ಮತಗಾನ
ಹಿರಿಯ ಕವಿ ನಿಸಾರ್ ಅಹಮದ್ರ ನಿತ್ಯೋತ್ಸವ ಆಲ್ಬಮ್ಮಿನ 'ಕುರಿಗಳು ಸಾರ್ ಕುರಿಗಳು' ಗೀತೆಯನ್ನು ಕೇಳದ ಕನ್ನಡಿಗನಿಲ್ಲ. ರಾಜಕೀಯ ವಿಡಂಬನೆಯ ಅತ್ಯುತ್ತಮ ಹಾಗೂ ಎವರ್ ಗ್ರೀನ್ಗೀತೆ 'ಕುರಿಗಳು ಸಾರ್.. ಕುರಿಗಳು'. ಮತದಾರರನ್ನು ಕುರಿಗಳಿಗೆ, ಜನಪ್ರತಿನಿಧಿಗಳನ್ನು ಕುರುಬರಿಗೆ ಹೋಲಿಸಿ ನಮ್ಮ ಪೆದ್ದುತನವನ್ನು, ಅವರ ಕ್ರೌರ್ಯವನ್ನು ತೀಕ್ಷ್ಣಪದಗಳ ಮೂಲಕ ವ್ಯಕ್ತಪಡಿಸಿದ ಈ ಗೀತೆ ಕ್ರಾಂತಿಯನ್ನೇ ಮಾಡಿತು. ಈ ಗೀತೆಯನ್ನು ಹಾಡದ ಸುಗಮ ಸಂಗೀತ ಗಾಯಕರೇ ಇಲ್ಲ. ಸಿ ಅಶ್ವಥ್, ಮೈಸೂರು ಅನಂತಸ್ವಾಮಿ, ರಾಜು ಅನಂತಸ್ವಾಮಿ, ಶಿವಮೊಗ್ಗ ಸುಬ್ಬಣ್ಣ ,ಯಶವಂತ್ಹಳಬಂಡಿ ಆದಿಯಾಗಿ ಇಂದಿನ ತಲೆಮಾರಿನ ಗಾಯಕರಿಗೂ ಇದು ಅಚ್ಚುಮೆಚ್ಚಿನ ಹಾಡು. ಈ ಹಾಡಿನ ಮೊದಲ ಸಾಲನ್ನೇ ಶೀರ್ಷಿಕೆಯಾಗಿಸಿಕೊಂಡು ಸಿನಿಮಾ ಕೂಡ ಬಂತು. ನಿತ್ಯೋತ್ಸವ ಆಲ್ಬಮ್ಮಿನಲ್ಲಿ ಒಂದೊಂದು ಹಾಡು ಕೂಡ ವಿಭಿನ್ನ ಭಾವದ್ದಾಗಿದ್ದವು. ಒಂದು ಪ್ರೇಮಗೀತೆ, ಒಂದು ವಿರಹಗೀತೆ, ಇನ್ನೊಂದು ಜೋಜೋ ಹಾಡು, ಇನ್ನೊಂದು ನಮ್ಮ ನಾಡಿನ ಪ್ರಕೃತಿ ಸೊಗಸು, ಹಿರಿಮೆ ಸಾರುವ ಗೀತೆ, ಅವೆಲ್ಲದರ ನಡುವೆ ಈ ಸಾಮಾಜಿಕ ಕಳಕಳಿಯ ವಿಡಂಬನಾ ಗೀತೆ!. ಪ್ರತಿಯೊಬ್ಬರೂ ಕೇಳಬೇಕಾದ ಈ ಗೀತೆ ಇಂದು ಮತಗಾನದಲ್ಲಿ.
ಕುರಿಗಳು ಸಾರ್ ಕುರಿಗಳು
ಸಾಗಿದ್ದೇ ಗುರಿಗಳು.
ಮಂದೆಯಲಿ ಒಂದಾಗಿ, ಸ್ವಂತತೆಯೆ ಬಂದಾಗಿ
ಅದರ ಬಾಲ ಇದು.. ಮತ್ತೆ ಇದರ ಬಾಲ ಅದು ಮೂಸಿ
ದನಿ ಕುಗ್ಗಿಸಿ, ತಲೆ ತಗ್ಗಿಸಿ ಅಂಡಲೆಯುವ ನಾವು ನೀವು..
ಕುರಿಗಳು ಸಾರ್ ಕುರಿಗಳು
ಎಡ ದಿಕ್ಕಿಗೆ ಬಲ ದಿಕ್ಕಿಗೆ,
ಒಮ್ಮೆ ದಿಕ್ಕು ಪಾಲಾಗಿ,
ಹೇಗೆ ಹೇಗೊ ಏಗುತಿರುವ,
ಬರೀ ಕಿರುಚಿ ರೇಗುತಿರುವ,
ನೊಣ ಕೂತರೆ ಬಾಗುತಿರುವ,
ತಿನ್ನದಿದ್ದರು ತೇಗುತಿರುವ,
ಹಿಂದೆ ಬಂದರೆ ಒದೆಯದ,
ಮುಂದೆ ಬಂದರೆ ಹಾಯದ
ನಾವು ನೀವು ಅವರು ಇವರು....
ಕುರಿಗಳು ಸಾರ್ ಕುರಿಗಳು.
ನಮ್ಮ ಕಾಯ್ವ ಕುರುಬರು
ಶಾನುಭೋಗ ಗೀಚಿದ್ದಕ್ಕೆ ಹೆಬ್ಬೆಟ್ಟನು ಒತ್ತುವವರು.
ಜಮಾಬಂದಿಗಮಲ್ದಾರ ಬರಲು,
ನಮ್ಮೊಳೊಬ್ಬನನ್ನ ಮೆಚ್ಚಿ,
ಮಸೆದ ಮಚ್ಚಹಿರಿದು ಕತ್ತ ಕಚಕ್ಕೆಂದು ಕೊಚ್ಚಿ,
ಬಿರಿಯಾನಿಯ ಮೆಹರುಬಾನಿಯ
ಮಾಡಿ ಕೈಯ ಜೋಡಿಸುತ್ತ
ಕಿಸೆಗೆ ಹಸಿರುನೋಟು ತುರುಕಿ,
ನುಡಿಗೆ ಬೆಣ್ಣೆ ಹಚ್ಚುವವರು.
ಬಿಸಿಲಲ್ಲಿ ನಮ್ಮದೂಡಿ,
ಮರದಡಿಯಲಿ ತಾವು ಕೂತು
ಮಾತು, ಮಾತು, ಮಾತು, ಮಾತು
ಮಾತಿನ ಗೈರತ್ತಿನಲ್ಲೆ ಕರಾಮತ್ತು ನಡೆಸುವವರು.
ನಮ್ಮ ಮೈಯ ತುಪ್ಪಟವ ರವಷ್ಟು
ಬಿಡದ ಹಾಗೆ ಸವರಿ
ಕಂಬಳಿಗಳ ನೇಯುವಂಥ ಯೋಜನೆಗಳ ಹಾಕುವವರು.
ತಳವೂರಿದ ಕುರುಬ ಕಟುಕನಾದ
ಅವನ ಮಚ್ಚೊ ಆಹ ಏನು ಹೊಳಪು,
ಏನು ಜಾದು, ಏನು ಮೋಹ
ಕಣ್ಣುಕುಕ್ಕಿ ಸೊಕ್ಕಿರುವ,
ಕತ್ತನದಕೆ ತಿಕ್ಕಿರುವ,
ಹೋಗಿಹೋಗಿ ನೆಕ್ಕಿರುವ,
ನಾವು, ನೀವು, ಅವರು ಇವರು..
ಕುರಿಗಳು ಸಾರ್ ಕುರಿಗಳು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.