ನೆನದವರು ಮನದಲ್ಲಿ
'ಎಂದುರೋ ಮಹಾನುಭಾವುಲು... ಅಂದರಿಕಿ ವಂದನಮುಲು' ಎಂದು ಹಾಡುವ ಮನಸ್ಸಾಗುತ್ತದೆ, ಇವರಲ್ಲಿ ಒಬ್ಬೊಬ್ಬರನ್ನೂ ನೆನಪಿಸಿಕೊಂಡಾಗ. ಚುನಾವಣೆಗಳು ಬಂದಾಗ, ಮಹತ್ವದ ರಾಜಕೀಯ ಪಲ್ಲಟಗಳು ಆದಾಗಲೇ ಇವರ ನೆನಪಾಗುವುದು ಕಾಕತಾಳೀಯವಲ್ಲ. ಚುನಾವಣೆಗಳಿಗೂ ಇವರಿಗೂ ಮನಸ್ಸು ತಳುಕು ಹಾಕುತ್ತದೆ. ಇವರು ಈಗ ಇದ್ದಿದ್ದರೆ ಎಂದು ಹಳಹಳಿಸುತ್ತದೆ.
ಇದ್ದಿದ್ದರೆ ಏನಾಗುತ್ತಿತ್ತು? ಚುನಾವಣೆಯ ಕಣ ಇನ್ನಷ್ಟು ರಂಗೇರುತ್ತಿತ್ತು. ಇವರು ಏನು ಹೇಳಿದ್ದಾರೆ ಎಂದು ಕಣ್ಣು ಪತ್ರಿಕೆಗಳನ್ನು ತಡಕಾಡುತ್ತಿತ್ತು. ಅವರ ಮಾತುಗಳ ಮೇಲೆ ನಮ್ಮ ಅಭಿಪ್ರಾಯವನ್ನು ತಿದ್ದಿಕೊಳ್ಳುವುದೋ, ರೂಪಿಸಿಕೊಳ್ಳುವುದೋ ನಡೆಯುತ್ತಿತ್ತು. ಚುನಾವಣೆ ಫಲಿತಾಂಶವನ್ನು ಇವರು ಬದಲಾಯಿಸುತ್ತಿದ್ದರೋ ಇಲ್ಲವೋ ಕಾಣೆ. ಆದರೆ ಇವರ ನಿಲುವುಗಳು ರಾಜಕೀಯ ವಲಯದಲ್ಲಿ ಒಂದು ನಡುಕವನ್ನು ಸೃಷ್ಟಿಸುತ್ತಿದ್ದವು. ಜನ ಇವರನ್ನು ಮೆಚ್ಚುತ್ತಿದ್ದರು.
ಅಟಲ್ ಬಿಹಾರಿ ವಾಜಪೇಯಿ ಅಂಥ ಮಹಾ ಪ್ರಭಾವಿ ವ್ಯಕ್ತಿತ್ವಗಳಲ್ಲೊಂದು. ವಿಸ್ವಸಂಸ್ಥೆಯಲ್ಲಿ ಅವರು ಮಾಡಿದ ಭಾಷಣ ದಂತಕತೆ. ಚುನಾವಣೆ ರ್ಯಾಲಿಗಳಲ್ಲಿ ಮಾತ್ರವಲ್ಲ, ಎಲ್ಲಿ ಮಾತಾಡಿದರೂ ಅದು ಚಿನ್ನ. ಅವರ ಮಾತಿನ ರಿದಂ, ಆಗಾಗ ಸ್ವಯಂಸ್ಫೂರ್ತಿಯಿಂದ ಉಕ್ಕಿಬರುವ ಕವಿತೆಗಳ ಮೋಡಿ, ವಿರೋಧಿಗಳ ನಯವಾದ ಕಾಲೆಳೆಯುವಿಕೆ, ಪ್ರತಿಸ್ಪರ್ಧಿಯನ್ನೂ ಗೌರವಯುತವಾಗಿಯೇ ಟೀಕಿಸುತ್ತಿದ್ದ ಪರಿ, ಎಡೆಬಿಡದೆ ಹರಿಯುತ್ತಿದ್ದ ವಾಗ್ಝರಿ... ಇವೆಲ್ಲ ಮಾದರಿ. ಈ ಚುನಾವಣೆಯಲ್ಲೂ ಅಟಲ್ಜೀ ಮಿಸ್ಸಿಂಗು. ಇವರ ಮಾತಿನ ಕೆಲವೇ ಗುಣಗಳು ಮೋದಿಯವರಲ್ಲಿವೆ.
ಅಕಾಲಿಕವಾಗಿ ಮರಣಕ್ಕೀಡಾದ ಪ್ರಮೋದ್ ಮಹಾಜನ್, ಬಿಜೆಪಿಯ ಆಕರ್ಷಕ ವ್ಯಕ್ತಿತ್ವದ ಎರಡನೇ ತಲೆಮಾರಿನ ನಾಯಕರಲ್ಲೊಬ್ಬರಾಗಿದ್ದರು. ಆಕರ್ಷಕವಾದ ಮಾತುಗಾರಿಕೆ, ತಕ್ಕ ಬಾಡಿ ಲ್ಯಾಂಗ್ವೇಜ್, ಉದ್ಯಮ ವಲಯದ ದೊಡ್ಡ ದೊಡ್ಡ ತಲೆಗಳ ನಿಕಟ ಸಂಪರ್ಕ, ಸಾರ್ವಜನಿಕ ಸಂಪರ್ಕದ ಚಾಣಾಕ್ಷತೆ, ರಣತಂತ್ರಗಳನ್ನು ನೇಯುವ ಕೌಶಲ... ಇವೆಲ್ಲವೂ ಮಹಾಜನರಲ್ಲಿದ್ದವು. ಅಟಲ್, ಆಡ್ವಾಣಿ ಮುಂತಾದ ಹಿರಿಯರ ಕೃಪಾಶೀರ್ವಾದವೂ ಅವರಿಗಿತ್ತು. ಈಗ ಬದುಕಿದ್ದಿದ್ದರೆ, ಮೋದಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗುವುದೂ ಕನಸಿನ ಮಾತಾಗಿತ್ತೋ ಏನೋ!
ಫೈರ್ಬ್ರಾಂಡ್ ಜಾರ್ಜ್ ಫೆರ್ನಾಂಡಿಸ್ ಕೂಡ ರಂಗದಲ್ಲಿಲ್ಲ. ಸಮಾಜವಾದಿ ಹಿನ್ನೆಲೆಯ ಜಾರ್ಜ್, ಎನ್ಡಿಎ ಸೇರಿದಾಗ ಕೂಡ ಅವರ ಅಭಿಮಾನಿ ವರ್ಗ ಅವರನ್ನು ಕೈಬಿಟ್ಟಿರಲಿಲ್ಲ ಎಂಬುದು ಗಮನಾರ್ಹ. ಕಾರ್ಮಿಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ಅವರಿದ್ದಿದ್ದರೆ, ರಾಷ್ಟ್ರ ರಾಜಕೀಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದುದು ಖಚಿತ. ಇಂದು ಅವರಲ್ಲಿ ನೆನಪುಗಳಿಗೆ ಜಾಗವಿಲ್ಲ, ನಮ್ಮಲ್ಲೂ ಅವರ ನೆನಪಿಲ್ಲ.
1989ರಲ್ಲಿ ನಡೆದ ಲೋಕಸಭೆ ಚುನಾವಣೆಯನ್ನು ನೆನಪಿಸಿಕೊಳ್ಳಲೇಬೇಕು. ಆಗ ತುಂಗಭದ್ರಾ ಉಳಿಸಿ ಚಳವಳಿ, ಕೈಗಾ ವಿರೋಧಿ ಚಳವಳಿಗಳು ಜೋರಾಗಿ ನಡೆಯುತ್ತಿದ್ದ ಕಾಲ. ಸರಕಾರಗಳ ಜೋಭದ್ರಗೇಡಿತನ, ಪಕ್ಷಗಳ ಎಡೆಬಿಡಂಗಿತನದ ಬಗ್ಗೆ ಕಿಡಿ ಕಾರುತ್ತ ಆ ವ್ಯಕ್ತಿ ಎದ್ದು ಚುನಾವಣೆಗೆ ನಿಂತೇಬಿಟ್ಟರು, ಅದೂ ಪಕ್ಷೇತರನಾಗಿ. ಅವರ ಹೆಸರು ಶಿವರಾಮ ಕಾರಂತ. ಜನತಾ ದಳದಿಂದ ಅವರಿಗೆದುರಾಗಿ ಅನಂತನಾಗ್. ಕಾರಂತರು ಪ್ರಚಾರಕ್ಕೂ ನನಗೂ ಸಂಬಂಧವಿಲ್ಲ ಎಂದು ಎದ್ದು ಅಲೆದಾಟಕ್ಕೆ ಹೋಗಿಬಿಟ್ಟರು. ಕಾಂಗ್ರೆಸ್ನ ಪುಢಾರಿಯೊಬ್ಬನನ್ನು ಆರಿಸಿ ಮತದಾರರು ತಮ್ಮ ಬಗ್ಗೆ ತಾವೇ ಜೋಕ್ ಮಾಡಿಕೊಂಡರು. ಮರೆತೇನೆಂದರ ಮರೆಯಲಿ ಹ್ಯಾಂಗ ಆ ನೆನಪ?
1971ರಲ್ಲಿ, ನವ್ಯಕವಿ ಗೋಪಾಲಕೃಷ್ಣ ಅಡಿಗರು ಭಾರತೀಯ ಜನಸಂಘದಿಂದ ಬೆಂಗಳೂರಿನಲ್ಲಿ ಚುನಾವಣೆಗೆ ನಿಂತಿದ್ದರು. 1980ರಲ್ಲಿ, ಪಿ.ಲಂಕೇಶರು ಕರ್ನಾಟಕ ಪ್ರಗತಿ ರಂಗದಿಂದ ಸ್ಪರ್ಧಿಸಿದ್ದರು. ಇಬ್ಬರೂ ಗೆಲ್ಲಲಿಲ್ಲ. ವಿಚಿತ್ರವೆಂದರೆ, ಚುನಾವಣೆಯಲ್ಲಿ ಗೆದ್ದು ಶಾಸಕರಾದ ಬರಹಗಾರರೆಂದರೆ ದಿನಕರ ದೇಸಾಯಿ ಮಾತ್ರವೇ. ಲಂಕೇಶರು ಈಗ ಇದ್ದಿದ್ದರೆ, ಕಣದಲ್ಲಿದ್ದ ಎಲ್ಲ ಅಭ್ಯರ್ಥಿಗಳನ್ನೂ ಎಲೆ ಅಡಕೆ ಹಾಕಿ ಉಗಿಯುತ್ತಿದ್ದರು ಅನಿಸುತ್ತದೆ. ರೈತಸಂಘದ ಎಂ.ಡಿ.ನಂಜುಂಡಸ್ವಾಮಿಯವರು, ವಿಶಾಲವಾದ ರೈತ ವಲಯದಲ್ಲಿ ಮೂಡಿಸುತ್ತಿದ್ದ ರಾಜಕೀಯ ಪ್ರಜ್ಞೆಯೇನು ಸಾಮಾನ್ಯವೇ?
ವರ್ತಮಾನದ ರಾಜಕಾರಣ ಇವರನ್ನೆಲ್ಲ ದಾಟಿ ಬಹಳ ಮುಂದೆ ಬಂದಿದೆ. ರಾಜಕಾರಣಕ್ಕೆ ಇವರೆಲ್ಲ ನೀಡಿದ್ದ ಘನತೆಯ ಆಯಾಮ ಈಗಿಲ್ಲ. ಹೀಗಾಗಿಯೇ ಇವರ, ಇಂಥವರ ಅನುಪಸ್ಥಿತಿ ಎದ್ದು ಕಾಣಿಸುತ್ತದೆ.
= ಹರಿಹರ