ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಯೋಗರ್ಟ್ ಎಂಬ ಸುರಕ್ಷಿತ ಆಹಾರ!

ಯೋಗರ್ಟ್ ಈಗೀಗ ನಮ್ಮಲ್ಲೂ ಜನಪ್ರಿಯವಾಗುತ್ತಿದೆ. ಹಾಗೆ ನೋಡಿದರೆ ಅದನ್ನೂ ಮೊಸರು ಎಂದು ಕರೆದರೆ ತಪ್ಪೇನಲ್ಲ. ಏಕೆಂದರೆ ನಮ್ಮ ಗಟ್ಟಿ ಮೊಸರಿಗೂ...

Rashmi Kasaragodu
Updated On : 30 Sept 2013, 12:13 pm

ಯೋಗರ್ಟ್ ಈಗೀಗ ನಮ್ಮಲ್ಲೂ ಜನಪ್ರಿಯವಾಗುತ್ತಿದೆ. ಹಾಗೆ ನೋಡಿದರೆ ಅದನ್ನೂ ಮೊಸರು ಎಂದು ಕರೆದರೆ ತಪ್ಪೇನಲ್ಲ. ಏಕೆಂದರೆ ನಮ್ಮ ಗಟ್ಟಿ ಮೊಸರಿಗೂ, ಯೋಗರ್ಟ್‌ಗೂ ಅಂಥ ವ್ಯತ್ಯಾಸ ತಿಳಿಯದು. ಮೊಸರಿಗೆ ಪರ್ಯಾಯವಾಗಿಯೂ ಅದನ್ನು ಬಳಸಬಹುದು. ಯೋಗರ್ಟ್ ಮಾಡುವ ವಿಧಾನವೂ ಮೊಸರು ಹೆಪ್ಪು ಹಾಕಿದಂತೆಯೇ. ನಿರ್ದಿಷ್ಟ ಉಷ್ಣತೆಯಲ್ಲಿ ಹಾಲನ್ನು ಕಾಯಿಸುತ್ತಾರೆ. ನಿರ್ದಿಷ್ಟ ಉಷ್ಣತೆಯಲ್ಲಿಯೇ ಅದು ಹೆಪ್ಪುಗಟ್ಟುವಂತೆ ಮಾಡುತ್ತಾರೆ. ಆದ್ದರಿಂದಲೇ ಅದು ಗಟ್ಟಿಯಾಗಿರುತ್ತದೆ. ಆದರೆ ರುಚಿ ಮಾತ್ರ ಮೊಸರಿನದೇ. ಹುಳಿ ಅಂಶ ಇರುವುದಿಲ್ಲ ಅಷ್ಟೆ. ಹಾಲು ಕಾಯಿಸುವುದರಿಂದ ಹಿಡಿದು ಎಲ್ಲವೂ ನಿರ್ದಿಷ್ಟ ತಾಪಮಾನದಲ್ಲಿಯೇ ನಡೆಯುವುದರಿಂದ ಹುಳಿ ಅಂಶ ಮರೆಯಾಗುತ್ತದೆ. ಬ್ರಾಂಡೆಡ್ ಹಾಲು, ಮೊಸರುಗಳು ಇರುವಂತೆ ಈಗೀಗ ಬ್ರಾಂಡೆಡ್ ಯೋಗರ್ಟ್‌ಗಳೂ ಸಿಗುತ್ತಿವೆ. ಅದನ್ನು ಕೊಳ್ಳಲು ಡಿಪಾರ್ಟ್‌ಮೆಂಟಲ್ ಸ್ಟೋರ್ ಅಥವಾ ಮಾಲ್‌ಗಳಿಗೇ ಹೋಗಬೇಕಿಲ್ಲ. ಪ್ರಮುಖ ನಗರಗಳಲ್ಲಿ ಬೀದಿಯಲ್ಲಿನ ಬೇಕರಿಗಳಲ್ಲೂ ಯೋಗರ್ಟ್ ಸುಲಭವಾಗಿ ಸಿಗುತ್ತಿದೆ.
ಯೋಗರ್ಟ್ ಬಗ್ಗೆ ಇಷ್ಟೆಲ್ಲ ಏಕೆ ಹೇಳಬೇಕಾಯಿತು ಎಂದರೆ ಅತಿಸಾರದಿಂದ ಬಳಲುತ್ತಿರುವವರಿಗೆ ಅದು ಅತ್ಯಂತ ಸುರಕ್ಷಿತ ಆಹಾರ. ಅತಿಸಾರ ಬರದಂತೆ ನೋಡಿಕೊಳ್ಳಲು ಕೂಡ ಇದು ಸುಲಭ ಮತ್ತು ಅತ್ಯುತ್ತಮ ಪರಿಹಾರ. ಇದರಲ್ಲಿ ಅತಿಸಾರ ಉಂಟುಮಾಡುವ ಇ- ಕೋಲಿಯಂತಹ ಬ್ಯಾಕ್ಟೀರಿಯಾಗಳಾಗಲೀ, ಸಣ್ಣಪುಟ್ಟ ಕ್ರಿಮಿಗಳಾಗಲೀ ಹೆಚ್ಚು ಕಾಲ ಬೂದುಕಿರಲಾರವು. ಮಿನ್ನೆಸೊಟಾ ವಿಶ್ವವಿದ್ಯಾಲಯದ ಡಾ.ಡೆನ್ನಿಸ್ ಸವಾಯನೊ ಮತ್ತು ಮೈಖೆಲ್ ಲೆವಿಟ್ ಅವರು ಪ್ರಯೋಗದ ಮೂಲಕ ಈ ಸತ್ಯವನ್ನು ಕಂಡುಕೊಂಡದ್ದು ಮಾತ್ರವಲ್ಲದೆ, ಜಗತ್ತಿಗೂ ಪ್ರಚುರಪಡಿಸಿದರು. ಅವರು ಯೋಗರ್ಟ್‌ನಲ್ಲಿ ಇ-ಕೋಲಿ ಮತ್ತು ಅತಿಸಾರ ಹರಡುವ ಕೆಲವು ಬ್ಯಾಕ್ಟೀರಿಯಾಗಳು, ಕ್ರಿಮಿಗಳನ್ನು ಹಾಕಿಟ್ಟರು. ಅವುಗಳಲ್ಲಿ ಬಹುತೇಕ ಅಸುನೀಗಿದರೆ, ಉಳಿದ ಕೆಲವು ತಮ್ಮ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವಲ್ಲಿ ವಿಫಲವಾದವು. ಇಂಥವೇ ಬ್ಯಾಕ್ಟೀರಿಯಾಗಳನ್ನು ಹಾಲು ಮತ್ತು ಕೆಲವು ಕ್ಷೀರೋತ್ಪನ್ನಗಳಲ್ಲಿ ಇಟ್ಟಾಗ ಕ್ಷಿಪ್ರಗತಿಯಲ್ಲಿ ತಮ್ಮ ಸಂಖ್ಯೆಯನ್ನು ದ್ವಿಗುಣಪಡಿಸಿಕೊಂಡವು. ಅತಿಸಾರಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಗುಣ ಇರುವುದರಿಂದಲೇ ಯೋಗರ್ಟ್ ಅನ್ನು ಸುರಕ್ಷಿತ ಆಹಾರ ಎಂದು ಪರಿಗಣಿಸಲಾಗುತ್ತದೆ. ಕೆಲವು ಪಾಶ್ಟಾತ್ಯ ರಾಷ್ಟ್ರಗಳಲ್ಲಿ ಯೋಗರ್ಟ್ ಪ್ರಮುಖ ಆಹಾರ ಆಗಿರುವುದಕ್ಕೂ ಈ ಸಂಗತಿಯೇ ಕಾರಣ ಆಗಿರಬಹುದು; ಅಲ್ಲಿನ ಜನ ತಮ್ಮ ಅನುಭವದ ಮೂಲಕ ಯೋಗರ್ಟ್ ಮಹತ್ವವನ್ನು ಅರಿತುಕೊಂಡಿರಬಹುದು ಎನ್ನುವುದು ಆಹಾರ ತಜ್ಞರ ವಿಶ್ಲೇಷಣೆ.

- ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement