ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಕಾಂಗ್ರೆಸ್ ಬಣವೆ

ಆಂತರಿಕ ಗುದ್ದಾಟ, ಭಿನ್ನಮತಗಳಿಲ್ಲದ ರಾಜಕೀಯ ಪಕ್ಷ ಭೂತಕನ್ನಡಿ ಹಾಕಿ ಹುಡುಕಿದರೂ ಸಿಗುವುದು ಕಷ್ಟ. ಪ್ರತಿ ಪಕ್ಷದಲ್ಲೂ ...

Rashmi Kasaragodu
Updated On : 8 Apr 2014, 3:31 am

ಆಂತರಿಕ ಗುದ್ದಾಟ, ಭಿನ್ನಮತಗಳಿಲ್ಲದ ರಾಜಕೀಯ ಪಕ್ಷ ಭೂತಕನ್ನಡಿ ಹಾಕಿ ಹುಡುಕಿದರೂ ಸಿಗುವುದು ಕಷ್ಟ. ಪ್ರತಿ ಪಕ್ಷದಲ್ಲೂ ಒಂದಲ್ಲ ಒಂದು ಒಳ ಸಂಘರ್ಷ ಇದ್ದೇ ಇರುತ್ತದೆ. ಸ್ವಾತಂತ್ರ್ಯದಷ್ಟೇ ಚರಿತ್ರೆ ಹೊಂದಿರುವ ಕಾಂಗ್ರೆಸ್ ಮನೆಯೊಳಗಿನ ಕಚ್ಚಾಟಗಳದ್ದೇ ಒಂದು ದೊಡ್ಡ ಚರಿತ್ರೆ. ಕಾಂಗ್ರೆಸ್ ಪಕ್ಷ ಹಳ್ಳಿ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದ ವರೆಗೂ 'ಒಡೆದು ಆಳಿದ' ಬಣಗಳ ಸಂಖ್ಯೆ ದೊಡ್ಡದು.
ಸ್ವಾತಂತ್ರ್ಯಕ್ಕೂ ಮುನ್ನ ಎರಡು ಬಾರಿ ಕಾಂಗ್ರೆಸ್ ಇಬ್ಭಾಗವಾಗಿತ್ತು. ಹಲವು ಸಂಕಟಗಳನ್ನು ಎದುರಿಸುತ್ತಲೇ ಬಂದ ಕಾಂಗ್ರೆಸ್‌ಗೆ ತನ್ನ ಮನೆ ಜಗಳವನ್ನು ತಣ್ಣಗಾಗಿಸುವುದಕ್ಕಿಂತ ಅಧಿಕಾರ ಹಿಡಿಯುವುದೇ ಮುಖ್ಯವಾಗಿತ್ತು. ಹೀಗಾಗಿ ಪಕ್ಷದ ಬುನಾದಿಗೆ ಹೆಗಲು ಕೊಟ್ಟವರು ನಿಧಾನವಾಗಿ 'ಕೈ'ಗೆ ಟಾಟಾ ಹೇಳುತ್ತ ಬಂದರು. ಹೊರನಡೆದವರು ಸುಮ್ಮನೆ ಕೂರಲಿಲ್ಲ. ತಮ್ಮ ಪ್ರಭಾವ ಬಳಸಿಕೊಂಡು ಅವರದ್ದೇ ಹೊಸ ಪಕ್ಷ ಕಟ್ಟಲಾರಂಭಿಸಿದರು. ಹೀಗೆ ಕೆಲ ಮೂಲ ಕಾಂಗ್ರೆಸ್ ಧುರಿಣರು ಪಕ್ಷ ಕಟ್ಟಿದರೂ ಮತ್ತೆ 'ಹಳೆ ಹೆಂಡತಿ ಪಾದವೇ ಗಟ್ಟಿ' ಎನ್ನುವಂತೆ ಕಾಂಗ್ರೆಸ್‌ಗೆ ಮರಳಿದರು. ಕೆಲವು ಪಕ್ಷಗಳು ಕಣ್ಮರೆಯಾದವು. ಇನ್ನು ಕೆಲವರ ಪಕ್ಷಗಳು ಆಯಾ ಪಾತ್ರಗಳಲ್ಲಿ ಬಲವಾಗಿ ನೆಲೆಯೂರಿದರೆ, ಹೆಚ್ಚಿನ ಬಣಗಳು ಜನತಾ ಪಾರ್ಟಿಯಲ್ಲಿ ಸೇರ್ಪಡೆಗೊಂಡವು.
ಕಾಂಗ್ರೆಸ್‌ನಿಂದ ಹೊರಬಂದವರಿಂದ ಹುಟ್ಟಿಕೊಂಡ ಪಕ್ಷಗಳ ಪೈಕಿ ಮೊದಲು ಕಾಣುವುದು ಸ್ವರಾಜ್ ಪಾರ್ಟಿ. ಚಿತ್ತರಂಜನ್ ದಾಸ್ ಹಾಗೂ ದೇಶದ ಮೊದಲ ಪ್ರಧಾನಿ ನೆಹರು ತಂದೆ ಮೋತಿಲಾಲ್ ನೆಹರು ಅವರ ಮುಂಚೂಣಿಯಲ್ಲಿ ಕಾಂಗ್ರೆಸ್‌ನಿಂದ ಆಚೆ ನಡೆದವರು 1923ರಲ್ಲಿ ಸ್ವರಾಜ್ ಪಾರ್ಟಿ ಸ್ಥಾಪಿಸಿದರು. ಆದರೆ, ಈ ಪಕ್ಷ ಬಂಗಾಳಕ್ಕೆ ಮಾತ್ರ ಸೀಮಿತಗೊಂಡಿತು. ಜೊತೆಗೆ ಒಂದು ರಾಜಕೀಯ ಪಕ್ಷವನ್ನು ನಡೆಸುವುದು ಆಗಿನ ಕಾಲಕ್ಕೆ ಸುಲಭವಾಗಿರಲಿಲ್ಲ. ಹೀಗಾಗಿ 1935ರಲ್ಲಿ ಸ್ವರಾಜ್ ಪಾರ್ಟಿ ನೇತಾರರು ಕಾಂಗ್ರೆಸ್‌ಗೆ ಮರಳಿದರು.
'ಯುವ ಸಮೂಹದಿಂದಲೇ ದೇಶ ಅಭಿವೃದ್ಧಿಯಾಗಲು ಸಾಧ್ಯ' ಎನ್ನುತ್ತಿದ್ದ ಸುಭಾಷ್‌ಚಂದ್ರ ಬೋಸ್ ಕಾಂಗ್ರೆಸ್‌ನ ನೆರಳಿನಿಂದ ಹೊರಬಂದರು. ಪ್ರಮುಖರಾದ ಶಿಲ್‌ಭದ್ರ ಯೋಗಿ, ಶಾರ್ದೂಲ್ ಸಿಂಗ್, ಕವಿಶ್ವರ್ ಕೂಡ ಬೋಸ್‌ಗೆ ಜೊತೆಯಾದರು. ಇವರೆಲ್ಲ 1939ರಲ್ಲಿ ಆಲ್ ಇಂಡಿಯಾ ಫಾರ್‌ವರ್ಡ್ ಬ್ಲಾಕ್ ಸ್ಥಾಪಿಸಿದರು. ಪ್ರಸ್ತುತ ಈ ಪಕ್ಷ ಎಡಪಂಥೀಯ ಕೂಟದಲ್ಲಿ ಉಸಿರಾಡುತ್ತಿದೆ.
ಸ್ವಾತಂತ್ರ್ಯ ಹೋರಾಟಗಾರ ಜೀವತ್‌ರಾಮ್ ಕೃಪಲಾನಿ ಕೂಡ ಕಾಂಗ್ರೆಸ್‌ನಿಂದ ಹೊರಬಂದವರೇ. ಇವರ ನಾಯಕತ್ವದಲ್ಲಿ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ ಹುಟ್ಟಿಕೊಂಡಿತು. ಮೈಸೂರು, ಮದ್ರಾಸ್ ಹಾಗೂ ವಿಂಧ್ಯ ಪ್ರದೇಶಗಳಲ್ಲಿ ಸದ್ದು ಮಾಡುತ್ತಲೇ ದೆಹಲಿ ತಲುಪಿತು. 1951ರಲ್ಲಿ ಹುಟ್ಟಿದ ಈ ಪಕ್ಷ, ಸೋಷಿಯಲಿಸ್ಟ್ ಪಾರ್ಟಿ ಆಗಿ ಬದಲಾಯಿತು. ಹೆಚ್ಚು ಕಾಲ ಬದುಕದ ಈ ಪಕ್ಷವನ್ನು ಕಳೆದ ವರ್ಷ ಫೆಬ್ರವರಿ 21ರಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಶಿವಕುಮಾರ್ ಶರ್ಮ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿ ಹೆಸರಿನಲ್ಲಿ ಮತ್ತೆ ಪ್ರಾರಂಭಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ 1951ರಲ್ಲಿ ಹುಟ್ಟಿಕೊಂಡ ಹೈದರಾಬಾದ್ ಸ್ಟೇಟ್ ಪ್ರಜಾ ಪಾರ್ಟಿಗೆ ಹೆಗಲು ಕೊಟ್ಟಿದ್ದು ಟಂಗುಟೂರಿ ಪ್ರಕಾಶಂ ಹಾಗೂ ಎನ್‌ಜಿ ರಂಗ. ಆದರೆ, ಹೆಚ್ಚು ಕಾಲ ನಿಲ್ಲದ ಈ ಪಕ್ಷ ಮುಂದೆ ಕೃಪಲಾನಿ ಅವರ ಕಿಸಾನ್ ಮಜ್ದೂರ್ ಪ್ರಜಾ ಪಾರ್ಟಿಯಲ್ಲಿ ವಿಲೀನಗೊಂಡಿತು.ಮದ್ರಾಸು ಪ್ರಾಂತ್ಯದಲ್ಲಿ ಇಂಡಿಯನ್ ನ್ಯಾಷನಲ್ ಡೆಮೋಕ್ರಟಿಕ್ ಕಾಂಗ್ರೆಸ್ ಪಕ್ಷಕ್ಕೆ ಗಟ್ಟಿ ನೆಲೆ ಕಲ್ಪಿಸಿದ ಸಿ.ರಾಜಗೋಪಾಲಾಚಾರಿ ಕಾಂಗ್ರೆಸ್ ನೆರಳನ್ನು ಬಿಟ್ಟು ಬಂದವರು. 1956ರಲ್ಲಿ ಹುಟ್ಟುಹಾಕಿದ ತಮ್ಮ ಇಂಡಿಯನ್ ನ್ಯಾಷನಲ್ ಡೆಮೋಕ್ರಟಿಕ್ ಕಾಂಗ್ರೆಸ್ ಪಕ್ಷವನ್ನು ಸೀದಾ ತೆಗೆದುಕೊಂಡು ಹೋಗಿ 1959ರಲ್ಲಿ ಸ್ವತಂತ್ರಪಾರ್ಟಿಗೆ ಅರ್ಪಿಸಿದರು.
ಕೇರಳದ ಕೆ.ಎಂ. ಜಾರ್ಜ್ ಕಾಂಗ್ರೆಸ್‌ನ ಆರಂಭ ದಿನಗಳ ನಾಯಕರಲ್ಲಿ ಒಬ್ಬರು. ಕಾಂಗ್ರೆಸ್‌ನಿಂದ ಆಚೆ ಬಂದು 1964ರಲ್ಲಿ ತಾವೇ ಕೇರಳ ಕಾಂಗ್ರೆಸ್ ಪಕ್ಷ ಕಟ್ಟಿದರು. ಆಗ ಇವರೊಂದಿಗೆ ಸಾಕಷ್ಟು ಮಂದಿ ಸೇರಿಕೊಂಡರು. ಆದರೆ, ಈ ಪಕ್ಷದಲ್ಲೂ ಭಿನ್ನಮತ ನೆಲೆಯಾದ ಪರಿಣಾಮ ಕೇರಳ ಕಾಂಗ್ರೆಸ್ (ಬಿ), ಕೇರಳ ಕಾಂಗ್ರೆಸ್ (ಜಾಕಬ್), ಕೇರಳ ಕಾಂಗ್ರೆಸ್ (ಥಾಮಸ್) ಹೀಗೆ ಮೂರು ಗುಂಪುಗಳಾಯಿತು.
ಒಡಿಶಾದ ಮೊದಲ ಮುಖ್ಯಮಂತ್ರಿ ಮಹತಾಬ್. ಇವರ ನೇತೃತ್ವದಲ್ಲೇ 1966ರಲ್ಲಿ ಒಡಿಶಾ ಜನ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು. ಸ್ವತಂತ್ರ ಪಾರ್ಟಿ ಜೊತೆ ಸೇರಿದ ಒಡಿಶಾ ಜನ ಕಾಂಗ್ರೆಸ್ 1967ರಲ್ಲಿ ರಾಷ್ಟ್ರದಲ್ಲಿ ಅತಂತ್ರ ರಾಜಕೀಯ ಸ್ಥಿತಿ ನಿರ್ಮಾಣಕ್ಕೆ ಕಾರಣವಾಯಿತು. 1977ರಲ್ಲಿ ಜನತಾ ಪಾರ್ಟಿಯಲ್ಲಿ ವಿಲೀನಗೊಂಡಿತು. ಸಂಸತ್ ಅಧಿವೇಶನವನ್ನೇ ನೋಡದ ದೇಶದ ಏಕೈಕ ಪ್ರಧಾನಿ ಎಂಬ ಖ್ಯಾತಿ ಪಡೆದಿರುವ ಚರಣ್ ಸಿಂಗ್ 1967ರಲ್ಲಿ ಭಾರತೀಯ ಕ್ರಾಂತಿದಳ ಪಕ್ಷ ಕಟ್ಟಿದರು. ಈ ಪಕ್ಷ ಕೂಡ 1977ರಲ್ಲಿ ಜನತಾ ಪಾರ್ಟಿಯಲ್ಲಿ ವಿಲೀನವಾಯಿತು.
ಬಂಗಾಳದ ಅಜಯ್ ಮುಖರ್ಜಿ ಸಾರಥ್ಯದಲ್ಲಿ ಹುಟ್ಟಿಕೊಂಡ ಪಕ್ಷ ಬಾಂಗ್ಲಾ ಕಾಂಗ್ರೆಸ್. 1967ರಲ್ಲಿ ಕಣ್ಣು ಬಿಟ್ಟ ಈ ಪಕ್ಷ ಎರಡು ಬಾರಿ ಸಿಪಿಎಂ ಜೊತೆ ಸೇರಿ ಅಧಿಕಾರದ ಗದ್ದುಗೆಗೇರಿತು. ಅಜಯ್ ಮುಖರ್ಜಿ ಎರಡು ಬಾರಿ ಮುಖ್ಯಮಂತ್ರಿ ಪೀಠ ಅಲಂಕರಿಸಿದರು. ಆದರೆ, ಕಮ್ಯೂನಿಷ್ಟರ ಪ್ರಾಬಲ್ಯದಿಂದ ಅನಿವಾರ್ಯವಾಗಿ ಮತ್ತೆ ಕಾಂಗ್ರೆಸ್‌ನ ಪಾದಕ್ಕೆ ಶರಣಾಯಿತು. 1969ರಲ್ಲಿ ಮಣಿಪುರದ ಮಹ್ಮದ್ ಅಲಿಮುದ್ದೀನ್ ನೇತೃತ್ವದಲ್ಲಿ ಕಾಂಗ್ರೆಸ್‌ನಿಂದ ಹೊರಬಂದ ಗುಂಪೊಂದು ಕಟ್ಟಿದ ಪಕ್ಷವೇ ಮಣಿಪುರ್ ಪೀಪಲ್ಸ್ ಪಾರ್ಟಿ. ಈ ಪಕ್ಷ ಇಂದಿಗೂ ಜೀವಂತವಾಗಿದೆ.

ಒಂದು ಕಾಲದಲ್ಲಿ ಕಾಂಗ್ರೆಸ್ ಥಿಂಕ್ ಟ್ಯಾಂಕ್ ಮತ್ತು ಸಿಂಡಿಕೇಟ್ ಎನಿಸಿಕೊಂಡಿದ್ದವರು ಕಾಮರಾಜ್. ಆದರೆ, ಕಾಂಗ್ರೆಸ್‌ನಲ್ಲಿ ಉಳಿಯದ ಇವರು 1969ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಅರ್ಗನೈಜೇಷನ್) ಪಕ್ಷವನ್ನು ಸ್ಥಾಪಿಸಿದರು. ಆಗ ಇವರೊಂದಿಗೆ ಮೊರಾರ್ಜಿ ದೇಸಾಯಿ ಕೂಡ ಇದ್ದರು. ಕೆಲವೇ ವರ್ಷಗಳಲ್ಲೇ ಈ ಪಕ್ಷ ಜನತಾ ಪಾರ್ಟಿಯಲ್ಲಿ ವಿಲೀನಗೊಂಡಿತು. ಒಡಿಶಾದ ಮಾಜಿ ಮುಖ್ಯಮಂತ್ರಿ ಸ್ವತಂತ್ರ ಸೇನಾನಿ ಬಿಜು ಪಟ್ನಾಯಕ್ 1969ರಲ್ಲಿ ಉತ್ಕಳ್ ಕಾಂಗ್ರೆಸ್ ಪಕ್ಷ ಸ್ಥಾಪಿಸಿದರು. ಅದೇ ವರ್ಷ ನಡೆದ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಸರ್ಕಾರ ರಚಿಸಿದರು.
ಆಂಧ್ರ ಮರ್ರಿ ಚೆನ್ನಾರೆಡ್ಡಿ ತೆಲಂಗಾಣ ಪ್ರಜಾ ಸಮಿತಿ ಕಟ್ಟಿದರು. ತೆಲಂಗಾಣ ಹೋರಾಟದ ಹಿನ್ನೆಲೆಯಲ್ಲೇ ಇವರು ಕಾಂಗ್ರೆಸ್ ತೊರೆದರು. ಆದರೆ, 1971ರಲ್ಲಿ ಈ ಸಮಿತಿ ಮತ್ತೆ ಕಾಂಗ್ರೆಸ್ ಮನೆ ಸೇರಿಕೊಂಡಿತು. ಮಾಜಿ ಪ್ರಧಾನಿ ಬಾಬು ಜಗಜೀವನ್‌ರಾಮ್ 1977ರಲ್ಲಿ ಕಾಂಗ್ರೆಸ್ ಫಾರ್ ಡೆಮೋಕ್ರಸಿ ಎನ್ನುವ ಪಕ್ಷ ಕಟ್ಟಿದರೂ ಮುಂದೆ ಅದು ಜನತಾ ಪಾರ್ಟಿಯಲ್ಲಿ ಕಲಬೆರಕೆಯಾಯಿತು.
ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆಂಬ ಆರೋಪದ ಮೇಲೆ ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದ ಬ್ರಹ್ಮಾನಂದ ರೆಡ್ಡಿ ಎಂಬವರನ್ನು ಇಂದಿರಾ ಗಾಂಧಿ ಕಾಂಗ್ರೆಸ್ ಮನೆಯಿಂದ ಹೊರದೂಡಿದರು. ರೆಡ್ಡಿ 1978ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ರೆಡ್ಡಿ) ಕಟ್ಟಿಕೊಂಡರು. ಆಗಲೇ ಇಂದಿರಾ ಗಾಂಧಿ ಕಾಂಗ್ರೆಸ್ ಪಕ್ಷ, ಕಾಂಗ್ರೆಸ್ (ಐ) ಆಗಿದ್ದು.
ಈ ನಡುವೆ ಅರಸ್ ಬಣದಿಂದ ಬಹಿಷ್ಕಾರಕ್ಕೆ ಒಳಗಾದ ಬಾಬು ಜಗಜೀವನ್‌ರಾಮ್ ಮತ್ತೊಮ್ಮೆ ಹೊಸ ಪಕ್ಷ ಕಟ್ಟಿದರು. ಅದೇ 1981ರಲ್ಲಿ ಹುಟ್ಟಿಕೊಂಡ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಜಗಜೀವನ್) ಬಣ. ಬಿಹಾರ ರಾಜ್ಯಕ್ಕೆ ಮಾತ್ರ ಸೀಮಿತಗೊಂಡ ಈ ಬಣ ಜಗಜೀವನ್ ಇರುವ ತನಕ ಬದುಕಿತ್ತು. ಇನ್ನೂ ತೀರಾ ಇತ್ತೀಚೆಗೆ ಅಂದರೆ ಆಂಧ್ರ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಮರಣದ ನಂತರ ಅವರ ಪುತ್ರ ಜಗನ್‌ಮೋಹನ್ ರೆಡ್ಡಿ, ಸೋನಿಯಾ ಕಾಂಗ್ರೆಸ್ ವಿರುದ್ಧ ಸಮರ ಸಾರಿ ವೈಎಸ್‌ಆರ್ ಕಾಂಗ್ರೆಸ್ ಬಣವನ್ನು ಕಟ್ಟಿಕೊಂಡು ಆಂಧ್ರದಲ್ಲಿ ಸದ್ದು ಮಾಡುತ್ತಿದ್ದಾರೆ.
ಹೀಗೆ ದೇಶದ ರಾಜಕೀಯ ಮೊಗಸಾಲೆಯಲ್ಲಿ ಹತ್ತಾರು ರಾಜಕೀಯ ಬಣಗಳ ಕಿತ್ತಾಟಗಳಿಗೆ ಕಾಂಗ್ರೆಸ್ ಬಹು ದೊಡ್ಡ ಕೊಡುಗೆ ನೀಡಿದೆ! ಅಂಥ ಕೆಲವು ಕೊಡುಗೆಗಳ ಸ್ಯಾಂಪಲ್‌ಗಳು ಮಾತ್ರ ಇಲ್ಲಿವೆ.



ಅರಸ್ ಕಾಂಗ್ರೆಸ್
ಹಿಂದುಳಿದ ಜನಾಂಗದ ಧೀಮಂತ ನಾಯಕ ಎನಿಸಿಕೊಂಡ ಕರ್ನಾಟಕದ ದೇವರಾಜ್ ಅರಸ್ ಕೂಡ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದವರೇ. ಇವರು 1979ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಅರಸ್) ಕಟ್ಟಿದರು. ಅರಸ್ ಜೊತೆಗೆ ಕೇರಳ ಹಾಗೂ ಮಹರಾಷ್ಟ್ರದ ಕೆಲ ನಾಯಕರು ಸೇರಿಕೊಂಡರು. ನಂತರ ಅರಸ್‌ರ ಪಕ್ಷ ಜನತಾ ಪಾರ್ಟಿ ಜೊತೆ ಸೇರಿಕೊಂಡಿತು. ಅರಸು ಗುಂಪಿನಲ್ಲಿದ್ದ ಕೆಲವರು ಜನತಾ ಪಾರ್ಟಿ ಜೊತೆ ಸೇರುತ್ತಿದ್ದಂತೆಯೇ ಮಾಜಿ ಮುಖ್ಯಮಂತ್ರಿ ಹಾಗೂ ಈಗ ಕೇಂದ್ರ ಮಂತ್ರಿಯಾಗಿರುವ ಶರದ್ ಪವಾರ್ ಮತ್ತಿತರರು ಸೇರಿ ಅರಸ್ ಬಣವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಇದೇ ಮುಂದೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಸೋಷಿಯಲಿಸ್ಟ್) ಆಗಿ ಬದಲಾಯಿತು. ಈಗಲೂ ಈ ಬಣ ಕೇರಳದಲ್ಲಿ ಕೊನೆ ಉಸಿರಿನಲ್ಲಿದೆ.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement