ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹಣ್ಣಿನ ಬುಟ್ಟಿ ಆಗದಿರಲಿ ಖಾಲಿ

ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್ ಬಾರದಂತೆ ತಡೆಯಬಹುದೇ? ಖಂಡಿತ ಸಾಧ್ಯವಿದೆ. ಮಾತ್ರವಲ್ಲ, ಅದಕ್ಕೆ ಅತ್ಯಂತ...

Rashmi Kasaragodu
Updated On : 7 Apr 2014, 2:52 am

ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್ ಬಾರದಂತೆ ತಡೆಯಬಹುದೇ? ಖಂಡಿತ ಸಾಧ್ಯವಿದೆ. ಮಾತ್ರವಲ್ಲ, ಅದಕ್ಕೆ ಅತ್ಯಂತ ಸುಲಭದ ಪರಿಹಾರವೂ ಇದೆ. ಅದೆಂದರೆ ಹಣ್ಣುಗಳನ್ನು ಜಾಸ್ತಿ ಸೇವಿಸುವುದು. ನಮ್ಮ ಹಿರಿಯರು ಊಟದ ನಂತರ ಏನಾದರೂ ಹಣ್ಣು ತಿನ್ನಬೇಕು ಎಂದು ಹೇಳಿದ್ದು ಸುಮ್ಮನೇ ಅಲ್ಲ. ನಮ್ಮನ್ನು ಅನೇಕ ಕಾಯಿಲೆಗಳಿಂದ ದೂರ ಇಡುವ, ಪಾರುಮಾಡುವ ಶಕ್ತಿ ಹಣ್ಣುಗಳಿಗೆ ಇದೆ. ದಿನವೂ ಯಾವ ಹಣ್ಣಾದರೂ ಇರಲಿ, ಒಂದೆರಡು ಹೋಳು ಹಣ್ಣು ತಿನ್ನುವುದು ಸೂಕ್ತ. ಹಣ್ಣು ಆಹಾರ ಪದ್ಧತಿಯ ಭಾಗವೇ ಆಗಿಬಿಟ್ಟರೆ ಬಹಳಷ್ಟು ಆರೋಗ್ಯ ತೊಂದರೆಗಳು ನಮ್ಮ ಬಳಿ ಸುಳಿಯುವುದೇ ಇಲ್ಲ.
ಹಣ್ಣುಗಳ ಸೇವನೆಯಿಂದ ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್ ಅನ್ನು ದೂರ ಇಡಲು ಸಾಧ್ಯ ಎನ್ನುವ ಸಂಗತಿ ಹಲವಾರು ಸಂಶೋಧನೆಗಳಿಂದ ಸಾಬೀತಾಗಿದೆ. ಮೇದೋಜ್ಜೀರಕ ಗ್ರಂಥಿ, ಪಿತ್ತಕೋಶ, ಜೀರ್ಣಾಂಗ ವ್ಯೂಹಗಳನ್ನು ಹಣ್ಣುಗಳು ಸುಸ್ಥಿತಿಯಲ್ಲಿ ಇಡಬಲ್ಲವು. ಡ್ರೈಫ್ರೂಟ್ಸ್ ಕೂಡ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರಬಲ್ಲವು. ಸಿಟ್ರಸ್ ಜಾತಿಯ ಹಣ್ಣುಗಳು ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್ ಬಾರದಂತೆ ತಡೆಯುವ ಸಾಮರ್ಥ್ಯ ಹೊಂದಿವೆ ಎನ್ನುವುದು ಬಹಳಷ್ಟು ಸಂಶೋಧಕರ ಅಭಿಪ್ರಾಯ. ಅದರಲ್ಲೂ ಟೊಮೆಟೊ ಅದ್ಭುತವಾದ ಪರಿಣಾಮ ಬೀರಬಲ್ಲದು ಎನ್ನುತ್ತವೆ ಬಹಳಷ್ಟು ವರದಿಗಳು.
ಲೂಸಿಯಾನಾದಲ್ಲಿ ಕಾಜುನ್ ಎನ್ನುವ ಜನಾಂಗವಿದೆ. ಅವರು ಸಸ್ಯಾಹಾರದಿಂದ ಬಲುದೂರ. ನಿತ್ಯವೂ ಪ್ರಾಣಿಜನ್ಯ ಆಹಾರಗಳ ಸೇವನೆ. ಸೋಜಿಗ ಎಂದರೆ ಅವರಲ್ಲಿ ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ಗೆ ತುತ್ತಾಗುವವರೂ ಅಧಿಕ. ಅಮೆರಿಕದ ನ್ಯಾಶನಲ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್ ಈ ಕುರಿತು ಅಧ್ಯಯನ ಕೈಗೊಂಡಾಗ ಬೆಳಕಿಗೆ ಬಂದ ಸಂಗತಿ ಎಂದರೆ, ಪ್ರಾಣಿಜನ್ಯ ಕೊಬ್ಬು ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ಗೆ ಉತ್ತೇಜನ ನೀಡುತ್ತದೆ ಎನ್ನುವುದು. ಕೊನೆಗೆ ಅವರಲ್ಲಿ ಕೆಲವರಿಗೆ ಪ್ರತಿದಿನವೂ ಏನಾದರೂ ಹಣ್ಣು ಸೇವಿಸಲು ಸಲಹೆ ಮಾಡಲಾಯಿತು. ಬಾಳೆಹಣ್ಣು, ಕಿತ್ತಳೆ, ಸ್ಟ್ರಾಬೆರಿ, ಸೇಬು, ಮೋಸಂಬಿ ಇತ್ಯಾದಿಗಳನ್ನು ಸೇವಿಸಲು ಸೂಚಿಸಲಾಯಿತು. ಕೆಲಕಾಲದ ಬಳಿಕ ಪರೀಕ್ಷಿಸಿದಾಗ ತಮ್ಮ ಎಂದಿನ ಆಹಾರದ ಜತೆಗೆ ಹಣ್ಣುಗಳನ್ನೂ ಸೇವಿಸುತ್ತಿದ್ದವರಲ್ಲಿ ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ನ ಅಪಾಯ ಬಹಳ ಕಡಿಮೆ ಇತ್ತು. ಅಂದರೆ ಪ್ರಾಣಿಜನ್ಯ ಕೊಬ್ಬಿನ ಪರಿಣಾಮವನ್ನೂ ಕಡಿಮೆ ಮಾಡುವ ಸಾಮರ್ಥ್ಯ ಹಣ್ಣುಗಳಿಗೆ ಇದೆ ಅಂತಾಯಿತು.
ಹಣ್ಣುಗಳಲ್ಲಿ ಇರುವ ವಿಟಮಿನ್ 'ಸಿ' ಮೇದೋಜ್ಜೀರಕ ಗ್ರಂಥಿ ಕ್ಯಾನ್ಸರ್‌ನಿಂದ ನಮ್ಮನ್ನು ಪಾರುಮಾಡುತ್ತದೆ ಎನ್ನುವುದು ಈಗ ರಹಸ್ಯವಾಗಿ ಉಳಿದಿಲ್ಲ. ವಿವಿಧ ಬಗೆಯ ಕ್ಯಾನ್ಸರ್ ತಡೆಯುವ 15ಕ್ಕೂ ಅಧಿಕ ರಾಸಾಯನಿಕಗಳು ಹಣ್ಣುಗಳಲ್ಲಿ ಇವೆ.ಟಿ


(ಮುಂದುವರಿಯುವುದು)

ಮೊ.9900113699 (ಎಸ್‌ಎಂಎಸ್‌ಗೆ ಮಾತ್ರ)

-ಡಾ. ಪಿ. ಸದಾನಂದ ಮೈಯ್ಯ
sadananda.maiya@gmail.com



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement