ಒಂದು ಮೌನ ಯಾನ
ಮಾತೊಳಗೆ ಹೂತು ಹೋದವರು ನಾವು. ಒಂದು ಕ್ಷಣ ಮೌನ ವಹಿಸುತ್ತೇವೆಯೆಂದರೂ ಸುತ್ತಲಿನ ವಾತಾವರಣ ಬಿಡದು. ಉತ್ತರಿಸು ಎನ್ನುತ್ತದೆ. ಏನಾದರೂ ಹರಟು ಅಂತ ...
ಮಾತೊಳಗೆ ಹೂತು ಹೋದವರು ನಾವು. ಒಂದು ಕ್ಷಣ ಮೌನ ವಹಿಸುತ್ತೇವೆಯೆಂದರೂ ಸುತ್ತಲಿನ ವಾತಾವರಣ ಬಿಡದು. ಉತ್ತರಿಸು ಎನ್ನುತ್ತದೆ. ಏನಾದರೂ ಹರಟು ಅಂತ ಕಾಲೆಳೆಯುತ್ತದೆ. ಇಲ್ಲವಾದರೆ ನಿನಗೆ ಬೆಲೆ ಇಲ್ಲ ಎಂದು ದಿಗಿಲು ಹುಟ್ಟಿಸುತ್ತದೆ. 'ಆಗ ನಿನ್ನ ಬಾಯಿಗೇನಾಗಿತ್ತು?' ಎಂದ ಗದರಿಸಿ ಕೇಳುತ್ತದೆ. ಈ ಎಲ್ಲ ಕೇಳುವಿಕೆಗಾದರೂ ನಾವು ಮಾತಾಡಲೇಬೇಕೆಂಬ ಸನ್ನಿವೇಶ ಸೃಷ್ಟಿಯಾಗುತ್ತದೆ. ನಮ್ಮೊಳಗಿನ ಮೌನವನ್ನು ಅನೇಕ ಸಲ ನಾವೇನು ಒದ್ದೋಡಿಸುವುದಿಲ್ಲ. ಆದರೆ, ಇನ್ನೊಬ್ಬರಿಗೆ ನಮ್ಮ ಮೌನ ಅದೇನೋ ಕಿರಿಕಿರಿ. ಬೇಸರದ ವಸ್ತು. ಅರ್ಥಹೀನ ಸಂಗತಿ. ನಮ್ಮ ಮೌನ ಯಾರಿಗೇನೂ ಲಾಭ ತಂದುಕೊಡದು. ಆದರೆ, ನಮಗಾಗುವ ಲಾಭ ಆ ವ್ಯಕ್ತಿಗಳಿಗೆ ಗೊತ್ತಾಗದು. ಅವರಿಗೆ ತಿಳಿಯುವ ಹೊತ್ತಿಗೆ ನಾವು ಮಾತಾಡುತ್ತಿರುತ್ತೇವೆ.
ಮೌನ ಚಿಂತನೆಗಳ ಬುಗ್ಗೆ. ನಮ್ಮನ್ನು ನಾವು ಪರಿಷ್ಕರಣೆಗೊಳಿಸಿಕೊಳ್ಳಲು, ಶುದ್ಧಗೊಳಿಸಿಕೊಳ್ಳಲು, ಆಳಗೊಳಿಸಿಕೊಳ್ಳಲು ಇರುವ ಏಕೈಕ ಮಂತ್ರ. ಮೌನವೆಂದರೆ ಮೆದುಳಿಗೆ ಕೊಡುವ ವಿಶ್ರಾಂತಿ ಏನಲ್ಲ. ಮಾತಿನಂತೆಅದೂ ಒಂದು ಸ್ಥಿತಿ. ಮಾತುಗಳಿಂದ ಇಂದು ದುಡ್ಡಿನ ದೊಡ್ಡಿಯೇ ಹುಟ್ಟುತ್ತದೆ. ಆದರೆ, ಮೌನದಿಂದ ವಿಚಾರಗಳ ದೊಡ್ಡಿ ಹುಟ್ಟಿಸಬಹುದು. ಮೌನ ಅಪರೂಪದ ಆಭರಣ. ಅದರ ಸೌಂದರ್ಯ ಇನ್ನೊಬ್ಬರಿಗೆ ಕೂಡಲೇ ತಿಳಿಯದು. ನಮ್ಮ ತನದ ಸೌಂದರ್ಯಕ್ಕೆ ಅದರ ಅಲಂಕಾರ ಬೇಕೇಬೇಕು. ಭೋರ್ಗರೆಯುವ ಮಾತಿನ ಚಿತ್ರಗಳ ನಡುವೆ ಒಂದು ಮೂಕಿಚಿತ್ರ ನೋಡಿದಾಗ ಆಗುವ ಅನುಭವಕ್ಕೆ ಬೆಲೆ ಕಟ್ಟಲಾದೀತೆ? ಮಾತು ಅಗತ್ಯಕ್ಕಷ್ಟೇ ಬಳಸುವ ವಸ್ತುವಾದಾಗ ಮೌನಕ್ಕೊಂದು ಗೌರವ ಸಿಗುತ್ತದೆ. ಇನ್ನೊಬ್ಬರ ಮೌನವನ್ನು ಧ್ವಂಸಗೊಳಿಸುವುದಕ್ಕಿಂತ ಅದರ ಸೌಂದರ್ಯವನ್ನು ಮನಸಾರೆ ಅನುಭವಿಸಿ. ಇದೂ ಒಂದು ಸಂವಹನ. ಕಾಯ ಕಾಣದೆಯೂ ಇನ್ನೊಂದು ಆತ್ಮವನ್ನು ಪ್ರವೇಶಿಸುವುದು ದೊಡ್ಡ ಕೆಲಸವೇನಲ್ಲ. ಪ್ರಯತ್ನಿಸಿ.
- ಸಹನೆ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.