ಸ್ವತಂತ್ರರಾಗುವ ಬಗೆ
ಪ್ರತಿಯೊಬ್ಬನಲ್ಲೂ ಅಧಿಕಾರದ ಹಂಬಲವಿರುತ್ತದೆ. ಸಾಮಾನ್ಯವಾಗಿ, ಇನ್ನೊಬ್ಬರನ್ನು ಆಳುವ, ಇನ್ನೊಬ್ಬರನ್ನು ಹೇಗಾದರೂ ತನ್ನ...
ಪ್ರತಿಯೊಬ್ಬನಲ್ಲೂ ಅಧಿಕಾರದ ಹಂಬಲವಿರುತ್ತದೆ. ಸಾಮಾನ್ಯವಾಗಿ, ಇನ್ನೊಬ್ಬರನ್ನು ಆಳುವ, ಇನ್ನೊಬ್ಬರನ್ನು ಹೇಗಾದರೂ ತನ್ನ ಅಧೀನದಲ್ಲಿಟ್ಟುಕೊಳ್ಳಲು ಪ್ರಯತ್ನಿಸುವುದರ ಮೂಲಕ ಅದು ವ್ಯಕ್ತವಾಗುತ್ತಿರುತ್ತದೆ. ಕಚೇರಿಯಲ್ಲಿ ಬಾಸ್ ತನ್ನ ಕೈಕೆಳಗಿನವರನ್ನು ಅಗತ್ಯವಿದ್ದೋ ಅಲ್ಲದೆಯೋ ನಿಯಂತ್ರಿಸುತ್ತಿರುತ್ತಾನೆ. ಮನೆಯಲ್ಲಿ, ದುಡಿಯುವ ಗಂಡಸು ತನ್ನ ಪತ್ನಿ, ಮಕ್ಕಳ ಮೇಲೆ ಹರಿಹಾಯುತ್ತಿರುತ್ತಾನೆ. ಬೀದಿಯಲ್ಲಿ ಇನ್ನೊಬ್ಬರ ಮುಂದೆ ಕೈಚಾಚಿ ಭಿಕ್ಷೆ ಬೇಡುವ ಭಿಕ್ಷುಕ ಕೂಡ, ಬೀದಿನಾಯಿಯ ಮೇಲೆ ಕಲ್ಲು ತೂರಿ ಎಗರಾಡಿ ತನ್ನ ದರ್ಪ ತೋರಿಸುತ್ತಾನೆ. ಇನ್ನು ದೊಡ್ಡ ದೊಡ್ಡ ವ್ಯಕ್ತಿಗಳ, ರಾಜಕಾರಣಿಗಳ, ಅಧಿಕಾರಿಗಳ ಪಾಡೇನು? ಇಲ್ಲೆಲ್ಲ, ಅಧಿಕಾರ ಚಲಾಯಿಸಬೇಕೋ ಬೇಡವೋ ಎಂಬ ಪ್ರಶ್ನೆಯೇ ಇಲ್ಲ. ಅಧಿಕಾರ ಚಲಾಯಿಸುವುದೇ ಮನುಷ್ಯನ ಗುಣ. ಅದನ್ನು ಮಾಡುವ ಮೂಲಕವೇ, ತಾನು ಬದುಕಿದ್ದೇನೆ ಎಂಬ ತೃಪ್ತಿಯನ್ನು ವ್ಯಕ್ತಿ ಹೊಂದುತ್ತಾನೆ.
ಆದರೆ, ಇನ್ನೊಬ್ಬರನ್ನು ಅಂಕುಶದಲ್ಲಿಡುವ ಮೂಲಕವೇ ತಾನೂ ಸ್ವಾತಂತ್ರ್ಯವನ್ನು ಕಳೆದುಕೊಂಡಿದ್ದೇನೆ ಎಂಬುದನ್ನು ಗುರುತಿಸದೆ ಹೋಗುತ್ತಾನೆ ಆತ. ಒಮ್ಮೆ ಇನ್ನೊಬ್ಬರನ್ನು ತುಳಿಯುವ ಪ್ರಕ್ರಿಯೆ ಶುರುವಾದರೆ ಸಾಕು, ಅದಕ್ಕೆ ಅಂತ್ಯವೇ ಇಲ್ಲ. ತುಳಿಸಿಕೊಂಡವನು ಕೂಡ, ತಾನು ತುಳಿಯಲು ಇನ್ನೊಬ್ಬರನ್ನು ಹುಡುಕುತ್ತಿರುತ್ತಾನೆ. ತುಳಿದು ತುದು ಅಭ್ಯಾಸವಾದವನು, ತುಳಿಯಲು ಯಾರೂ ಸಿಗದಿದ್ದರೆ ಚಡಪಡಿಸತೊಡಗುತ್ತಾನೆ. ತುಳಿಯುವ ಸ್ವಭಾವವೇ ಆತನನ್ನು ತುಳಿಯುತ್ತಿರುತ್ತದೆ. ಇನ್ನೊಬ್ಬರನ್ನು ಅಂಕುಶದಲ್ಲಿಡುವ ಸ್ವಭಾವವೇ ಆತನನ್ನೂ ತನ್ನ ಅಂಕುಶದಲ್ಲಿಟ್ಟಿರುತ್ತದೆ. ಇನ್ನೊಬ್ಬರ ಸ್ವಾತಂತ್ರ್ಯ ದಮನ ಮಾಡುವ ಮೂಲಕ ಆತ ಮಾನವತೆಗೇ ಅಪಚಾರ ಬಗೆಯುತ್ತಿರುತ್ತಾನೆ.
ಹಾಗಿದ್ದರೆ ಇದರಿಂದ ಬಿಡುಗಡೆಯ ದಾರಿ ಎಲ್ಲಿದೆ? ನಾವೂ ಸ್ವತಂತ್ರರಾಗುವುದು, ನಮ್ಮ ಅಧೀನದಲ್ಲಿರುವವರನ್ನೂ ಸ್ವತಂತ್ರರಾಗಿಸುವುದೊಂದೇ ಇದಕ್ಕೆ ದಾರಿ. ಧ್ಯಾನಕ್ಕೆ ಕುಳಿತಾಗ ನಮ್ಮ ಆಲೋಚನೆಗಳನ್ನೆಲ್ಲ ನಮ್ಮಿಂದ ಆಚೆಗೇ ಬಿಡುತ್ತೇವಲ್ಲವೇ? ಆಗ ನಾವು ಸ್ವತಂತ್ರರಾಗುತ್ತೇವಲ್ಲವೆ? ಹಾಗೇ ಇನ್ನೊಬ್ಬರನ್ನು ಸ್ವತಂತ್ರರಾಗಿಸುವುದೆಂದರೆ ನಾವೇ ಸ್ವತಂತ್ರರಾದಂತೆ.
- ಸಹನೆ