ಯೋಗ ಭಾಗ್ಯ
ಆಧುನಿಕ ಬದುಕಿನ ಒತ್ತಡದಲ್ಲಿ ಸಿಲುಕಿ, ದುಶ್ಚಟಗಳಿಗೆ ತುತ್ತಾದ ಈ ಯುವಕರು ಅದರಿಂದ ಪಾರಾಗಲು ಹುಡುಕಿಕೊಂಡ ದಾರಿ...
ಆಧುನಿಕ ಬದುಕಿನ ಒತ್ತಡದಲ್ಲಿ ಸಿಲುಕಿ, ದುಶ್ಚಟಗಳಿಗೆ ತುತ್ತಾದ ಈ ಯುವಕರು ಅದರಿಂದ ಪಾರಾಗಲು ಹುಡುಕಿಕೊಂಡ ದಾರಿ ಯಾವುದು ಗೊತ್ತಾ? ಯೋಗ, ಶ್ರಮದಾನ, ಭಾರತದ ಜೀವನಕ್ರಮ. ಅದೂ ಕರ್ನಾಟಕದ ಕರಾವಳಿಯ ಕೋಟೇಶ್ವರದಲ್ಲಿ.
ಮಾದಕ ವ್ಯಸನಕ್ಕೆ ತುತ್ತಾಗಿದ್ದವರು ನಾರ್ವೆ ದೇಶದ ಕಾರ್ಲೋಸ್, ಸಿವ್, ಲಾರ್ಸ್ ಆ್ಯಂಡ್ರೆ, ಫ್ರೆಡ್ಡಿ, ಹೆಲ್ಗೆ, ಒಲೆ, ರೆಬೆಕಾ, ಸ್ಟಿಗ್, ಮ್ಯಾಗ್ನೇಸ್, ಅಮೆರಿಕದ ಸ್ವೆನ್, ಸೌತ್ ಆಫ್ರಿಕಾದ ನೊಮ್ಝಿ ಹಾಗೂ ಮತ್ತಿಬ್ಬರು. ಕಳೆದೊಂದು ತಿಂಗಳಿನಿಂದ ಇವರು ಪಾಂಡೇಶ್ವರದ ಯೋಗ ಶಿಕ್ಷಕ ವಿಜಯಕುಮಾರ್ ಹಾಗೂ ನಾರ್ವೆಯ ಅಲೆಕ್ಸಾಂಡರ್ ಮಾರ್ಗದರ್ಶನದಲ್ಲಿ ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು. ವಾರದಲ್ಲಿ 5 ದಿನ ಯೋಗಾಭ್ಯಾಸ. ಜತೆಗೆ ಭಜನೆ, ಸಂಸ್ಕೃತಾಭ್ಯಾಸ.
ಯೋಗದ ಜತೆಜತೆಗೇ ಕರ್ಮಯೋಗ. ಅದರ ಅಂಗವಾಗಿಯೇ ಕೋಟೇಶ್ವರ ಸಮೀಪದ ಪಾಂಡೇಶ್ವರದ ಶಂಕರನಾರಾಯಣ ದೇವಸ್ಥಾನದ ಪೌಳಿ ಕೆರೆಯ ಹೂಳೆತ್ತಿದರು. ಕುಂದಾಪುರ ಸಮೀಪದ ಸಾಸ್ತಾನದಲ್ಲಿ ಬಸ್ ತಂಗುದಾಣವನ್ನು ಮತ್ತೆ ಕಟ್ಟಿದರು. ಗ್ರಾಮ ಕ್ಷೇಮ ಚಾರಿಟೇಬಲ್ ಟ್ರಸ್ಟ್ ಮೂಲಕ ಬಡವರಿಗೆ 2 ಮನೆಗಳನ್ನು ಸ್ವಂತ ಪರಿಶ್ರಮದಿಂದ ಕಟ್ಟಿಕೊಟ್ಟರು. ಬುಧವಾರ ಈ ಮನೆಗಳ ಹಸ್ತಾಂತರ.
ವಿಜಯಕುಮಾರ್ಗೆ ನಾರ್ವೆಯ ಯೋಗಗುರು ಅಲೆಕ್ಸಾಂಡರ್ ಪರಿಚಯವಾಗಿದ್ದು ಮೈಸೂರಲ್ಲಿ. ನಂತರ ಅವರಿಬ್ಬರು ಸ್ನೇಹಿತರಾಗಿ, ಅಲೆಕ್ಸಾಂಡರ್ ಮೂಲಕವೇ ವಿದೇಶಿ ಡ್ರಗ್ ವ್ಯಸನಿಗಳು ಪಾಂಡೇಶ್ವರಕ್ಕೆ ಬಂದರು. 'ಕಳೆದೊಂದು ತಿಂಗಳಿನಿಂದ ಯೋಗ ಶಿಬಿರದಲ್ಲಿ ಪಾಲ್ಗೊಂಡಿರುವ 13 ವಿದೇಶಿಯರು ಪಕ್ಕಾ ಭಾರತೀಯ ರೀತಿನೀತಿ ಅನುಸರಿಸುತ್ತಿದ್ದು ಸಸ್ಯಾಹಾರವನ್ನೇ ಬಳಸುತ್ತಿದ್ದಾರೆ. ಬಹುತೇಕ ಮಂದಿ ಮಾದಕ ವ್ಯಸನದಿಂದ ಮುಕ್ತರಾಗಿದ್ದಾರೆ. ಕರ್ಮಯೋಗದ ಭಾಗವಾಗಿ ದಾನ, ಧರ್ಮ, ಸಮಾಜಸೇವೆ, ಶ್ರಮದಾನದ ಮೂಲಕ ಮಾನಸಿಕ ಹಾಗೂ ನೈತಿಕ ಸ್ಥೈರ್ಯ ವೃದ್ಧಿಸಿಕೊಳ್ಳುತ್ತಿದ್ದಾರೆ' ಎನ್ನುತ್ತಾರೆ ಯೋಗ ಗುರು ವಿಜಯಕುಮಾರ್.
'ಬ್ಯಾಕ್ ಇನ್ ದ ರಿಂಗ್' ಯೋಜನೆಯ ಮೂಲಕ ಯೋಗ ಕಲಿಸಿ ಮಾದಕ ದ್ರವ್ಯ ವ್ಯಸನಕ್ಕೆ ಒಳಗಾದವರನ್ನು ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ. ಕರ್ಮ ಪ್ರಯೋಜನ ಪಡೆಯಲು ಶ್ರಮದಾನದ ಮೂಲಕ ಕೆರೆ ಶುದ್ಧೀಕರಣ, ಮನೆ ನಿರ್ಮಾಣ ಮಾಡಿದ್ದೇವೆ ಎಂದವರು ಅಲೆಕ್ಸಾಂಡರ್.
- ಚೈತ್ರಾ ಹೆರ್ಗ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.