ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಇದ್ದಷ್ಟು ದಿನ ಖುಷಿಯಾಗಿರೋಣ!

Rashmi Kasaragodu
Updated On : 25 Sept 2013, 7:14 am

ಕೇವಲ ಹಣದ ಬಗ್ಗೆ ಯೋಚಿಸುವ ವ್ಯಕ್ತಿ ಕಾಗದದ ಮೇಲಿನ ಅಂಕಿ-ಅಂಶಗಳ ಕುರಿತಷ್ಟೇ ಯೋಚಿಸುತ್ತಿರುತ್ತಾನೆ. ಆದರೆ, ಕಾಗದ-ಪತ್ರಗಳನ್ನು ಅವಲಂಬಿಸುವುದನ್ನು ನಿಲ್ಲಿಸಿದಾಗ ಮನಸ್ಸು ತಾನಾಗಿಯೇ ನೆಮ್ಮದಿಯಿಂದ ಇರಬಹುದಾದ ಇತರ ದ್ವಾರದತ್ತ ಮುಖ ಮಾಡುತ್ತದೆ. ಭದ್ರತೆ ಅಥವಾ ಭಯದ ಬಗ್ಗೆ ಚಿಂತಿಸದೇ ಜೀವನದಲ್ಲಿ ಬೇರೆ ಮಾರ್ಗದ ಅಭಿವೃದ್ಧಿಯೆಡೆಗೆ ಗಮನ ಕೊಡುತ್ತದೆ.
ಈ ಲೋಕದಲ್ಲಿ ಯಾವುದೂ ಸುರಕ್ಷಿತವಾದುದಲ್ಲ ಎಂಬ ಸತ್ಯ ತಿಳಿದರೆ, ಭಯ ತಾನಾಗಿಯೇ ನಮ್ಮಿಂದ ದೂರವಾಗುತ್ತದೆ. ನಮ್ಮ ಭವಿಷ್ಯಕ್ಕಾಗಿ ಕೂಡಿಸಿ ಇಡಲೇಬಾರದು ಎಂದೇನೂ ಅಲ್ಲ. ಆದರೆ, ಏನು, ಎಷ್ಟು ಎಂಬುದರ ನಿರ್ಣಯ ಹೇಗೆ? ನಾವು ನಮ್ಮ ಕಳೆದುಹೋದ ದಿನಗಳ ಅನುಭವ ಮತ್ತು ಮಂದಿನ ದಿನಗಳ ನಿರೀಕ್ಷೆಯಲ್ಲಿ ಕೂಡಿಸಿಡುತ್ತೇವೆ. ಆದರೆ, ಎಷ್ಟೇ ಅನುಭವವಿದ್ದರೂ ಭವಿಷ್ಯವೆಂಬುದು ಅನಿಶ್ಚಿತವಾದದ್ದು, ಊಹೆಗೆ ನಿಲುಕದ್ದು. ಖಚಿತವಲ್ಲದ ಭವಿಷ್ಯವನ್ನು ಬಲಪಡಿಸುವುದಕ್ಕೋಸ್ಕರ ವರ್ತಮಾನದ ನೆಮ್ಮದಿಯನ್ನು ಬಲಿಗೊಡುವುದರಲ್ಲಿ ಏನು ಅರ್ಥ? ಅದೊಂದು ರೀತಿಯ ವಿಮೆ ಇದ್ದಂತೆ. ಶ್ರೀಮಂತರಾಗಿ ಸಾಯಬೇಕೆಂದು ಬದುಕಿರುವಾಗ ವ್ಯವಸ್ಥೆ ಮಾಡಿಕೊಂಡಂತೆ. ಭವಿಷ್ಯದ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಚಿಂತಿಸದೆ ಜೀವನವನ್ನು ಬಂದಂತೆ ಸ್ವೀಕರಿಸುವುದೇ ಭಯ ನಿವಾರಣೆಯ ಸುಲಭ ವಿಧಾನ.
ಕೆಲವರು ಸ್ಪರ್ಧಾತ್ಮಕ ಮನೋಭಾವದಿಂದ ಅಥವಾ ತಮ್ಮನ್ನು ಇನ್ನೊಬ್ಬರೊಂದಿಗೆ ತುಲನೆ ಮಾಡಿಕೊಳ್ಳುವುದಕ್ಕೋಸ್ಕರ ಕಷ್ಟಪಟ್ಟು ದುಡಿಯುತ್ತಾರೆ. ಅವರಿಗೆ ಯಾವುದೇ ರೀತಿಯ ಭಯವಾಗಲೀ ಅಥವಾ ಹೆದರಿಕೆಯಾಗಲೀ ಇರುವುದಿಲ್ಲ. ತಮ್ಮ ನೆರೆಹೊರೆಯವರಿಗಿಂತಲೋ, ತಾವು ಬದುಕಿದ ಸಮಾಜದ ಇತರರಿಗಿಂತಲೋ ತಾವು ಧನವಂತರಾಗಿದ್ದೇವೆಂದು ಹಿಗ್ಗುತ್ತಾರೆ. ಆದರೆ ಕಾರು, ಮನೆ, ಟಿವಿ, ಫ್ರಿಜ್, ಇಂಟರ್ನೆಟ್, ಕಂಪ್ಯೂಟರ್ ಇತ್ಯಾದಿ ನಮ್ಮ ಬಳಿ ಇದೆಯಾದರೆ ಅದು ಇನ್ನೂ ಹಲವರ ಬಳಿ ಇದೆ. ನಮ್ಮ ಪರಿಸರದಲ್ಲಿ ನಾವೇ ಮಿಗಿಲಾದರೂ ಜಗತ್ತಿನ ಯಾವ ಮೂಲೆಯಲ್ಲಾದರೂ ತುಲನೆಯಲ್ಲಿ ನಮಗಿಂತ ಶ್ರೀಮಂತರು ಇದ್ದೇ ಇರುತ್ತಾರೆ. ಕೇವಲ ಹೊಟ್ಟೆಕಿಚ್ಚಿನ ಅಥವಾ ತುಲನೆಯ ದೋಣಿ ಹತ್ತಿದರೆ ಅದು ಯಾವ ದಡವನ್ನೂ ಸೇರುವುದಿಲ್ಲ. ಇನ್ನೊಬ್ಬರೊಂದಿಗೆ ನಮ್ಮನ್ನು ತುಲನೆ ಮಾಡುವುದಕ್ಕೋಸ್ಕರ ದುಡಿಯುವುದಾದರೆ ಅದು ಕೊನೆ ಕಾಣದ ಪಯಣವಾಗುತ್ತದೆ.
ನಿಜವಾಗಿ ನೋಡಿದರೆ, ಬಹುತೇಕ ಜನರು ಜಗತ್ತಿನ ಅತಿ ದೊಡ್ಡ ಶ್ರೀಮಂತರು ಎಂದು ಎನಿಸಿಕೊಂಡವರೊಂದಿಗೆ, ಭಾಗ್ಯವಂತರು ಎಂದು ಎನಿಸಿಕೊಂಡವರೊಂದಿಗೆ ಅಥವಾ ಬುದ್ಧಿವಂತರು ಎಂದು ಎನಿಸಿಕೊಂಡವರೊಂದಿಗೆ ತಮ್ಮ ತುಲನೆ ಮಾಡಿಕೊಳ್ಳುವುದಿಲ್ಲ. ಅವರೊಂದಿಗೆ ಸ್ಪರ್ಧೆಗಿಳಿಯುವುದಾಗಲಿ, ಹೊಟ್ಟೆಕಿಚ್ಚು ಪಡುವುದಾಗಲಿ ಮಾಡುವುದಿಲ್ಲ. ಯಾಕೆಂದರೆ ಹಾಗೆ ಮಾಡುವುದರಿಂದ ಅವರಿಗೆ ತಮ್ಮ ಸಾಮಥ್ರ್ಯದ ಅರಿವಾಗುತ್ತದೆ. ನಮ್ಮ ಸಾಮರ್ಥ್ಯ ಕಡಿಮೆ ಎಂದು ಅರಿವಾದಾಗ ನಾವು ಬಹುಬೇಗ ನಿತ್ರಾಣರಾಗುತ್ತೇವೆ, ಹೆದರುತ್ತೇವೆ. ಆದ್ದರಿಂದ ನಮ್ಮ ಅಕ್ಕಪಕ್ಕದವರೊಂದಿಗೆ, ನಮ್ಮ ಪರಿಚಯದವರೊಂದಿಗೆ ನಮ್ಮನ್ನು ತುಲನೆ ಮಾಡಿಕೊಳ್ಳುವ ಸುಲಭ ಮಾರ್ಗವನ್ನು ಹುಡುಕಿಕೊಂಡಿದ್ದೇವೆ. ಆದರೆ ಈ ಜಗತ್ತಿನಲ್ಲಿ ಪ್ರತಿಯೊಬ್ಬನಲ್ಲಿಯೂ ಒಂದು ವಿಶೇಷತೆ ಇರುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡರೆ ಒಳಿತು.

(ಮುಂದುವರಿಯುವುದು)

- ಕಿರಣ್ ಉಪಾಧ್ಯಾಯ
keyrun1970@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement