ಪುಷ್ಪಕವನ
ಭೂರಮೆಗೆ ಒಲುಮೆಯಿಂದ ಶೃಂಗಾರ ಮಾಡಿ ನೋಡುಗರ ಮನತಣಿಸುವ ನಾವು ಕಾಡು ಕುಸುಮಗಳು. ಏನೇ ಬಲವಂತ ಮಾಡಿದರೂ ನಿಮ್ಮ ಮುಡಿ ಏರಲಾರೆವು. ನಮಗೆ ನಮ್ಮದೇ ಚೆಲುವು. ಅದರಲ್ಲಿ ನೂರಂಟು ಬಗೆ. ಕೆಂಪು, ಕಿತ್ತಳೆ, ಹಳದಿ, ನೀಲಿ, ನೇರಳೆ, ಬಿಳಿ ಹೀಗೆ ನಾನಾ ಬಗೆ. ಎಷ್ಟೊಂದು ಆಕಾರ ಮತ್ತು ಗಾತ್ರ. ನಾವು ಬೀರುವ ಸುವಾಸನೆ ನಿಮ್ಮ ಮೂಗಿಗೆ ರಾಚದು. ನಮಗೇನು ನಿಮ್ಮ ಹಿತ್ತಲ ಬೇಲಿಯೇ ಬೇಕಿಲ್ಲ. ಎಲ್ಲೆಂದರಲ್ಲಿ ಕಾಡು- ನಾಡು, ಹಳ್ಳ- ಕೊಳ್ಳ, ನೆಲ- ಬಾನು ಎಲ್ಲೂ ಆವರಿಸಿ ಮಳೆಬಿದ್ದ ಮಾರನೇ ದಿನದಿಂದಲೇ ಚಿಗುರೊಡೆಯುತ್ತೇವೆ. ಮೆತ್ತಗೆ ನೆಲ ಆವರಿಸಿ ಮುಗಿಲ ಕಡೆ ಮುಖಮಾಡಿ ಮಳೆಗೆ- ಇಳೆಗೆ ನಂಟು ಬೆಸೆಯುತ್ತೇವೆ.
ನಮಗೋ ನಿಮ್ಮ ಗೊಬ್ಬರ ಬೇಕಿಲ್ಲ. ಆರೈಕೆ ತಾಗುವುದಿಲ್ಲ. ಋತುಮಾನದಿಂದ ಇಳೆ ತಂಪಾದರೆ ಸಾಕು. ನಮ್ಮ ಜೀವನ ಆರಂಭ. ಬದುಕುಳಿವ ಮೂರು ದಿನ ಭೂಮಿ ಕಾಣದಂತೆ ನಾವವಳಿಗೆ ಚಿತ್ತಾರದ ರಂಗಿನ ಶಾಲು ಹೊದಿಸುತ್ತೇವೆ. ಗಿರಿಕಂದರಗಳ ತುಂಬಿ, ಬೆಟ್ಟಗಳ ಆವರಿಸಿ ಒಮ್ಮೊಮ್ಮೆ ಬಯಲು ನಾಡಿಗೂ ಇಣುಕುತ್ತೇವೆ. ಅಲ್ಲೆಲ್ಲ ಮನೆಮಾಡಿದರೂ ನಮ್ಮನ್ನಾರು ಆದರಿಸುವುದಿಲ್ಲ. ಮೆತ್ತಗೆ ಕೊಯ್ದು ಬುಟ್ಟಿ ತುಂಬಿಸಿ ಆಲಯಕ್ಕೋ, ತುರುಬಿಗೊ ಒಯ್ಯುವುದಿಲ್ಲ. ಇದಕ್ಕೆಲ್ಲ ನಾವೆಂದೂ ಬೇಸರಿಸುವುದಿಲ್ಲ. ಸದ್ದಿಲ್ಲದೆ ಕಾಯಕ ಮುಗಿಸಿ ಧರೆಗೆ ಒರಗುತ್ತೇವೆ. ಭೂಮಂಡಲದ ಕ್ಷುದ್ರಜೀವ- ಚಿಟ್ಟೆಗಳೆ ನಮ್ಮ ವಂಶವಾಹಕರು. ಹೂವಿಂದ ಹೂವಿಗೆ, ಗಿಡದಿಂದ ಗಿಡಕ್ಕೆ ಎಡತಾಗಿ ನಮ್ಮ ಬಸಿರ ಹಸಿರಾಗಿಸುತ್ತವೆ. ಸದ್ದಿಲ್ಲದೆ ತಮ್ಮ ಕಾಯಕ ಮಾಡುತ್ತವೆ. ಅವಕ್ಕೂ ನಮಗೂ ಹೆಸರಿಲ್ಲ ನಿಮ್ಮ ಶಬ್ದಕೋಶದಲ್ಲಿ. ಸುಮ್ಮನೆ ಹೇಳುವಿರಿ 'ಕಾಡುಹೂ', 'ಚಿಟ್ಟೆ' ಎಂದು. ನೋಡುವ ನಿಮ್ಮ ಕಣ್ಣುಗಳು ಸೋಲದಿರಲಿ ಎಂಬುದೇ ನಮ್ಮ ಪ್ರಾರ್ಥನೆ. ಹ್ಞಾಂ, ನನ್ನ ಮೇಲೆ ಯಾವುದೇ ಕಾರಣಕ್ಕೂ ಕೈಹಾಕಬೇಡಿ!
- ಚಿತ್ರ, ಲೇಖನ: ಡಾ. ತೈಲೂರು ದೇವರಾಜ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.