ವೋಟಿಂಗ್ ಸ್ಟಾರ್
ಚುನಾವಣೆ ಹಾಗೂ ರಾಜಕೀಯದ ಬಗೆಗೆ ನನಗೊಂದು ಹೇವರಿಕೆ ಇದೆ. ಇರೋವ್ರಲ್ಲೇ ಕಡಿಮೆ ಭ್ರಷ್ಟರನ್ನು ಆರಿಸಿ ಕಳಿಸಬೇಕಾದ ಅನಿವಾರ್ಯತೆ ನಮಗೇಕೆ? 'ಮತದಾನ ನಮ್ಮ ಹಕ್ಕು, ಅದನ್ನ ವ್ಯರ್ಥ ಮಾಡಿಕೊಳ್ಳಬಾರದು' ಎಂಬ ಕಾರಣಕ್ಕೆ ಮತಿಗೆಟ್ಟವರನ್ನು, ನೀತಿಗೆಟ್ಟವರನ್ನು ಆಯ್ಕೆ ಮಾಡಬೇಕೆ? 'ನಮ್ಮ ಮತವನ್ನು ನಿಮಗ್ಯಾರಿಗೂ ಕೊಡೋದಿಲ್ಲ' ಎಂಬಂಥ ಆಯ್ಕೆ ಬಟನ್ ಕೂಡ ಈ ಬಾರಿ ಮತಯಂತ್ರದಲ್ಲಿ ಅಳವಡಿಸಿದ್ದಾರೆ ಎಂಬ ಮಾಹಿತಿ ಓದಿ ನಿಜಕ್ಕೂ ಸಮಾಧಾನವೆನಿಸಿತು. ಈ ಬಾರಿ ಪ್ರತಿಯೊಬ್ಬರೂ ತಮ್ಮ ಮತವನ್ನು ಕೊಟ್ಟಂತೆಯೂ ಕೊಡದಂತೆಯೂ ಆಗೋ ಹಾಗೆ ಈ ಆಪ್ಷನ್ ಬಳಸಲಿ ಎಂದು ಆಸೆಪಡುತ್ತೇನೆ. ಆಗಲೇ ಭ್ರಷ್ಟ ರಾಜಕಾರಣಿಗಳಿಗೆ ಕೊಂಚಮಟ್ಟಿನ ಭಯ ಹುಟ್ಟುವುದು. ತಮ್ಮನ್ನು ಆಯ್ಕೆ ಮಾಡುವುದು ಈಗ ಪ್ರಜೆಗಳಿಗೆ ಅನಿವಾರ್ಯವಲ್ಲ ಎಂಬ ಅರಿವು ಮೂಡುವುದು. ವಿದ್ಯಾವಂತ ಯುವಕರು ದೇಶವನ್ನು ಪ್ರತಿನಿಧಿಸಬೇಕು. ಹಾಗೆ ಬರುವವರು ಇಂಜಿನಿಯರಿಂಗ್ ಮೆಡಿಕಲ್ ಥರವೇ ರಾಜಕಾರಣವನ್ನೂ ಕೂಲಂಕುಂಶವಾಗಿ, ಶಾಸ್ತ್ರೀಯವಾಗಿ ಕಲಿತು ಬರಬೇಕು. ಆಗಲೇ ದೇಶ ಉದ್ಧಾರವಾಗೋದು. ರಾಜಕಾರಣಕ್ಕೂ ಬೇರೆಲ್ಲ ಉದ್ಯೋಗಕ್ಕಿರೋ ಹಾಗೆ ನಿವೃತ್ತಿ ವಯಸ್ಸು ನಿಗದಿಪಡಿಸಬೇಕು. ಒಟ್ಟಾರೆ ಈ ಸಮಯದಲ್ಲಿ ಹೇಳೋದಿಷ್ಟೇ..'ನಾವು ಇಷ್ಟ ಪಟ್ಟು ವೋಟ್ ಹಾಕೋ ಪರಿಸ್ಥಿತಿ ಬರಬೇಕು. ಕಷ್ಟಪಟ್ಟು ಅನಿವಾರ್ಯ ಎಂಬಂತೆ ವೋಟ್ ಹಾಕುವ ಹಾಗಾಗಬಾರದು.
-ಜಯಲಕ್ಷ್ಮಿ ಪಾಟೀಲ್,
ಕಿರುತೆರೆ ನಟಿ, ರಂಗಭೂಮಿ ಕಲಾವಿದೆ ಹಾಗೂ ಬರಹಗಾರ್ತಿ (ಮುಕ್ತ ಮುಕ್ತ ಧಾರಾವಾಹಿ ಖ್ಯಾತಿ)