ಮದ್ಯ ಪ್ರದೇಶ
ಸುರ ಲಾ, ಇಲ್ಲಾ ಸುರಾ ಲಾ. ಹೇಗಾದರೂ ಅನ್ನಿ. ಏಕೆಂದರೆ, ಇದೊಂದು ಸುರಲೋಕದ ಸೌಂದರ್ಯ. ಸುರಾಪಾನಿಗಳ ಸ್ವರ್ಗ...
ಸುರ ಲಾ, ಇಲ್ಲಾ ಸುರಾ ಲಾ. ಹೇಗಾದರೂ ಅನ್ನಿ. ಏಕೆಂದರೆ, ಇದೊಂದು ಸುರಲೋಕದ ಸೌಂದರ್ಯ. ಸುರಾಪಾನಿಗಳ ಸ್ವರ್ಗ. ಆದರೆ, ಊರಿನ ಹೆಸರು ಸುರಾಲಾ. ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಸುರಾಲಾ ಇರುವುದು ಮಾತ್ರ ಗೋವಾ ರಾಜ್ಯದ ಮಡಿಲಿನಲ್ಲಿ.
ಖಾನಾಪುರದಿಂದ ಜಾಂಬೋಟಿ, ಕಣಕುಂಬಿ ದಾರಿಯಲ್ಲಿ ಸುರಾಲಾಕ್ಕೆ ಹೊರಟರೆ ನಾವೆಲ್ಲಿದ್ದೇವೆ ಎನ್ನುವುದೇ ಮರೆತು ಹೋಗುತ್ತದೆ. ಸುತ್ತು ಬಳಸಿ ಸಾಗುವ ದಾರಿಯುದ್ದಕ್ಕೂ ಮುಸುಕಿದ ಮಂಜು. ಹೆಡ್‌ಲೈಟ್‌ಗಳ ಕಣ್ಣರೆಪ್ಪೆ ಮುಚ್ಚದೆ ಸಾಗುವ ವಾಹನಗಳು. ಓಹ್! ಆ ಪ್ರಯಾಣವೇ ಆಹ್ಲಾದಕರ. ಮಳೆಗಾಲದಲ್ಲಂತೂ ಸುರಾಲದಲ್ಲಿ ಸೂರ್ಯೋದಯವೇ ಆಗುವುದಿಲ್ಲ ಎಂದನ್ನಿಸುತ್ತದೆ. ದಟ್ಟಡವಿ, ಗುಡ್ಡಗಾಡಿನ ನಡುವೆ ಹುದುಗಿರುವ ಈ ಊರು ಅದೆಷ್ಟು ಜನರನ್ನು ತನ್ನತ್ತ ಸೆಳೆಯುತ್ತಿದೆ ಎಂಬುದನ್ನು ಇಲ್ಲಿಗೆ ಬಂದೇ ಲೆಕ್ಕಹಾಕಬೇಕು.
ಸುರಾಲಾದಲ್ಲಿ ವರ್ಷದ ಆರು ತಿಂಗಳೂ ಮಂಜು ಮುಸುಕಿರುತ್ತದೆ. 100 ಮೀಟರ್ ಅಂತರದಲ್ಲಿರುವ ಮನೆಗಳು, ವಾಹನಗಳು, ಮರ ಗಿಡಗಳು ಯಾವುದೂ ಸ್ಪಷ್ಟವಾಗಿ ಕಾಣಿಸದು. ಕುಳಿರ್ಗಾಳಿ ಬೀಸಿದಾಗ ತಣ್ಣೀರಿನ ಸಿಂಚನವಾದ ಅನುಭವ. ದಿನವಿಡೀ ನಸುಕಿನ ವಾತಾವರಣ. ಇದು ಗೋವಾದಲ್ಲೇ ಅತಿ ಎತ್ತರದ ಪ್ರದೇಶ. ಮಹದಾಯಿ ಕಣಿವೆಯ ನಿಸರ್ಗವನ್ನು ಸವಿಯುತ್ತಿದ್ದರೆ ಬಿಟ್ಟು ಬರಲು ಮನಸ್ಸಾಗದು.
ಮನೆ ಮನೆಯಲ್ಲೂ ಗುಂಡು!
ಮನೆ ಮುಂದೆಲ್ಲ ಒಂದೊಂದು ಬೋರ್ಡು. 'ಆಶೀರ್ವಾದ ವೈನ್ಸ್', 'ಅಸ್ಮಿತಾ ಬಾರ್ ಆ್ಯಂಡ್ ರೆಸ್ಟೋರೆಂಟ್', 'ಮಾಲಿನಿ ಬಾರ್', 'ಸುವರ್ಣಾ ಬಾರ್ ಆ್ಯಂಡ್ ರೆಸ್ಟೋರೆಂಟ್'.... ಹೀಗೆ ಈ ಪಟ್ಟಿ ದೊಡ್ಡದು. ಮನೆಗೊಂದು ಬಾರು. ಅದೇ ಇಲ್ಲಿನ ಜನರ ಕಾರುಬಾರು. ಇಲ್ಲಿ 90 ಮನೆಗಳಿವೆ. 600ರಷ್ಟು ಜನಸಂಖ್ಯೆ ಇದೆ. ಅಚ್ಚರಿ ಎಂದರೆ ಪ್ರತಿ ಮನೆಗೆ ಒಬ್ಬರಿಗಿಂತ ಹೆಚ್ಚು ಯುವಕರು ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ದೇಶದ ವಿವಿಧೆಡೆ ದುಡಿಯುತ್ತಿದ್ದಾರೆ. ಮನೆಯಲ್ಲಿದ್ದವರಿಗೆ 'ಮದ್ಯ'ವೃತ್ತಿ. ಕೃಷಿ, ತೋಟಗಾರಿಕೆ ಸೇರಿದಂತೆ ಬೇರಾವುದೇ ಚಟುವಟಿಕೆ ಇಲ್ಲಿ ಕಾಣಸಿಗದು.
ಇಲ್ಲಿನ ದಶರತ್ ರಾಮಚಂದ್ರ ನಾಯ್ಕ ಮಾಲಿನಿ ಬಾರ್ ನಡೆಸುತ್ತಿದ್ದಾರೆ. 22 ವರ್ಷಗಳ ಹಿಂದೆ ಜಲಪಾತ ನೋಡಲು ಬಂದವರೊಬ್ಬರು 'ಬಿಯರ್ ಇದೆಯಾ?' ಎಂದು ಕೇಳಿದರು. ಊಹ್ಞೂಂ ಎಂದು ತಲೆ ಅಲ್ಲಾಡಿಸಿದ ದಶರತ್ ಮರುದಿನವೇ ತಾಲೂಕು ಕೇಂದ್ರವಾದ ಸತ್ತರಿ ಎಂಬಲ್ಲಿ ಹೋಗಿ ಎರಡು ಬಾಟಲಿ ಬಿಯರ್ ತಂದಿಟ್ಟರು. ಅದೇ ದಿನ ಎರಡೂ ಬಾಟಲಿ ಮಾರಾಟವಾಯ್ತು. ನಂತರ ಒಂದು ಬಾಕ್ಸ್ ತಂದಿಟ್ಟರು. ಮಾರಾಟ ಜೋರಾಯ್ತು. ಊಟ ತಿಂಡಿ ಆರಂಭಿಸಿದರು. ಕ್ರಮೇಣ ಬಾರು ಶುರು. ಈಗ ಆ ಊರೇ ದೊಡ್ಡ ಬಾರು. ಅಪ್ಪಟ ಗೋವಾ ಶೈಲಿಯ ಊಟವನ್ನು ಇಲ್ಲಿ ಸವಿಯಬಹುದು. ಸುರಾಲಾ ಊರಿನಲ್ಲಿ ವಾಸ್ತವ್ಯಕ್ಕೆ ಮಾತ್ರ ವ್ಯವಸ್ಥೆ ಇಲ್ಲ. ಊಟ, ತಿಂಡಿ, ಮದ್ಯ ಎಲ್ಲವೂ ಲಭ್ಯ. ಬೆಳಗ್ಗೆಯಿಂದ ಸಂಜೆ ತನಕ ವಿಹರಿಸಿ ಮರಳಬೇಕು. ಸುರಾಲಾದ ಶಮೀರ ಗಾಂವಕರ ಮಣಿಪುರದಲ್ಲಿ ಸೈನಿಕ. 'ನಾನು ಮಣಿಪುರ, ನಾಗಾಲ್ಯಾಂಡ್ ಸೇರಿದಂತೆ ಈಶಾನ್ಯ ರಾಜ್ಯಗಳನ್ನೆಲ್ಲ ನೋಡಿದ್ದೇನೆ. ಆದರೆ ಅಲ್ಲಿಗಿಂತ ಸುರಾಲಾದ ಸೊಬಗೇ ಬೇರೆ' ಎಂದು ವರ್ಣಿಸುತ್ತಾನೆ.
ಜಲಪಾತ ವೈಭವ
ಸುರಾಲಾದ ತುತ್ತತುದಿಯಲ್ಲಿ ನಿಂತರೆ ಕಾನನದ ನಡುವೆ ಭೋರ್ಗರೆಯುವ ಜಲಪಾತ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಮಹದಾಯಿ ಕಣಿವೆಯಲ್ಲಿ ಧುಮ್ಮಿಕ್ಕುವ ನೋಟ ರಮಣೀಯ. ನಿತ್ಯ ನೂರಾರು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ರಜಾ ದಿನಗಳಲ್ಲಿ ಈ ಪ್ರಮಾಣ ಸಾವಿರ ಮುಟ್ಟುತ್ತದೆ. ಸುರಾಲಾದಲ್ಲಿ ಗುಂಡು ಹಾಕುತ್ತ ಜಲಪಾತದ ಸೊಬಗು ಸವಿಯುವವರೇ ಹೆಚ್ಚು. ಆದರೆ ಮಳೆಗಾಲದುದ್ದಕ್ಕೂ ಮಂಜು ಕವಿದಿರುವುದರಿಂದ ಜಲಪಾತ ಆಗಾಗ ಕಣ್ಣುಮುಚ್ಚಾಲೆಯಾಡಿದಂತಾಗುತ್ತದೆ. ಒಮ್ಮೊಮ್ಮೆ ಜಲಪಾತವನ್ನು ಸರಿಯಾಗಿ ನೋಡಲು ಅರ್ಧ ಗಂಟೆ ಕಾಯಬೇಕು. ಜಲಪಾತವನ್ನು ನೋಡಲು ವಿಶಾಲ ಬಯಲಿದೆ. ಕಲ್ಲು ಹಾಸಿನ ಮೇಲೆ ಕುಳಿತು ವೀಕ್ಷಿಸಬಹುದು.
ದಾರಿ ಯಾವುದಯ್ಯಾ..?
ಬೆಳಗಾವಿ- ಗೋವಾ ನಡುವಣ ರಸ್ತೆಯಲ್ಲಿ ಜಾಂಬೋಟಿ, ಕಣಕುಂಬಿ ಮೂಲಕ 50 ಕಿ.ಮೀ. ಸಾಗಿದರೆ ಅರಣ್ಯ ಇಲಾಖೆ ಚೆಕ್‌ಪೋಸ್ಟ್ ಸಿಗುತ್ತದೆ. ಚೆಕ್‌ಪೋಸ್ಟ್‌ನಿಂದ ಎಡಕ್ಕೆ ಹೊರಳಿದರೆ 4 ಕಿ.ಮೀ. ಅಂತರದಲ್ಲಿ ಸುರಾಲಾದಲ್ಲಿ ನೀವಿರುತ್ತೀರಿ. ಸುರಾಲಾ ಗೋವಾದ ಸತ್ತರಿ ತಾಲೂಕಿನಲ್ಲಿದೆ.
- ವಸಂತಕುಮಾರ್ ಕತಗಾಲ
vasant800@gmail.com
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.