ಹವ್ಯಾಸ ಭಾರತ
ರಾಜಕಾರಣಕ್ಕೆ ಬಂದ ಮೇಲೆ ಪ್ರತಿ ವಿಚಾರಕ್ಕೂ ಸುದ್ದಿಯಾಗುವುದು ಸರ್ವೇಸಾಮಾನ್ಯ. ರಾಜಕೀಯ ಅಂಗಣದ ಚೆಂಡಾಗುವ...
ರಾಜಕಾರಣಕ್ಕೆ ಬಂದ ಮೇಲೆ ಪ್ರತಿ ವಿಚಾರಕ್ಕೂ ಸುದ್ದಿಯಾಗುವುದು ಸರ್ವೇಸಾಮಾನ್ಯ. ರಾಜಕೀಯ ಅಂಗಣದ ಚೆಂಡಾಗುವ ಮೊದಲು ನಮ್ಮ ನಾಯಕರು ಹೀಗಿದ್ದರು ಎಂದರೆ ಮೂಗಿನ ಮೇಲೆ ಬೆರಳಿಡುತ್ತೀರಿ. ಅವರ ಅಭ್ಯಾಸ, ಹವ್ಯಾಸಗಳ ಮೇಲೆ ಕಣ್ಣಾಡಿಸಿದಾಗ 'ಓಹೋ..!' ಅಂತ ಹುಬ್ಬೇರಿಸದಿರಿ. ಕೆಲವೊಂದು ಚಟ ಎನಿಸಬಹುದು, ಕೆಲವೊಂದು ಕ್ರೇಜ್ ಎನಿಸಬಹುದು. ರಾಜಕೀಯವಾಗಿ ಎಷ್ಟೇ ಉನ್ನತ ಹುದ್ದೆಗೇರಿದರೂ ತಮ್ಮ ಫ್ಯಾಶನ್, ಪ್ಯಾಶನ್‌ಗಳನ್ನು ಕೈಬಿಡಲು ಸಾಧ್ಯವಾಗುವುದಿಲ್ಲ. ಮೈಗಂಟಿದಂತೆ ಜೊತೆಗೇ ಇರುತ್ತವೆ. ಅಂತಹ ಕೆಲವು ರಾಜಕಾರಣಿಗಳ ಅಪರೂಪದ ಗೀಳಿನ ಝಲಕ್:
ನರೇಂದ್ರ ಮೋದಿ, 63
ಭಾರತೀಯ ಜನತಾ ಪಾರ್ಟಿ
ಲೋಕಸಭಾ ಕ್ಷೇತ್ರ: ವಾರಾಣಸಿ, ಉತ್ತರ ಪ್ರದೇಶ ಮತ್ತು ವಡೋದರ, ಗುಜರಾತ್
ಸ್ಟೈಲ್ ಬಗ್ಗೆ ಹೆಚ್ಚಿನ ನಿಗಾವಹಿಸುತ್ತಾರೆ. ಪೈಜಾಮ ಮಿಶ್ರಣ ಮತ್ತು ಸಣ್ಣ ತೋಳಿನ ಕುರ್ತಾ ಧರಿಸುವುದು ಅಚ್ಚುಮೆಚ್ಚು. ಟೆಕ್ಸಾನ್ ಟೋಪಿ, ಜೀನ್ಸ್ ಮತ್ತು ಟಿ-ಶರ್ಟ್‌ಗಳ ಮೇಲೂ ಕ್ರೇಜ್ ಹೊಂದಿದ್ದಾರೆ. ಎಲ್ಲ ರೀತಿಯ ಟೋಪಿಗಳ ಸಂಗ್ರಹವೇ ಇವರ ಬಳಿ ಇದೆ. ಕೇಜ್ರಿವಾಲ್ ಟೋಪಿಯೊಂದು ಬಿಟ್ಟು!
ರಾಹುಲ್ ಗಾಂಧಿ, 43
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
ಲೋಕಸಭಾ ಕ್ಷೇತ್ರ: ಅಮೇಠಿ, ಉತ್ತರ ಪ್ರದೇಶ
ಪ್ರತಿವರ್ಷ ಕಾಂಗ್ರೆಸ್‌ನ ಬ್ರಹ್ಮಚಾರಿ ರಾಹುಲ್ ಮಯನ್ಮಾರ್‌ನ ವಿಹಾರದಲ್ಲಿ ಧ್ಯಾನ ಮಾಡಲು ಹೋಗುತ್ತಾರೆ. ಸ್ಕೂಬಾ ಡೈವಿಂಗ್, ಈಜುವುದು, ಸೈಕ್ಲಿಂಗ್ ಮತ್ತು ಸ್ಕ್ವಾಷ್ ಆಡುವುದೆಂದರೆ ಯುವರಾಜನಿಗೆ ಅಚ್ಚುಮೆಚ್ಚು. ಓದುವುದು, ಚೆಸ್ ಆಡುವುದು, ಫ್ಲೈಯಿಂಗ್ ರಾಹುಲ್ ಹವ್ಯಾಸ. ರಾಜಕೀಯ ಕೆಲಸಗಳಿಂದ ಹೊರಗಿದ್ದಾಗ ಕ್ರಿಕೆಟ್ ಪಂದ್ಯಗಳಲ್ಲಿ, ಫಾರ್ಮ್ ಹೌಸ್ ಪಾರ್ಟಿಗಳಲ್ಲಿ, ದುಬಾರಿ ಜಿಮ್‌ಗಳಲ್ಲಿ, ಟೋನಿ ರೆಸ್ಟೋರೆಂಟ್‌ಗಳಲ್ಲಿ ಕಳೆಯುವುದು ರಾಹುಲ್ ಅಭ್ಯಾಸ.
ಅರುಣ್ ಜೇಟ್ಲಿ, 61
ಭಾರತೀಯ ಜನತಾ ಪಾರ್ಟಿ
ಲೋಕಸಭಾ ಕ್ಷೇತ್ರ: ಅಮೃತ್‌ಸರ್, ಪಂಜಾಬ್
ಸುಪ್ರಿಂ ಕೋರ್ಟ್‌ನ ಮಾಜಿ ಉನ್ನತ ನ್ಯಾಯವಾದಿ. ವಾಚ್ ಮತ್ತು ಫೌಂಟೆನ್ ಪೆನ್‌ಗಳ ಬಗ್ಗೆ ಅಗಾಧ ಒಲವು. ಪ್ರತಿದಿನ ಅವರ ಐಪ್ಯಾಡ್‌ನಲ್ಲಿ ಬ್ಲಾಗ್ ನೋಡುವ ಅಭ್ಯಾಸವಿದೆ. ಪ್ರಚಾರದ ಸಂದರ್ಭಗಳಲ್ಲೂ ಬ್ಲಾಗ್‌ನೊಳಗೆ ತೂರುವುದು ಇವರ ಆಸಕ್ತಿ.
ಸುಷ್ಮಾ ಸ್ವರಾಜ್, 61
ಭಾರತೀಯ ಜನತಾ ಪಾರ್ಟಿ
ಭಾಷಣಗಳಲ್ಲಿ ಹಿಂದಿ ಪದ್ಯಗಳ ಸಾಲನ್ನು ಕೋಟ್ ಮಾಡುವುದು ಸುಷ್ಮಾ ವಾಕ್‌ಚಾತುರ್ಯದ ವಿಶೇಷತೆ. ಸಂಸತ್ತಿನಲ್ಲಿ ಬಶೀರ್ ಬದರ್ ಬರೆದ ಪದ್ಯಗಳ ಸಾಲನ್ನು ಉಲ್ಲೇಖಿಸುವುದು ಸುಷ್ಮಾಗೆ ಘನತೆಯ ವಿಷಯ. ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಉದ್ದೇಶಿಸಿ 'ಹಮ್ಕೋ ಹೈ ಉನ್ಸೇ ವಫಾ ಕಿ ಉಮೀದ್, ಜೋ ನಹಿ ಜಾನ್‌ತೇ ವಫಾ ಕ್ಯಾ ಹೈ' ಎಂದಿದ್ದರು.
ಸಚಿನ್ ಪೈಲಟ್, 36
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
ಲೋಕಸಭಾ ಕ್ಷೇತ್ರ: ಅಜ್ಮಿರ್, ರಾಜಸ್ತಾನ್
ಯುವ ರಾಜಕಾರಣಿಗಳ ಸಾಲಲ್ಲಿ ಗುರುತಿಸಿಕೊಂಡಿರುವ ಸಚಿನ್, ಪಿಸ್ತೂಲ್ ಶೂಟರ್. ಪಿಸ್ತೂಲ್ ಶೂಟಿಂಗ್‌ನಲ್ಲಿ ಸಣ್ಣ ಮಟ್ಟಿಗೆ ಸಾಧನೆಯನ್ನೂ ಮಾಡಿದ್ದಾರೆ. ಏರ್‌ಕ್ರಾಫ್ಟ್‌ನಲ್ಲಿ ಹಾರಾಡುವುದು, ಸಿನಿಮಾ ನೋಡುವುದು ಮತ್ತು ಪ್ರವಾಸ ಹೋಗುವ ಗೀಳು ಇದೆ.
ಎಲ್. ಕೆ. ಆಡ್ವಾಣಿ, 86
ಭಾರತೀಯ ಜನತಾ ಪಾರ್ಟಿ
ಲೋಕಸಭಾ ಕ್ಷೇತ್ರ: ಗಾಂಧಿನಗರ್, ಗುಜರಾತ್
ಬಾಲಿವುಡ್ ಚಿತ್ರಪ್ರೇಮಿಗಳು. ಶಾರುಖ್ ಖಾನ್ ಸಿನಿಮಾಗಳಿಗೆ ಮಾರು ಹೋದವರು. ರೈಟ್ ವಿಂಗ್ ಮ್ಯಾಗಜಿನ್‌ನ ಸಿನಿಮಾ ವಿಮರ್ಶಕರಾಗಿದ್ದರು. ಆರ್ಗನೈಸರ್ ಕೂಡ ಆಗಿದ್ದರು.
ಕಪಿಲ್ ಸಿಬಲ್, 65
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
ಲೋಕಸಭಾ ಕ್ಷೇತ್ರ: ಚಾಂದ್‌ನಿ ಚೌಕ್, ದೆಹಲಿ
ಯಶಸ್ವಿ ನ್ಯಾಯವಾದಿಯಾದ ಕಪಿಲ್ ಒಬ್ಬ ಕವಿ. 'ಐ ವಿಟ್ನೆಸ್: ಪಾರ್ಷಿಯಲ್ ಅಬ್ಸರ್ವೇಶನ್' ಎಂಬ ಪುಸ್ತಕ ಹಲವಾರಿಂದ ಮಿಶ್ರ ವಿಮರ್ಶೆಗೆ ಒಳಗಾಗಿದೆ. ಮಾಜಿ ನ್ಯಾಯವಾದಿಯ ಅಕ್ಷರಗಳು ಟ್ವಿಟರ್‌ನಲ್ಲಿ ಬುಲೆಟ್‌ಗಳಂತೆ ಒಂದರಮೇಲೊಂದು ನಿರಂತರವಾಗಿ ಹರಿದುಬರುತ್ತಿರುತ್ತವೆ. ಉದಾಹರಣೆಗೆ ಇತ್ತೀಚಿನ 30 ದಿನಗಳಲ್ಲಿ ಕಪಿಲ್ ಮಾಡಿರುವ ಒಟ್ಟು ಟ್ವೀಟ್‌ಗಳು 84. ಸುಮಾರು 2 ಕೋಟಿಗೂ ಹೆಚ್ಚು ಮಂದಿ ಕಪಿಲ್ ಅಕ್ಷರಗಳನ್ನು ಇಣುಕಿ ಹೋಗಿದ್ದಾರೆ!
ಮುಲಾಯಂ ಸಿಂಗ್ ಯಾದವ್, 75
ಸಮಾಜವಾದಿ ಪಕ್ಷ
ಲೋಕಸಭಾ ಕ್ಷೇತ್ರ: ಮೈನ್‌ಪುರಿ ಮತ್ತು ಅಜಮ್‌ಘಾರ್, ಉತ್ತರ ಪ್ರದೇಶ
ಸಮಾಜವಾದಿ ನಾಯಕ ರಾಮ್ ಮನೋಹರ್ ಲೋಹಿಯಾ ಅವರಿಂದ ಸ್ಫೂರ್ತಿ ಮತ್ತು ಪ್ರಭಾವಕ್ಕೆ ಒಳಗಾದವರು. ಮುಲಾಯಂ ಒಂದು ಕಾಲದಲ್ಲಿ ಪೈಲ್ವಾನ್, ಲೈಟ್‌ವೈಟ್ ರೆಸ್ಲಿಂಗ್‌ನಲ್ಲಿ ಜಿಲ್ಲಾ ಚಾಂಪಿಯನ್!
ಅರವಿಂದ್ ಕೇಜ್ರಿವಾಲ್, 46
ಆಮ್ ಆದ್ಮಿ ಪಾರ್ಟಿ
ಲೋಕಸಭಾ ಕ್ಷೇತ್ರ: ವಾರಾಣಸಿ, ಉತ್ತರ ಪ್ರದೇಶ
ಕೃಷ್ಣ ಜನ್ಮಾಷ್ಟಮಿಯಂದು ಜನಿಸಿರುವ ಕೇಜ್ರಿವಾಲ್‌ಗೆ ಹಿರಿಯರು ನಾಮಕರಣ ಮಾಡಿದ್ದು ಕೃಷ್ಣ ಎಂಬ ಹೆಸರಿನಲ್ಲಿ. 2006ರ ಮ್ಯಾಗ್ಸೇಸೆ ಪ್ರಶಸ್ತಿ ವಿಜೇತರು. ಪಕ್ಷದ ಕೆಲಸಗಾರರಿಗೆ ವ್ಯಾಗನಾರ್ ಕೊಟ್ಟು ದೊಡ್ಡ ಸುದ್ದಿ ಆಗಿದ್ದರು!
ಸಲ್ಮಾನ್ ಖುರ್ಷಿದ್, 61
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್
ಲೋಕಸಭಾ ಕ್ಷೇತ್ರ: ಫರೂಕಬಾದ್, ಉತ್ತರ ಪ್ರದೇಶ
ದೆಹಲಿ ವಿಶ್ವವಿದ್ಯಾಲಯ ಸೇಂಟ್ ಸ್ಟಿಫನ್ಸ್ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯ ಕಲಿಯುತ್ತಿದ್ದಾಗ 'ಆಲ್‌ರೌಂಡರ್' ಎಂದು ಗುರುತಿಸಿಕೊಂಡಿದ್ದ ಮಹಾನ್ ಚತುರ. ಎನ್‌ಸಿಸಿ ಕ್ಯಾಡೆಟ್ ಆಗಿದ್ದರು. ಕ್ರಿಕೆಟಿಗನೂ ಹೌದು. ಆಲ್ ಇಂಡಿಯಾ ರೇಡಿಯೋದಲ್ಲಿ ಯುವವಾಣಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. 'ಸನ್ಸ್ ಆಫ್ ಬಾಬುರ್', ಖುರ್ಷಿದ್ ಬರೆದ ನಾಟಕ. ಹಲವಾರು ಭಾಷೆಗಳಿಗೆ ತರ್ಜುಮೆಗೊಂಡಿದೆ.
- ಮಂಜು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.