ಸೂರ್ಯನೇ ಶ್ರೀರಕ್ಷೆ
ವಾಸ್ತು ಸರಿ ಇಲ್ಲ ಎಂದು ವಾಸ್ತುತಜ್ಞರು ಹೇಳಿದರೆಂದು ಸುಮಾರು 150 ವರ್ಷಗಳ ಭವ್ಯ ಇತಿಹಾಸವುಳ್ಳ ಮನೆಯನ್ನ ಕೆಡವಿ, ಸುತ್ತಲಿನ ಮರಗಳನ್ನು ಕಡಿದು, ಕಾಂಕ್ರೀಟ್ನ ಭವ್ಯ ಬಂಗಲೆಯನ್ನು ನಿರ್ಮಿಸಿ, ತಂಪನ್ನರಸುವ 'ನಾಗ'ನಿಗೂ ಬೆಚ್ಚಗಿನ ತಾರಸಿ ಗುಡಿಯೊಂದನ್ನು ನಿರ್ಮಿಸಿ ಸಂತಸದಲ್ಲಿ ಬದುಕು ಸಾಗಿಸುವೆವು ಎಂಬ ಭ್ರಮೆಯಲ್ಲಿದ್ದ ನಮ್ಮೂರ ಉದ್ಯಮಿಯೊಬ್ಬರು ಸಂಕಷ್ಟಗಳ ಸರಮಾಲೆಯನ್ನೇ ಎದುರಿಸುತ್ತಿರುವುದನ್ನು ಕಂಡಿದ್ದೇನೆ. ಇದೇ ಮನೆಯ ಹಂಚು, ಮರದ ದಿಮ್ಮಿಗಳು, ಕೆತ್ತನೆಯ ದಾರಂದಗಳು, ಕಿಟಕಿಗಳನ್ನು 'ಜುಜುಬಿ' ದರಕ್ಕೆ ಖರೀದಿಸಿ, ಸೊಗಸಾದ ಹೆಂಚಿನ ಎರಡು ಮನೆಗಳನ್ನು ನಿರ್ಮಿಸಿ, ಅಣ್ಣ ತಮ್ಮಂದಿರು ಸುಖವಾಗಿ ಇರುವುದನ್ನೂ ಕಾಣುತ್ತಿದ್ದೇನೆ. ಕಂದೀಲಿನ ದೀಪಗಳು ಮನೆಗಳನ್ನು ಬೆಳಗುತ್ತಿದ್ದ ಕಾಲದಲ್ಲೂ ನಮ್ಮ ಹಿರಿಯರು ಗಾಳಿ ಬೆಳಕು ಪ್ರವಹಿಸಲೆಂದು ವಿಶಾಲವಾದ ಹಜಾರ, ಕಿಟಕಿ ಬಾಗಿಲುಗಳನ್ನಿಟ್ಟು ಮನೆ ಬಾಗಿಲಲ್ಲೊಂದು ತುಳಸಿಗಿಡ ನೆಟ್ಟು ಪಕ್ಕದಲ್ಲೊಂದು ಬಾವಿಯನ್ನು ನಿರ್ಮಿಸಿದ್ದರು. ಯಾವತ್ತೂ ವಾಸ್ತುವಿನ ಬಗ್ಗೆ ತಲೆ ಕೆಡಿಸಿಕೊಂಡಿದ್ದೇ ಇಲ್ಲ! ಪ್ರತ್ಯಕ್ಷ ದೇವ 'ಸೂರ್ಯ'ನೇ ಅವರಿಗೆ ಶ್ರೀರಕ್ಷೆಯಾಗಿದ್ದ.
= ಲಕ್ಷ್ಮಣ ಶೆಟ್ಟಿ ಜಿ, ಗುರುಪುರ (ದ.ಕ.)
ವಿಧಾನಸೌಧದ ಗೋಡೆ ಒಡೆಯಬೇಕಾ?
ಗೌತಮ ಬುದ್ಧನ ಸಾವಿಲ್ಲದ ಮನೆಯ ಸಾಸಿವೆಯ ಕತೆ ನಮ್ಮೆಲ್ಲರಿಗೂ ತಿಳಿದಿದೆ. ಹೌದು, ವಾಸ್ತು ಬದ್ಧವಾಗಿ ನಿರ್ಮಾಣವಾದ ಕಟ್ಟಡವೊಂದರಲ್ಲಿ ವಾಸವಾಗಿದ್ದರೂ ರೋಗರುಜಿನ, ಸಾವು, ನೋವುಗಳಿಂದ ಪಾರಾಗಲು ಸಾಧ್ಯವಿಲ್ಲ. ಸುಖ-ದುಃಖ, ಸೋಲು- ಗೆಲುವು ನಾವು ವಾಸಿಸುವ ಕಟ್ಟಡದ ಸ್ವರೂಪ ಅವಲಂಬಿಸಿರುವುದಿಲ್ಲ. ಈಶ, ಅನ್ಜಿ, ನಿರುತಿ, ವಾಯು ಎಲ್ಲರಿಗೂ ಸಮಾಧಾನವಾಗುವಂತೆ ಕಟ್ಟಿದ ಮನೆಯಲ್ಲಿ ವಾಸವಿದ್ದರೂ ಮನಸ್ಸಿಗೆ ಸಮಾಧಾನವನ್ನು ಕಾಣದವರೆಷ್ಟೊ. ಇತ್ತೀಚೆಗೆ ವಾಸ್ತುವಿಗಾಗಿ ವಿಧಾನಸೌಧದ ಕೊಠಡಿಯೊಂದರ ಗೋಡೆಯನ್ನೇ ಒಡೆದು ಹಾಕುವ ಹಂತಕ್ಕೆ ತಲುಪಿರುವುದು ಮಾತ್ರ ಅಪಾಯಕಾರಿ. ಸಾರ್ವಜನಿಕರಿಗೆ ತೆರಿಗೆ ಹಣ, ಈ ರೀತಿ ಮೌಢ್ಯಗಳ ಆಚರಣೆಗೆ ಅಪವ್ಯಯವಾಗುತ್ತಿರುವುದು ದುರದೃಷ್ಟಕರ. ವೈಜ್ಞಾನಿಕ ಮನೋಭಾವನೆಯನ್ನೂ, ವೈಚಾರಿಕತೆಯನ್ನು ಬೆಳೆಸಿಕೊಳ್ಳುವುದು, ಸಂವಿಧಾನವು ನಿಗದಿಪಡಿಸಿರುವ ಪೌರರ ಭಾದ್ಯತೆಗಳಲ್ಲಿ ಒಂದಾಗಿದೆ ಎಂಬುದು ಜನನಾಯಕರಿಗೆ ತಿಳಿದಿರಲಿ.
= ಕವಿತಾ ಮೇಗೂರು, ಉಡುಪಿ
ವಾಸ್ತು ಬೇಕೇ ಬೇಕು
ವಾಸ್ತು ಎಂದರೆ ಮೂಢನಂಬಿಕೆ ಏನಲ್ಲ! ಅದಕ್ಕೆ ಭದ್ರವಾದ ವೈಜ್ಞಾನಿಕ ತಳಹದಿ ಇದೆ. ಪ್ರಾಚೀನ ಕಾಲದ ಹಿರಿತಲೆಗಳು ಕೂಡ ವಾಸ್ತುವಿನಂತೆ ಮನೆ ನಿರ್ಮಿಸಿದ್ದರು. ಇವೆಲ್ಲವೂ ಇತಿಹಾಸಪ್ರಸಿದ್ಧವಾಗಿವೆ. ಮನೆ ಒಂದೇ ವಾಸ್ತು ಪ್ರಕಾರವಿರುವುದಿಲ್ಲ. ನಮ್ಮ ಬದುಕಿನ ರೀತಿ ರಿವಾಜುಗಳೂ ಕೂಡಾ ವಾಸ್ತುವಿನಂತಿದ್ದರೆ ಚೆನ್ನ.
ವಾಸ್ತುವಿನಿಂದ ದೂರವಾದಾಗ ಅದರ ದುಷ್ಪರಿಣಾಮ ತನಗೆ ತಾನೇ ಗೊತ್ತಾಗುತ್ತದೆ. ಎಷ್ಟೇ ಆಧುನಿಕ ತಂತ್ರಜ್ಞಾನ ಬಂದರೂ, ವಾಸ್ತುವಿನಿಂದ ಅವು ಹೊರತಾಗಿಲ್ಲ. ಭೂಮಿಗೆ ನೈರುತ್ಯ ಮೂಲೆ ವಾಸ್ತುವಾಗಿದೆ. ಮನುಷ್ಯರಂತೆ ಪ್ರಾಣಿ, ಪಕ್ಷಿಗಳು ಕೂಡ ತಮಗೆ ತೊಂದರೆಯಾಗಬಾರದೆಂದು ಹಾಗೂ ತಮ್ಮಿಂದ ಬೇರೆಯವರಿಗೆ ತೊಂದರೆಯಾಗಬಾರದೆಂದು ವಾಸ್ತು ಪ್ರಕಾರವಾಗಿಯೇ ಮನೆ ಕಟ್ಟುತ್ತವೆ.
= ಆರತಿ ರಾಜೇಂದ್ರ ಹೆಗಡೆ, ಹಾವೇರಿ
---------------
'ಜಗುಲಿ'ಯಲ್ಲಿ ಈ ವಾರದ ವಿಷಯ 'ವಾಸ್ತು ಬೇಕೆ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು.
ನಮ್ಮ ವಿಳಾಸ:
ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com