ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಡಬಲ್ ಟ್ಯಾಲೆಂಟ್

Mainashree
Updated On : 1 Apr 2014, 3:55 am

ರಾಜ್ಯಶಾಸ್ತ್ರ, ಕಾನೂನುಗಳ ಮೇಲೆ ಆಸಕ್ತಿ ಇದ್ದವರಷ್ಟೇ ಇಂದು ರಾಜಕೀಯದಲ್ಲಿಲ್ಲ. ಇಲ್ಲಿ ಡಬಲ್ ಟಾಲೆಂಟ್‌ಗಳೂ ಇದ್ದಾರೆ. ಎಲ್ಲ ಜಾಣ್ಮೆಯನ್ನು ರಾಜಕೀಯದ ಜೋಳಿಗೆಗೆ ಸುರಿದರೂ, ಮತ್ತೊಂದಿಷ್ಟು ಬುದ್ಧಿವಂತಿಕೆಯನ್ನು ಇವರು ಬೇರೆ ಕ್ಷೇತ್ರಕ್ಕಾಗಿ ಠೇವಣಿ ಇಡುತ್ತಾರೆ. ಇವರೊಂಥರ ಸೃಜನಶೀಲ ರಾಜಕಾರಣಿಗಳು. ರಾಜಕೀಯದೊಂದಿಗೆ ಬರವಣಿಗೆ, ನಟನೆ, ನೃತ್ಯ, ಸಂಗೀತಗಳನ್ನೂ ಹೆಗಲಿಗೇರಿಸಿಕೊಂಡು ಹೊರಟವರು. ಈ ಪರ್ಯಾಯ ಆಸಕ್ತಿ ಇವರಿಗೆ ವಿಶೇಷ ಐಡೆಂಟಿಟಿ ತಂದುಕೊಟ್ಟಿದೆ. ಅಂಥ ಹಲವು ಪ್ರತಿಭಾವಂತರು ಈ ಸಲದ ಚುನಾವಣೆ ಕಣದಲ್ಲಿ ಅಭ್ಯರ್ಥಿಗಳಾಗಿದ್ದಾರೆ...

ಪಾಲಿಟಿಕ್ಸ್ ಪ್ಲಸ್...
ಪ್ರತಾಪ್ ಸಿಂಹ

ಮೈಸೂರು ಲೋಕಸಭಾ ಕ್ಷೇತ್ರದಿಂದ ಅಖಾಡಕ್ಕೆ ಧುಮುಕಿರುವ ಪ್ರತಾಪ್, ಹರಿತ ಬರವಣಿಗೆಯಿಂದ ಮನೆಮಾತಾದವರು. ಪತ್ರಕರ್ತರಾಗಿದ್ದ ಪ್ರತಾಪ್, 'ಬೆತ್ತಲೆ ಪ್ರಪಂಚ', 'ಬೆತ್ತಲೆ ಜಗತ್ತು' ಅಂಕಣಗಳಿಂದ ಖ್ಯಾತಿ. 'ನೇತಾಜಿ: ಚಲೋ ದಿಲ್ಲಿ ಎಂದು ಹೋದರೆಲ್ಲಿ?', 'ಟಿಪ್ಪು ಸುಲ್ತಾನ ಸ್ವಾತಂತ್ರ್ಯ ವೀರನಾ?', 'ಮೋದಿ ಮುಸ್ಲಿಂ ವಿರೋದಿಯೇ?', 'ನರೇಂದ್ರ ಮೋದಿ, ಯಾರೂ ತುಳಿಯದ ಹಾದಿ'- ಇವರ ಪ್ರಮುಖ ಕೃತಿಗಳು. 'ಬೆತ್ತಲೆ ಜಗತ್ತು' ಅಂಕಣ ಬರಹಗಳಿಗೆ 'ಆರ್ಯಭಟ' ಗೌರವ ಬಂದಿದೆ. ರಾಜ್ಯೋತ್ಸವ ಪುರಸ್ಕೃತರು.

ವೀರಪ್ಪ ಮೊಯ್ಲಿ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಂತಿರುವ ಮೊಯ್ಲಿಯವರ ಪ್ರತಿಭೆ ದೊಡ್ಡದು. ಸಾಹಿತ್ಯ ವಲಯದಲ್ಲೂ ಗುರುತಿಸಿಕೊಂಡವರು. 'ಸುಳಿಗಾಳಿ', 'ಸಾಗರ ದೀಪ', 'ಕೊಟ್ಟ', 'ತೆಂಬರೆ' ಕಾದಂಬರಿಗಳನ್ನು ರಚಿಸಿದ್ದಾರೆ. 'ಮಿಲನ', 'ಪ್ರೇಮವೆಂದರೆ', 'ಪರಾಜಿತ ಮತ್ತು ಮೂರು ನಾಟಕಗಳು' ಎಂಬ ನಾಟಕಗಳನ್ನೂ ರಚಿಸಿದ್ದಾರೆ. 'ಹಾಲು ಜೇನು', 'ಮತ್ತೆ ನಡೆಯಲಿ ಸಮರ', 'ಯಕ್ಷಪ್ರಶ್ನೆ', 'ಜೊತೆಯಾಗಿ ನಡೆಯೋಣ' ಎಂಬ ಕವನ ಸಂಕಲನಗಳೂ ಮೂಡಿಬಂದಿವೆ. 'ಶ್ರೀ ರಾಮಾಯಣ ಅನ್ವೇಷಣಂ' ಎಂಬ ಮಹಾಕಾವ್ಯವನ್ನು ಓದುಗರ ಮಡಿಲಿಗಿಟ್ಟಿದ್ದಾರೆ. ಇವರ ಮಹಾಕಾವ್ಯ ಹಿಂದಿಗೂ ಅನುವಾದಗೊಂಡಿದೆ. ಗೊರೂರು ಪ್ರತಿಷ್ಠಾನದ ಸಮಗ್ರ ಸಾಹಿತ್ಯ ಪ್ರಶಸ್ತಿಗೆ ಭಾಜನರು.
ಮೊಯ್ಲಿ ಪ್ರಮುಖ ದಿನಪತ್ರಿಕೆಗಳಲ್ಲಿ ಅಂಕಣ ಬರೆದವರು. ಈ ಅಂಕಣಗಳ ಒಟ್ಟು ಮೊತ್ತವನ್ನು 'ಮ್ಯೂಸಿಂಗ್ ಆನ್ ಇಂಡಿಯಾ' ಎಂಬ ಪುಸ್ತಕದಲ್ಲಿ ಕಾಣಬಹುದು. ಕೃಷಿ, ನೀರು, ವಿದ್ಯುತ್ ಹಾಗೂ ಭಾರತದ ಶಿಕ್ಷಣ ವ್ಯವಸ್ಥೆ ಕುರಿತಾಗಿ ನಾಲ್ಕು ಪ್ರತ್ಯೇಕ ಸಂಪುಟಗಳುಳ್ಳ 'ಅನ್‌ಲೀಶಿಂಗ್ ಇಂಡಿಯಾ' ರಚಿಸಿದ್ದಾರೆ. ದ್ರೌಪದಿಯ ಮೇಲೆ ರಚಿತವಾಗಿರುವ ಮೊಯ್ಲಿಯವರ ಮತ್ತೊಂದು ಮಹಾಕಾವ್ಯ 'ಶ್ರೀಮುಡಿ ಪರಿಕ್ರಮಣಂ'.


ಎಚ್. ವಿಶ್ವನಾಥ್
ಮೈಸೂರು ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಎಚ್. ವಿಶ್ವನಾಥ್ ಬರವಣಿಗೆಯ ಪ್ರತಿಭಾವಂತಿಕೆ ಉಳ್ಳವರು. 'ಹಳ್ಳಿ ಹಕ್ಕಿ ಹಾಡು', 'ಆಪತ್‌ಸ್ಥಿತಿಯ ಆಲಾಪಗಳು', 'ಮತಸಂತೆ' ಇವರ ಪ್ರಮುಖ ಕೃತಿಗಳು. 'ಸಂಸತ್ ಸಲ್ಲಾಪಗಳು' ಎಂಬ ಮತ್ತೊಂದು ಕೃತಿಯನ್ನು ಸದ್ಯದಲ್ಲೇ ಓದುಗನ ಮುಂದಿಡಲಿದ್ದಾರೆ. ಅಂದು 'ಹಳ್ಳಿ ಹಕ್ಕಿಯ ಹಾಡು' ಕೃತಿ ಹೊರತಂದಾಗ ಡಿ.ಕೆ. ಶಿವಕುಮಾರ್ 'ಅದು ಹಳ್ಳಿ ಗೂಬೆಯ ಹಾಡು' ಎಂದು ಗೇಲಿಮಾಡಿದ್ದನ್ನು ಸ್ಮರಿಸಬಹುದು.

ಜನಾರ್ದನ ಸ್ವಾಮಿ
ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಜನಾರ್ದನ ಸ್ವಾಮಿ ಕ್ರಿಯಾಶೀಲ ವ್ಯಂಗ್ಯ ಚಿತ್ರಕಾರರು. ಕಲೆ, ಸಾಹಿತ್ಯದಲ್ಲೂ ಅಭಿರುಚಿ ಹೊಂದಿದವರು. ಹಲವಾರು ಪುಸ್ತಕಗಳ ಮುಖಪುಟಗಳಿಗೆ ಸಚಿತ್ರಗಳನ್ನು ರಚಿಸಿದ್ದಾರೆ. ಇವರ ಅನೇಕ ವ್ಯಂಗ್ಯಚಿತ್ರಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 'ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್‌'ನ ಸದಸ್ಯರು. ಕ್ಯಾಲಿಫೋರ್ನಿಯಾಸ್ ಕನ್ನಡ ಕಮ್ಯುನಿಟಿ ಆರ್ಗನೈಸೇಷನ್‌ನಲ್ಲಿ ಮುಖ್ಯ ಸಂಪಾದಕರಾಗಿ ಹಾಗೂ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ.

ರವಿ ಕೃಷ್ಣಾರೆಡ್ಡಿ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವ ರವಿ ಕೃಷ್ಣಾರೆಡ್ಡಿ ಬರಹಗಾರರು. 'ವಿಕ್ರಾಂತ ಕರ್ನಾಟಕ' ಎಂಬ ಕನ್ನಡ ಮ್ಯಾಗಜಿನ್ ಸ್ಥಾಪಕ. 'ಜಿಜ್ಞಾಸ ಗಂಗೆಯ ದಡದ ಕಾಲುದಾರಿಯಲ್ಲಿ' ಎಂಬ ಪುಸ್ತಕ ಸೇರಿದಂತೆ ಹಲವು ಅನುವಾದಿತ ಕೃತಿಗಳಿಗೆ ಜನ್ಮ ಕೊಟ್ಟವರು. ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ರವಿ ಸದ್ಯ ಆಮ್ ಆದ್ಮಿ ಪಕ್ಷದಿಂದ ಕಣಕ್ಕಿಳಿದ್ದಾರೆ.

ಕೋಟಿಗಾನಹಳ್ಳಿ ರಾಮಯ್ಯ

ಕೋಲಾರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಕೋಟಿಗಾನಹಳ್ಳಿ ರಾಮಯ್ಯ ದಲಿತ ಕವಿ, ನಾಟಕಕಾರ, ತತ್ವಜ್ಞಾನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತ. 'ಅದಿಮ' ಎಂಬ ಸಂಸ್ಥೆಯ ಸ್ಥಾಪಕ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಸುವರ್ಣ ರಂಗ ಸಮ್ಮಾನ್, ಕನ್ನಡ ಸಂಘ ಕಾಂತಾವರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗಳಿಗೆ ಭಾಜನರು. 'ಕಾಗೆ ಕಣ್ಣು ಇರುವೆ ಬಾಲ', 'ನಾಯಿ ತಿಪ್ಪ', 'ರತ್ನ ಪಕ್ಷಿ', 'ಕಣ್ಣಾಸ್ಪತ್ರೆ ಕ್ಯೂನಲ್ಲಿ ಜಗದಾಂಬೆ', 'ಹಕ್ಕಿ ಹಾಡು', 'ವೊಗಟಿನ ರಾಣಿ', 'ಸುಮ್ ಸುಮ್ಕೆ', 'ದರ್ಬಾರ್ ಬುದ್ದಣ್ಣ', 'ಮರ್ಜಿನ ಮತ್ತು ನಲವತ್ತು ಕಳ್ಳರು', 'ನೋ ಆಲ್ಫಬೆಟ್ ಇನ್ ಸೈಟ್‌', 'ಸಿದ್ ಮಾದಿಗರ ಸಂಸ್ಕೃತಿ' ಇವರ ಪ್ರಮುಖ ಕೃತಿಗಳು. ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ರಮ್ಯಾ
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ರಮ್ಯಾ ಬಹುಭಾಷಾ ನಟಿ. 'ಅಭಿ', 'ಅಭಿಮನ್ಯು', 'ಕುತ್ತು', 'ಸಿಂಗಂಪುಲಿ', 'ಮುಸ್ಸಂಜೆ ಮಾತು' ಸೇರಿದಂತೆ ಕನ್ನಡ, ತೆಲುಗು, ತಮಿಳಿನ ಹಲವು ಸಿನಿಮಾಗಳ ನಾಯಕಿ ನಟಿ. ಕನ್ನಡ ಸಿನಿಮಾದ ಚಿನ್ನದ ಹುಡುಗಿ, ಸ್ಯಾಂಡಲ್‌ವುಡ್ ಕ್ವೀನ್ ಅಂತಲೇ ಗುರುತಿಸಿಕೊಂಡವರು. 'ತನನಂ ತನನಂ' ಮತ್ತು 'ಸಂಜು ವೆಡ್ಸ್ ಗೀತಾ' ಸಿನಿಮಾದಲ್ಲಿ ಮನೋಜ್ಞ ಅಭಿನಯಕ್ಕೆ ಅತ್ಯುತ್ತಮ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದಾರೆ. ಮಂಡ್ಯದಿಂದ ಒಮ್ಮೆ ಸಂಸದರಾಗಿ, ಈಗ ಎರಡನೇ ಬಾರಿಗೆ ಅಲ್ಲಿಂದಲೇ ಸ್ಪರ್ಧಿಸುತ್ತಿದ್ದಾರೆ. ರೆಬಲ್‌ಸ್ಟಾರ್ ಅಂಬರೀಷ್ ಬೆಂಬಲದಿಂದ ರಾಜಕೀಯ ರಂಗಕ್ಕೆ ಪ್ರವೇಶ ಮಾಡಿದ್ದಾರೆ.

ಬಿ.ಟಿ. ಲಲಿತಾ ನಾಯಕ್

ಕನ್ನಡದ ಹೆಸರಾಂತ ಮಹಿಳಾ ಸಾಹಿತಿಗಳಲ್ಲಿ ಇವರೂ ಒಬ್ಬರು. ಇವರೀಗ ಗುಲ್ಬರ್ಗ ಎಸ್‌ಸಿ ಮೀಸಲು ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಪರ ಕಣಕ್ಕಿಳಿದಿದ್ದಾರೆ. ಕಡುಬಡತನದಲ್ಲೇ ಬಾಲ್ಯ ಕಳೆದರೆಂದು ಇವರ ಬರವಣಿಗೆಯೇ ಹೇಳುತ್ತದೆ. ಒಂದೊಮ್ಮೆ 'ಲಂಕೇಶ್ ಪತ್ರಿಕೆ'ಯಲ್ಲಿ ವರದಿಗಾರ್ತಿಯೂ ಆಗಿದ್ದರು. ಹಲವು ರೇಡಿಯೋ ನಾಟಕಗಳನ್ನು ಬರೆದಿದ್ದಾರೆ. 'ಹಬ್ಬ ಮತ್ತು ಬಲಿ' ಇವರ ಪ್ರಮುಖ ಕಥಾಸಂಕಲನ. 'ನೆಲೆ- ಬೆಲೆ', 'ಗತಿ' ಕಾದಂಬರಿಗಳಿಂದ ಖ್ಯಾತರಾದರು. 'ನಂ ರೂಪ್ಲಿ', 'ಇದೇ ಕೂಗು ಮತ್ತೆ ಮತ್ತೆ', 'ಒಡಲಬೇಗೆ', 'ಸವಾಸೇರು' ಕವನಸಂಕಲನಗಳಲ್ಲದೆ, 'ಭಟ್ಟರ ಕನಸು' ಎಂಬ ಮಕ್ಕಳ ಸಾಹಿತ್ಯವನ್ನೂ ರಚಿಸಿದ್ದಾರೆ. ಹಲವು ರಚನೆಗಳು ಪಠ್ಯಪುಸ್ತಕವನ್ನು ಸೇರಿವೆ. 'ಮಹಿಳಾರತ್ನ', 'ಕಾಯಕ ಸಮ್ಮಾನ್‌', 'ನಾಡಚೇತನ' ಗೌರವಕ್ಕೆ ಪಾತ್ರರು.


= ಮಂಜುನಾಥ ಎಲ್.ಕೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments