ಒಂಭತ್ತು ಹೀಗಿತ್ತು
ಭಾರತವನ್ನೋ, ಈ ಜಗತ್ತನ್ನೋ ರಾಜಕಾರಣಿಗಳೇ ಬದಲಿಸಬೇಕಂತಿಲ್ಲ. ಅದು ತನ್ನಿಂತಾನೆ ಬದಲಾಗುತ್ತಿರುತ್ತದೆ. 2009ರ...
ಭಾರತವನ್ನೋ, ಈ ಜಗತ್ತನ್ನೋ ರಾಜಕಾರಣಿಗಳೇ ಬದಲಿಸಬೇಕಂತಿಲ್ಲ. ಅದು ತನ್ನಿಂತಾನೆ ಬದಲಾಗುತ್ತಿರುತ್ತದೆ. 2009ರ ಚುನಾವಣೆ ಸರ್ರನೆ ಸರಿದು ಈಗ 2014ರ ಪರೀಕ್ಷೆಯ ಹೊಸ್ತಿಲಲ್ಲಿದ್ದೇವೆ. ಈ ಐದು ವರ್ಷ, ಶತಮಾನದಷ್ಟು ಬದಲಾವಣೆ ಕಂಡಿದೆ. 2009ರಲ್ಲಿದ್ದ ಸಂಗತಿ ಈ ಹೊತ್ತಲ್ಲಿ ನೆನಪಷ್ಟೇ. 2009ರಲ್ಲಿ ಇಲ್ಲದಿದ್ದದ್ದು ಈಗ ಪವಾಡ ಸೃಷ್ಟಿ.
2009ರಲ್ಲಿ ಅರವಿಂದ ಕೇಜ್ರಿವಾಲನ ತಲೆಯೊಳಗೆ ಪಾಲಿಟಿಕ್ಸಿನ ಪಸೆಯೇ ಇರಲಿಲ್ಲ. ಆತನ ಹೆಸರು ಟೈಪಿಸಿ ಸರ್ಚ್ ಕೊಟ್ಟರೆ, 'ಡಿಡ್ ನಾಟ್ ಮ್ಯಾಚ್ ಎನಿ ಡಾಕ್ಯುಮೆಂಟ್' ಎನ್ನುತ್ತಾ ಗೂಗಲ್ ಬ್ರೇಕ್ ಹೊಡೆದ ಬೈಕಿನಂತೆ ನಿಲ್ಲುತ್ತಿತ್ತು. ಟಾಟಾ ಸ್ಟೀಲ್ಸ್‌ನವರಿಗೆ ರಾಜೀನಾಮೆ ಕೈಗಿಟ್ಟು, ಐಆರ್‌ಎಸ್ ಪರೀಕ್ಷೆ ಪಾಸು ಮಾಡಿಕೊಂಡಿದ್ದ ಕೇಜ್ರಿ, ಆದಾಯ ತೆರಿಗೆ ಇಲಾಖೆಯನ್ನು ಸೇರಿದ್ದರಷ್ಟೇ. ಸರಳ ತೆರಿಗೆ ನೀತಿ ಜಾರಿ ತಂದು, ಗೆಳೆಯ ಮನೀಶ್ ಸಿಸೋಡಿಯಾ ಜೊತೆ ಪಬ್ಲಿಕ್ ಕಾಸ್ ರಿಸರ್ಚ್ ಫೌಂಡೇಶನ್ ಸೇವಾ ಸಂಸ್ಥೆ ತೆರೆದು ಹೆಚ್ಚೆಂದರೆ ಒಂದೈನೂರು ಮಂದಿಗೆ ಪರಿಚಿತರಿದ್ದರೇನೋ. ಈಗ ಕೇಜ್ರಿವಾಲ್ ಹೆಸರು ಎಲ್ಲರ ಮನೆಯ 'ವಾಲ್'ಗೂ ಗೊತ್ತು.
ವಾಟ್ಸ್‌ಆ್ಯಪ್‌ನ ಸಂಸ್ಥಾಪಕ, ಉಕ್ರೇನಿನ ಜಾನ್‌ಕೌಮ್ ಎಂಬ ಪೋರ ಕಾಲೇಜಿನ ಫೀಸು ಕಟ್ಟಲಾಗದೆ 2009ರಲ್ಲಿ ಗಳಗಳನೆ ಅತ್ತಿದ್ದ. ಇವತ್ತು ಅವನ ಅಕೌಂಟಲ್ಲಿ ಫೇಸ್‌ಬುಕ್‌ನ ಯಜಮಾನ ಮಾರ್ಕ್ ಝುಕರ್‌ಬರ್ಗ್ ಕೊಟ್ಟ 19 ಶತಕೋಟಿ ಡಾಲರ್ ಜಮಾವಣೆಯಾಗಿದೆ. ಆಗಿನ್ನೂ ಟ್ವಿಟ್ಟರ್ ಅಕೌಂಟನ್ನೇ ತೆರೆದಿರದ ಸಚಿನ್‌ಗೆ, ಈಗ 4,164,699 ಫಾಲೋವರ್ಸ್!
ಅವತ್ತು ಗಂಡನ ಕೈಹಿಡಿದು ಸ್ಲಿಮ್ಮಾಗಿದ್ದ ಐಶ್ವರ್ಯಾ ರೈ ಸೊಂಟದಲ್ಲಿ ಇವತ್ತು, ಮಗಳು ಆರಾಧ್ಯ ಬೆರಳು ಚೀಪುತ್ತಾ ಕೂತಿದ್ದಾಳೆ. ಐಶ್ವರ್ಯಾ ಸೊಂಟದ ಅಳತೆ ಹೆಚ್ಚಾಗಿದೆ. ಪ್ರವಾಸೋದ್ಯಮ ಸಚಿವರಾಗಿ ಕೋಟು ತೊಟ್ಟಿದ್ದ ಅಂದಿನ ಜನಾರ್ದನ ರೆಡ್ಡಿಯ ಮೈಮೇಲಿಂದು ಟೈ ಇಲ್ಲದ ಜೈಲ್ ಯೂನಿಫಾರಂ. ಅಂದು ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿ ನಿರರ್ಗಳ ಭಾಷಣ ಬಿಗಿದ ಆಡ್ವಾಣಿ, ಈಗ ಅಷ್ಟೇನು ಸಾರ್ವಜನಿಕ ದರುಶನ ಕೊಡುತ್ತಿಲ್ಲ.
2009ರಲ್ಲಿ ದೆಹಲಿ ಹೈಕೋರ್ಟ್ ಸಲಿಂಗ ಕಾಮಿಗಳ ಮದುವೆಗೆ ಜೈ ಎಂದಿತ್ತು. ಇಂದು ಸುಪ್ರಿಂ ಕೋರ್ಟು, 'ಛೇ ಛೇ ಅದು ಅಪರಾಧ' ಅಂತ ತೀರ್ಪಿತ್ತು 377ನೇ ವಿಧಿಯ ಚಾಟಿ ಬೀಸಿದೆ. ಆ ದಿನಗಳಲ್ಲಿ ಶಶಿ ತರೂರ್, ಸುನಂದಾ ಪುಷ್ಕರ್‌ಗೆ ಮೇಲಿಂದ ಮೇಲೆ ಮೇಲ್ ಕಳುಹಿಸಿ, ಕಾಲ್ ಮಾಡಿ ಸಲ್ಲಾಪಿಯಾಗಿದ್ದರು. ಈಗ ತರೂರ್ ಮೊಬೈಲಲ್ಲಿ ಪುಷ್ಕರ್ ನಂಬರ್ ಡಿಲೀಟ್!
2009ರಲ್ಲಿ ಚುಟುಕು ವರ್ಲ್ಡ್‌ಕಪ್ ಗೆದ್ದು, ದೇಶಕ್ಕೆಲ್ಲ ಸರ್ಕಾರಿ ರಜೆ ತಂದುಕೊಟ್ಟು ಸಂಭ್ರಮಿಸಿದ್ದ ಪಾಕಿಸ್ತಾನ ಇವತ್ತು ಸೆಮೀಸ್‌ಗೆ ಬಾರದೆ ಮನೆದಾರಿ ಹಿಡಿದಿದೆ. ಅಂದು ಸೂಪರ್ 8ರ ಅಷ್ಟೂ (3) ಪಂದ್ಯಗಳನ್ನು ಸೋತು ಸುಣ್ಣವಾಗಿದ್ದ ಭಾರತ ಇಂದು ಫೈನಲ್ ಕನಸು ಕಂಡಿದೆ. ಇದೇ ಚುನಾವಣೆಯ ಕಾರಣಕ್ಕೆ ಐಪಿಎಲ್ ಅಂದು ಆಫ್ರಿಕಾ ಕಡೆ ಸಫಾರಿ ಹೊರಟಿತ್ತು. ಈ ಬಾರಿಯ ಆಟವೇನಿದ್ದರೂ ಅರಬ್ ಮರುಭೂಮಿಯಲ್ಲೇ! 2009ರ ಚಾಂಪಿಯನ್ ಆಗಿದ್ದ ಡೆಕ್ಕನ್ ಚಾರ್ಜರ್ಸ್‌ನ ಹೆಸರು ಇಂದು ಟೀಂ ಲಿಸ್ಟ್‌ನಲ್ಲೇ ಇಲ್ಲ. ಅದೀಗ ಸನ್‌ರೈಸರ್ಸ್ ಹೈದರಾಬಾದ್. ಆಸೀಸ್‌ನ 'ಗಿಲ್ಲಿ'ಯಿಂದ ವರ್ಗವಾದ ಕ್ಯಾಪ್ಟನ್ ಟೋಪಿ ಶಿಖರ್ ಧವನ್ ತಲೆವರೆಗೂ ಬಂದಿದೆ.
ಚಂದ್ರಶೇಖರ ಕಂಬಾರರು ಅಂದು ಜ್ಞಾನಪೀಠಿಯೇ ಆಗಿರಲಿಲ್ಲ. 'ಎಲ್ಲಿದೆ ಶಿವಾಪುರ?' ಕವನ ಸಂಕಲನ ಬಿಡುಗಡೆ ಆಗ ದೊಡ್ಡ ಸುದ್ದಿಯೇ ಆಗಲಿಲ್ಲ. ಇಂದು ಅವರ ಸಣ್ಣ ಹೇಳಿಕೆಯೂ ಸುದ್ದಿಯೇ. ಆಗಿನ್ನೂ ಸರಸ್ವತಿ ಸಮ್ಮಾನ್ ಗರಿ ಧರಿಸದ ಎಸ್.ಎಲ್. ಭೈರಪ್ಪ 'ಕವಲು' ಕಾದಂಬರಿಯ ಹಾದಿಯಲ್ಲಿದ್ದರು. ಈಗ 'ಯಾವ ಕಾದಂಬರಿ ಬರೆಯುತ್ತಿದ್ದೀರಿ?' ಅಂತ ಕೇಳಿದರೆ, 'ಅಂಥದ್ದೇನು ಹರಳುಗಟ್ಟಿಲ್ಲ' ಅಂತ ಖಾಲಿತನ ತೋರಿಸುತ್ತಾರೆ.
'ಚಂದ್ರಯಾನ-1' ಅನ್ನು ಆಕಾಶಕ್ಕೆ ತೂರಿ, 2009ರಲ್ಲಿ ನೀರಿನಂಶ ಪತ್ತೆ ಹಚ್ಚಿದ್ದ ಇಸ್ರೋ ಈಗ ಮಂಗಳನಲ್ಲಿ ನೀರಿದೆಯಾ ಎಂಬ ಕಾತರದಲ್ಲಿದೆ. ಅಂದು ಹೆಸರಿಗಾದರೂ ಟೆಲಿಗ್ರಾಂ ಇತ್ತು. 2014ರ ಈ ಹೊತ್ತಲ್ಲಿ ಅದು ಮಸಣಪಾಲು. ಇಪ್ಪತ್ತೈದು ಪೈಸೆ, ಐವತ್ತು ಪೈಸೆಗಳು ಕ್ಯಾಷಿಯರ್ ಬಾಕ್ಸ್‌ನಿಂದ ಕಾಲ್‌ಕಿತ್ತು ಮ್ಯೂಸಿಯಂ ಸೇರಿವೆ. ಹೋರಾಟ- ಅಭಿವೃದ್ಧಿಯಿಂದ ನೆನಪಾಗುತ್ತಿದ್ದ ಸಿಎಂ ಯಡಿಯೂರಪ್ಪ, ಇಂದು ಅಧಿಕಾರ ಕಳೆದುಕೊಂಡ ಮೇಲೆ ಆ ಕಾರಣಕ್ಕಾಗಿ ಅಷ್ಟೇನೂ ನೆನಪಾಗುತ್ತಿಲ್ಲ.
ಅಂದು 'ಶಟ್ ಅಪ್ ಆ್ಯಂಡ್ ಫ... ಮಿ' ಎಂಬ ಸನ್ನಿ ಲಿಯೋನಳ ಪೋರ್ನ್ ಸಿನಿಮಾ ಬಂದಾಗ ಭಾರತೀಯರು ಕದ್ದೂಮುಚ್ಚಿ ಕಂಪ್ಯೂಟರಿನ ಕಿರುಪರದೆ ಮೇಲೆ ಕಂಡು ಖುಷಿಪಟ್ಟಿದ್ದರು. ಇವತ್ತು ಅವಳ 'ರಾಗಿಣಿ ಎಂಎಂಸ್-2' ಹಿಂದಿ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಲು ಅಪ್ಪ- ಅಮ್ಮನ ಅನುಮತಿ ಸಿಗುತ್ತದೆ. ಆ ವರ್ಷ ರಾಜ್‌ಕುಂದ್ರಾನನ್ನು ಕೈಹಿಡಿದ ಶಿಲ್ಪಾ ಶೆಟ್ಟಿಗೆ ಈಗ ವಿಯಾನ್ ಕುಂದ್ರ ಎಂಬ ಹೆಸರಿನ ಎರಡು ವರುಷದ ಮಗನಿದ್ದಾನೆ. ಕುಚುಕು ಗೆಳೆಯನ ಪರ ಪ್ರಚಾರಕ್ಕೆ ಬಂದರೂ ಅಂದು ಅಂಬರೀಷ್‌ರನ್ನು ಗೆಲ್ಲಿಸಲಾಗಲಿಲ್ಲ ನಟ ವಿಷ್ಣುವರ್ಧನ್‌ಗೆ. ಇಂದು ಆಸ್ಪತ್ರೆಯಲ್ಲಿರುವ ಗೆಳೆಯನಿಗೆ ಸಾಂತ್ವನ ಹೇಳಲೂ ವಿಷ್ಣುವರ್ಧನ್ ಇಲ್ಲ.
2009, ಸಚಿನ್ ಪಾಲಿಗೆ 20ನೇ ವರ್ಷದ ಕ್ರಿಕೆಟ್ ಜೀವನ. ಈ ಹೊತ್ತಿನಲ್ಲಿ 'ಕ್ರಿಕೆಟ್ ದೇವರು' ಮೈದಾನದಿಂದ ಹೊರಕ್ಕೆ. ಒಲಿಂಪಿಕ್‌ನಲ್ಲಿ ಕಂಚು ಗೆದ್ದು ಹೀರೋ ಎನಿಸಿಕೊಂಡಿದ್ದ ವಿಜೇಂದರ್ ಸಿಂಗ್, ಇಂದು ಡ್ರಗ್ ವಿವಾದದ ಸುಳಿಯಲ್ಲಿ ಸಿಲುಕಿ ವಿಲನ್ ರೀತಿ ಕಾಣಿಸುತ್ತಾರೆ. ಆ ವರ್ಷ ನೆಹರು ಕಪ್ ಗೆಲ್ಲಿಸಿಕೊಟ್ಟ ಭೈಚುಂಗು ಭುಟಿಯಾ, ಇಂದು ಡಾರ್ಜಿಲಿಂಗ್‌ನ 'ರಾಜಕೀಯ ಕಪ್'ನಲ್ಲಿ ಗೆಲ್ಲುವ ನಿರ್ಣಯವನ್ನು ಮತದಾರನ ಕೈಗಿಟ್ಟಿದ್ದಾರೆ. ಮಹಾರಾಷ್ಟ್ರದ ಹಳ್ಳಿಗಳಲ್ಲಿ ಗುಟ್ಕಾ, ಮದ್ಯ ಮಾರಾಟ ವಿರುದ್ಧ ಹೋರಾಡುತ್ತಿದ್ದ ಅಣ್ಣಾ ಹಜಾರೆ ಆಗ ಕೇವಲ ಲೋಕಲ್ ಸುದ್ದಿ. ಇಂದು ಅವರ ಒಂದು ಚಿತ್ರ ಮುಖಪುಟದ ತೂಕ ಹೆಚ್ಚಿಸುತ್ತಿದೆ. ರಜನೀಕಾಂತ್ ಆಗ 'ಎಂಧಿರನ್' ಶೂಟಿಂಗಿನಲ್ಲಿದ್ದರು, ಈಗವರು 'ಕೊಚ್ಚಾಡಿಯನ್' ಕೈಯಲ್ಲಿಟ್ಟುಕೊಂಡು ಎಲೆಕ್ಷನ್ ಮುಗಿಯುವುದನ್ನೇ ಕಾಯುತ್ತಿದ್ದಾರೆ. ಕಾಮಗಾರಿಯಿಂದ ರೋಡ್ ಎಲ್ಲ ರಂಪ ಮಾಡಿ 'ಬೇಗ ಕಟ್ರೋ' ಎಂದು ಬಯ್ಯಿಸಿಕೊಳ್ಳುತ್ತಿದ್ದ ಮೆಟ್ರೋ, ಇಂದು ಸುಖಕರ ಪಯಣಕ್ಕೆ ತೆರೆದುಕೊಂಡಿದೆ.
ಈಗಿನ 2014, ಮುಂದೈದು ವರುಷದಲ್ಲಿ 2019 ಆಗುತ್ತದೆ. ಆ ಅಂತರ ಇನ್ನೇನು ಮಾಯ ಮಾಡಿರುತ್ತದೋ? ಇನ್ನೇನು ಹೊಸತನ್ನು ಮೂಡಿಸಿರುತ್ತದೋ? ಒಟ್ಟಿನಲ್ಲಿ ಒಪ್ಪಿಕೊಳ್ಳಲೇಬೇಕು; ಜಗದ ಬದಲಾವಣೆಗೆ ರಾಜಕೀಯದ ಅಗತ್ಯವಿಲ್ಲ. ಅದು ತನ್ನಿಂತಾನೆ ಆಗುತ್ತಲೇ ಇರುತ್ತದೆ!
ಐದು ವರ್ಷ ಎಂದರೆ ಯುಗವೊಂದು ಸರಿದಂತೆ. ಪಕ್ಷ, ಸರ್ಕಾರ, ಮತದಾರ ಎಲ್ಲವೂ ಈ ಅವಧಿಯಲ್ಲಿ ಪುನರಪಿ ಜನನಂ ಪುನರಪಿ ಮರಣಂ. 2014ರ ಈ ಚುನಾವಣೆಯ ಹೊತ್ತಿನಲ್ಲೊಂದು ಹಳಹಳಿಕೆ: 2009ರ ಕಾಲ ಹೇಗಿತ್ತು?
2009 2014
ಚಿನ್ನ (10 ಗ್ರಾಂ) 16,000 30,917
ಹಾಲು (ಲೀ.) 21 28 ಪೆಟ್ರೋಲ್ 44.63 79.19
ಕನ್ನಡಪ್ರಭ 2.50 3.50
ಬಿಎಂಟಿಸಿ ಡೈಲಿ ಪಾಸ್ 30 55
ಡಾಲರ್ 48 60.38
ಫ್ರೀ ಎಸ್ಸೆಮ್ಮೆಸ್(ತಿಂಗಳಿಗೆ) ಅನ್‌ಲಿಮಿಟೆಡ್ 100ಡಟಡ
ಇಡ್ಲಿವಡೆ (ಪ್ಲೇಟ್) 20 40
ಮಿನರಲ್ ವಾಟರ್ (ಲೀ) 10 20
ಟೀ/ ಕಾಫಿ 7 15
ಗ್ಯಾಸ್ 325 423
- ಕೀರ್ತಿ ಕೋಲ್ಗಾರ್