ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮತದಾನಕ್ಕೆ ರಜಾಕಾರರ ಹಾವಳಿ!

Mainashree
Updated On : 11 Apr 2014, 1:37 am

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಲೋಕಸಭೆ ಚುನಾವಣೆಯಲ್ಲಿ ಶೇ. 100 ಮತದಾನವಾಗುವಂತೆ ಚುನಾವಣಾ ಆಯೋಗ ಶ್ರಮಿಸುತ್ತಲೇ ಇದೆ. 9 ಹಂತದ ಈ ಚುನಾವಣೆ ಕರ್ನಾಟಕದಲ್ಲಿ ನಡೆಯುವುದು 5 ನೇ ಹಂತದಲ್ಲಿ. ಅಂದರೆ ಏ.17ರಂದು.
ದುರದೃಷ್ಟವಶಾತ್ ಇದರ ಹಿಂದಿನ, ಮುಂದಿನ ದಿನಗಳಲ್ಲಿ ಸರ್ಕಾರಿ ರಜೆಗಳು ಇರುವುದರಿಂದ ಪ್ರವಾಸೀ ಸ್ಥಳಗಳಿಗೆ ತೆರಳುವವರೇ ಹೆಚ್ಚಾಗಿದ್ದು, ಮತದಾನದಿಂದ ದೂರ ಸರಿಯುವವರು ಜಾಸ್ತಿ. ಹೀಗಾಗಿಯೇ ಚುನಾವಣೆ ಘೋಷಣೆಯಾದಾಗ ಹಲವು ಪಕ್ಷಗಳು ಏ.17ರ ಮತದಾನ ಮುಂದೂಡುವಂತೆ ಕೋರಿಕೊಂಡಿದ್ದವು.
ಇದೀಗ ಮೊದಲೇ ಬೇಸಿಗೆ ರಜೆ. ಮಕ್ಕಳು ಪರೀಕ್ಷೆ ಮುಗಿಸಿ ಅಜ್ಜನ ಮನೆಗೆ ಹೋಗುವ ಧಾವಂತದಲ್ಲಿರುತ್ತಾರೆ. ನಡುವೆ ಪೋಷಕರಿಗೂ ರಜೆ ಸಿಕ್ಕಿದರೆ ದೂರದೂರಿಗೆ ಹೋಗಲು ಯಾರು ತಾನೆ ಹಿಂದೆ ಮುಂದೆ ನೋಡುತ್ತಾರೆ?
ಸರ್ಕಾರಿ ಉದ್ಯೋಗಿಗಳು ತಮ್ಮ ಕೈಯಿಂದ ಎರಡು, ಮೂರು ದಿನ ರಜೆ ಹಾಕಿಕೊಂಡರೆ ಬರೋಬ್ಬರಿ ಒಂಬತ್ತು ದಿನದ ರಜೆಯ ಗೊಂಚಲೊಂದು ಸುಲಭವಾಗಿ ಸಿಕ್ಕಿರುತ್ತದೆ. ಇದರ ನಡುವೆಯೇ ಮತದಾನದ ದಿನವೂ ಒಂದಾಗಿರುವುದು ಚುನಾವಣಾ ಆಯೋಗದ ಮತದಾನ ಜಾಗೃತಿ ಪ್ರಚಾರಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ.
ಏ.12 ಎರಡನೇ ಶನಿವಾರ, ಏ.13 ಭಾನುವಾರ, ಏ.14 ಅಂಬೇಡ್ಕರ್ ಜನ್ಮದಿನ, ಏ.17 ಮತದಾನದ ದಿನ, ಏ.18 ಗುಡ್ ಫ್ರೈಡೇ, (ಏ.19 ಆರ್.ಎಚ್.) ಏ. 20 ಭಾನುವಾರ ಹೀಗೆ ಸರ್ಕಾರಿ ರಜಾ ದಿನಗಳಿದ್ದು, ಎರಡು, ಮೂರು ದಿನ ರಜೆ ಹಾಕಿಕೊಂಡರೆ 9, 10 ದಿನಗಳ ಸಂಪೂರ್ಣ ರಜೆ ಪ್ರಾಪ್ತಿ.

ಮರೆಯದಿರಿ ಮತದಾನ
ರಜೆಯ ಮಜವನ್ನೂ ಅನುಭವಿಸುವುದರೊಂದಿಗೆ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕಾಗಿದ್ದು ಪ್ರತಿಯೊಬ್ಬ ಪ್ರಬುದ್ಧ ಪ್ರಜೆಯ ಕರ್ತವ್ಯ. ಈ ನಿಟ್ಟಿನಲ್ಲಿ ದೂರದ ಊರಿಗೆ ಹೋಗುವ ನಿಮ್ಮ ಕಾರ್ಯಕ್ರಮದ ರೂಪುರೇಷೆಯನ್ನು ಬದಲಾಯಿಸಿಕೊಳ್ಳಿ.

ಹೀಗೆ ಮಾಡಬಹುದು
=     ಮತದಾನದ ಹಿಂದಿನ ದಿನಗಳಲ್ಲಿಯೇ ಒಂದೆರಡು ರಜೆ ಹಾಕಿಕೊಂಡು 5 ದಿನದ ಪ್ಯಾಕೇಜ್ ಟೂರಿನಲ್ಲಿ ಮಕ್ಕಳನ್ನು ಊರಿಗೋ, ಪ್ರವಾಸೀ ಸ್ಥಳಗಳಿಗೋ ಕರೆದುಕೊಂಡು ಹೋಗಿ ಏ.17ರಂದು ಮತದಾನ ಮಾಡುವ ಸ್ಥಳದಲ್ಲಿರುವಂತೆ ನಿಗದಿಪಡಿಸಿಕೊಳ್ಳಬಹುದು.
=     ಮತದಾನ ಮಾಡಿ ನಂತರ ಒಂದೆರಡು ದಿನ ರಜೆಹಾಕಿ ಐದಾರು ದಿನದ ಪ್ಯಾಕೇಜ್ ಟೂರಿನೊಂದಿಗೆ ಪ್ರವಾಸೀ ಸ್ಥಳಗಳಿಗೆ ಹೋಗಿಬರಬಹುದು.
=     ಯಾವುದೇ ದಿನ ಯಾವುದೇ ಊರಿನಲ್ಲಿದ್ದರೂ, ಮತದಾನದ ದಿನ ನಿಮ್ಮ ಹೆಸರಿರುವ ಬೂತ್‌ಗೆ ಬಂದು ಮರಳಿ ನೀವು ಹೋಗಬೇಕೆಂದಿರುವ ಊರಿಗೆ ಹೋಗಬಹುದು.
ಸಮಸ್ಯೆ ಅರಿವಿರಲಿ
= ಚುನಾವಣೆ ಹಿನ್ನೆಲೆಯಲ್ಲಿ ಬಸ್ಸುಗಳು ಸೇರಿದಂತೆ ಹೆಚ್ಚಿನ ವಾಹನಗಳು ಚುನಾವಣೆ ಸಂಬಂಧಿತ ಕಾರ್ಯಗಳಿಗಾಗಿ ಬಳಕೆಯಾಗುವುದರಿಂದ ಈ ಅವಧಿಯಲ್ಲಿ ಸುಸೂತ್ರವಾಗಿ ದೂರದೂರುಗಳಿಗೆ ಹೋಗಿ ಬರುವುದು ತ್ರಾಸವಾಗಬಹುದು.
=     ಕಷ್ಟಪಟ್ಟು ದೂರದ ನಿಮ್ಮೂರಿಗೆ ಮತ ಹಾಕಲು ಹೋಗಿ, ಅಲ್ಲಿನ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿಲ್ಲದೆ ಬರಿಗೈಲಿ ಮರಳುವ ಸಾಧ್ಯತೆಯೂ ಇರಬಹುದಾದ್ದರಿಂದ, ಪಟ್ಟಿಯಲ್ಲಿ ಹೆಸರಿರುವ ಬಗ್ಗೆ ಮೊದಲೇ ಖಚಿತಪಡಿಸಿಕೊಂಡು ಪ್ರಯಾಣ ಬೆಳೆಸಿ.
=     ಯಾವುದೋ ಪ್ರವಾಸಕ್ಕೆ ಹೋಗಬೇಕೆಂಬ ನೆಪದಲ್ಲಿ ನಿಮ್ಮ ಒಂದು ಮತವನ್ನು ಚಲಾಯಿಸದಿದ್ದಲ್ಲಿ, ನಿಮ್ಮಂತೆ ಹಲವರು ಹೀಗೆಯೇ ಮಾಡಬಹುದಾದ್ದರಿಂದ ಅತಂತ್ರ ಸಂಸತ್ ನಿರ್ಮಾಣವಾಗುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಹೀಗಾಗಿ ಮತ್ತೆ ಚುನಾವಣಾ ಹೊರೆ ಬೀಳಲೂಬಹುದು. ಈ ಬಗ್ಗೆ ಎಚ್ಚರದಿಂದಿರಿ.
ಒಟ್ಟಿನಲ್ಲಿ ಎಲ್ಲಾದರೂ ಇರಿ, ಎಂತಾದರೂ ಇರಿ, ನಿಮ್ಮ ಮತದಾನ ಮಾಡುವ ಹಕ್ಕನ್ನು ಮರೆಯದಿರಿ.


= ಸುಧೀಂದ್ರ  ಜಮ್ಮಟ್ಟಿಗೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement