ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ನಾಗರಿಕತೆಯ ಅಡಿಪಾಯ

ಮಾನವ ನಾಗರಿಕತೆಯ ಒಂದೊಂದೇ ಮೆಟ್ಟಿಲನ್ನು ಏರಿದಂತೆಲ್ಲಾ ವಾಸ್ತುವೂ ಅವನ ಬೆನ್ನ ಹಿಂದೆಯೇ ಜನ್ಮ ತಾಳಿತು. ಮಾನವನ ನಾಗರಿಕತೆ...

Rashmi Kasaragodu
Updated On : 27 Sept 2013, 2:59 am

ಮಾನವ ನಾಗರಿಕತೆಯ ಒಂದೊಂದೇ ಮೆಟ್ಟಿಲನ್ನು ಏರಿದಂತೆಲ್ಲಾ ವಾಸ್ತುವೂ ಅವನ ಬೆನ್ನ ಹಿಂದೆಯೇ ಜನ್ಮ ತಾಳಿತು. ಮಾನವನ ನಾಗರಿಕತೆ ಗುಹೆ, ಗುಡಿಸಲುಗಳಿಂದ ಆರಂಭವಾಯಿತು. ಸೂರ್ಯ, ಭೂಮಿ ಇವೆರಡೂ ವಾಸ್ತುಶಾಸ್ತ್ರಕ್ಕೆ ಮೂಲಾಧಾರ. ಇವೆರಡೂ ಎಲ್ಲಾ ದೇಶಗಳಿಗೂ, ಎಲ್ಲಾ ಧರ್ಮೀಯರಿಗೂ ಒಂದೇ ಆಗಿರುವುದರಿಂದ ವಾಸ್ತುಶಾಸ್ತ್ರ ವಿಶ್ವದೆಲ್ಲೆಡೆ ಹರಡಿದಂತಾಯಿತು. ಸಿಂಧು, ಚೀನಾ ಹಾಗೂ ಈಜಿಪ್ಟ್ ನಾಗರಿಕತೆಗಳಲ್ಲಿ ವಾಸ್ತುವಿನ ನೆರಳಿದೆ. ವೇದಗಳಷ್ಟೇ ಪ್ರಾಚೀನವಾದ ಭಾರತೀಯ ಆಗಮ ಶಾಸ್ತ್ರಗಳಲ್ಲಿ ಆಲಯ, ಅರಮನೆಗಳನ್ನು ವಾಸ್ತು ಅನುಗುಣವಾಗಿ ನಿರ್ಮಿಸಬೇಕೆಂಬ ಉಲ್ಲೇಖವಿದೆ. ಮಹಾಭಾರತದಲ್ಲೂ ವಾಸ್ತು ಬಗ್ಗೆ ಹೇರಳವಾದ ಮಾಹಿತಿ ಲಭ್ಯವಿದೆ. ವರಾಹಮಿಹಿರನ 'ಬೃಹತ್ಸಂಹಿತೆ'ಯಲ್ಲಿ ವಾಸ್ತು ಉಲ್ಲೇಖವಿದೆ. ಹೀಗಿರುವಾಗ ವಾಸ್ತು ಶಾಸ್ತ್ರವು ಬೇಕೆನ್ನುವುದರಲ್ಲಿ ತಪ್ಪೇನು?
-ಅರಳಕುಪ್ಪೆ ಶ್ರೀನಿವಾಸ್

ಇರುವ ಮನೆ ಕೆಡವಿದರೆ?
ಇರುವ ಜಾಗದಲ್ಲಿ ಸುತ್ತಮುತ್ತ ತುಸು ಜಾಗ ಬಿಟ್ಟು, ಅಕ್ಕಪಕ್ಕದವರಿಗೆ ತೊಂದರೆಯಾಗದಂತೆ ಮನೆ ಕಟ್ಟುವುದೇ ವಾಸ್ತು. ಗಾಳಿ ಬೆಳಕಿನ ತೊಂದರೆಯಾಗದಂತೆ, ಪರಿಸರಕ್ಕೂ ಹಾನಿಯಾಗದಂತೆ, ಮನೆ ನಿರ್ಮಿಸುವುದೇ ವಾಸ್ತು. ಶಾಸ್ತ್ರದ ಹೆಸರಿನಲ್ಲಿ 'ಇರುವ ಮನೆ'ಯ ಗೋಡೆ ಕೆಡವಿ, ಬಚ್ಚಲಿನ ಜಾಗದಲ್ಲಿ ಅಡುಗೆ ಮನೆ ತಂದು ಕೈ ಸುಟ್ಟುಕೊಂಡರೆ ಅದು ವಾಸ್ತುವಲ್ಲ, ಬೇಸ್ತು ಆಗುತ್ತದೆ.
- ಪಿ.ಜೆ. ರಾಘವೇಂದ್ರ, ಮೈಸೂರು

ವಿಮರ್ಶೆಯೇ ವಾಸ್ತು
ಇಂದು ನಾವು ಪ್ರತಿಯೊಂದಕ್ಕೂ ವಾಸ್ತು ದೋಷದ ಕಾರಣ ಹುಡುಕುತ್ತಿದ್ದೇವೆ. ಮನೆ ನಿರ್ಮಾಣದ ಖರ್ಚಿಗಿಂತ ವಾಸ್ತು ತಜ್ಞರಿಗೇ ಹೆಚ್ಚು ವ್ಯಯಿಸುತ್ತಿದ್ದೇವೆ. ಸಾಮಾನ್ಯರಿಂದ ಹಿಡಿದು ರಾಜ್ಯದ ಮುಖಂಡನವರೆಗೂ ಈ ವಾಸ್ತುವಿನ ಭೂತ ಬಿಟ್ಟಿಲ್ಲ. ನಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಮಾಡಿದ ಕೆಲಸದಲ್ಲಿ ತಪ್ಪಾಗಿದ್ದರೆ ಅದರ ವಿಮರ್ಶೆ ಮಾಡಿಕೊಳ್ಳಬೇಕು. ಮನೆಯಲ್ಲಿ ಎಲ್ಲಾ ಸದಸ್ಯರು ಪರಸ್ಪರ ಅರ್ಥಮಾಡಿಕೊಂಡರೆ ಯಾವ ಕಿರಿಕಿರಿ, ಜಗಳಗಳೂ ಆಗವು. ವಾಸ್ತುವಿನಿಂದ ಕೆಲವರಿಗೆ ಒಳ್ಳೆಯದಾಗಬಹುದು. ಕೆಲವರಿಗೆ ಕೆಟ್ಟದಾಗಬಹುದು. ಇದರ ಅರ್ಥ ಒಳ್ಳೆಯದು, ಕೆಟ್ಟದು ಎನ್ನುವುದು ಅವರವರ ಮಾನಸಿಕ ಸ್ಥಿತಿಯೇ ಹೊರತು ವಾಸ್ತು ಅಲ್ಲ. ಆದರೆ, ಮನೆಯನ್ನು ಸೂಕ್ತ ರೀತಿಯಲ್ಲಿ ಗಾಳಿ, ಬೆಳಕು, ಸೂರ್ಯನ ಕಿರಣಗಳು ಒಳ ಪ್ರವೇಶಿಸುವಂತೆ ವಾತಾನುಕೂಲವಾಗಿ ಕಟ್ಟಿಸಬೇಕು. ಇದೇ ವೈಜ್ಞಾನಿಕ ವಾಸ್ತು.
- ಅಂಬಮ್ಮ ಪ್ರತಾಪಸಿಂಗ್, ಮಾನ್ವಿ

ಆತ್ಮವಿಶ್ವಾಸವನ್ನು ನಂಬಿ...
ಈ ವಾಸ್ತು ಎನ್ನುವುದು ಅದನ್ನು ನಂಬುವವರಿಗೆ ಮಾತ್ರ. ನಂಬದವರಿಗೆ ಬೇಡ. ನಮಗೇನಾದರೂ ತೊಂದರೆಯುಂಟಾದಾಗ ವಾಸ್ತು ಸರಿಯಿಲ್ಲದಿರುವುದೇ ಕಾರಣ ಎಂದು ಹಲವರು ಸಲಹೆ ನೀಡುತ್ತಾರೆ. ನಂಬುವವರು ನಂಬಲಿ. ಆದರೆ, ವಾಸ್ತುವನ್ನು ನಂಬುವುದಕ್ಕಿಂತ ಹೆಚ್ಚಾಗಿ ತಮ್ಮ ಆತ್ಮವಿಶ್ವಾಸವನ್ನು ನಂಬಬೇಕು. ಮನೆ, ಕಟ್ಟಡದ ವಾಸ್ತುವಿಗಿಂತ ಮನಸ್ಸು ಚೊಕ್ಕವಾಗಿರಬೇಕು, ನಿರ್ಮಲವಾಗಿರಬೇಕು. ಸಾಧಿಸುವ ಛಲವೊಂದಿದ್ದರೆ, ಅಸಾಧ್ಯವಾದದ್ದು ಯಾವುದೂ ಇಲ್ಲ. ಆದ್ದರಿಂದ 'ವಾಸ್ತು'ವಿನ ಮೇಲೆ ನಂಬಿಕೆಯಿರಲಿ, ಆದರೆ ಅದು ಮೂಢನಂಬಿಕೆ ಆಗದಿರಲಿ.
-ಅಮೃತಾ, ಕುಂದಾಪುರ

'ಜಗುಲಿ'ಯಲ್ಲಿ ಈ ವಾರದ ವಿಷಯ 'ವಾಸ್ತು ಬೇಕೆ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು.
ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement