ವೋಟಿಂಗ್ ಸ್ಟಾರ್
ದೇಶದಲ್ಲಿ ಯಾವುದೇ ಚುನಾವಣೆ ನಡೆದರೂ ಒಟ್ಟು ಮತದಾನ ಶೇಕಡಾ ಐವತ್ತು ದಾಟುವುದಿಲ್ಲ. ಅದರರ್ಥ ನೂರಕ್ಕೆ ಐವತ್ತು ಜನರಿಗೆ ತಮ್ಮ ಹಕ್ಕು ಚಲಾಯಿಸುವ ಆಸಕ್ತಿಯೂ ಇಲ್ಲ. ಮತದಾನ ಮಾಡದೆ ಇರೋದಕ್ಕೆ ಕಾರಣ ಹಲವಾರು ಇರಬಹುದು. ಆದರೆ ಅದ್ಯಾವುದೂ ಕಾರಣ ಆಗಲೇಕೂಡದು. ಕಡ್ಡಾಯವಾಗಿ ಮತದಾನ ಮಾಡಲೇಬೇಕು ಎಂಬ ಪರಿಸ್ಥಿತಿ ಬರಬೇಕು. ಆದರೆ ಮತದಾನ ಎಂಬ ನಮ್ಮ ಮೂಲಭೂತ ಹಕ್ಕನ್ನು ಚಲಾಯಿಸೋಕೆ ಮೊದಲು ನಮ್ಮ ಮೂಲಭೂತ ಕರ್ತವ್ಯಗಳ ಅರಿವಿರಬೇಕು ಹಾಗೂ ಅವುಗಳನ್ನು ನಿಭಾಯಿಸಿರಬೇಕು. ಆಗ ಮಾತ್ರ ಹಕ್ಕು ಚಲಾಯಿಸೋದಕ್ಕೂ ಒಂದು ಅರ್ಥ ಬರುತ್ತದೆ. ಚುನಾವಣಾ ಸಮಯವಿರಲಿ ಅಥವಾ ಮಿಕ್ಕ ಸಮಯವಿರಲಿ, ನಮ್ಮ ದೈನಂದಿನ ಚಟುವಟಿಕೆ, ಜಂಜಾಟಗಳ ನಡುವೆಯೂ ದೇಶದ ಸಾಮಾಜಿಕ ಹಾಗೂ ರಾಜಕೀಯ ಪರಿಸ್ಥಿತಿಗಳ ಬಗೆಗೆ ನಮ್ಮ ಸುಪ್ತಮನಸ್ಸು ಅಲ್ಪಸ್ವಲ್ಪವಾದರೂ ಗಮನವಿಟ್ಟಿರಲೇಬೇಕು. ಮತದಾನದ ದಿನ ಮತಗಟ್ಟೆಗೆ ತೀರ ಬ್ಲೈಂಡಾಗಿ ಹೋಗಿ ಯಾವುದೋ ಒಂದು ಪಕ್ಷಕ್ಕೆ ಮತ ಒತ್ತಿ ಬರೋದು ಸರಿ ಅಲ್ಲ. ಅಲ್ಲಿ ವೈಯಕ್ತಿಕ ಹಿತಾಸಕ್ತಿ, ಸೆಂಟಿಮೆಂಟು, ಹಣ ಹೆಂಡ ಇತ್ಯಾದಿಗಳ ಆಮಿಷ ಇವುಗಳಿಗೆಲ್ಲಾ ಸ್ಥಾನ ಇರಬಾರದು. ಹಿಸ್ಟರಿ ಮತ್ತು ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಾವು ಮತದಾನ ಮಾಡುವ ಅಗತ್ಯವಿದೆ. ಮತದಾನ ಎಂದರೆ ನಮ್ಮ ಮಕ್ಕಳ.. ಅಂದರೆ ಮುಂದಿನ ಪೀಳಿಗೆಯ ಭವಿಷ್ಯವನ್ನು ನಾವು ಇನ್ನೊಬ್ಬರ ಜವಾಬ್ದಾರಿಗೆ ವಹಿಸುತ್ತಿದ್ದೇವೆ ಎಂದರ್ಥ. ಅದನ್ನು ಅಯೋಗ್ಯರ ಕೈಗೆ ನೀಡದಿರುವುದು ನಮ್ಮ ಜವಾಬ್ದಾರಿ. ಬೆಸ್ಟ್ ಎಂಬ ವ್ಯಕ್ತಿಗಳ ಕೈಲಿ ಆಡಳಿತ ಚುಕ್ಕಾಣಿ ನೀಡೋಣ. ಪ್ರತಿಯೊಬ್ಬರೂ ನೆಪ ಹೇಳದೆ ಅಂದಿನ ದಿನವನ್ನು ಮತದಾನಕ್ಕೆ ಮೀಸಲಿಡಿ.
-ಬಿ.ಎಂ ಗಿರಿರಾಜ್, ಚಿತ್ರ ನಿರ್ದೇಶಕ. (ನವಿಲಾದವರು, ಜಟ್ಟ, ಅದ್ವೈತ, ಮೈತ್ರಿ ಚಿತ್ರಗಳ ಖ್ಯಾತಿ)