ವೈಜ್ಞಾನಿಕತೆ ಅರ್ಥ ಮಾಡಿಕೊಳ್ಳೋಣ
ನಮ್ಮ ಪೂರ್ವಿಕರು ಮಾಡಿರುವ ಪ್ರತಿಯೊಂದು ಶಾಸ್ತ್ರ, ಸಂಪ್ರದಾಯಗಳಲ್ಲೂ ವೈಜ್ಞಾನಿಕ ಅಂಶಗಳು ಅಡಕವಾಗಿರುತ್ತದೆ. ಇಂತಹ ಅಂಶಗಳನ್ನು ಗ್ರಹಿಸಿ ಅವುಗಳನ್ನು ಸರಿಯಾದ ರೀತಿಯಲ್ಲಿ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಅವುಗಳ ಪ್ರಭಾವವು ಧನಾತ್ಮಕವಾಗಿರುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೇ ವಾಸ್ತುಶಾಸ್ತ್ರ. ನಮ್ಮ ಮನೆ ಹಾಗೂ ಕೆಲಸ ಮಾಡುವ ವಾತಾವರಣವು ಹಾಗೂ ಅಲ್ಲಿನ ವ್ಯವಸ್ಥೆಯು ನಮ್ಮ ದೈನಂದಿನ ಚಟುವಟಿಕೆಗಳಿಗೆ, ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರಬೇಕು ಎಂಬಹುದಷ್ಟೇ ವಾಸ್ತುಶಾಸ್ತ್ರದ ಮೂಲಾರ್ಥ. ಆದರೆ, ವಾಸ್ತುವಿನ ಅರ್ಥವನ್ನು ತಿಳಿಯದ ಬಹುತೇಕರು ಅಂಧ ರೀತಿಯಲ್ಲಿ ನಕಲಿ ವಾಸ್ತುತಜ್ಞರ ಹೊಟ್ಟೆ ತುಂಬಿಸುತ್ತಿದ್ದಾರೆ. ನಮಗೆ ಅನುಕೂಲಕರವಾದ ಆರೋಗ್ಯಕರವಾದ ವಾತಾವರಣವನ್ನು ನಿರ್ಮಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ. ಅದು ಯಾವುದೇ ವಾಸ್ತು ತಜ್ಞರ ಕೈಯಲಿಲ್ಲ. ವಾಸ್ತು ಶಾಸ್ತ್ರವನ್ನು ನಾವು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಇದೊಂದು ವೈಜ್ಞಾನಿಕ ವ್ಯವಸ್ಥೆ. ವಾಸ್ತು ಬೇಕು ಆದರೆ ಅಂಧ ನಂಬಿಕೆ ನಮಗೆ ಬೇಡ.
= ದಿವ್ಯಶ್ರೀ ವಿ. ಅರ್ಕಾಚಾರ್, ದಾವಣಗೆರೆ
ಅನಗತ್ಯ ಭಯ ಬಿಟ್ಹಾಕಿ
ವಾಸ್ತು ಬೇಕೇ, ಬೇಡವೇ ಎನ್ನುವುದಕ್ಕಿಂತ ಹಿಂದಿನವರು ಏತಕ್ಕಾಗಿ ವಾಸ್ತು ಶಾಸ್ತ್ರವನ್ನು ಉಪಯೋಗ ಮಾಡಿಕೊಂಡು ಮನೆ ಕಟ್ಟುತ್ತಿದ್ದರು ಎನ್ನುವುದು ಮುಖ್ಯ. ಮನೆಯೊಳಗೆ ಯಥೇಚ್ಚವಾಗಿ ಪ್ರಾಕೃತಿಕ ಗಾಳಿ ಬೆಳಕು ಬೀಳಲೆಂದು ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದೂ ಆಯಾ ದಿಕ್ಕಿನಲ್ಲಿ ಇರಬೇಕೆಂದು ತಿಳಿಸಿದ್ದಾರೆ. ಅದನ್ನು ಕೆಲವರು ತಪ್ಪಾಗಿ ಅರ್ಥೈಸಿಕೊಂಡು ವಾಸ್ತು ಪ್ರಕಾರವಾಗಿ ಮನೆ ಕಟ್ಟದಿದ್ದರೆ ಕೆಟ್ಟದಾಗುತ್ತದೆ ಎಂದು ಭಾವಿಸಿದ್ದಾರೆ. ಜನರ ಈ ಮೂಢ ನಂಬಿಕೆಯನ್ನು ಕೆಲವರು ಹಣ ಮಾಡಲು ಉಪಯೋಗಿಸುತ್ತಿದ್ದಾರೆ. ವಾಸ್ತು ಪ್ರಕಾರ ಮನೆ ಕಟ್ಟಿ ಎಷ್ಟು ಜನ ಸುಖವಾಗಿದ್ದಾರೆ ಅಥವಾ ವಾಸ್ತು ಪ್ರಕಾರ ಮನೆ ಕಟ್ಟದೆಯೇ ಸುಖವಾಗಿರುವ ಜನರಿಲ್ಲವೇ? ಪ್ರಕೃತಿ ನಮಗೆ ಗಾಳಿ, ಬೆಳಕು ಹಾಗೂ ನೀರಿನ ರೂಪದಲ್ಲಿ ಬಹಳ ದೊಡ್ಡ ಉಡುಗೊರೆ ಕೊಟ್ಟಿದೆ. ಯಾವ ರೀತಿಯಲ್ಲಾದರೂ ಸರಿ, ಅದನ್ನು ಸದ್ವಿನಿಯೋಗ ಮಾಡಿಕೊಂಡು ಮನೆ ಕಟ್ಟಿದರೆ ಆಯಿತು. ಅದು ವಾಸ್ತುವಿನ ಹೆಸರಲ್ಲಾದರೂ ಸರಿ ಅಥವಾ ಹಾಗೇ ಕಟ್ಟಿದರೂ ಸರಿ.
= ಲಾವಣ್ಯಗೌರಿ ವೆಂಕಟೇಶ್, ಬೆಂಗಳೂರು
ವಾಸ್ತು ದೋಷವಲ್ಲ, ವರ್ತನೆ ದೋಷ
ವಾಸ್ತು ಎಂಬುದು ಅಂಧಶ್ರದ್ಧೆಯ ಪರಮಾವಧಿ. ನಮ್ಮ ಆಚಾರ, ವಿಚಾರ, ನಡತೆ, ವ್ಯವಹಾರ ಕೇವಲ ನಮಗಷ್ಟೇ ಅನುಕೂಲ ಅಥವಾ ತೃಪ್ತಿ ತರದೇ ನಮ್ಮ ನೆರೆಹೊರೆಯವರಿಗೂ, ಕಿರಿಕಿರಿ ಆಗದಂತೆ ಇರಬೇಕು. ಆರೋಗ್ಯದಲ್ಲಿ, ಮಾಡುವ ವೃತ್ತಿಯಲ್ಲಿ, ಕೆಲಸ ಕಾರ್ಯಗಳಲ್ಲಿ ಬಾಧೆ ಉಂಟಾಗುತ್ತಿದೆ ಅಂದರೆ ಅದಕ್ಕೆ ವಾಸ್ತು ಕಾರಣವಲ್ಲ, ನಮ್ಮ ನಡತೆ ಅಥವಾ ವ್ಯವಹಾರ ಸರಿಯಾಗಿ ಇಲ್ಲ ಅಂತಲೇ ಅಂದುಕೊಳ್ಳಬೇಕು. ವಾಸ್ತುವಿನ ಹೆಸರಿನಲ್ಲಿ ಆಗುತ್ತಿರುವ ಅನಾಹುತಗಳನ್ನು ನೋಡಿದರೆ ಮನುಷ್ಯ ಇಷ್ಟೊಂದು ಮೂಢನಂಬಿಕೆಯ ತೆಕ್ಕೆಗೆ ಸಿಲುಕಿ ತನ್ನತನವನ್ನೇ ಕಳೆದುಕೊಳ್ಳುತ್ತಿದ್ದಾನೆ ಎಂದೂ ಅನಿಸದಿರದು. ಈಗೀಗ ಈ ಪಿಡುಗು ರಾಜಕಾರಣಿಗಳಿಗೂ ಹಬ್ಬಿಕೊಂಡಿದೆ. ಯಾವುದೋ ಜ್ಯೋತಿಷಿಯ ಮಾತು ಕೇಳಿ ಸುಸಜ್ಜಿತವಾಗಿ ನಿರ್ಮಿಸಿದ ವಿಧಾನಸೌಧದಂತಹ ಐತಿಹಾಸಿಕ ಕಟ್ಟಡದ ಗೋಡೆಯನ್ನೂ ಕೆಡವಿಸುವುದು, ಸುಂದರ ಮನೆಯ ನಕ್ಷೆಯನ್ನು ಬದಲಿಸುತ್ತಿರುವುದನ್ನು ನೋಡಿದರೆ ಮರುಕ ಹುಟ್ಟುತ್ತದೆ. ವಾಸ್ತುವಿನ ಹಿಂದೆ ಬಿದ್ದ ಅದೆಷ್ಟು ಮಂದಿ ಉದ್ಧಾರವಾಗಿದ್ದರೆ ಎಂಬುದನ್ನು ತಿಳಿದರೆ ನಗುವುದೋ ಅಳುವುದೋ ತಿಳಿಯದು.
= ಶಂಕರನಾರಾಯಣ್ ಭಟ್, ಹೊನ್ನಾವರ
'ಜಗುಲಿ'ಯಲ್ಲಿ ಈ ವಾರದ ವಿಷಯ 'ವಾಸ್ತು ಬೇಕೆ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: sadananda.maiya@gmail.com