ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹನಿಯಿಳಿದು ಇಂಗಿತು

Vishwanath S
Updated On : 2 Apr 2014, 3:38 am

ಕೆಲವು ಕವಿಗಳಿಗೆ ಯಾವ ವರ್ಣನೆಯನ್ನು ಎಲ್ಲಿ ಮಾಡಬೇಕೆಂಬುದು ಗೊತ್ತಿರುವುದಿಲ್ಲ. ಅಂಥವರು ಕ್ಲೈಮ್ಯಾಕ್ಸ್‌ನಲ್ಲಿ ಪ್ರಕೃತಿವರ್ಣನೆ ಮಾಡಹೊರಡುವ ಪಾಪಿಗಳು. ನುರಿತ ಕವಿಗಳು ವರ್ಣನೆಯನ್ನೂ ಓದುಗನ ಎದೆ ಬೆಚ್ಚಗಾಗುವಂತೆ ಮಾಡಬಲ್ಲರು. ಕುಮಾರಸಂಭವ ಕಾವ್ಯದಲ್ಲಿ, ಪಾರ್ವತಿಯ ಅಂಗಾಂಗಗಳ ಬಗ್ಗೆ ಕಾಳಿದಾಸ ಮಾಡಿದ ವರ್ಣನೆಯೇ ಇದಕ್ಕೆ ಉದಾಹರಣೆ. ಇಲ್ಲಿ ಆತ ಔಚಿತ್ಯ ಮೀರಿದ್ದಾನೆಂದು ಒಂದು ಗುಂಪು ವಾದಿಸಿದರೆ, ಅದನ್ನು ಕವಿಸಮಯವೆಂದು ಮಾನ್ಯ ಮಾಡಬೇಕೆಂದು ಇನ್ನೊಂದು ಗುಂಪು ವಾದಿಸುತ್ತದೆ.

ಸ್ಥಿತಾಃ ಕ್ಷಣಂ ಪಕ್ಷ್ಮಸು ತಾಡಿತಾಧರಾಃ
ಪಯೋಧರೋತ್ಸೇಧನಿಪಾತಚೂರ್ಣಿತಾಃ
ವಲೀಷು ತಸ್ಯಾಃ ಸ್ಖಲಿತಾಃ ಪ್ರಪೇದಿರೇ
ಚಿರೇಣ ನಾಭಿಂ ಪ್ರಥಮೋದಬಿಂದವಃ

ಪಾರ್ವತಿ ಶಿವನಿಗಾಗಿ ತಪಸ್ಸಿನಲ್ಲಿ ನಿರತಳಾಗಿದ್ದಾಳೆ. ಆಗ ಮಳೆಗಾಲ ಬಂತು. ಅದರ ಮೊದಲ ಹನಿಗಳು ಆಕೆಯ ಹಣೆಯ ಮೇಲೆ ಬಿದ್ದವು. ನಂತರ ಆಕೆಯ ಕಣ್ಣೆವೆಗಳ ಮೇಲೆ ಇಳಿದವು. ಅಲ್ಲಿ ಕ್ಷಣಕಾಲ ನಿಂತವು. ಬಳಿಕ ಮೂಗಿನ ಮೂಲಕ ಇಳಿದು ತುಟಿಗಳನ್ನು ಮೆಲ್ಲಗೆ ಸವರಿದವು. ಅಲ್ಲಿಂದ ಸ್ತನಗಳ ಮೇಲೆ ಝಲ್ಲನೆ ಬಿದ್ದು ಸಿಡಿದು ಚೂರಾದವು. ಆ ಚೂರು ಹನಿಗಳು ಮತ್ತೆ ಆಕೆಯ ಹೊಟ್ಟೆಯ ಮೇಲಿನ ತ್ರಿವಳಿ ರೋಮಾವಳಿಯಲ್ಲಿ ಜಾರಿ ಹೊಕ್ಕಳನ್ನು ಹೊಕ್ಕವು.
ಈ ಕಾವ್ಯವೇ ಶಿವ- ಪಾರ್ವತಿಯರ ಸಂಮಿಲನ, ಕುಮಾರಸಂಭವದ ಬಗ್ಗೆ ಇರುವುದರಿಂದ ಈ ವರ್ಣನೆ ಔಚಿತ್ಯಪೂರ್ಣವೆಂದೇ ತಿಳಿಯಬೇಕು. ಆದರೂ ಕಾಳಿದಾಸ ಸಂಯಮಿ. ಹನಿಯನ್ನು ಹೊಕ್ಕುಳಿನವರೆಗಷ್ಟೇ ತಂದಿದ್ದಾನೆ. ಕುಕವಿಗಳ ಕೈಗೆ ಸಿಕ್ಕಿದ್ದರೆ ಅದೂ ಕೆಡುತ್ತಿತ್ತು.


- ಹರಿಹರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement