ಸ್ವಾಮೀಜಿ ವ್ಯಕ್ತಿತ್ವದ ಸಂಚಲನ
ಸ್ವಾಮಿ ವಿವೇಕಾನಂದರ ವ್ಯಕ್ತಿತ್ವದ ಪ್ರಭಾವದಿಂದ ಅನೇಕರು ತಮಗರಿವಿಲ್ಲದೆ ಧರ್ಮಶ್ರದ್ಧೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು...
ಸ್ವಾಮಿ ವಿವೇಕಾನಂದರ ವ್ಯಕ್ತಿತ್ವದ ಪ್ರಭಾವದಿಂದ ಅನೇಕರು ತಮಗರಿವಿಲ್ಲದೆ ಧರ್ಮಶ್ರದ್ಧೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡರು. ಸ್ವಾಮೀಜಿಯೊಂದಿಗಿನ ಒಡನಾಟ, ಸಂಭಾಷಣೆಗಳಿಂದ ಆಧ್ಯಾತ್ಮ ಬದುಕಿಗೆ ಶರಣಾದವರು ಅನೇಕ. ಅಂಥವರಲ್ಲಿ ಬೆಳಗಾವಿಯ ಹರಿಪದ ಮಿತ್ರನೂ ಒಬ್ಬ. ಸ್ವಾಮೀಜಿ ಹರಿಪದನ ಮನೆಯಲ್ಲಿ ಅತಿಥಿಯಾಗಿದ್ದಾಗ ಅವರಿಂದ ತೀವ್ರ ಪ್ರಭಾವಕ್ಕೊಳಗಾದ.
ಸ್ವಾಮೀಜಿ ಪರಿವ್ರಾಜಕ ಜೀವನದ ದಿನಗಳಲ್ಲಿ ಹಣವನ್ನು ಮುಟ್ಟದೆ ಸನ್ಯಾಸಜೀವನದ ನಿಯಮಗಳನ್ನು ಕಟ್ಟುನಿಟ್ಟಾಗಿ ಪರಿಪಾಲಿಸುತ್ತಿದ್ದರು. ಇದನ್ನು ಗಮನಿಸಿದ ಹರಿಪದ ಕೇಳಿದ, 'ಸ್ವಾಮೀಜಿ, ತಮ್ಮಂತಹ ಪ್ರಚಂಡ ಇಚ್ಛಾಶಕ್ತಿಯುಳ್ಳವರಿಗೆ ಇಷ್ಟೊಂದು ನಿಯಮ ಪರಿಪಾಲನೆಯ ಅವಶ್ಯಕತೆಯೇನಿದೆ?' ಆಗ ಸ್ವಾಮೀಜಿ, 'ನೋಡಿಲ್ಲ, ಈ ಮನಸ್ಸು ಎನ್ನುವುದು ಹುಚ್ಚು ಸ್ವಭಾವದ್ದು. ಅದಕ್ಕೆ ಸುಮ್ಮನೆ ಒಂದು ಕಡೆ ಕುಳಿತಿರಲು ಸಾಧ್ಯವೇ ಇಲ್ಲ. ಸ್ವಲ್ಪ ಅವಕಾಶ ಸಿಕ್ಕರೂ ಸಾಕು, ಅದು ತಮ್ಮನ್ನು ಕೆಳಗೆಳೆಯುತ್ತದೆ. ಇಂತಹ ಮನಸ್ಸಿನ ಮೇಲೆ ಹಿಡಿತವನ್ನಿಟ್ಟುಕೊಳ್ಳಲು ಸನ್ಯಾಸಿಯಾದವನು ಸಹ ನಿಯಮ ಪರಿಪಾಲನೆ ಮಾಡಲೇಬೇಕು. ಎಲ್ಲರೂ ತಿಳಿದುಕೊಂಡಿರುತ್ತಾರೆ, ತಮಗೆ ತಮ್ಮ ಮನಸ್ಸಿನ ಮೇಲೆ ಸಂಪೂರ್ಣ ಹಿಡಿತವಿದೆ ಎಂದು. ಆದರೆ ನಿಜವಾಗಿಯೂ ನಮ್ಮ ನಮಸ್ಸಿನ ಮೇಲೆ ನಮಗೆ ಎಷ್ಟು ಹಿಡಿತವಿದೆ ಎಂಬುದು ಧ್ಯಾನ ಮಾಡಲು ಕುಳಿತುಕೊಂಡಾಗ ಗೊತ್ತಾಗುತ್ತದೆ. ಆದ್ದರಿಂದ ನಾವು ನಮ್ಮ ಮನಸ್ಸನ್ನು ಗೆದ್ದಿದ್ದೇವೆ ಎಂಬ ಭ್ರಮೆಯಿಂದ ಅದರ ಮೇಲಿನ ಹಿಡಿತವನ್ನು ಎಂದಿಗೂ ಸಡಿಲ ಮಾಡಬಾರದು.'
- ಆನಂದ ಎಸ್.ಎನ್.
anandsn193@gmail.com