ಚಿತ್ರ ಲೋಕಸಭಾ
ಚಿತ್ರ: ಶಿವಸೈನ್ಯ (1996)
ತಾರಾಗಣ: ಶಿವರಾಜ್ ಕುಮಾರ್, ನಿವೇದಿತಾ ಜೈನ್ ಹಾಗೂ ಇತರರು. ನಿರ್ದೇಶನ: ಶಿವಮಣಿ
ಪ್ರಫುಲ್ಲ ಕುಮಾರ್ ಮೊಹಂತಾ. 90ರ ದಶಕದ ರಾಷ್ಟ್ರ ರಾಜಕೀಯವನ್ನು ಗಮನಿಸಿದ್ದರಿಗೆ ಈ ಹೆಸರು ಹೆಚ್ಚು ಪರಿಚಿತ. ಅಸ್ಸಾಂ ಗಣಪರಿಷತ್ನ ಸಂಸ್ಥಾಪಕರಾಗಿ, ನಂತರ ರಾಜಕೀಯ ಪ್ರವೇಶಿಸಿ, ಎರಡು ಬಾರಿ ಅಸ್ಸಾಂ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಪ್ರಫುಲ್ಲ ಕುಮಾರ್ ಮೊಹಂತಾ, ರಾಜಕೀಯಕ್ಕೆ ಬಂದಿದ್ದರ ಹಿಂದೆ ಒಂದು ವಿಶೇಷವಾದ ಕಥಾನಕವಿದೆ. ವಿದ್ಯಾರ್ಥಿ ದೆಸೆಯಲ್ಲೇ ಸಕ್ರಿಯ ರಾಜಕಾರಣಕ್ಕೆ ಬಂದು, ಮುಂದೆ ಚಿಕ್ಕ ವಯಸ್ಸಿನಲ್ಲೇ ರಾಜ್ಯವೊಂದರ ಮುಖ್ಯಮಂತ್ರಿಯಾಗಿ ಅಂದಿನ ಮಟ್ಟಿಗೆ ಹೊಸ ದಾಖಲೆ ಬರೆದಿದ್ದರು ಮೊಹಂತಾ. ಇವರ ಜೀವನದ ಕೆಲ ಘಟನಾವಳಿಗಳಿಂದ ಸ್ಫೂರ್ತಿಗೊಂಡು ನಿರ್ದೇಶಕ ಶಿವಮಣಿ, 'ಶಿವಸೈನ್ಯ' ಚಿತ್ರವನ್ನು ತೆರೆಗೆ ತಂದರು. ಶಿವರಾಜ್ ಕುಮಾರ್ ಈ ಚಿತ್ರದ ನಾಯಕ ನಟ. ಓದು ಮುಗಿಸಿದ ನಿರುದ್ಯೋಗಿ ಯುವಕರ ಗುಂಪುಗಳನ್ನು ರಾಜಕೀಯ ಶಕ್ತಿಗಳು ಯಾವ ರೀತಿ ಉಪಯೋಗಿಸಿಕೊಳ್ಳುತ್ತಾರೆ ಎಂಬುದನ್ನು ಎಳೆ ಎಳೆಯಾಗಿ ತೋರಿಸುತ್ತಾ ಸಾಗುವ ಈ ಚಿತ್ರ, ಇಂದಿನ ಗುಡಿ, ಗುಂಡಾರಗಳೂ ಹೇಗೆ ರಾಜಕೀಯ ವ್ಯಕ್ತಿಗಳ ಹಾಗೂ ಅವರ ಕಪ್ಪು ಗಳಗಳ ಆಶ್ರಯ ತಾಣಗಳಾಗಿ ಮಾರ್ಪಡುತ್ತವೆ ಎಂಬುದನ್ನು ನೀಟಾಗಿ ಅನಾವರಣ ಮಾಡುತ್ತದೆ. ತನ್ನ ಸಬ್ಜೆಕ್ಟ್ನಿಂದಾಗಿಯೇ ಈ ಚಿತ್ರ ವಿಶೇಷ ಎನಿಸಿಕೊಂಡಿತ್ತು. ಈ ಚಿತ್ರಕ್ಕೆ ಇಳಯರಾಜಾ ಸಂಗೀತ ನೀಡಿದ್ದರು. ಲಾಂಗ್ ಗ್ಯಾಪ್ನ ನಂತರ ಸಂಗೀತಜ್ಞಾನಿ ಇಳಯರಾಜಾ ಕನ್ನಡ ಚಿತ್ರಕ್ಕೆ ಮ್ಯೂಸಿಕ್ ನೀಡಿದ್ದು ವಿಶೇಷ. ಚಿತ್ರದಲ್ಲಿ ಒಂದು ಹಾಡನ್ನು ಅವರೇ ಬರೆದು, ಹಾಡಿದ್ದಾರೆ. ಕೆಲವೇ ಚಿತ್ರಗಳಲ್ಲಿ ನಟಿಸಿದರೂ, ತನ್ನದೇ ಛಾಪೊತ್ತಿ, ನಂಬರ್ ಒನ್ ನಾಯಕಿಯಾಗುವ ಲಕ್ಷಣ ತೋರಿ ಹಟಾತ್ ನಮ್ಮಿಂದ ದೂರವಾದ ನಟಿ ನಿವೇದಿತಾ ಜೈನ್ಳ ಮೊದಲ ಚಿತ್ರವಿದು.
ಚೇತನ್ ಓ.ಆರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.