ಬರೇ ನೀರು ಕುಡಿಸುವುದು ಉಪವಾಸ ಕೆಡವಿದಂತೆ!
ಆ ಮಗುವಿಗೆ ಐದು ವರ್ಷವಷ್ಟೇ. ವಿಪರೀತ ಅತಿಸಾರದಿಂದ ಬಳಲುತ್ತಿತ್ತು. ಮನೆಯಲ್ಲಿ ಎರಡು ದಿನ ವೈದ್ಯೋಪಚಾರ ಮಾಡಿದ ಬಳಿಕವೂ ಭೇದಿ ನಿಲ್ಲದೇ ಇದ್ದಾಗ ಹೆತ್ತವರು ಆಸ್ಪತ್ರೆಗೆ ದಾಖಲಿಸಿದರು. ಮಗು ನಿತ್ರಾಣಗೊಂಡಿತ್ತು. ತಕ್ಷಣ ಡ್ರಿಪ್ ಹಾಕಿದ ವೈದ್ಯರು, ರಕ್ತಪರೀಕ್ಷೆ ಮಾಡಲು ನಿರ್ಧರಿಸಿದರು. ರಕ್ತಪರೀಕ್ಷೆ ವರದಿ ನೋಡಿದವರೇ ಪಾಲಕರ ಮೇಲೆ ರೇಗಾಡತೊಡಗಿದರು. ಮಗು ಹಸಿವಿನಿಂದ ಬಳಲುತ್ತಿತ್ತು. ಅದರ ನಿಶ್ಯಕ್ತಿಗೆ ಅತಿಸಾರಕ್ಕಿಂತ ಉಪವಾಸವೇ ಪ್ರಮುಖ ಕಾರಣವಾಗಿತ್ತು. ಭೇದಿ ಶುರುವಾದಾಗಿನಿಂದ ಅದಕ್ಕೆ ಲಿಂಬು ಪಾನಕ, ತಂಪು ಪಾನೀಯ ಬಿಟ್ಟರೆ ಬೇರೇನೂ ಕೊಟ್ಟಿರಲಿಲ್ಲ. ಮಂದ ಅಥವಾ ಗಟ್ಟಿ ರೂಪದ ಆಹಾರ ಕೊಡುವುದನ್ನು ನಿಲ್ಲಿಸಿ ಎರಡು ದಿನ ಆಗಿತ್ತು. ಸಾಲದ್ದಕ್ಕೆ ಭೇದಿಯನ್ನು ಉತ್ತೇಜಿಸುವ ಸಕ್ಕರೆ ಅಂಶವುಳ್ಳ ಪಾನೀಯಗಳನ್ನೇ ನೀಡುತ್ತಿದ್ದ ಕಾರಣ ಮಗುವಿನ ಸ್ಥಿತಿ ಇನ್ನಷ್ಟು ಗಂಭೀರವಾಗಿತ್ತು. ಅತಿಸಾರ ನಿಲ್ಲಿಸುವುದರ ಜತೆಜತೆಯಲ್ಲೇ ಮಗುವಿನ ಜೀರ್ಣಾಂಗಗಳಿಗೆ, ಆ ಮೂಲಕ ಮಗುವಿಗೆ ಶಕ್ತಿ ತುಂಬುವ ಕಾರ್ಯವನ್ನೂ ವೈದ್ಯರು ಮಾಡಬೇಕಿತ್ತು. ಒಮ್ಮೊಮ್ಮೆ ನಾವು ತಿಳಿಯದೆಯೊ ಅಥವಾ ತಪ್ಪು ಕಲ್ಪನೆಯಿಂದಲೊ ಹೇಗೆ ಎಡವಟ್ಟು ಮಾಡಿಕೊಳ್ಳುತ್ತೇವೆ, ಪರಿಸ್ಥಿತಿಯನ್ನು ಹೇಗೆ ಜಟಿಲಗೊಳಿಸಿಕೊಳ್ಳುತ್ತೇವೆ ಎನ್ನುವುದಕ್ಕೆ ಇದು ಒಂದು ಉದಾಹರಣೆ ಅಷ್ಟೆ.
ಕೆಲವರು ಭೇದಿಯಾದವರಿಗೆ ಸೋಡಾ ಕುಡಿಸಲೂ ಸಲಹೆ ಮಾಡುವುದನ್ನು ಕೇಳಿದ್ದೇನೆ. ಇದು ಕೂಡ ತಪ್ಪು. ಈಗೀಗ ಮಾರುಕಟ್ಟೆಯಲ್ಲಿ ಕೆಲವು ಬಗೆಯ ಡಯಟ್ ಡ್ರಿಂಕ್ಗಳು ಸಿಗುತ್ತಿವೆ. ಅತಿಸಾರವಾದಾಗ ಅವುಗಳನ್ನು ಕುಡಿಯುವುದೂ ಸಲ್ಲದು. ಇಂಥ ಪಾನೀಯಗಳು ಅತಿಸಾರದ ಅವಧಿಯನ್ನು ಇನ್ನಷ್ಟು ದೀರ್ಘಗೊಳಿಸುತ್ತವೆಯೇ ವಿನಾ ಭೇದಿ ನಿಲ್ಲಲು ಸಹಾಯ ಮಾಡುವುದಿಲ್ಲ. ಸಾದಾ ನೀರನ್ನಷ್ಟೇ ಕುಡಿಸುವುದೂ ಸಲ್ಲದು. ಆದರೆ ಏನೇನೋ ಪಾನೀಯಗಳನ್ನು ನೀಡುವುದಕ್ಕಿಂತ ನೀರು ಕೊಂಚ ಉತ್ತಮವಷ್ಟೇ. ಹಾಲು, ಕಾಫಿ ನೀಡುವುದು ಸಹ ಸರಿಯಲ್ಲ.
ಭೇದಿಯಿಂದ ಬಳಲುವವರಿಗೆ ಕೆಲವು ಕಡೆಗಳಲ್ಲಿ ಅನ್ನದ ಗಂಜಿ ನೀಡುವ ಕ್ರಮವಿದೆ. ಗೋಧಿ ಹಿಟ್ಟಿನ ದೋಸೆ ಮಾಡಿಕೊಡುತ್ತಾರೆ. ಇದು ಒಳ್ಳೆಯದು. ರುಚಿಗೆ ಬೇಕಿದ್ದರೆ ಗಂಜಿಗೆ ಸ್ವಲ್ಪ ಉಪ್ಪು ಸೇರಿಸಿಕೊಳ್ಳಬಹುದು. ಅನ್ನದಲ್ಲಿ ಪಿಷ್ಟಗಳು ಹೇರಳವಾಗಿರುತ್ತವೆ. ಕಾರ್ನ್, ಗೋಧಿ, ಆಲೂಗಡ್ಡೆಗಳಲ್ಲೂ ಪಿಷ್ಟಗಳು ಸಮೃದ್ಧವಾಗಿರುತ್ತವೆ. ಇವನ್ನೂ ತಿನ್ನಿಸಬಹುದು. ಪಿಷ್ಟ ಭೇದಿ ನಿಲ್ಲಲು ನೆರವಾಗುವುದು ಮಾತ್ರವಲ್ಲ, ಕರುಳಿಗೆ ತಕ್ಕಮಟ್ಟಿಗೆ ಬಲ ನೀಡುತ್ತದೆ. ಮರಗೆಣಸು ಅಥವಾ ಕ್ಯಾರೆಟ್ ಸೂಪ್ ಸಹ ಅತಿಸಾರಕ್ಕೆ ಪರಿಣಾಮಕಾರಿ ಮದ್ದು. ನೆಲದ ಅಡಿಯಲ್ಲಿ ಬೆಳೆಯುವ ತರಕಾರಿಗಳನ್ನು ಧಾರಾಳವಾಗಿ ನೀಡಬಹುದು.
- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com