ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹುನ್ನಾರಕ್ಕೆ ಧಿಕ್ಕಾರವಿರಲಿ

Rashmi Kasaragodu
Updated On : 30 Sept 2013, 12:13 pm

ವೈಜ್ಞಾನಿಕ, ಭೌಗೋಳಿಕ ಹಾಗೂ ಧಾರ್ಮಿಕ ತಳಹದಿಯ ಮೇಲೆ ರೂಪುಗೊಂಡಿರುವ ವಾಸ್ತುಶಾಸ್ತ್ರವನ್ನು ಕೆಲವು ಅವಿವೇಕಿಗಳು ಮೂಢನಂಬಿಕೆಗಳ ಸಾಲಿಗೆ ಸೇರಿಸಲು ನಡೆಸುತ್ತಿರುವ ಹುನ್ನಾರಕ್ಕೆ ಮೊದಲಿಗೊಂದು ಧಿಕ್ಕಾರವಿರಲಿ. ನಮ್ಮ ಬದುಕನ್ನು ಸಾಗಿಸಲು ಅಗತ್ಯವಾದ ಸೂರು ನಿರ್ಮಸಿಕೊಳ್ಳುವಂತಹ ಹಾಗೂ ಉದ್ಯಮ, ವ್ಯಾಪಾರ ಪ್ರಾರಂಭಿಸುವಂತಹ ಗಂಭೀರ ವಿಚಾರಗಳಿಗೆ ಭಾರತೀಯರಿಗೆ ಸೂಕ್ತ ಮಾರ್ಗದರ್ಶನ ನೀಡುವಲ್ಲಿ ವಾಸ್ತುಶಾಸ್ತ್ರದ ಕೊಡುಗೆ ಅನನ್ಯ. ಇವುಗಳಲ್ಲಿ ಒಂದು 'ಮನೆಯ ಬಾಗಿಲನ್ನು ಪೂರ್ವದಿಕ್ಕಿಗೆ ಸ್ಥಾಪಿಸುವುದು'. ಇದರಿಂದಾಗಿ ಬಾಗಿಲಿನ ಮೂಲಕ ಓಡಾಡುವ ಸಮಯದಲ್ಲಿ ಬೆಳಗಿನ ಸೂರ್ಯನ ಕಿರಣಗಳು ನಮ್ಮ ಮೇಲೆ ಬಿದ್ದು, ಆ ಮೂಲಕ ಬರುವ ವಿಟಮಿನ್ 'ಡಿ' ಅಂಶವು ನಮ್ಮ ದೇಹ ಪ್ರವೇಶಿಸಿ ಆರೋಗ್ಯ ವೃದ್ದಿಗೆ ಸಹಕರಿಸುತ್ತದೆ ಎನ್ನುವುದು. ಯಾವ ನಂಬಿಕೆಗಳು ಯಾವುದೇ ರೀತಿಯಲ್ಲಿ ಹಾನಿ ಉಂಟುಮಾಡುವುದಿಲ್ಲವೊ ಅಂತಹ ನಂಬಿಕೆಗಳು ಸಮಾಜಕ್ಕಾಗಲಿ, ದೇಶಕ್ಕಾಗಲಿ ಯಾವ ರೀತಿಯಿಂದಲೂ ಮಾರಕವಲ್ಲ.
-ಹರೀಶ್ ಹೆಚ್.ಡಿ., ಹೆಗ್ಗೆರೆ, ತುಮಕೂರು

ದೇವರನ್ನೇ ಮೂಲೆಗುಂಪಾಗಿಸಿದ ವಾಸ್ತು!
ಇತ್ತೀಚೆಗಿನ ಜ್ಯೋತಿಷಿಗಳು ತಮ್ಮ ಹೊಟ್ಟೆ ತುಂಬಿಕೊಳ್ಳಲು ಮಾಡಿಕೊಂಡ ಹೊಸ ಉಪಾಯವೇ ಈ ವಾಸ್ತು ಎಂಬ ವ್ಯಾಪಾರ. ಮಾಧ್ಯಮಗಳ ಹಾವಳಿಯಿಂದ ವಾಸ್ತು ಇಂದು ಜನರ ಮನಸ್ಸಲ್ಲಿ ಆಳವಾಗಿ ಬೇರೂರುತ್ತಿದೆ. ಒತ್ತಡಗಳ ಬದುಕಿನ ಮಧ್ಯೆ ಜನ ಇಂತಹ ವಾಸ್ತು ಜ್ಯೋತಿಷಿಗಳ ಮಾತುಗಳನ್ನು ಹಿಂದೆಮುಂದೆ ನೋಡದೆ ನಂಬಿ ಅವರುಗಳ ಹೊಟ್ಟೆ ತುಂಬಿಸುತ್ತಿದ್ದಾರೆ. ಇಂದು ಸಮಸ್ಯೆ ಇಲ್ಲದ ಮನುಷ್ಯನೇ ಇಲ್ಲ. ಸಮಸ್ಯೆಗಳ ಒತ್ತಡ ಹೆಚ್ಚಾದಾಗ ವಾಸ್ತು ತಜ್ಞರ ಸಲಹೆ ಕೇಳಲು ಹೋಗುತ್ತಾನೆ. ವಾಸ್ತು ತಜ್ಞ ತನ್ನ ಹೊಟ್ಟೆ ತುಂಬಿಸಿಕೊಂಡು, ಆತನ ಮನೆ ಒಡೆಯುವ ಮನೆ ಮುರುಕು ಕೆಲಸ ಸಲೀಸಾಗಿ ಮಾಡುತ್ತಿದ್ದಾನೆ. ವಿಪರ್ಯಾಸವೆಂದರೆ ಮನೆ ಒಡೆಯದೇ ವಾಸ್ತು ಬದಲಿಸುವ ಇನ್ನೊಂದು ಗುಂಪು ಇಂತಹ ಜನರ ಮೇಲೆ ಮತ್ತೊಂದು ರೀತಿ ಒತ್ತಡ ಹೇರಿ ತಮ್ಮ ತೀಟೆ ತೀರಿಸಿಕೊಳ್ಳುತ್ತಿದ್ದಾರೆ. ಹಿಂದೆ ವಾಸ್ತು ಕಲ್ಪನೆ ಇಲ್ಲದೆ ಸಂಸಾರ ಸುಸೂತ್ರವಾಗಿ ಸಾಗುತ್ತಿತ್ತು. ಇಂದು ಇವೆಲ್ಲವನ್ನೂ ನೋಡಿಯೂ ಅನುಭವಿಸುವ ತೊಂದರೆಗಳಿಗೇನೂ ಬರವಿಲ್ಲ. ಒಟ್ಟಿನಲ್ಲಿ ಶುದ್ಧ ಸುಳ್ಳಿನ ಈ ವಾಸ್ತುವಿನಿಂದ ಜನ ಹೊರಬಂದು ವಸ್ತುಸ್ಥಿತಿ ನಂಬುವಂತಾಗಲಿ.
-ಎಲ್.ವಿ. ಕುಮಾರಸ್ವಾಮಿ, ಹಿರಿಯೂರು

ವಾಸ್ತು ಬೇಕು ಸುಸ್ತು ಬೇಡ

ಇಂದು ಜನ ವಾಸ್ತು, ವಾಸ್ತು ಎಂದು ತಲೆ ಕೆಡಿಸಿಕೊಂಡು ಸುಸ್ತಾಗಿ ಬಳಲಿ ಬೆಂಡಾಗಿ, ಕನಲಿ ಕೆಂಡವಾಗಿದ್ದಾರೆ. ತಲತಲಾಂತರಗಳಿಂದ ಪೂರ್ವಿಕರು ನಂಬಿಕೊಂಡು ಬಂದ ವಾಸ್ತು ಎಂದರೆ ಅಷ್ಟ ದಿಕ್ಕುಗಳು. ಅದರಲ್ಲಿ ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ನಾಲ್ಕು ದಿಕ್ಕುಗಳಿದ್ದು, ಈಶಾನ್ಯ, ನೈರುತ್ಯ, ವಾಯುವ್ಯ, ಆಗ್ನೇಯ ಉಪದಿಕ್ಕುಗಳು. ಉತ್ತರ-ಕುಬೇರ, ಈಶಾನ್ಯ-ಈಶ್ವರ, ಪೂರ್ವ-ಸೂರ್ಯ, ಆಗ್ನೇಯ-ಅಗ್ನಿ, ದಕ್ಷಿಣ-ಯಮ, ನೈರುತ್ಯ-ವಿಷ್ಣು, ಪಶ್ಚಿಮ-ವರುಣ ಮತ್ತು ವಾಯುವ್ಯ-ವಾಯು. ಪ್ರತಿಯೊಂದು ದಿಕ್ಕಿಗೂ ಒಬ್ಬೊಬ್ಬ ದೇವತೆ. ಈ ಎಂಟು ದೇವತೆಯರು ಅಷ್ಟದಿಕ್ಪಾಲಕರಂತೆ ಕೆಲಸ ಮಾಡುತ್ತಾರೆ ಎನ್ನುವ ಪ್ರತೀತಿ. ಹಿಂದಿನವರು ಸರಳ ರೀತಿಯಲ್ಲಿ ಅದನ್ನು ಪಾಲಿಸಿಕೊಂಡು ಬರುತ್ತಿದ್ದರು. ಇತ್ತೀಚೆಗಂತೂ ವಾಸ್ತು ಹೆಸರಿನಲ್ಲಿ ಹಗಲು ದರೋಡೆಯೇ ನಡೆಯುತ್ತಿದೆ. ಆಡಂಬರದ ಜೀವನಕ್ಕಾಗಿ ಕೆಲವರು ವಾಸ್ತು ಪುರುಷನನ್ನೇ 'ಸೇಲ್ಸ್  ಅಂಡ್ ಸರ್ವಿಸ್‌' ಮಾಡಿಕೊಂಡು ಸುಲಿಯುವ ಕೆಲಸ ಮಾಡುತ್ತಿದ್ದಾರೆ.
- ಹಿರೇನಲ್ಲೂರು ಶಿವು, ಕಡೂರು

'ಜಗುಲಿ'ಯಲ್ಲಿ ಈ ವಾರದ ವಿಷಯ 'ವಾಸ್ತು ಬೇಕೆ?'. ವಿಷಯದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಬರವಣಿಗೆ 100 ಪದಗಳ ಮಿತಿಯಲ್ಲಿರಲಿ. ಜತೆಗೆ ನಿಮ್ಮದೊಂದು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಇರಲಿ. ಕೈ ಬರಹದಲ್ಲಿ ಕಳಿಸುವುದಿದ್ದರೆ ಬರಹ ಸ್ಪಷ್ಟವಾಗಿರಲಿ. ಇ-ಮೇಲ್ ಮೂಲಕ ಕಳಿಸುವವರು ನುಡಿಯಲ್ಲಿ ಟೈಪ್ ಮಾಡಿರಬೇಕು. ನಮ್ಮ ವಿಳಾಸ: ಬೈಟು ಕಾಫಿ (ಅನೇಕ ವಿಭಾಗ), ಕನ್ನಡಪ್ರಭ, ನಂ.1, ಎಕ್ಸ್‌ಪ್ರೆಸ್ ಕಟ್ಟಡ, ಕ್ವೀನ್ಸ್ ರಸ್ತೆ, ಬೆಂಗಳೂರು- 560001, ಇ-ಮೇಲ್: anekaby2@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement