ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪಕ್ಷಪಾತ

Mainashree
Updated On : 11 Apr 2014, 1:37 am

ಭಾರತದಲ್ಲಿ ಅಧಿಕೃತ ಮುದ್ರೆಯೊತ್ತಿಸಿಕೊಂಡ ಪಕ್ಷಗಳ ಸಂಖ್ಯೆ 1600ಕ್ಕೂ ಹೆಚ್ಚು. 121 ಕೋಟಿ ಮಂದಿ ಹೊತ್ತ ದೇಶಕ್ಕೆ ಇದೇನು ಹೆಚ್ಚಲ್ಲ ಬಿಡಿ! ಸ್ವವಿವರ, 100 ಜನ ಸದಸ್ಯರು ಹಾಗೂ 10,000 ಠೇವಣಿ ಮೊತ್ತ - ಚುನಾವಣಾ ಆಯೋಗಕ್ಕೆ ಇಷ್ಟು ನೀಡಿದರೆ ಪಕ್ಷದ ಬ್ಯಾನರ್ ಹಾಕಿಸಿ ಅದರಲ್ಲಿ ನಿಮ್ಮದೊಂದು ಕೈಮುಗಿದು ನಿಂತ ದೊಡ್ಡ ಫೋಟೋ ಹಾಕಿಸಿ ಜೈಕಾರ ಹೇಳಿಸಿಕೊಳ್ಳಬಹುದು. ಅಲ್ಲದೆ ಟ್ಯಾಕ್ಸ್‌ನಲ್ಲಿ ವಿನಾಯಿತಿಯನ್ನೂ ಪಡೆಯಬಹುದು.
ಹೆಸರಲ್ಲೇನಿದೆ ಅಂದ ಶೇಕ್ಸ್‌ಪಿಯರ್. ಇಲ್ಲೊಂದಿಷ್ಟು ಪಕ್ಷಗಳ ಹೆಸರುಗಳಲ್ಲಿ ಏನೇನಿದೆ ನೀವೇ ನೋಡಿ...

ದ ರಿಲಿಜಿಯನ್ ಆಫ್ ಮ್ಯಾನ್ ರಿವಾಲ್ವಿಂಗ್ ಪೊಲಿಟಿಕಲ್ ಪಾರ್ಟಿ ಆಫ್ ಇಂಡಿಯಾ
ಹೆಸರು ಪೂರ್ತಿ ಹೇಳದೇ(ಹೇಳಲಾಗದೆ) ತುಟಿಯ ಕಚ್ಚಿಕೊಳ್ಳಲೇ..? ಈ ಹೆಸರನ್ನು ಪಕ್ಷವೊಂದಕ್ಕಾಗಿ ಅನ್ವೇಷಿಸಿದ ಮಹಾನುಭಾವನ ಪಾದ ಸಿಕ್ಕರೆ ಜೆರಾಕ್ಸ್ ಪ್ರತಿ ಮಾಡಿಸಿ ಹಂಚಲೇಬೇಕು. ಅವನಿಗೇ ತನ್ನ ಪಕ್ಷದ ಹೆಸರನ್ನು ಬಾಯಿಪಾಠ ಮಾಡಲು ಎರಡು ದಿನ ಬೇಕಾಗಿರಬಹುದು. ನಮ್ಮೂರಿನ ಪುಟ್ಟೇಜೋಯಿಸರ ಮಂತ್ರ ನೆನಪಾಯಿತು. ಉದ್ದಕೆ ಹೇಳಿಕೊಂಡು ಹೋದರೂ ಅರ್ಥ ಮಾತ್ರ ಆಗುವುದಿಲ್ಲ. ಈಶಾನ್ಯ ರಾಜ್ಯಗಳಲ್ಲಿ ಇಂಥ ವಿಚಿತ್ರ ಹೆಸರುಗಳು ಸಾಮಾನ್ಯವಂತೆ!

ಇಂಡಿಯನ್ ಲವರ್ಸ್ ಪಾರ್ಟಿ
2008ರ ವ್ಯಾಲೆಂಟೈನ್ಸ್ ಡೇ ದಿನ ತಮಿಳುನಾಡಿನ ಕುಮಾರ್ ಇಂಡಿಯನ್ ಲವರ್ಸ್ ಪಾರ್ಟಿ ಹುಟ್ಟುಹಾಕಿದ. ಮದುವೆಯಾಗಲು ಜಾತಿ ಮತ್ತು ಧರ್ಮ ಅಡ್ಡವಾಗಿರುವ ಪ್ರೇಮಿಗಳಿಗಾಗಿ ತನ್ನ ಪಕ್ಷ ಎಂದು ಪಿಂಕ್ ಪೋಸ್ಟರ್‌ನಲ್ಲಿ ದೊಡ್ಡದಾಗಿ ತನ್ನ ಪಕ್ಷದ ಅಜೆಂಡಾ ಬರೆಸಿದ! ಇವನ ಭಗ್ನ ಪ್ರೇಮಕತೆಯೇ ಪಕ್ಷದ ಹುಟ್ಟಿಗೆ ಕಾರಣವಿರಬಹುದೇನೋ ಎಂಬುದು ಅನುಮಾನ. 2011ರ ರಾಜ್ಯ ಚುನಾವಣೆಯಲ್ಲಿ 3000 ಮತಗಳನ್ನು ಗಳಿಸಿದ ಈ ಪ್ರೇಮಿಗಳ ಪಕ್ಷ ಈ ಬಾರಿ ಚುನಾವಣೆಯಲ್ಲಿ 40000- 50,000 ಮತ ಗಳಿಸುವುದು ಗ್ಯಾರಂಟಿ ಎನ್ನುತ್ತಿದ್ದಾನೆ ಕುಮಾರಣ್ಣ. ಭಗ್ನಪ್ರೇಮಿಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಅವನ ಆಶಾವಾದಕ್ಕೆ ಪುಷ್ಟಿಯೇ? ಮುಂದಿನ ಚುನಾವಣೆ ಹೊತ್ತಿಗೆ ತನ್ನ ಪಕ್ಷದ ಚಿಹ್ನೆಯನ್ನು ಹೃದಯದ ಮಧ್ಯದಲ್ಲಿ ತಾಜಮಹಲ್ ಇಟ್ಟಂತೆ ಮಾಡಿಸುತ್ತಾನಂತೆ! ಇವನ ಪಕ್ಷ ಅಧಿಕಾರಕ್ಕೆ ಬಂದರೆ ತಾಜ್‌ಮಹಲ್ಲೇ ಸಂಸತ್ ಆದೀತೇನೋ?!

ದ ಇಂಡಿಯನ್ ಓಶನಿಕ್ ಪಾರ್ಟ

ಭಾರತ ಮೂರು ಕಡೆಯಿಂದ ನೀರಿನಿಂದ ಸುತ್ತುವರಿದಿರುವುದೇನೋ ಸರಿ! ಆದರೆ ಅದಕ್ಕೂ ಪಕ್ಷಕ್ಕೆ ಓಶನಿಕ್ ಪಾರ್ಟಿ ಎಂದು ಹೆಸರಿಟ್ಟಿದ್ದಕ್ಕೂ ಏನು ಸಂಬಂಧವೋ? ಅಲ್ಲದೆ ದೆಹಲಿಯಲ್ಲಿರುವ ಪಕ್ಷದ ಕಚೇರಿಯ ಸುತ್ತಲೆಲ್ಲೂ ಸಮುದ್ರ ಬೇಡ, ಚಿಕ್ಕ ಕೆರೆಯೂ ಇಲ್ಲ. ಆದರೂ ಹೆಸರೇಕೆ ಹೀಗೆ ಎಂದು ಕೇಳಿದರೆ ಇದು ತತ್ವಗಳ ಸಾಗರವಂತೆ, ಪ್ರಾಮಾಣಿಕ ಮನುಷ್ಯರ ಸಾಗರವಂತೆ! ಆದರೆ ಪಕ್ಷದ ಚಿಹ್ನೆ ಮಾತ್ರ ಅಲೆಯೋ, ತೆಂಗಿನಮರವೋ ಆಗಿರದೆ ಟೆಲಿಫೋನ್ ಆಗಿರುವುದು ಏತಕ್ಕೋ?

ಯುವರ್ಸ್- ಮೈನ್ ಪಾರ್ಟಿ(ನಿನ್ನ- ನನ್ನ ಪಕ್ಷ)
ಎಲ್ಲರೂ ನನ್ನ - ನಿನ್ನ ಪಕ್ಷವೆಂದುಕೊಂಡು ಮತ ಹಾಕಿ ಪಕ್ಷ ಅಧಿಕಾರಕ್ಕೆ ಬಂದರೆ ನೀನು ನೀನೇ..ಇಲ್ಲಿ ನಾನು ನಾನೇ ಎನ್ನುವುದಿಲ್ಲವೆಂದು ಏನು ಗ್ಯಾರಂಟಿ? ಎಷ್ಟೇ ಆದರೂ ಅಧಿಕಾರ ಹುಟ್ಟುಗುಣ ಬಿಟ್ಟುಕೊಟ್ಟೀತೇ?

ಸ್ಟೇ ಅವೇಕ್ ಪಾರ್ಟಿ(ಜಾಗತೇ ರಹೋ ಪಕ್ಷ್)
ನಿದ್ರಾಹೀನರೆಲ್ಲ ಸೇರಿ ರಾತ್ರಿ ಕಳೆಯಲು ಒದ್ದಾಡಿ ಪಕ್ಷವೊಂದನ್ನು ಹುಟ್ಟುಹಾಕಿದರೆ ಇದಕ್ಕಿಂತಾ ಒಳ್ಳೆ ಹೆಸರು ಅವರಿಗೆಲ್ಲಿ ಸಿಕ್ಕೀತು? ಉಳಿದವರೂ ನಿದ್ದೆ ಮಾಡದಿರಲಿ ಎಂಬ ತಂತ್ರ ೆಹೆಣೆದು ಈ ಹೆಸರು ನೀಡಿರಬಹುದು. ಸ್ಮಶಾನ ಕಾಯುವ ಇಬ್ಬರು ವಾಚ್‌ಮನ್‌ಗಳು ರಾತ್ರಿಯೆಲ್ಲ ಹೆದರಿಕೆ ನೀಗಿಕೊಳ್ಳಲು ಆಗಾಗ 'ಸ್ಟೇ ಅವೇಕ್‌' ಎಂದು ಕೂಗಿಕೊಳ್ಳುವಂತೆ ಕೇಳುತ್ತದೆ ಪಕ್ಷದ ಹೆಸರು ಕೇಳಿದರೆ.

ಲೇಬರ್ ಆ್ಯಂಡ್ ಜಾಬ್ ಸೀಕರ್ಸ್ ಪಾರ್ಟಿ(ಕಾರ್ಮಿಕರ ಮತ್ತು ನಿರುದ್ಯೋಗಿಗಳ ಪಕ್ಷ)
ಪಕ್ಷದ ಹೆಸರು ಅನ್ವಯವಾಗುವವರೆಲ್ಲ ಸದಸ್ಯರಾಗಿದ್ದರೆ ಈ ಪಕ್ಷ ಈಗ ನಮ್ಮ ದೇಶದ ಅತಿ ದೊಡ್ಡ ಪಕ್ಷವಾಗಿರಬೇಕಿತ್ತು. ಚೆನ್ನೈನಲ್ಲಿ ಪಕ್ಷದ ಮುಖ್ಯಕಚೇರಿ ಇದ್ದು, ಕೆಲಸ ಹುಡುಕುತ್ತಿರುವವರೆಲ್ಲ ಪಕ್ಷ ಸೇರಲು ಕಚೇರಿ ಮುಂದೆ ಕ್ಯೂ ನಿಲ್ಲಬಹುದು. ನಿರುದ್ಯೋಗಿಗಳ ಮೂಲಸ್ಥಾನ ರಾಜಕೀಯವೇ ಎಂಬ ಸಂದೇಶ ನೀಡಲು ಈ ಹೆಸರು ಇಟ್ಟಿದ್ದಾರಾ?

ಅಖಿಲ್ ಭಾರತೀಯ ಭಾರತ್ ಮಾತಾ- ಪುತ್ರ ಪಕ್ಷ
ಅಖಿಲ ಭಾರತ ಎಂದರೂ ಪಕ್ಷದ ಕಚೇರಿ ಇರುವುದು ಮಹಾರಾಷ್ಟ್ರದಲ್ಲಿ. ನೀವು ಕೇಳಿದ ಅಮ್ಮ ಮಕ್ಕಳ ಪಕ್ಷವೇ ಬೇರೆ, ಇದೇ ಬೇರೆ. ಅಲ್ಲದೆ ಪಿತೃಪಕ್ಷಕ್ಕೂ(ಸತ್ತವರಿಗೆ ಎಡೆ ಇಡುವ ದಿನ) ಪುತ್ರ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲವಂತೆ. ಪುತ್ರಿಯರೂ ಈ ಪಕ್ಷ ಸೇರಬಹುದೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಇಲ್ಲ.

ಮಿನಿಷ್ಟರಿಯಲ್ ಸಿಸ್ಟಮ್ ಅಬಾಲಿಷನ್ ಪಾರ್ಟಿ
ಕೋಲ್ಕತ್ತಾದ ಈ ಪಕ್ಷ ಹುಟ್ಟಿದ್ದೇ ಮಂತ್ರಿಗಿರಿ ಪದ್ಧತಿಯನ್ನು ಓಡಿಸಲು. ಹಾಗೆನಿಸುತ್ತದೆ ಹೆಸರು ಕೇಳಿದರೆ. ಅಮೆರಿಕ ಮಾದರಿ ಸೆಕ್ರಟರಿ ಪದ್ಧತಿ ತರಬೇಕೆಂದು ಅವರ ಆಶಯವೇನೋ!

ದಿ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ
ತಿರುಪತಿಯ ಗೋಪುರಗಳು ಸ್ವಲ್ಪ ಮಟ್ಟಿಗೆ ಪಿರಮಿಡ್‌ನಂತೆ ಕಾಣಬಹುದು. ಹಾಗಂತ ಪಕ್ಷ ಹುಟ್ಟು ಹಾಕುವ ಮಟ್ಟಿಗೆ ಪ್ರೇರಣೆ ನೀಡಿರಲಾರವು. ಆಂಧ್ರಪ್ರದೇಶದಲ್ಲಿ ಈ ಪಕ್ಷ 1999ರಲ್ಲೇ ಅಸ್ತಿತ್ವಕ್ಕೆ ಬಂದಿದ್ದು, ಸಸ್ಯಾಹಾರ ಮತ್ತು ಧ್ಯಾನ ಈ ಪಕ್ಷದ ತತ್ವಗಳೆನ್ನುತ್ತದೆ ಅಧಿಕೃತ ವೆಬ್‌ಸೈಟ್! ಅದಕ್ಕೂ ರಾಜಕೀಯಕ್ಕೂ ಎತ್ತಣದೆತ್ತಣ ಸಂಬಂಧವಯ್ಯಾ ಹರಹರಾ ಶ್ರೀ ತಿರುಮಲೇಶ್ವರಾ?

ಲೈಫ್ ಪೀಸ್‌ಫುಲ್ ಪಾರ್ಟಿ
ನಮಗೆಲ್ಲರಿಗೂ ಶಾಂತಿ ಬೇಕು ನಿಜ. ಆದರೆ ರಾಜಕೀಯಕ್ಕೂ ಶಾಂತಿಗೂ ಸಂಬಂಧ ಕಲ್ಪಿಸುವುದು ವಿರೋಧಾಭಾಸವಲ್ಲವೇ? ಇದರ ಮುಖ್ಯಕಚೇರಿ ಇರುವುದು ಕರ್ನಾಟಕದ ತುಮಕೂರಿನಲ್ಲಿ! ಕೋಮುಸೌಹಾರ್ದ ವೇದಿಕೆ, ಹಿಂದೂ- ಮುಸ್ಲಿಂ ವಿಶ್ವ, ಶಾಂತಿ ಆಶ್ರಮ, ಸರ್ವಧರ್ಮ ಆಶ್ರಮ ಇವೇ ಮೊದಲಾದ ಟ್ರಸ್ಟ್‌ಗಳು ಸೇರಿಕೊಂಡು ಹುಟ್ಟುಹಾಕಿದ ಪಕ್ಷವಿದು.

ಹೊಟ್ಟೆ ಪಕ್ಷ

86 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಹೊಟ್ಟೆ ಪಕ್ಷದ ರಂಗಸ್ವಾಮಿ ಈಗಿಲ್ಲ. ಸ್ಪರ್ಧಿಸುವಿಕೆಯಲ್ಲಿ ಗಿನ್ನೆಸ್  ದಾಖಲೆ ಸ್ಥಾಪಿಸಿದ ಇವರು ಒಂದು ಬಾರಿಯೂ ಗೆದ್ದಿರಲಿಲ್ಲ. ಇಂದಿರಾ ಗಾಂಧಿ, ನಿಜಲಿಂಗಪ್ಪ, ರಾಜೀವ್ ಗಾಂಧಿ, ಎಸ್.ಎಂ.ಕೃಷ್ಣ ಮುಂತಾದವರ ಎದುರಿಗೆ ನಿಂತಿದ್ದರು.


= ರೇಶ್ಮಾರಾವ್ ಸೊನ್ಲೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments