ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಟ್ಟುಕಥೆ ಅಲ್ಲ

Lingaraj Badiger
Updated On : 18 Sept 2013, 6:49 am

ವಾಸ್ತುಶಾಸ್ತ್ರವೆಂದರೆ ಯಾರೋ ನಂಬಿಸಲು ಹುಟ್ಟಿ ಹಾಕಿದ್ದ ಕಟ್ಟುಕಥೆಯಲ್ಲ. ಹೇಗೆ ಜ್ಯೋತಿಷ್ಯ ಶಾಸ್ತ್ರವೆನ್ನುವುದು ಸೌರಮಂಡಲದ ನಕ್ಷತ್ರಗಳ ಪ್ರಭಾವ, ಇತರ ಜೀವರಾಶಿಯ ಇರುವಿಕೆಯ ಮೇಲೆ ಉಂಟಾಗುವ ಪರಿಣಾಮಗಳನ್ನು ಸಾರುತ್ತದೆಯೋ, ಹಾಗೆಯೇ ವಾಸ್ತುಶಾಸ್ತ್ರವೂ ದಿಕ್ಕುಗಳ ಆಧಾರದ ಮೇಲೆ ಕಟ್ಟಡದ ವಿನ್ಯಾಸವೂ ಹೇಗಿರಬೇಕು ಎನ್ನುವುದನ್ನು ನಮಗೆ ತಿಳಿಸುತ್ತದೆ. ಯಾವ ದಿಕ್ಕಿನಲ್ಲಿ ಧನಾತ್ಮಕ ಶಕ್ತಿ ಹೆಚ್ಚಿರುವುದೋ ಆ ದಿಕ್ಕಿನಲ್ಲಿ ಏನನ್ನು ನಿರ್ಮಿಸಬೇಕು ಎಂದು ಹೇಳುವುದಲ್ಲದೇ, ಯಾವ ದಿಕ್ಕಿಗೆ ಏನಿರಬಾರದು ಎಂಬ ಮಾಹಿತಿಯನ್ನೂ ನೀಡುತ್ತದೆ. ಸರಿಯಾಗಿ ವಿಚಾರ ಮಾಡಿದರೆ ವಾಸ್ತುವಿನ ಹಿಂದಿನ ವಸ್ತು ವಿಚಾರದ ವಾಸ್ತವ ನಮಗರಿವಾಗುತ್ತದೆ. ವಾಸ್ತು ಪ್ರಕಾರ ಕಟ್ಟಿದ ಮನೆಗಳಲ್ಲಿ ಸುಖ, ಸಂತೋಷ, ಧನ, ಅಭಿವೃದ್ಧಿ, ಕಾರ್ಯ ಸಿದ್ಧಿ, ಆರೋಗ್ಯ ಭಾಗ್ಯ, ಜೀವನದಲ್ಲಿ ಏಳಿಗೆ ಮುಂತಾದವು ಪ್ರಾಪ್ತಿಯಾಗುತ್ತವೆ ಎಂದು ಹೇಳಲಾಗುತ್ತದೆ. ನಮ್ಮ ಹಿರಿಯರು ಎಲ್ಲರ ಒಳಿತಿಗಾಗಿ ಕಂಡುಹಿಡಿದು ಮುಂದಿನ ಪೀಳಿಗೆಗೂ ಕೊಟ್ಟಿರುವ ಇಂತಹ ಒಳ್ಳೆಯ ವಿಚಾರಗಳನ್ನು ಸದುಪಯೋಗಪಡಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು.
-ಸಂತೋಷ್‌ಕುಮಾರ್ ಎಲ್.ಎಂ., ಬೆಂಗಳೂರು

ಇರಲಿ ಧನಾತ್ಮಕ ಮನೋಸ್ಥಿತಿ
ಬಿಸಿಲು-ಮಳೆಗೆ ನೆರಳಾಗುವ ತಲೆ ಮೇಲಿನ ಸಣ್ಣ ಸೂರು, ನಾವು ಆರ್ಥಿಕವಾಗಿ ಬೆಳೆದಂತೆಲ್ಲಾ ದೊಡ್ಡ ಮನೆಯಾಗಿ ಬದಲಾಗುತ್ತದೆ. ಈ ದೊಡ್ಡ ಮನೆಯ ವಿಷಯ ಬಂದಾಗಲೇ ಹುಟ್ಟುವುದು 'ವಾಸ್ತು'ವಿನ ವಿಷಯ. ವೈಜ್ಞಾನಿಕ ವಿಷಯಗಳನ್ನಿಟ್ಟುಕೊಂಡು ಉತ್ತಮ ಗಾಳಿ, ಬೆಳಕು ಪಡೆಯಲಿಕ್ಕಾಗಿ, ಸ್ವಚ್ಛ ವಾತಾವರಣಕ್ಕಾಗಿ ಮಾಡಿಕೊಳ್ಳುವ ಕೆಲವು ವಿನ್ಯಾಸಗಳು 'ವಾಸ್ತು'ವಿನ ಅಡಿಯಲ್ಲಿ ಬರುವುದಾದರೆ ಅದು ಸ್ವಾಗತಾರ್ಹ. ಆದರೆ, ಒಳಿತು-ಕೆಡಕುಗಳ ವಿಷಯಕ್ಕಾಗಿ 'ವಾಸ್ತು'ವಿನ ಹಿಂದೆ ಬಿದ್ದರೆ ನೆಮ್ಮದಿಯ ಭಂಗವೇ ವಿನಹ ಮತ್ತೇನೂ ಲಾಭವಿಲ್ಲ. ಮನೆ ನಿರ್ಮಿಸುವಾಗ 'ವಾಸ್ತು'ವಿಗಿಂತ 'ವಾಸ್ತವಾಂಶ'ವನ್ನು ಅರಿತುಕೊಳ್ಳುವ ಅವಶ್ಯಕತೆಯೇ ಹೆಚ್ಚು. ಬಡತನದಲ್ಲಿದ್ದಾಗ ವಾಸ್ತುವಿಲ್ಲದ ಮನೆಯಲ್ಲೇ ವಾಸವಿದ್ದು ದೊಡ್ಡ ಮನೆ ನಿರ್ಮಿಸುವ ಸ್ಥಿತಿಗೆ ಬಂದಿದ್ದೇವೆಂದರೆ, ನಮ್ಮ ಒಳಿತು-ಕೆಡಕುಗಳಿಗೆ ಕೇವಲ 'ವಾಸ್ತು'ವೇ ಕಾರಣವಲ್ಲ ಅಲ್ಲವೆ? ನಮ್ಮನಿವೇಶನದಲ್ಲಿ ಮನೆ ಮಾಡುವಾಗ, ಅದರಲ್ಲಿ ಬಾಳುವಾಗ 'ವಾಸ್ತು' ವಿಷಯವೇ ಬೇಡ ಎಂಬ ಭಂಡತನವೂ, ಅದರ ಹಿಂದೆ ಸುತ್ತುವ ಹಿಂಜರಿಕೆಯ ಮನಸ್ಸೂ ಬೇಡ. ಮುಖ್ಯವಾಗಿ ಬೇಕಾದ್ದು ಸ್ವಚ್ಛ, ಸ್ವಾಸ್ಥ್ಯ, ಧನಾತ್ಮಕ ಚಿಂತನೆ ಅಷ್ಟೆ.
-ಬಿ.ಸಿ. ನಾರಾಯಣ ಮೂರ್ತಿ, ಮೈಸೂರು

ವೈಜ್ಞಾನಿಕ ಅಂಶ ಗಮನಿಸಿ
ವಾಸ್ತು ಬೇಕೇ ಬೇಡವೇ ಎಂಬ ಬಗ್ಗೆ ಚರ್ಚಿಸುವ ಮೊದಲು ವಾಸ್ತುವಿನ ಹಿಂದಿರುವ ವೈಜ್ಞಾನಿಕ ಅಂಶವನ್ನು ಗಮನಿಸಿದರೆ ವಾಸ್ತು ನಮಗೆಷ್ಟು ಬೇಕು ಎನ್ನುವುದನ್ನು ನಿರ್ಧರಿ ಸಬಹುದು. ಮನೆಯ ಮುಂಬಾಗಿಲು ಪೂರ್ವದಿಕ್ಕಿಗೇ ಇರಬೇಕು ಎನ್ನುತ್ತಾರೆ. ಏಕೆಂದರೆ ಮುಂಜಾನೆ ಉದಯಿಸುವ ಸೂರ್ಯನ ಪ್ರಥಮ ಕಿರಣಗಳ ಬೆಳಕು ಮನೆಯನ್ನು ಪ್ರವೇಶಿಸಿದರೆ ಬೆಳಕಿನಲ್ಲಿರುವ ಶಕ್ತಿಯಿಂದ ಮನೆಯಲ್ಲಿರುವವರ ಮನಸ್ಸು ಲವಲವಿಕೆಯಿಂದ ಕೂಡಿರುತ್ತದೆ. ಇದರಿಂದ ದಿನದ ಕೆಲಸಗಳಲ್ಲಿ ಉತ್ಸಾಹವಿರುತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ಕಂಡುಕೊಂಡಿದ್ದ ಪೂರ್ವಜರು ಮನೆಯ ಮುಂಬಾಗಿಲನ್ನು ಪೂರ್ವ ದಿಕ್ಕಿಗೇ ಇಡುತ್ತಿದ್ದರು. ಇದಕ್ಕೆ ಪೂರಕವೆಂಬಂತೆ ಸೂರ್ಯನ ಕಿರಣಗಳು ಗರ್ಭಗುಡಿಯನ್ನು ಪ್ರವೇಶಿಸಲಿ ಎಂಬ ಉದ್ದೇಶದಿಂದ ದೇವಸ್ಥಾನಗಳ ಮುಖ್ಯದ್ವಾರಗಳು ಕೂಡ ಪೂರ್ವದಿಕ್ಕಿಗೇ ಸ್ಥಾಪಿತವಾಗಿರುತ್ತವೆ. ಈ ಅಂಶವನ್ನು ತೆಗೆದುಕೊಳ್ಳುವುದಾದರೆ ಮನೆ ಕಟ್ಟುವಾಗ ಪೂರ್ವದಿಕ್ಕಿಗೆ ಮುಖ್ಯಬಾಗಿಲನ್ನು ಇಡಬೇಕು ಎಂಬ ವಾಸ್ತು ವಿಜ್ಞಾನವನ್ನು ಅಳವಡಿಸಿಕೊಂಡರೆ ತಪ್ಪಿಲ್ಲ.
-ಫ್ಯಾಷನ್ ಡಿಸೈನರ್ ಮಧು, ಹಾಸನ

'ಜಗುಲಿ'ಯಲ್ಲಿ ಈ ವಾರದ ವಿಷಯ 'ವಾಸ್ತು ಬೇಕೆ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments