದಕ್ಕೆ ಅಥವಾ ತಮ್ಮ ಸುತ್ತಮುತ್ತಲಿನವರನ್ನು ಪ್ರಭಾವಿತರನ್ನಾಗಿಸುವುದಕ್ಕೆ. ಆದರೆ ನಾವು ಗುರುತಿಸಿಕೊಳ್ಳುವುದು ಜಗತ್ತಿನ ಕೆಲವು ಜನರಿಗಷ್ಟೇ. ಉಳಿದ ಅದೆಷ್ಟೋ ಕೋಟಿ ಜನ ನಮ್ಮ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ನಾವು ಯಾರೆಂದು ಅವರಿಗೆ ತಿಳಿದಿರುವುದೂ ಇಲ್ಲ. ಅವರು ನಮ್ಮನ್ನು ಗುರುತಿಸುವುದೂ ಇಲ್ಲ. ನಮಗಿಂತ ಮೇಲಿನವರಿಗೆ ನಾವು ಯಾರೆಂದು ತೋರಿಸಿಕೊಡಲು ಹೋದರೆ ಅವರು ನಮ್ಮನ್ನು ಅವರಿಗಿಂತ ಕೆಳಗಿನವರನ್ನಾಗಿಯೇ ಕಾಣುತ್ತಾರೆ. ನಮಗಿಂತ ಕೆಳಗಿನವರಿಗೆ ನಾವು ಯಾರೆಂದು ತೋರಿಸಲು ಹೋದರೆ ಅವರು ನಮ್ಮ ಬಗ್ಗೆ ಅಸೂಯೆ ಪಡುತ್ತಾರೆ. ಈ ಲೋಕದಲ್ಲಿ ಕೆಲವರಿಗೆ ಮಾತ್ರ ನಾವು ಬೇಕಾದವರಾಗಿರುತ್ತೇವೆ. ಉಳಿದ ಅದೆಷ್ಟೋ ಜನರಿಗೆ ನಮ್ಮ ಇರುವಿಕೆಯೇ ತಿಳಿದಿರುವುದಿಲ್ಲ. ನಮ್ಮ ಮರಣಾನಂತರ ಎಷ್ಟು ಜನ, ಎಷ್ಟು ಸಮಯ ನಮ್ಮ ಬಗ್ಗೆ ಕಣ್ಣೀರಿಡುತ್ತಾರೆ ಎಂದು ತಿಳಿದಾಗ ಆಘಾತವಾಗುತ್ತದೆ. ಲೋಕದ ಕೆಲವೇ ಜನಕ್ಕೆ ಮಾತ್ರ ನಾವು ಬೇಕಾದವರು ಎಂದು ತಿಳಿದಾಗ ಭ್ರಮನಿರಸನವಾಗುತ್ತದೆ. ಯಾವುದೇ ವ್ಯಕ್ತಿಯ ಇರುವಿಕೆ ಇಲ್ಲದೆಯೂ ಈ ಲೋಕದಲ್ಲಿ ಜೀವನ ಮುಂದುವರಿಯುತ್ತಿರುತ್ತದೆ. ನಮ್ಮ ಮರಣಾನಂತರ ನಮ್ಮನ್ನು ಬಲ್ಲವರಿಗೂ ನಮ್ಮ ಇಲ್ಲದಿರುವಿಕೆ ಕಾಡುವುದಿಲ್ಲ. ಅಹಂಕಾರ ಮತ್ತು ಅದನ್ನು ಹೊಂದಿದ ಮನುಷ್ಯ ಮಾತ್ರ ತಾನು ಶಾಶ್ವತ ಎಂಬಂತೆ ಜೀವಿಸುತ್ತಾನೆ. ಇದು ಅಹಂಕಾರದ ಮಾಯೆ ಅಲ್ಲದೇ ಇನ್ನೇನೂ ಅಲ್ಲ.

(ಮುಂದುವರಿಯುವುದು)

- ಕಿರಣ್ ಉಪಾಧ್ಯಾಯ
keyrun1970@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement